(www.vknews.com) : ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿದ್ದು, ರೋಗವನ್ನು ನಿಯಂತ್ರಣಕ್ಕೆ ತರಲು ವೈದ್ಯರು ಮತ್ತು ಸರಕಾರ ಹರಸಾಹಸಪಡುತ್ತಿದ್ದಾರೆ. ನಮ್ಮ ಭಾರತ ದೇಶದಲ್ಲಿ ಮಾರ್ಚ್ನಿಂದ ಆರಂಭಗೊಂಡು ಜುಲೈ ಅಂತ್ಯದ ವರೆಗೆ ಅಂದರೆ ಕೇವಲ 5 ತಿಂಗಳಲ್ಲಿ ಲಕ್ಷಾಂತರ ಮಂದಿ ಈ ಕೋವಿಡ್-19 ರೋಗಕ್ಕೆ ತುತ್ತಾಗಿ ಸಾವಿರಾರು ಮಂದಿ ಜೀವತೆತ್ತಿದ್ದಾರೆ. ಹೆಚ್ಚಿನವರು ಗುಣಮುಖರಾಗಿದ್ದಾರೆ ಸಾವಿನ ಪ್ರಮಾಣ ಸುಮಾರು 3 ರಿಂದ 4 ಶೇಕಡಾ ಮಾತ್ರ ಎಂಬುದೇ ಸಮಾಧಾನಕರ ಅಂಶವಾಗಿದೆ. ಈ ವರೆಗೆ ಜುಲೈ 26ರ ವರದಿಗಳ ಪ್ರಕಾರ ಭಾರತ ದೇಶದಲ್ಲಿ 14.4 ಲಕ್ಷ ಮಂದಿ ಈ ಕೋವಿಡ್ ಸೋಂಕಿಗೆ ತುತ್ತಾಗಿ 33,000 ಮಂದಿ ಜೀವ ಕಳೆದುಕೊಂಡಿದ್ದಾರೆ. 95ಕ್ಕಿಂತಲೂ ಹೆಚ್ಚು ಶೇಕಡಾ ಮಂದಿ ಗುಣಮುಖರಾಗಿದ್ದಾರೆ.
ಸಾವಿಗೀಡಾದವರಲ್ಲಿ ಹೆಚ್ಚಿನವರು, ಮಧುಮೇಹ, ಹೃದಯವೈಫಲ್ಯ, ಕಿಡ್ನಿವೈಫಲ್ಯ ಅಧಿಕ ರಕ್ತದೊತ್ತಡ ಮುಂತಾದ ರೋಗಗಳಿಂದ ಬಳಲುತ್ತಿದ್ದರು ಎಂದೂ ತಿಳಿದು ಬಂದಿದೆ. ಇತ್ತೀಚೆಗೆ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವರದಿಗಳ ಪ್ರಕಾರ ಕೋವಿಡ್-19 ರೋಗದಿಂದ ಬಳಲಿದ 1000 ರೋಗಿಗಳಲ್ಲಿ ಸುಮಾರು 700 ರೋಗಿಗಳು ಸ್ಥೂಲಕಾಯ, ಹೆಚ್ಚಾದ ಕೊಬ್ಬು ಮತ್ತು ಇತರ ರೋಗಗಳಿಂದ ಬಳಲುತ್ತಿದ್ದರು ಎಂದು ವರದಿ ಮಾಡಿದೆ. ಅದೇ ರೀತಿ ಕೋವಿಡ್-19 ರೋಗದಿಂದ ಮೃತಪಟ್ಟ ವ್ಯಕ್ತಿಗಳಲ್ಲಿ ಸುಮಾರು 82 ಶೇಕಡಾ ಮಂದಿ ಅಧಿಕ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿ ಮಾಡಿದೆ. ಇಂತಹ ವ್ಯಕ್ತಿಗಳಲ್ಲಿ ರಕ್ತನಾಳಗಳಲ್ಲಿನ ಆಮ್ಲಜನಕದ ಕರಗುವಿಕೆಯ ಪ್ರಮಾಣ ಕಡಿಮೆ ಇದ್ದು, ಕೋವಿಡ್-19 ರೋಗಿಗಳಲ್ಲಿ ಇದುವೇ ಮಾರಣಾಂತಿಕವಾಗಲು ಬಹು ಮುಖ್ಯ ಕಾರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಯಾಕಾಗಿ ಸ್ಥೂಲಕಾಯ ರೋಗಿಗಳು -ಹೆಚ್ಚು ತೊಂದರೆಗೆ ಸಿಲುಕುತ್ತಾರೆ
