ಪುತ್ತೂರು ಕಮ್ಯೂನಿಟಿ ಸೆಂಟರ್ ನ ಮೂಲಕ ತಾಲೂಕಿನಲ್ಲಿ ಶೈಕ್ಷಣಿಕ ಜಾಗೃತಿಯ ಆಂದೋಲನ
(www.vknews.com) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಉತ್ತೇಜಿಸಲು ಸ್ಥಳೀಯ ಮಸೀದಿ ಮೌಲಾನಗಳು ವಿಧ್ಯಾರ್ಥಿಗಳ ಮನೆ-ಮನೆ ಬೇಟಿ ಮಾಡುತ್ತಿರುವುದನ್ನು ರಾಜ್ಯ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಶ್ಲಾಘಿಸಿದ್ದಾರೆ. ಹಲವಾರು ಮಸೀದಿಯ ಮೌಲಾನಗಳು ವಿಧ್ಯಾರ್ಥಿಗಳ ಮನೆ-ಮನೆಗೆ ಬೇಟಿ ನೀಡಿ ಅವರಿಗೆ ಪ್ರೇರಣೆ ನೀಡುವುದು, ವಿಚಾರಿಸುವುದು, ಶಿಕ್ಷಣ ಮಹತ್ವ ಸಾರುವುದನ್ನು ನೋಡಿ ಬಹಳ ಆನಂದವಾಗಿದೆ. ಮೌಲಾನಗಳ ಈ ವಿಭಿನ್ನ ಯೋಚನೆಯು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಆಗಬೇಕಾಗಿದೆ. ಶೈಕ್ಷಣಿಕ ಅಭಿವೃದ್ದಿಯ ಆಂದೋಲಕ್ಕೆ ಮುಸ್ಲಿಂ ಸಮುದಾಯದ ಮೌಲ್ವಿಗಳ ಈ ಅನುಕರಣೀಯ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ ಮತ್ತು ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.
ಪುತ್ತೂರು ತಾಲೂಕಿನ ಶಿಕ್ಷಣಾಧಿಕಾರಿ ಶ್ರೀಯುತ ಲೊಕೇಶ್ ರವರು ಈಗಾಗಲೇ ತಾಲೂಕಿನ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಮನೆ -ಮನೆಗೆ ಬೇಟಿ ನೀಡಿ ಅವರ ಕಲಿಕೆಯ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಉತ್ತಮ ಫಲಿತಾಂಶದ ಉದ್ದೇಶವನ್ನಿಟ್ಟು ಈಗಾಗಲೇ ತಾಲೂಕಿನ 2 ಸಾವಿರಕ್ಕಿಂತ ಹೆಚ್ಚು ವಿಧ್ಯಾರ್ಥಿಗಳ ಮನೆ ಸಂದರ್ಶನವನ್ನು ಅವರು ಶಿಕ್ಷಕರ ಸಹಕಾರದಿಂದ ಮಾಡಿರುತ್ತಾರೆ, ಈ ಪ್ರಯತ್ನದ ಜೊತೆಗೆ ಮುಸ್ಲಿಂ ಸಮುದಾಯದ ಸಹಭಾಗಿತ್ವಕ್ಕೆ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಪ್ರಮುಖರು ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿದಾಗ, ನಿಮ್ಮ ಜಮಾಅತ್ ಮೂಲಕ ವಿಧ್ಯಾರ್ಥಿಗಳಿಗೆ ಪ್ರೇರಣೆ ಕೊಡಿ ಎನ್ನುವ ಸಲಹೆ ನೀಡಿದರು. ಈ ಸಲಹೆಯನ್ನು ಸ್ಪೂರ್ತಿಯಾಗಿ ಪಡೆದು, ಕಮ್ಯೂನಿಟಿ ಸೆಂಟರ್ ನ ಪ್ರಮುಖರು ಪ್ರತೀ ಜಮಾಅತನ್ನು ಸಂಪರ್ಕಿಸಿ ಧರ್ಮಗುರುಗಳನ್ನು ಸ್ಥಳೀಯ ಮಸೀದಿ ವ್ಯಾಪ್ತಿಯ ವಿಧ್ಯಾರ್ಥಿಗಳ ಮನೆ ಬೇಟಿಗಾಗಿ ಕರೆದೊಯ್ದರು.
