(www.vknews.com) : ಕೋವಿಡ್-19 ಎನ್ನುವುದು ವೈರಾಣು ಸೋಂಕು ಆಗಿದ್ದು, ಸಾಂಕ್ರಾಮಿಕ ರೋಗವಾಗಿರುತ್ತದೆ. SARS Cov-2 ಎಂಬ ಕೊರೋನಾ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಪ್ಲೂ ಅಥವಾ ಇನ್ಪ್ಲೂಯೆಂಜಾ ಎಂಬುದು ಕೂಡಾ ವೈರಾಣು ಸೋಂಕು ಆಗಿದ್ದು, ಇನ್ಪ್ಲೂಯೆಂಜಾ ಎಂಬ ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಇವೆರಡು ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಒಂದೇ ರೀತಿಯಲ್ಲಿರುತ್ತದೆ. ಜ್ವರ, ಸುಸ್ತು, ಶೀತ, ಗಂಟಲು ಕೆರೆತ, ಮೈಕೈ ನೋವು, ಆಯಾಸ, ಕೆಮ್ಮು, ಸೀನುವಿಕೆ, ತಲೆನೋವು ಇದೆಲ್ಲವೂ ಇನ್ಪ್ಲೂಯೆಂಜಾ ಮತ್ತು ಕೋವಿಡ್-19 ರೋಗದಲ್ಲಿ ಕಂಡು ಬರುತ್ತದೆ. ಆದರೆ ಉಸಿರಾಟದ ಸಮಸ್ಯೆ ಕೋವಿಡ್-19 ರೋಗದಲ್ಲಿ ಮಾತ್ರ ಇರುತ್ತದೆ. ಇದಲ್ಲದೆ, ವಾಸನೆ ಗ್ರಹಣಶಕ್ತಿ ಕುಂದುವುದು ಮತ್ತು ರುಚಿ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಕೂಡಾ ಕೋವಿಡ್-19 ರೋಗದಲ್ಲಿ ಕಂಡು ಬಂದಿದೆ. ಇದೇ ಮಾನದಂಡವನ್ನು ಹಿಡಿದುಕೊಂಡು ರೋಗ ನಿರ್ಣಯ ಮಾಡುವುದು ಸಾಧÀ್ಯವಾಗುವುದಿಲ್ಲ. ನಿಖರವಾಗಿ ಒಬ್ಬನಿಗೆ ಕೋವಿಡ್-19 ರೋಗ ಬಂದಿದೆಯೆಂದು ಹೇಳಬೇಕಾದಲ್ಲಿ ಕೆಲವೊಂದÀು ನಿರ್ದಿಷ್ಟ ಪರೀಕ್ಷೆ ಮಾಡಬೇಕಾಗುತ್ತದೆ. ಅವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಒಬ್ಬ ವ್ಯಕ್ತಿಗೆ ಕೋವಿಡ್-19 ರೋಗ ಬಂದಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಎರಡು ರೀತಿಯ ಪರೀಕ್ಷೆ ಮಾಡಲಾಗುತ್ತದೆ.
1. ಆಂಟಿಜನ್ ಟೆಸ್ಟ್ : ಇಲ್ಲಿ ಮೂಗಿನ ದ್ರವ್ಯದ ಸ್ಯಾಂಪಲ್ ಅಥವಾ ಮಾದರಿಯನ್ನು ಗಂಟಲಿನ ಮುಖಾಂತರ ತೆಗೆದು ಕೋವಿಡ್-19 ರೋಗಾಣುವಿನ ಇರುವಿಕೆಯನ್ನು ಆಂಟಿಜೆನ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಇದಕ್ಕೆ RT-PCR ಎಂದು ಕರೆಯಲಾಗುತ್ತದೆ.
2. ಆಂಟಿಬಾಡಿ ಟೆಸ್ಟ್ : ಇಲ್ಲಿ ಶಂಕಿತ ವ್ಯಕ್ತಿಯ ರಕ್ತವನ್ನು ಪಡೆದು ಅದರಲ್ಲಿ ಕೋವಿಡ್-19 ರೋಗಾಣುವಿನ ವಿರುದ್ಧ ದೇಹದಲ್ಲಿ ಸೃಷ್ಟಿಯಾದ ಆಂಟಿಬಾಡಿಗಳನ್ನು ಪತ್ತೆಹಚ್ಚಲಾಗುತ್ತದೆ. ಇದರಿಂದ ಆ ವ್ಯಕ್ತಿಗೆ ರೋಗ ಬಂದಿದೆಯೇ ಅಥವಾ ರೋಗ ಬಂದಿಲ್ಲವೇ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಿರುತ್ತದೆ.