ಈ ಎಲ್ಲಾ ಕಾರಣಗಳಿಂದಾಗಿ ದೇಹದ ಬಾಡಿಮಾಸ್ ಇಂಡೆಕ್ಸ್ 30 ಕ್ಕಿಂತ ಜಾಸ್ತಿ ಇರುವ ವ್ಯಕ್ತಿಗಳು ಕೋವಿಡ್-19 ವೈರಾಣು ಸೋಂಕು ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾಲಘಟ್ಟದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಬದುಕನ್ನು ಹೈರಾಣಾಗಿಸುವ ಬೊಜ್ಜು
ಪ್ರತಿಯೊಬ್ಬ ಮನುಷ್ಯನಿಗೂ ತಾನು ಚೆನ್ನಾಗಿ ಕಾಣಿಸಬೇಕು ಮತ್ತು ತೆಳ್ಳಗೆ ಸ್ಲಿಮ್ ಆಗಿ ಇರಬೇಕು ಎಂದು ಮಹದಾಶೆ ಇರುವುದಂತೂ ಸತ್ಯ. ಆದರೆ ಬಾಯಿಚಪಲ ಬಿಡಬೇಕಲ್ಲ. ನಾಲಗೆಯ ದಾಸನಾಗಿ ಅಗತ್ಯಕ್ಕಿಂತ ಜಾಸ್ತಿ ತಿಂದಾಗ ಹೆಚ್ಚಾಗಿ ಸೇವಿಸಲ್ಪಟ್ಟ ಕ್ಯಾಲರಿ ದೇಹದೆಲ್ಲೆಡೆ ಬೊಜ್ಜು ಅಥವಾ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಒಬ್ಬ ಸಾಮಾನ್ಯ ಮಧ್ಯವಯಸ್ಕ ಪುರುಷನಿಗೆ ದಿನವೊಂದಕ್ಕೆ 2200ರಿಂದ 2300 ಕ್ಯಾಲರಿ ಮತ್ತು ಮಹಿಳೆಗೆ 2000ದಿಂದ 2200 ಕ್ಯಾಲರಿ ಅವಶ್ಯವಿರುತ್ತದೆ. ಅಗತ್ಯಕ್ಕಿಂತ ಜಾಸ್ತಿ ತಿಂದು, ದೈಹಿಕ ಪರಿಶ್ರಮ ಕಡಿಮೆಯಾದಾಗ ಹೆಚ್ಚಾದ ಕ್ಯಾಲರಿ ಕೊಬ್ಬಾಗಿ ಪರಿವರ್ತನೆ ಆಗುತ್ತದೆ.
ಕೊಬ್ಬು ಕಡಿಮೆ ಮಾಡಲು ಅತೀ ಸುಲಭ ಮಾರ್ಗ ಎಂದರೆ ನಾವು ಸೇವಿಸಿದ ಆಹಾರದ ಕ್ಯಾಲರಿಯ ಪ್ರಮಾಣಕ್ಕಿಂತ ಹೆಚ್ಚು ದೈಹಿಕ ಪರಿಶ್ರಮ ಮಾಡತಕ್ಕದ್ದು ಪ್ರತಿದಿನ ದೈಹಿಕ ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್, ಬಿರುಸು ನಡಿಗೆ ಮುಂತಾದವುಗಳ ಮೂಲಕ ನಾವು ತಿಂದ ಕ್ಯಾಲರಿಗಳನ್ನು ಕರಗಿಸಿದ್ದಲ್ಲಿ ಬೊಜ್ಜು ಶೇಖರಣೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಅಗತ್ಯಕ್ಕಿಂತ ಜಾಸ್ತಿ ತಿಂದು ಅಗತ್ಯಕ್ಕಿಂತ ಕಡಿಮೆ ದೈಹಿಕ ಪರಿಶ್ರಮ ಮಾಡಿದಲ್ಲಿ ಕೊಬ್ಬು ಎಲ್ಲೆಂದರಲ್ಲಿ ಶೇಖರಣೆಯಾಗುವುದರಲ್ಲಿ ಸಂದೇಹವೇ ಇಲ್ಲ.