ವಿಧ್ಯಾರ್ಥಿಗಳ ಮೆನೆ ಬೇಟಿಯ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಶಿಕ್ಷಣಾಧಿಕಾರಿ ಲೊಕೇಶ್ ರವರು ಪಾಲ್ಗೊಂಡು ಧರ್ಮ ಗುರುಗಳ ಜೊತೆ ಹೆಜ್ಜೆ ಹಾಕಿದ್ದರು. ಕಮ್ಯೂನಿಟಿ ಸೆಂಟರ್ ನ ಮೂಲಕ ಈಗಾಗಲೇ ಹಲವು ಧರ್ಮಗುರುಗಳು ಶೈಕ್ಷಣಿಕ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಅವರಲ್ಲಿ ಕೂರ್ನಡ್ಕ ಮೊಹಲ್ಲಾ ಖಾಝಿ ಅಲ್ ಹಾಜ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಭ್ರಾಣ ಉಸ್ತಾದ್, ಬನ್ನೂರು ಮಸೀದಿ ಖತೀಬರಾದ ಮಲ್ಲಿ ಸಖಾಫಿ, ಕಲ್ಲೆಗ ಜಮಾಅತ್ ಖತೀಬರು, ಖ್ಯಾತ ವಾಗ್ಮಿಯೂ ಆದ ಅಬುಬಕ್ಕರ್ ಸಿದ್ದೀಕ್ ಜಲಾಲಿ, ಬಲ್ನಾಡ್ ಮಸೀದಿಯ ಖತೀಬರಾದ ನಿಯಾಝ್ ದಾರಿಮಿ ಪ್ರಮುಖರು. ಪುತ್ತೂರು ಕಮ್ಯುನಿಟಿ ಸೆಂಟರ್ ಮೂಲಕ ಈಗಾಗಲೇ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹನ್ನೊಂದು ಶಾಲೆಗಳಲ್ಲಿ ಪ್ರೇರಣಾ ಶಿಭಿರ, ಸ್ಟಡೀ ಸ್ಕಿಲ್ ಟ್ರೈನಿಂಗ್, ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯದ ತರಬೇತಿ ನೀಡಲಾಗಿದೆ. ಸುಮಾರು 1300 ವಿಧ್ಯಾರ್ಥಿಗಳು ಇದರ ಪ್ರಯೋಜ ಪಡೆದಿದ್ದಾರೆ. ಕಮ್ಯೂನಿಟಿ ಸೆಂಟರ್ ಮುಂದೆ ಮೊಹಲ್ಲಾ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪಿಸಲಿದ್ದು ಸರಕಾರ ಮತ್ತು ಶಿಕ್ಷಣ ಇಲಾಖೆಯ ಸಹಕಾರ ಸಿಗುತ್ತಿರುವುದೇ ಕಾರ್ಯಕ್ರಮಕ್ಕೆ ಸ್ಪೂರ್ತಿ ಎಂದಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ, ಉಮರ್ ಯು.ಎಚ್, ರಫೀಕ್ ಮಾಸ್ಟರ್ ಮತ್ತು ಮೌಲಾನ ಅಝಾದ್ ಶಾಲೆಯ ಪ್ರಾಂಶುಪಾಲರಾದ ತೌಪೀಕ್ ರವರು ವಿಧ್ಯಾರ್ಥಿಗಳ ಪ್ರೇರಣಾ ಶಿಬಿರ ನಡೆಸಿ ಕೊಡುತ್ತಿದ್ದಾರೆ.
ತಾಲೂಕು ಶಿಕ್ಷಣಾಧಿಕಾರಿ ಲೊಕೇಶ್ ರವರ ಮಾತು -:
ಕೊರೊನಾ ಕಾಲದ ಸುದೀರ್ಘ ರಜೆಯಿಂದಾಗಿ ವಿಧ್ಯಾರ್ಥಿಗಳಲ್ಲಿ ಶಿಕ್ಷಣ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಕೊರತೆ ಕಾಣುತ್ತಿದೆ. ಇದನ್ನು ಅರಿತು ನಾವು ಶಿಕ್ಷಕರ ಮೂಲಕ ವಿಧ್ಯಾರ್ಥಿಗಳನ್ನು ವೀಕ್ಷಿಸಲು ಮತ್ತು ಉತ್ತೇಜಿಸಲು ಮನೆ ಮನೆ ಬೇಟಿ ಕಾರ್ಯಕ್ರಮ ಹಮ್ಮಿಕೊಂಡೆವು. ಈ ಮೂಲಕ ಎರಡು ಸಾವಿರಕ್ಕಿಂತ ಹೆಚ್ಚು ಎಸ್.ಎಸ್.ಎಲ್.