ಆಂಟಿಬಾಡಿ ಟೆಸ್ಟ್: ಈ ಪರೀಕ್ಷೆಯಲ್ಲಿ ಶಂಕಿತ ವ್ಯಕ್ತಿಯ ದೇಹದ ರಕ್ತವನ್ನು ಪಡೆದು ಆತನ ದೇಹದಲ್ಲಿ ಇರುವ IgG ಮತ್ತು IgM ಎಂಬ ಆಂಟಬಾಡಿಗಳನ್ನು ಪತ್ತೆಹಚ್ಚಲಾಗುತ್ತದೆ. ಇದೊಂದು ಬಹಳ ಸುಲಭದ ಮತ್ತು ನಂಬಲರ್ಹವಾದ ಪರೀಕ್ಷೆಯಾಗಿರುತ್ತದೆ. ಕೇವಲ 90 ನಿಮಿಷಗಳಲ್ಲಿ ಫಲಿತಾಂಶ ದೊರೆಯುತ್ತದೆ. ಪರೀಕ್ಷೆ ಮಾಡಿದ ವ್ಯಕ್ತಿಯ ರಕ್ತದಲ್ಲಿ IgM ಎಂಬ ಆಂಟಿಬಾಡಿ ಪತ್ತೆಯಾದಲ್ಲಿ ಆತನಿಗೆ ಕೋವಿಡ್-19 ಸೋಂಕು ದೇಹದಲ್ಲಿ ಇದೆ ಎಂದು ಅರ್ಥ. ಕೇವಲ IgG ಮತ್ತು ವ್ಯಕ್ತಿಯ ದೇಹದ ರಕ್ತದಲ್ಲಿ ಕಂಡು ಬಂದಲ್ಲಿ ಆ ವ್ಯಕ್ತಿಗೆ ಕೋವಿಡ್-19 ರೋಗ ಬಂದು ಹೋಗಿದೆ ಎಂಬರ್ಥ. ಎರಡೂ IgG ಮತ್ತು IgM ಎಂಬ ಆಂಟಿಬಾಡಿಗಳು ರಕ್ತದಲ್ಲಿ ಇಲ್ಲದಿದ್ದಲ್ಲಿ ಆ ವ್ಯಕ್ತಿಗೆ ಕೋವಿಡ್-19 ವೈರಾಣು ಸೋಂಕು ಬಂದಿಲ್ಲ ಎಂದು ಅರ್ಥೈಸಲಾಗುತ್ತದೆ. ಅದೇ ರೀತಿ IgG ಮತ್ತು IgM ಎಂಬ ಆಂಟಿಬಾಡಿಗಳು ಶಂಕಿತ ವ್ಯಕ್ತಿಯ ದೇಹದಲ್ಲಿ ಪತ್ತೆಯಾದಲ್ಲಿ ಆ ವ್ಯಕ್ತಿಗೆ ಕೋವಿಡ್-19 ಸೋಂಕು ದೇಹದಲ್ಲಿ ಈಗಲೂ ಇದೆಯೆಂದು ತಿಳಿಯಲಾಗುತ್ತದೆ. ಈ ಎರಡೂ ಆಂಟಿಬಾಡಿ ಟೆಸ್ಟ್ಗಳು ಅತ್ಯಂತ ನಿಖರವಾಗಿದ್ದು, ರೋಗ ಪತ್ತೆಹಚ್ಚುವ ಸಾಮಥ್ರ್ಯ 99.5% ಸಾಧ್ಯತೆ ಆಗಿರುತ್ತದೆ ಮತ್ತು ಕೋವಿಡ್-19 ರೋಗವನ್ನೇ ಪತ್ತೆಹಚ್ಚುವ ಸಾಮಥ್ರ್ಯ 99.5% ಆಗಿರುತ್ತದೆ. ಈ ಪರೀಕ್ಷೆಯ ಫಲಿತಾಂಶವನ್ನು ರೋಗಿಯ ದೇಹದ ರೋಗ ಲಕ್ಷಣಗಳ ಜೊತೆ ತಾಳೆ ಹಾಕಿ ರೋಗ ನಿರ್ಣಯ ಮಾಡಲಾಗುತ್ತದೆ. ಯಾಕೆಂದರೆ ಶಂಕಿತ ವ್ಯಕ್ತಿಗೆ ವೈರಾಣು ಸೋಂಕು ತಗಲಿ ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಆಂಟಿಬಾಡಿ ಪರೀಕ್ಷೆ ಮೂಲಕ ಪತ್ತೆ ಹಚ್ಚುವ ಸಾಮಥ್ರ್ಯ 1 ರಿಂದ 3 ದಿನಗಳ ವರೆಗೆ 55% , 4ರಿಂದ 6 ದಿನಗಳ ವರೆಗೆ 75% , 7ರಿಂದ 9 ದಿನಗಳ ವರೆಗೆ 95% ಮತ್ತು 9 ದಿನಗಳ ನಂತರ 97.5% ಆಗಿರುತ್ತೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಮೂರು ವಾರಗಳ ಬಳಿಕ ಶೇಕಡಾ 100 ರಷ್ಟು ನಿಖರ ಫಲಿತಾಂಶ ಬರುತ್ತದೆ.
