ಇತ್ತೀಚಿಗೆ ನಿಧನ ಹೊಂದಿದ “ಹಾತಿಂ ಕಂಚಿ” ಅವರ ಬಗ್ಗೆ ವಿಶೇಷ ಲೇಖನ…
(www.vknews.com) : ರಾಜ ಗಂಭೀರವಾಗಿ ಆ ಇನ್ನೋವಾ ಕಾರು ಬಂದು ನಿಂತಾಗಲೇ ಅಲ್ಲಿಯ ಚಿಕ್ಕ ಪುಟ್ಟ ಪುಟಾಣಿಗಳಿಗೆ ಸಹಾ ತಿಳಿದು ಬಿಟ್ಟಿರುತ್ತದೆ ಕಂಚಿ ಬಂದರು ಎಂದು. ಕಂಚಿ ಬಂದರು ಎಂಬ ಉಧ್ಗಾರದೊಂದಿಗೆ ಅವರ ಮನಸ್ಸಲ್ಲಿಯೂ ಒಂದು ವಿಧ ಸಂತೋಷ ಉತ್ಸಾಹದ ಕುತೂಹಲ ಎಲ್ಲವೂ ಮೂಡಿ ಮಾಯವಾಗುತ್ತಿತ್ತು. ಹೌದು ಅವರ ಪ್ರೀತಿಯ ಹಾತಿಂ ಕಂಚಿ ಸಂಸ್ಥೆಯೊಂದಿಗೆ ಅಷ್ಟೊಂದು ಅಭೇಧ್ಯ ಸಂಬಂಧವನ್ನು ಇಟ್ಟು ಕೊಂಡಿದ್ದರು.
ಹೌದು. ಸಂಸ್ಥೆಯ ಕುರಿತು ಅವರ ಕಾಳಜಿ ಅಷ್ಟಿತ್ತು. ಸಂಸ್ಥೆಯ ಪ್ರಾರಂಭದ ಕಾಲದಿಂದ ತನ್ನ ಕೊನೆಯ ಗಳಿಗೆಯ ವರೆಗೂ ಸಂಸ್ಥೆಗಾಗಿ ತನ್ನ ಶರೀರ ಮನಸ್ಸು ಹಾಗೂ ಸಂಪತ್ತುಗಳನ್ನು ಮೀಸಲಾಗಿಟ್ಟ ಮಹಾನ್ ವ್ಯಕ್ತಿತ್ವ. ಮೂಳೂರು ಮರ್ಕಝ್ ನ ಪ್ರತಿಯೊಂದು ವಿಭಾಗದ ಪ್ರತಿಯೊಂದು ಸಿಬ್ಬಂದಿಗಳೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಸುಮಾರು 25 ವರ್ಷಗಳ ಮೊದಲು ಡಿಕೆಎಸ್ಸಿ ಪ್ರಾರಂಭವಾಗಿ ನಂತರ ಅಲ್ಪ ಕಾಲದಲ್ಲಿ ಪ್ರಾರಂಭವಾದ ಆ ಬಾಂಧವ್ಯ ದೀರ್ಘ ಅವಧಿಯಲ್ಲಿ ಹಲವಾರು ವಿಭಾಗದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸುತ್ತಾ ಮುಂದುವರಿಯಿತು. ಸುಮಾರು 10 ವರ್ಷಗಳ ಕಾಲ ಡಿಕೆಎಸ್ಸಿ ದಮಾಮ್ ವಲಯದ ಅಧ್ಯಕ್ಷರಾಗಿ, ಕೇಂದ್ರ ಸಮಿತಿಯ ಕೋಶಾಧಿಕಾರಿಯಾಗಿ, ಡಿಕೆಎಸ್ಸಿ ನಡೆಸುತ್ತಿದ್ದ ಫ್ಯಾಮಿಲಿ ಮುಲಾಖಾತ್ ಗಳ ರುವಾರಿಯಾಗಿ, ಹಲವು ವರ್ಷಗಳ ಕಾಲ ಅದರ ಚೆಯರ್ಮಾನ್ ಹಾಗೂ ಕನ್ವೀನರ್ ಆಗಿ, ಕೊನೆಗೆ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷರಾಗಿ ಕಾರ್ಯಾಚರಿಸುವ ವರೆಗೂ ಅದು ಬಂದು ನಿಂತಿದೆ ಎಂದಾದರೆ ಅದು ಅವರ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ. ಅದರೊಂದಿಗೆ ಅವರು ಸಂಸ್ಥೆಯ ಆರ್ಥಿಕ ವ್ಯವಸ್ಥೆಯ ಒಂದು ಬೆನ್ನೆಲುಬು ಕೂಡ ಆಗಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಬೇಕಾಗಿದೆ.
ಅವರು ಊರಲ್ಲಿದ್ದರೆ ಮರ್ಕಝ್ ಕ್ಯಾಂಪಸ್ಸಿಗೆ ಬರದ ವಾರಗಳಿಲ್ಲ. ಮರ್ಕಝ್ ನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ಥರು. ಆದರೆ ಅವರು ಇನ್ನೂ ಹೆಚ್ಚಾಗಿ ಮರ್ಕಝ್ ನೊಂದಿಗೆ ಹತ್ತಿರವಾದದ್ದು ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರವಾಗಿತ್ತು. ನಂತರ ಅವರ ಮಾತು ಕೃತಿಗಳೆಲ್ಲವೂ ಡಿಕೆಎಸ್ಸಿ ಮತ್ತು ಮರ್ಕಝ್ ಅಭಿವೃದ್ಧಿಯ ಕುರಿತು ಮಾತ್ರವಾಗಿತ್ತು. ಆಗ ಮಾತ್ರ ತನ್ನ ಸರ್ವ ವನ್ನು ಸಂಸ್ಥೆಗೆ ಸಮರ್ಪಿಸಿದ್ದರು. ಅಲ್ಲಿನ ಪ್ರತಿಯೊಂದು ಚಲನ ವಲನಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಸಂಸ್ಥೆಯ ಮುಖ್ಯ ಕಛೇರಿ ಇಲ್ಲವೇ ಸ್ಕೂಲಿನ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದರೆ ನಮಗಿಂತ ಮೊದಲು ಅವರೇ ನಮಗೆ ತಿಳಿಸಿ ಪ್ರಶ್ನೆ ಮಾಡುತ್ತಿದ್ದರು. ಅದಲ್ಲದೇ ರಾತ್ರಿ 12ರ ನಂತರ ಬೆಳಗಿನವರೆಗಿನ ಹಲವಾರು ಸ್ಕ್ರೀನ್ ಷಾಟ್ ಗಳನ್ನು ನಮಗೆ ಕಳುಹಿಸಿ ಕೊಡುತ್ತಿದ್ದರು. ಅಲ್ಲಿ ನಡೆಯುವ ಕಟ್ಟಡ ನಿರ್ಮಾಣ ಕಾಮಗಾರಿಗಳ ಕುರಿತು ಪ್ರತಿದಿನ ಕನಿಷ್ಠ ಎರಡು ಬಾರಿಯಾದರೂ ದೂರವಾಣಿ ಮುಖಾಂತರ ವರದಿ ಕೇಳುತ್ತಿದ್ದರು. ಅಲ್ಲಿನ ಚಿಕ್ಕ ಪುಟ್ಟ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಸಂಸ್ಥೆಗೆ ಯಾವ ರೀತಿಯಲ್ಲಿ ಲಾಭ ಪಡೆಯಲು ಸಾಧ್ಯವೋ ಅವುಗಳನ್ನು ಕಡ್ಡಾಯವಾಗಿ ಸಂಪೂರ್ಣವಾಗಿ ಚಾಲನೆಗೆ ತರಲು ಪ್ರಯತ್ನಿಸಿದ್ದರು.
ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪಣ ತೊಟ್ಟು ಕಾರ್ಯಾಚರಿಸುತ್ತಿದ್ದರು. ಅದಕ್ಕಾಗಿ ಮಾತ್ರ ಕೆಲವೊಮ್ಮೆ ತನ್ನ ಕುಟುಂಬವನ್ನು ವಿದೇಶದಲ್ಲಿ ಬಿಟ್ಟು ತಾನು ಮಾತ್ರ ಊರಿಗೆ ಬಂದು ಮರ್ಕಝ್ ನಲ್ಲಿ ನಡೆಯುವ ಆಗು ಹೋಗುಗಳ ಕುರಿತು ಚರ್ಚಿಸುತ್ತಿದ್ದರು ಎಂದರೆ ಅವರ ಕರ್ತವ್ಯ ನಿರ್ವಹಣೆ ಹೇಗಿತ್ತು ಎಂಬುದನ್ನು ನಾವು ಅರಿಯಬೇಕು. ಆಗ ಅವರು ಸದಾ ಹೇಳುತ್ತಿದ್ದ ಮಾತು ಸಹ ಅದೇ ಆಗಿತ್ತು “ನಾನು ಆ ಹುದ್ದೆಯಲ್ಲಿ ಇರುವಾಗ ಅದನ್ನು ನನ್ನ ಕೈಲಾದಷ್ಟು ಮಾಡುವುದು ನನ್ನ ಜವಾಬ್ದಾರಿ ಆಗಿದೆ. ನನ್ನ ಜವಾಬ್ದಾರಿ ಹೋದನಂತರ ನಾನು ಅಲ್ಲಾಹನ ಹತ್ತಿರ ಹೊಣೆಗಾರನಾಗುವುದಿಲ್ಲ. ನಾನು ಇಷ್ಟೆಲ್ಲಾ ಬೊಬ್ಬೆ ಹೊಡೆಯುವುದು ನನ್ನ ಮನೆಗೆ ಕೊಂಡು ಹೋಗಲು ಅಲ್ಲ. ಅದರಿಂದ ಸಂಸ್ಥೆಗೆ ಎರಡು ಮುಕ್ಕಾಲು ಬಾಕಿಯಾಗುವುದಾದರೆ ಆಗಲಿ. ಯಾರು ಯಾರೋ ತಿಂದು ಹೋಗುವುದು ಬೇಡ.”