ಸಿ ಕಲಿಯುವ ವಿಧ್ಯಾರ್ಥಿಗಳನ್ನು ಸಂಪರ್ಕಿಸಲು ಸಾಧ್ಯವಾಯಿತು. ಶಾಲೆ ಆರಂಭವಾದಾಗ 10% ವಿಧ್ಯಾರ್ಥಿಗಳು ತರಗತಿ ಬರದೇ ಇರುವುದನ್ನು ಗಮನಿಸಿ ಈ ಅಭಿಯಾನ ಮಾಡಿದಾಗ ಹೆಚ್ಚಿನ ವಿಧ್ಯಾರ್ಥಿಗಳನ್ನು ಶಾಲೆಗೆ ಮರಳಿ ಸೇರಿಸಲು ಸಾಧ್ಯವಾಯಿತು. ವಿಧ್ಯಾರ್ಥಿಗಳನ್ನು ಮತ್ತೆ ಶಿಕ್ಷಣದ ದಾರಿಗೆ ಜರೆ ತರುವ ಪ್ರೇರಣಾ ಶಿಬಿರವನ್ನು ಆಯೋಜಿಸಲಾಯಿತು. ಪುತ್ತೂರು ಕಮ್ಯೂನಿಟಿ ಸೆಂಟರ್ ನವರೂ ಈ ಪ್ರೇರಣಾ ಶಿಬಿರಕ್ಕೆ ನಮಗೆ ಸಂಪೂರ್ಣ ಬೆಂಬಲವನ್ನೂ ನೀಡಿದ್ದಾರೆ. ಕಮ್ಯುನಿಟಿ ಸೆಂಟರ್ ನ ಹನೀಫ್ ಪುತ್ತೂರು ಮತ್ತು ಇಮ್ತಿಯಾಝ್ ರವರು ನಮ್ಮ ಸಹಕಾರ ಹೇಗೆ ಬೇಕು ಎಂದು ಕೇಳಿದಾಗ, ನಾವು ಜಮಾಅತಿನ ಮೂಲಕ ನೀವು ನಿಮ್ಮ ಸಮುದಾಯದ ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದೆವು. ಅವರು ತಕ್ಷಣ ನಮ್ಮ ಮನೆ ಬೇಟಿ ಯೋಚನೆಯನ್ನು, ಧರ್ಮಗುರುಗಳ ಮನೆ ಬೇಟಿಯಾಗಿ ಪರಿವರ್ತಿಸಿದರು. ಈ ಮೂಲಕ ಹಲವು ಜಮಾಅತ್ ನ ಧರ್ಮ ಗುರುಗಳು ಅವರ ಮಸೀದಿ ವ್ಯಾಪ್ತಿಯಲ್ಲಿನ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಮನೆ ಬೇಟಿಯನ್ನು ಮಾಡಿಸಿದರು. ನಾನೂ ಜೊತೆ ಇದ್ದು ಅವರಿಗೆ ಹುರಿದುಂಬಿಸಿದ್ದೆ. ಒಂದು ಸಮುದಾಯವು ಶೈಕ್ಷಣಿಕ ಪ್ರಗತಿಗೆ ದುಡಿಯುವಾಗ ಇಲಾಖೆಯ ಕರ್ತವ್ಯವಾಗಿ ನಾವು ಅವರ ಅಭಿಯಾನದಲ್ಲಿ ಕೈ ಜೋಡಿಸಿದ್ದೇವೆ. ಈಗಾಗಲೇ ನಮ್ಮ ಶಿಕ್ಷಣ ಸಚಿವರಾದ ಸನ್ಮಾನ್ಯ ಸುರೇಶ್ ಕುಮಾರ್ ರವರೂ ಮುಸ್ಲಿಂ ಸಮುದಾಯದ ಉಲೆಮಾಗಳ ಈ ವಿಭಿನ್ನ ಆಲೋಚನೆಯನ್ನು ಅಭಿನಂದಿಸಿದ್ದಾರೆ. ಶೈಕ್ಷಣಿಕ ಉನ್ನತಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಬಹಳ ಅಗತ್ಯ. ಅದರಲ್ಲೂ ಮುಸ್ಲಿಂ ಸಮುದಾಯದಲ್ಲಿ ದೊಡ್ಡ ಮಟ್ಟದಲ್ಲಿ ಇದು ಆಗ ಬೇಕಾದ ಅನಿವಾರ್ಯತೆ ಇದೆ. ಮುಸ್ಲಿಂ ವಿಧ್ಯಾರ್ಥಿಗಳು ಪ್ರತಿಭಾನ್ವಿತರಿದ್ದಾರೆ, ಕ್ರಿಯೇಟಿವ್ ಇದ್ದಾರೆ ಆದರೆ, ಅವರಿಗೆ ಸರಿಯಾದ ಮಾರ್ಗದರ್ಶನ-ಪ್ರೋತ್ಸಾಹ ಮತ್ತು ಸಹಕಾರ ಸಿಗುತ್ತಿಲ್ಲ ಎಂಬುವುದು ನಾನು ಕಂಡುಕೊಂಡ ಸತ್ಯ. ಹಾಗಾಗಿ ಕಮ್ಯುನಿಟಿ ಸೆಂಟರ್ ಮುಸ್ಲಿಂ ಸಮುದಾಯದ ಎಲ್ಲರನ್ನೂ ಸೇರಿಸಿ ಶಿಕ್ಷಣ ಉನ್ನತಿಗಾಗಿ ಮಾಡುತ್ತಿರುವ ಸೇವೆಗೆ ನಮ್ಮ ಸಂಪೂರ್ಣ ಸಹಕಾರ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.