ಮಂಗಳೂರು (www.vknews.in) : ತಮಿಳುನಾಡು ರಾಜ್ಯ ತಿರುವಾರೂರು ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷರು ಹಾಗೂ ಮುತ್ತುಪೇಟೆ ದರ್ಗಾ ಶರೀಫ್ ಅಧ್ಯಕ್ಷರಾದ ಜನಾಬ್ ಎಸ್.ಎಸ್. ಬರಕ್ಕತ್ ಅಲಿ ಸಾಹೇಬ್ ರವರು ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಹಲವು ಕಾರ್ಯಕ್ರಮಗಳ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅವರು, ದಿನವಿಡೀ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಮಂಗಳೂರು ನಗರದ ತಾಜ್ ಮಹಲ್ ರೆಸ್ಟೋರೆಂಟ್ ನಲ್ಲಿ ಇಂದು ವಾಸವಾಗಿರುವ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ರವರು ಭೇಟಿ ಮಾಡಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸವಾಲುಗಳು, ಮುಸ್ಲಿಂ ಲೀಗ್ ಸಂಘಟನೆಯ ಬಲವರ್ಧನೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಭಾವುಕರದ ಕ್ಷಣ :
ಸಮಾಲೋಚನೆಯ ವೇಳೆ ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ನ ಮಾಜಿ ಅಧ್ಯಕ್ಷರಾದ ಮರ್ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬ್ ರವರನ್ನು ನೆನಪಿಸಿಕೊಂಡು ಬರಕ್ಕತ್ ಅಲಿ ಸಾಹೇಬ್ ರವರು ಭಾವುಕರಾದರು. ಕರ್ನಾಟಕದಲ್ಲಿ ಮುಸ್ಲಿಂ ಲೀಗ್ ಅನ್ನು ಕಟ್ಟಿ ಬೆಳೆಸಿದ, ಸಮುದಾಯದ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ, ಸರಳತೆ, ತ್ಯಾಗ ಹಾಗೂ ನಾಯಕತ್ವಕ್ಕೆ ಹೆಸರಾದ ಮರ್ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬ್ ರವರ ಸೇವೆಗಳನ್ನು ಅವರು ಸ್ಮರಿಸಿದರು.
ಅವರಂತಹ ನಾಯಕರು ಮತ್ತೆ ಸಿಗುವುದು ಕಷ್ಟ. ಅವರ ತೋರಿಸಿದ ದಾರಿಯಲ್ಲಿ, ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವುದೇ ಅವರಿಗೆ ನಾವು ನೀಡುವ ನಿಜವಾದ ಗೌರವ ಎಂದು ಅವರು ಹೇಳಿದರು. ಈ ಮಾತುಗಳು ಅಲ್ಲಿದ್ದ ಎಲ್ಲರ ಕಣ್ಣುಗಳನ್ನು ತೇವಗೊಳಿಸಿದವು.
ಸಮಾಲೋಚನೆಯಲ್ಲಿ ಮಾತನಾಡಿದ ಬರಕ್ಕತ್ ಅಲಿ ಸಾಹೇಬ್ ರವರು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಲೀಗ್ ಅನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸಬೇಕು, ಯುವ ಜನರನ್ನು ಸಂಘಟನೆಗೆ ತರಬೇಕು, ಸಮುದಾಯದ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು. ಮಂಗಳೂರಿನಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರ ಉತ್ಸಾಹ ಹಾಗೂ ಒಗ್ಗಟ್ಟು ನೋಡಿ ಸಂತಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಎರಡು ರಾಜ್ಯಗಳ ಲೀಗ್ ನಾಯಕರ ನಡುವೆ ನಿರಂತರ ಸಂಪರ್ಕ ಹಾಗೂ ಸಹಕಾರ ಇರಬೇಕು ಎಂದು ಹೇಳಿದರು.
ಬರಕ್ಕತ್ ಅಲಿ ಸಾಹೇಬ್ ರವರು ಸಂಜೆ 7:00 ಗಂಟೆಗೆ ಸಕಲೇಶಪುರಕ್ಕೆ ತೆರಳಲಿದ್ದಾರೆ. ಅಲ್ಲಿಂದ ತಮಿಳುನಾಡಿಗೆ ನಿರ್ಗಮಿಸಲಿದ್ದಾರೆ. ಅವರ ಈ ಭೇಟಿಯು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಗೆ ಮತ್ತಷ್ಟು ಹುಮ್ಮಸ್ಸು ಹಾಗೂ ಶಕ್ತಿಯನ್ನು ನೀಡಿದೆ.
ರಿಯಾಝ್ ಹರೇಕಳ ಕೋಶಾಧಿಕಾರಿ, ದ.ಕ ಜಿಲ್ಲಾ ಮುಸ್ಲಿಂ ಲೀಗ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.