ಆಂಟಿಜೆನ್ ಟೆಸ್ಟ್: ಕೋವಿಡ್-19 ರೋಗದ ಲಕ್ಷಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಬರೀ ಸಣ್ಣ ಪ್ರಮಾಣದ ಜ್ವರ ಮಾತ್ರ ಬರಬಹುದು. ಇನ್ನೂ ಕೆಲವರಿಗೆ ರೋಗ ಬಂದು ಹೋದದ್ದು, ತಿಳಿಯದೇ ಇರಬಹುದು. ಎಲ್ಲ ರೋಗಿಗಳಲ್ಲಿ ರೋಗದ ಎಲ್ಲಾ ಲಕ್ಷಣಗಳು ಕಂಡು ಬರಲೇಬೇಕೆಂದಿಲ್ಲ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇಲ್ಲದ ವ್ಯಕ್ತಿಗೂ ಕೊರೋನಾ ಆಂಟಿಜೆನ್ ಟೆಸ್ಟ್ ಪಾಸಿಟಿವ್ ಬಂದ ಉದಾಹರಣೆ ಇದೆ. ಇನ್ನು ಕೆಲವೊಮ್ಮೆ ರೋಗ ಲಕ್ಷಣ ಇದ್ದರೂ ಈ ಪರೀಕ್ಷೆ ನೆಗೆಟಿವ್ ಬಂದದ್ದೂ ಇದೆ. RT-PCR ಪರೀಕ್ಷೆಯ ರೋಗ ಪತ್ತೆಹಚ್ಚುವ ನಿಖರತೆಯ ಪ್ರಮಾಣ 70% ಮಾತ್ರ ಆಗಿರುತ್ತದೆ. ಇದರ ಅರ್ಥ ಒಬ್ಬ ವ್ಯಕ್ತಿಗೆ ಕೊರೋನಾ ನೆಗೆಟಿವ್ RT-PCR ಫಲಿತಾಂಶ ಬಂದಿದ್ದರೂ ಆತನಿಗೆ ರೋಗ ಇರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಸಂಪೂರ್ಣವಾಗಿ ಈ ಪರೀಕ್ಷೆಗಳನ್ನು ನಂಬಲು ಸಾಧ್ಯವಿಲ್ಲ. ಈ ಕಾರಣದಿಂದಲೇ ವೈದ್ಯರು ರೋಗಿಯ ಚರಿತ್ರೆ ರೋಗದ ಲಕ್ಷಣ ಮತ್ತು ಆಂಟಿಜೆನ್ ಟೆಸ್ಟ್ ಇವೆಲ್ಲವನ್ನೂ ತಾಳೆ ಹಾಕಿ ರೋಗ ನಿರ್ಣಯ ಮಾಡಿ ನಿರ್ಧಾರಕ್ಕೆ ಬರುತ್ತಾರೆ. ರೋಗದ ಲಕ್ಷಣಗಳು ಇದ್ದು, ಋಣಾತ್ಮಕ ವರದಿ ಬಂದರೂ ವೈದ್ಯರು ರೋಗಿಗೆ ಸಾಕಷ್ಟು ಮುಂಜಾಗ್ರತೆ ಮತ್ತು ದಿಗ್ಭಂಧನ ಮಾಡಿಕೊಳ್ಳಲು ತಿಳಿಸಬಹುದು. ಅದೇ ರೀತಿ ಧನಾತ್ಮಕ ವರದಿ ಬಂದಾಗ ರೋಗದ ಲಕ್ಷಣ ಇಲ್ಲದಿದ್ದರೆ ಯಾವುದೇ ಚಿಕಿತ್ಸೆ ನೀಡದೆ ರೋಗಿಯನ್ನು ಒಳರೋಗಿಯಾಗಿ ದಾಖಲು ಮಾಡಿ ಅಭ್ಯಸಿಸಲೂ ಬಹುದು. ಒಟ್ಟಿನಲ್ಲಿ ರೋಗದ ಚಿಕಿತ್ಸೆ ಎನ್ನುವುದು ರೋಗದ ಲಕ್ಷಣಗಳ ಮೇಲೆ ನಿರ್ಧರಿತವಾಗಿರುತ್ತದೆ. ಜ್ವರ ಇದ್ದರೆ ಅದಕ್ಕೆ ಚಿಕಿತ್ಸೆ, ಅಲ್ಲದೆ ಉಸಿರಾಟದ ತೊಂದರೆ ಇದ್ದಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯಕ್ಕೆ ಈ ಕೋವಿಡ್-19 ರೋಗ ಪತ್ತೆ ಹಚ್ಚಲು ಇರುವ ವಿಶ್ವಾಸಾರ್ಹ ಪರೀಕ್ಷೆ ಆಂಟಿಜೆನ್ ಮತ್ತು ಆಂಟಿಬಾಡಿ ಪರೀಕ್ಷೆಗಳು ಆಗಿರುತ್ತದೆ.
RT-PCR ಎಂದರೆ ರಿವರ್ಸ್ ಟ್ರಾನ್ಸ್ಕ್ರಿಪ್ಟೆಸ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂದಾಗಿರುತ್ತದೆ. ಈ ವಿಧಾನದ ಮುಖಾಂತರ ಮೊದಲು ರಿವರ್ಸ್ ಟ್ರಾನ್ಸ್ಕ್ರಿಪ್ಟೆಸ್ ವಿಧಾನದಿಂದ ಡಿಎನ್ಎ ತಂತುಗಳನ್ನು ಪಡೆದು ಬಳಿಕ ಡಿಎನ್ಎಯನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ ಮುಖಾಂತರ ದೊಡ್ಡದು ಮಾಡಿ ಅಧ್ಯಯನ ಮಾಡಲಾಗುತ್ತದೆ. SARS Cov-2 ವೈರಾಣುವಿನಲ್ಲಿ ಕೇವಲ ಆರ್ಎನ್ಎ ಮಾತ್ರ ಹೊಂದಿರುವುದರಿಂದ RT-PCR ಮುಖಾಂತರ ವೈರಾಣು ಪತ್ತೆ ಹಚ್ಚಲಾಗುತ್ತದೆ. ಈ ಪರೀಕ್ಷೆಗೆ ಸುಮಾರು 4-5 ಗಂಟೆ ಹಿಡಿಯಬಹುದು. ರ್ಯಾಪಿಡ್ ಟೆಸ್ಟ್ನಲ್ಲಿ 2 ಗಂಟೆಯೊಳಗೆ ಫಲಿತಾಂಶ ಬರುತ್ತದೆ. ಪಿಸಿಆರ್ ಪರೀಕ್ಷೆಯಲ್ಲಿ ವ್ಯಕ್ತಿಯ ದೇಹದಲ್ಲಿ ಇರುವ ವೈರಾಣುವಿನ ಆಂಟಿಜೆನ್ ಇದರ ಇರುವಿಕೆಯನ್ನು ಪತ್ತೆ ಮಾಡಲಾಗುತ್ತದೆ. ಆಂಟಿಬಾಡಿ ಟೆಸ್ಟ್ನಲ್ಲಿ ವೈರಾಣು ಸೋಂಕು ತಗಲಿದ ವ್ಯಕ್ತಿಯ ರಕ್ತದಲ್ಲಿರುವ ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಉತ್ಪತ್ತಿಯಾದ ಆಂಟಿಬಾಡಿಯನ್ನು ಪತ್ತೆ ಹಚ್ಚಲಾಗುತ್ತದೆ. ಆಂಟಿಜೆನ್ ಟಿಸ್ಟ್ಗೆ ರಕ್ತ ಬಳಸುವುದಿಲ್ಲ. ಶಂಕಿತ ರೋಗಿಯ ಗಂಟಲಿನ ಅಥವಾ ಮೂಗಿನ ದ್ರವ್ಯವನ್ನು ಬಳಸಲಾಗುತ್ತದೆ. PCR ಪರೀಕ್ಷೆ ಸಂಪೂರ್ಣ ಪರಿಪೂರ್ಣವಾಗಿರುವುದಿಲ್ಲ. 30% ಪರೀಕ್ಷೆಗಳಲ್ಲಿ ತಪ್ಪು ಬರುವ ಸಾಧ್ಯತೆಯೂ ಇರುತ್ತದೆ. ಅಂದರೆ ಶೇಖಡಾ 30 ಮಂದಿಯಲ್ಲಿ ರೋಗವಿದ್ದರೂ ಧನಾತ್ಮಕ ರಿಪೋರ್ಟ್ ಬರದಿರಬಹುದು. ಈ ಕಾರಣದಿಂದ ರೋಗಿಯ ಚರಿತ್ರೆ ರೋಗ ಲಕ್ಷಣಗಳನ್ನು ತಾಳೆಹಾಕಿ ಅಗತ್ಯವಿದ್ದಲ್ಲಿ ಮತ್ತೊಮ್ಮೆ PCR ಪರೀಕ್ಷೆ ಮಾಡಿದ ಬಳಿಕವೇ ರೋಗ ನಿರ್ಣಯ ಮಾಡಲಾಗುತ್ತದೆ. ಆದರೆ ಒಮ್ಮೆ ಪಿಸಿಆರ್ ಪರೀಕ್ಷೆ ಧನಾತ್ಮಕವಾಗಿ ಬಂದಲ್ಲಿ ಆ ವ್ಯಕ್ತಿಗೆ ಖಂಡಿತವಾಗಿಯೂ ರೋಗ ಇದೆಯೆಂದು ತಿಳಿಯಲಾಗುತ್ತದೆ.
ಆಂಟಿಜೆನ್ ಟೆಸ್ಟ್ ನೆಗೆಟಿವ್ ಬರಲು ಕಾರಣಗಳೇನು?
1. ಗಂಟಲು ದ್ರವ ಸಂಗ್ರಹಣೆಯಲ್ಲಿ ಲೋಪ ಉಂಟಾಗುವ ಸಾಧ್ಯತೆ ಇರುತ್ತದೆ. ಬಾಯಿ ಭಾಗದಿಂದ ತೆಗೆದಾಗ ವೈರಾಣು ಇರದೇ ಇರಬಹುದು. ಸಾಕಷ್ಟು ವಯರಾಣು ಇಲ್ಲದೇ ಇರಬಹುದು. 2. ಪರೀಕ್ಷೆ ಸಂದರ್ಭಗಳಲ್ಲಿ ಉಂಟಾದ ಲೋಪಗಳು 3. ವೈದ್ಯಾಧಿಕಾರಿಗಳ ಪ್ರಮಾದಗಳಿಂದ ಆಗಬಹುದು. 4. ಗಂಟಲು ದ್ರವ ತೆಗೆದು ಹಲವು ದಿನಗಳ ಬಳಿಕ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬರಬಹುದು.
ಒಟ್ಟಿನಲ್ಲಿ ಎಲ್ಲವನ್ನೂ ಪ್ರಯೋಗಾಲಯದ ವರದಿಯ ಮೇಲೆ ಅವಲಂಬಿಸಿ ಚಿಕಿತ್ಸೆ ನೀಡಬಾರದು. ರೋಗಿಯ ದೇಹಸ್ಥಿತಿ ಚರಿತ್ರೆ ರೋಗ ಲಕ್ಷಣಗಳು ಎದೆ ಕ್ಷ-ಕಿರಣ ಮತ್ತು ಪ್ರಯೋಗಾಲಯದ ವರದಿ ಇವೆಲ್ಲವನ್ನೂ ತಾಳೆ ಹಾಕಿ ಯಾವ ಚಿಕಿತ್ಸೆ ಯಾವಾಗ ಹೇಗೆ ಆಗಬೇಕು ಎಂದು ವೈದ್ಯರೇ ನಿರ್ಧರಿಸುತ್ತಾರೆ.