ಬೊಜ್ಜಿನ ಮಾಪನ ಹೇಗೆ ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹದ ಬೊಜ್ಜಿನ ಪ್ರಮಾಣವನ್ನು (BMI) ಬಾಡಿ ಮಾಸ್ ಇಂಡೆಕ್ಸ್ ಎಂಬ ಮಾಪನದಿಂದ ಅಳೆಯಲಾಗುತ್ತದೆ. ನಮ್ಮ ದೇಹದ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ನಮ್ಮ ದೇಹದ ಇತರ ಅಂಗಾಂಗಗಳು, ಸ್ನಾಯುಗಳು, ಮೂಳೆಗಳು, ದೇಹದ ಕೊಬ್ಬಿನ ಪ್ರಮಾಣ ಎಲ್ಲವೂ ಒಂದೇ ಅನುಪಾತದಲ್ಲಿ ಇರತಕ್ಕದ್ದು. ಇದರಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದಲ್ಲಿ, ಏರುಪೇರು ಉಂಟಾದಲ್ಲಿ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚುತ್ತದೆ. ಸಾಮಾನ್ಯವಾಗಿ ದೇಹದ ತೂಕವನ್ನು ಕಿಲೋಗ್ರಾಂಗಳಲ್ಲಿ ಅಳೆದು ಅದನ್ನು ದೇಹದ ಎತ್ತರ (ಮೀಟರ್ಗಳಲ್ಲಿ)ದ ಎರಡರಷ್ಟರಿಂದ ಭಾಗಿಸಿದಾಗ ಸಿಗುವ ಮೌಲ್ಯವನ್ನು ಬಾಡಿ ಮಾಸ್ ಇಂಡೆಕ್ಸ್ (BMI) ಅಥವಾ ದೇಹದ ಬೊಜ್ಜಿನ ಸಾಂದ್ರತೆಯ ಪ್ರಮಾಣ ಎಂದು ಕರೆಯುತ್ತಾರೆ. ಉದಾಹರಣೆಗೆ ನಿಮ್ಮ ದೇಹದ ತೂಕ 60 ಕಿಲೋಗ್ರಾಂ ಇದಲ್ಲಿ ನಿಮ್ಮ ಎತ್ತರ 1.70 ಮೀಟರ್ ಅಥವಾ 170 ಸೆಂಟಿ ಮೀಟರ್ ಇದಲ್ಲಿ ನಿಮ್ಮ BMI 60/(1.7)2=60/2.89=20.76ಏg/m2 ಆಗುತ್ತದೆ.
ಸಾಮಾನ್ಯವಾಗಿ 18.5 ರಿಂದ 25ರವರೆಗೆ ನಾರ್ಮಲ್ ಎಂದೂ 18.5ಕ್ಕಿಂತ ಕಡಿಮೆ ಇದ್ದಲ್ಲಿ ಕಡಿಮೆ ತೂಕ ಎಂದೂ 25ರಿಂದ ಮೇಲ್ಪಟ್ಟು 30ರವರೆಗೆ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ 30ಕ್ಕಿಂತಲೂ ಜಾಸ್ತಿ ಇದ್ದಲ್ಲಿ ಅತ್ಯಂತ ಬೊಜ್ಜು ಇರುವವರು ಎಂದು ಪರಿಗಣಿಸಲಾಗುತ್ತದೆ. ಒಟ್ಟಿನಲ್ಲಿ ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಇರತಕ್ಕದ್ದು ಈ ಮಾಪನದ ಒಂದು ನ್ಯೂನತೆ ಎಂದರೆ ಪುರುಷ ಮತ್ತು ಮಹಿಳೆಯರಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಮತ್ತು ದೇಹದ ಗಾತ್ರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ದೇಹದಾಢÀ್ರ್ಯ ಪಟುಗಳಲ್ಲಿ ಅತ್ಯಧಿಕ ಮಾಂಸಖಂಡಗಳು ಇದ್ದು (ಕೊಬ್ಬಿನ ಬದಲಾಗಿ) ಅವರಿಗೂ ಕೂಡ ಹೆಚ್ಚಿನ ಃಒI ಬರುವ ಸಾಧ್ಯತೆ ಇದೆ. ಇದೇ ಕಾರಣದಿಂದಾಗಿ ದೇಹದ ಇತರ ಎಲ್ಲಾ ಅಂಶಗಳನ್ನು ಪರಿಗಣಿಸಿ BMI ಜೊತೆ ಹೊಂದಾಣಿಕೆ ಮಾಡಿ ವೈದ್ಯರು ವ್ಯಕ್ತಿಯ ಬೊಜ್ಜಿನ ಪ್ರಮಾಣವನ್ನು ತಿಳಿಯುತ್ತಾರೆ.
