(www.vknews.in) : ಮುಸಾಬಕಾ ಸ್ಪರ್ಧಾಕೂಟದಲ್ಲಿ ಸಮಗ್ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಳ್ಳುವ ಮೂಲಕ ಊರಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದ ಬಪ್ಪಳಿಗೆ ಮದ್ರಸಾದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ದಫ್ ತಂಡದ ವಿದ್ಯಾರ್ಥಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಅಭಿನಂದನಾ ಹಾಗೂ ಸನ್ಮಾನ ಸಮಾರಂಭವು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಮೊಹಲ್ಲಾ ಸಮಿತಿ ಹಾಗೂ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಅವರ ಸಾಧನೆಯ ಹಿಂದೆ ಶ್ರಮಿಸಿದ ಗುರುಗಳ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಬಪ್ಪಳಿಗೆಯ ಸ್ಥಳೀಯ ಹಾಗೂ ಅನಿವಾಸಿ ಯುವಕರ ಒಗ್ಗಟ್ಟಿನ ಪ್ರತೀಕವಾಗಿರುವ BGF – ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ರಿ. ಬಳಗದ ವತಿಯಿಂದ ಚಾಂಪಿಯನ್ ಸಾಧಕರಿಗೆ ನಗದು ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ಮದ್ರಸಾದ ಈ ಅಭೂತಪೂರ್ವ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿದ ಅಧ್ಯಾಪಕರ ಸಮರ್ಪಣೆ, ಮಾರ್ಗದರ್ಶನ ಹಾಗೂ ಪರಿಶ್ರಮವನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಶಂಸಿಸಲಾಯಿತು. ಅತ್ಯಧಿಕ ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ವಿಜಯದ ರೂವಾರಿಗಳಾದ ಅಧ್ಯಾಪಕರು ಹಾಗೂ ಸಾಂಪ್ರದಾಯಿಕ ದಫ್ ಕಲೆಯಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ ದಫ್ ವಿದ್ಯಾರ್ಥಿಗಳಿಗೆ BGF ವತಿಯಿಂದ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಮೊಹಲ್ಲಾ ಸಮಿತಿ ಮತ್ತು ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ ಪದಾಧಿಕಾರಿಗಳು, ಮದ್ರಸಾ ಆಡಳಿತ ಮಂಡಳಿಯ ಸದಸ್ಯರು, ಊರಿನ ಗಣ್ಯರು ಹಾಗೂ BGF ಬಳಗದ ಪ್ರಮುಖರು ಉಪಸ್ಥಿತರಿದ್ದು, ವಿಜೇತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಅಭಿನಂದಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಸಾಧಕರನ್ನು ಪ್ರೋತ್ಸಾಹಿಸುವ BGF ಬಳಗದ ಈ ಉದಾತ್ತ ಕಾರ್ಯವು ಶ್ಲಾಘನೀಯವಾಗಿದೆ. ಇಂತಹ ಪ್ರೋತ್ಸಾಹದಾಯಕ ಕೊಡುಗೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಪ್ರೇರಣೆಯಾಗಲಿವೆ ಎಂಬ ಅಭಿಪ್ರಾಯವನ್ನು ಹಿರಿಯರು ವ್ಯಕ್ತಪಡಿಸಿದರು. ಬಪ್ಪಳಿಗೆಯ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ BGF ಬಳಗದ ಈ ಕೊಡುಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.