ನಾನು ಪ್ರಾರಂಭದಲ್ಲಿ ಸೂಚಿಸದಂತೆ ಅವರು ಮರ್ಕಝ್ ಕ್ಯಾಂಪಸ್ಸಿಗೆ ಬಂದಾಗ ಹಲವಾರು ಸಲ ಅಲ್ಲಿನ ಯತೀಂ ಮಸಾಕೀನ್ ವಿದ್ಯಾರ್ಥಿಗಳನ್ನು ಕರೆದು ಪ್ರತ್ಯೇಕವಾಗಿ ಅವರೊಂದಿಗೆ ಕೂತು ವೈಯುಕ್ತಿಕವಾಗಿ ಮಾತನಾಡುತ್ತಿದ್ದರು. ನಿಮ್ಮ ಸೌಲಭ್ಯಗಳು ಮತ್ತು ಕುಂದು ಕೊರತೆಗಳನ್ನು ನಿರ್ಭೀತಿಯಿಂದ ಹೇಳುವಂತೆ ಆ ಚಿಕ್ಕ ಪುಟ್ಟ ಮಕ್ಕಳನ್ನು ಪ್ರೇರೇಪಿಸುತ್ತಿದ್ದರು. ಆದುದರಿಂದಲೇ ಕ್ಯಾಂಪಸ್ಸಿನಲ್ಲಿ ಅವರ ಕಾರು ಬಂದು ನಿಲ್ಲುವಾಗಲೇ ಆ ಮಕ್ಕಳು ಕಂಚಿ ಕಂಚಿ ಎಂದು ಸಂತೋಷದಿಂದ ಕುಣಿಯುತ್ತಿದ್ದರು.
ಬರೆಯಲು ಹೋದರೆ ಇನ್ನೂ ಬಹಳಷ್ಟಿದೆ. ಅವರು ಇನ್ನೂ ನಮ್ಮೊಂದಿಗೆ ಬಹು ಕಾಲ ಇರಬೇಕಿತ್ತು. ಆದರೆ ಅಲ್ಲಾಹನ ಖಳಾ(ವಿಧಿ) ಬೇರೆಯೇ ಆಗಿತ್ತು. ಮರಣವು ಎಲ್ಲರಿಗೂ ಕಡ್ಡಾಯವೆಂದು ನಮಗೆ ಗೊತ್ತು. ಆದರೆ ಅದು ಯಾವ ರೀತಿಯಲ್ಲಿ ಆಗುತ್ತದೆ ಎಂಬುವುದು ಮುಖ್ಯ. ಅದೊಂದು ಈದ್ ದಿನ ಮಧ್ಯಾಹ್ನ ಡಿಕೆಎಸ್ಸಿ ಕಾರ್ಯಕರ್ತರಿಗೆ ಹಾಗೂ ಅವರ ಸ್ನೇಹಿತರಿಗೆ ಬರಸಿಡಿಲಿನಂತೆ ಆ ವಾರ್ತೆ ಬಂದೆರಗಿತು. ಹಲವರಿಗೆ ನಂಬಲೂ ಸಾಧ್ಯವಾಗಲಿಲ್ಲ. ಪವಿತ್ರ ರಂಝಾನಿನ ಮೂವತ್ತು ಉಪವಾಸ ಪೂರ್ಣಗೊಳಿಸಿದ ಅವರು ಈದ್ ದಿನ, ಈದ್ ನಮಾಜ್ ಮಾಡಿ ಕಾರ್ಯಕರ್ತರಿಗೆ ವಿದಾಯ ಹೇಳುವ ರೀತಿಯಲ್ಲಿ ಎಲ್ಲರಿಗೂ ಈದ್ ಸಂದೇಶವನ್ನು ಕಳುಹಿಸಿ, ಅವರಲ್ಲಿ ಕೆಲವರ ಉತ್ತರ ಬರುವ ಮೊದಲೇ ಹಿಂತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. إِنَّا لِلَّهِ وَ إِنَّا إِلَيهِ رَاجِعُونْ ಹೌದು ಕಂಚಿ ಎಂದರೆ ಅದೊಂದು ಕಂಚಿ ಆಗಿರಲಿಲ್ಲ. ನಮ್ಮ ಭಾಷೆಯಲ್ಲಿ ಹೇಳಿದರೆ ಕಂಚಿ ಅಲ್ಲ ಶುದ್ಧ ಬಂಗಾರವೇ ಸರಿ.
ನಿಜಕ್ಕೂ ಅವರು ಧನ್ಯರು. ಅವರಿಗಾಗಿ ಇಂದು ಸಾವಿರಾರು ಡಿಕೆಎಸ್ಸಿ ನಿಷ್ಠಾವಂತ ಕಾರ್ಯಕರ್ತರು ನಿಷ್ಕಲಂಕವಾಗಿ ದುಆ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಂಸ್ಥೆಯ ನೂರಾರು ಯತೀಂ, ಹಿಫ್ಳ್ ಮಸಾಕೀನ್, ದಅವಾ ಮುಂತಾದ ವಿದ್ಯಾರ್ಥಿಗಳು ಹತ್ತಾರು ಖತಮುಲ್ ಖುರ್’ಆನ್ ಗಳನ್ನು ಪಾರಾಯಣ ಮಾಡಿ ಲಕ್ಷಾಂತರ ತಹ್ಲೀಲ್ ಗಳನ್ನು ಹೇಳಿ ಹದ್ಯಾ ಮಾಡಿ ಅವರ ಮಗ್ಫಿರತ್ತ್, ಮರ್ಹಮತ್ತ್ ಗೆ ಬೇಕಾಗಿ ಎಲ್ಲೆಲ್ಲೂ ದುಆ ಮಾಡುತ್ತಿದ್ದಾರೆ. ಅದುವೇ ಅಲ್ಲವೇ ಡಿಕೆಎಸ್ಸಿಯ ಪ್ರತಿಯೊಬ್ಬ ಕಾರ್ಯಕರ್ತರೂ ನಿರೀಕ್ಷಿಸುವುದು. ಅಲ್ಲಾಹು ಸ್ವೀಕರಿಸಲಿ ಆಮೀನ್
ಇದರೊಂದಿಗೆ ಡಿಕೆಎಸ್ಸಿಗೆ ಬೇಕಾಗಿ ರಾತ್ರಿ ಹಗಲೆನ್ನದೇ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ ಎಲ್ಲಾ ಕಾರ್ಯಕರ್ತರನ್ನು ಇಲ್ಲಿ ಸ್ಮರಿಸುತ್ತಾ ಅವರ ಎಲ್ಲಾ ಪಾಪಗಳನ್ನು ಮನ್ನಿಸಿ ಅವರ ಪರಲೋಕ ಜೀವನವನ್ನು ಸಂತೋಷಗೊಳಿಸಲಿ. ಅವರಿಗೆ ಪೂರ್ಣ ಮಗ್ಫಿರತ್ತ್ ಮರ್ಹಮತ್ತ್ ನೀಡಿ ಅನುಗ್ರಹಿಸಲಿ. ಅವರು ಡಿಕೆಎಸ್ಸಿಗೆ ಮತ್ತು ಸಮುದಾಯಕ್ಕೆ ಮಾಡಿದ ಸರ್ವ ಒಳಿತುಗಳನ್ನು ಸ್ವೀಕರಿಸಿ ಅವರೊಂದಿಗೆ ನಮ್ಮನ್ನೂ ಸ್ವರ್ಗದಲ್ಲಿ ಒಟ್ಟು ಸೇರಿಸಲಿ. ಈಗಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ರಾತ್ರಿ ಹಗಲೆನ್ನದೇ ಕಷ್ಟಪಟ್ಟು ದುಡಿಯುವ ಎಲ್ಲಾ ಕಾರ್ಯಕರ್ತರಿಗೆ ಅಲ್ಲಾಹು ಅರ್ಹ ಪ್ರತಿಫಲವನ್ನು ಇಹ ಪರ ದಲ್ಲಿ ನೀಡಿ ಅನುಗ್ರಹಿಸಲಿ ಆಮೀನ್….
✍️ ಎಸ್. ಅಳಕ್ಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.