ಇದರ ಜೊತೆಗೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ, ಟ್ರೈಗಿಸರೈಡ್ನ ಪ್ರಮಾಣ ಕಡಿಮೆ ಸಾಂದ್ರತೆ ಮತ್ತು ಹೆಚ್ಚಿನ ಸಾಂದ್ರತೆಯ (LDL and HDL) ಲೈಪೋಪ್ರೋಟಿನ್ನ ಪ್ರಮಾಣ ಮತ್ತು ಅವುಗಳ ಅನುಪಾತವನ್ನು ನಿರ್ಧರಿಸಿ ಬೊಜ್ಜಿನ ಪ್ರಮಾಣವನ್ನು ನಿಖರವಾಗಿ ಪತ್ತೆ ಹಚ್ಚುತ್ತಾರೆ. ಇನ್ನೊಂದು ಲೆಕ್ಕಾಚಾರದಲ್ಲಿಯೂ ಸಾಮಾನ್ಯವಾಗಿ ಬೊಜ್ಜಿನ ಪ್ರಮಾಣವನ್ನು ಸುಲಭವಾಗಿ ಅಳೆಯುತ್ತಾರೆ. ಆರೋಗ್ಯವಂಥ ವ್ಯಕ್ತಿಯ ದೇಹದ ತೂಕ ಅವರಎತ್ತರಕ್ಕೆ ಅನುಗುಣವಾಗಿರಬೇಕು. ನಮ್ಮ ದೇಹದ ಎತರವನ್ನು ಸೆಂಟೀ ಮೀಟರ್ಗಳಲ್ಲಿ ಅಳೆದು ಆದರಿಂದ ನೂರನ್ನು ಕಳೆದರೆ ಉಳಿಯುವ ಶೇಷವೇ ನಿಮಗಿರಬೇಕಾದ ನಿಜವಾದ ತೂಕ ಎಂದು ಪರಿಗಣಿಸಲಾಗುತ್ತಿದೆ. ಉದಾಹರಣೆಗೆ ನಿಮ್ಮ ದೇಹದ ಎತ್ತರ 160 ಸೆಂಟೀ ಮೀಟರ್ ಇದ್ದು ನಿಮ್ಮ ನಿಜವಾದ ತೂಕ 160-100=60 ಕೆಜಿ ಇರಬೇಕು. ನಿಮ್ಮ ದೇಹದ ತೂಕ ಈ ಪ್ರಮಾಣಕ್ಕಿಂತ ಪ್ರತಿಶತ ಹತ್ತರಷ್ಟು ಹೆಚ್ಚಾಗಿದ್ದರೆ, ಅಂದರೆ 66ಕೆಜಿಗಿಂತ ಜಾಸ್ತಿ ಇದ್ದಲ್ಲಿ ನೀವು ಬೊಜ್ಜಿನವರಾಗಿರುತ್ತೀರಿ ಎಂದು ತಿಳಿಯಲಾಗುತ್ತದೆ.
ಬೊಜ್ಜಿನಿಂದಾಗುವ ತೊಂದರೆಗಳು
ಬೊಜ್ಜು ಕರಗಿಸುವುದು ಹೇಗೆ ?
ಕೊನೆ ಮಾತು :
“ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದು ನಮ್ಮ ಹಿರಿಯರು ಹೇಳಿದ ಮಾತು ನೂರಕ್ಕೆ ನೂರರಷ್ಟು ನಿಜ. ಯಾಕೆಂದರೆ ನಮ್ಮ ಎಲ್ಲಾ ರೋಗಗಳಿಗೆ ಮೂಲಕಾರಣ ನಾವು ತಿನ್ನುವ ಆಹಾರ ಮತ್ತು ನಮ್ಮ ಪರಿಶ್ರಮರಹಿತ ಮೋಜಿನ ಜೀವನ ಶೈಲಿ ಹಾಗೂ ನಮ್ಮ ಧೂಮಪಾನ, ಮಧ್ಯಪಾನ ಮುಂತಾದ ಚಟಗಳು. ಚಟಗಳು ನಮ್ಮನ್ನು ಚಟ್ಟ ಹತ್ತಿಸುವ ಮೊದಲೇ ನಾವು ಎಚ್ಚೆತುಕೊಂಡು ಆರೋಗ್ಯಕರ ಜೀವನ ಶೈಲಿ ಮತ್ತು ಆರೋಗ್ಯಪೂರ್ಣ ಆಹಾರ ಪದ್ಧತಿ ಅಳವಡಿಸಿಕೊಳ್ಳತಕ್ಕದ್ದು, ಇಲ್ಲವಾದಲ್ಲಿ ಎಲ್ಲೆಂದರಲ್ಲಿ ದೇಹದೆಲ್ಲೆಡೆ ಬೊಜ್ಜು ಶೇಖರಣೆಯಾಗಿ ನಮ್ಮ ದೇಹ ರೋಗಗಳ ಹಂದರವಾಗಿ ಮೂವತ್ತು ನಲವತ್ತರ ಅಸುಪಾಸಿನಲ್ಲಿಯೇ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಮುಂತಾದ ಆಧುನಿಕ ಜೀವನ ಶೈಲಿನ ಶಾಪಗ್ರಸ್ತ ರೋಗಗಳು ಸೇರಿಕೊಂಡು ಮನುಕುಲವನ್ನು ನುಂಗಿ ನೀರು ಕುಡಿಯುವ ದಿನಗಳು ದೂರವಿಲ್ಲ. ಇಂತಹ ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು ಆರೋಗ್ಯ ಪೂರ್ಣ ಆಹ್ಲಾದಕರ ಜೀವನ ಶೈಲಿ ಅಳವಡಿಸಿಕೊಳ್ಳುವುದಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.
– ಡಾ|| ಮುರಲೀ ಮೋಹನ್ ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.