ಕೊನೆಮಾತು:
ಕೋವಿಡ್-19 ರೋಗ ಪತ್ತೆ ಹಚ್ಚುವುದರಲ್ಲಿ RT-PCR ಆಂಟಿಜೆನ್ ಪರೀಕ್ಷೆ ಬಹುಮುಖ್ಯ ಭೂಮಿಕೆ ವಹಿಸಿದೆ. ಈ ಪರೀಕ್ಷೆ ಧನಾತ್ಮಕವಾಗಿ ಬಂದಲ್ಲಿ ಆ ವ್ಯಕ್ತಿಗೆ ಕೋವಿಡ್-19 ಸೋಂಕು ಇರುವುದರಲ್ಲಿ ಸಂದೇಹವೇ ಇಲ್ಲ. ಆದರೆ ಋಣಾತ್ಮಕ ವರದಿ ಬಂದ ಮಂದಿಯಲ್ಲಿ ರೋಗ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಪ್ರತಿ 100 ಮಂದಿ RT-PCR ಪರೀಕ್ಷೆ ಮಾಡಿದವರಲ್ಲಿ 30 ಮಂದಿಗೆ ಋಣಾತ್ಮಕ ವರದಿ ಬರುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ. ಅಂದರೆ ಈ RT-PCR ಪರೀಕ್ಷೆಯ ನಿಖರತೆಯ ಪ್ರಮಾಣ 70% ಎಂದು ಮಾತ್ರ ತಿಳಿದು ಬಂದಿದೆ.
ಈ ಕಾರಣದಿಂದ ವೈದ್ಯರು ರೋಗಿಯ ಚರಿತ್ರೆ, ರೋಗದ ಲಕ್ಷಣಗಳು, ರೋಗಿಯ ಎದೆಗೂಡಿನ ಕ್ಷಕಿರಣ, ರೋಗಿಯ ರಕ್ತದಲ್ಲಿನ ಆಮ್ಲಜನಕದ ಸಾಂಧ್ರತೆ ಇವೆಲ್ಲವನ್ನೂ RT-PCR ಪರೀಕ್ಷೆಯ ವರದಿ ಜೊತೆ ತಾಳೆ ಹಾಕಿ ರೋಗ ನಿರ್ಣಯ ಮಾಡುತ್ತಾರೆ. ಇದಲ್ಲದೆ, ನಿಮಗೆ ರೋಗ ಬಂದು ನಿಮಗರಿವಿಲ್ಲದೆ ರೋಗ ಗುಣಮುಖವಾಗಿದೆಯೇ ಎಂದು ತಿಳಿಯಬೇಕಿದ್ದರೆ ಆಂಟಿಬಾಡಿ ಪರೀಕ್ಷೆ ಮಾಡಿಸಬಹುದಾಗಿದೆ. ಒಟ್ಟಿನಲ್ಲಿ ಈ ಕೋವಿಡ್-19 ಎಂಬ ಹೊಸ ವೈರಾಣು ಸಾಂಕ್ರಾಮಿಕ ರೋಗ ವೈದ್ಯರಿಗೂ ಹೊಸ ರೋಗವಾಗಿರುವುದರಿಂದ ರೋಗದ ಬಗ್ಗೆ ಹೆಚ್ಚಿನ ಅಧ್ಯಯನ ನಡೆದು ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಬೇಕಾಗಿದೆ ಮತ್ತು ಆದಷ್ಟು ಬೇಗ ಲಸಿಕೆ ಕೂಡಾ ಬರಲಿ ಎಂಬುದೇ ಎಲ್ಲ ವೈದ್ಯರ ಒಕ್ಕೊರಲಿನ ಅಭಿಮತವಾಗಿರುತ್ತದೆ. ರಷ್ಯಾದಲ್ಲಿ ಲಸಿಕೆ ಕಂಡು ಹಿಡಿದದ್ದು, ಮನುಷ್ಯನ ಮೇಲೆ ಯಶಸ್ವಿ ಪ್ರಯೋಗ ನಡೆದಿದೆ ಎಂಬುದು ಬಹಳ ಆಶಾದಾಯಕ ವಿಚಾರವಾಗಿದೆ.
– ಡಾ|| ಮುರಲೀ ಮೋಹನ್ ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.