(www.vknews.com) : ಎನ್.ಕೆ.ಮುಹಮ್ಮದ್ ಶಾಫಿ ನಂದಾವರ ಎಂಬ ಪ್ರತಿಭಾವಂತ ವಿದ್ಯಾರ್ಥಿ ಕಾಸರಗೋಡು ದೇಳಿ ಜಾಮಿಅಃ ಸಅದಿಯ್ಯ ಅರಬಿಕ್ ಕಾಲೇಜ್ ನಲ್ಲಿ ಕಲಿಯುತ್ತಿದ್ದ ಸಂದರ್ಭ. ಅವರ ಲೇಖನಗಳು ವಿವಿಧ ಪತ್ರಿಕೆ, ಪುರವಣಿಗಳಲ್ಲಿ ಪ್ರಕಟವಾಗುತ್ತಿದ್ದವು. ನಂತರ ಅವರು ಸಅದಿ ಪದವಿ ಪಡೆದು ಹೊರ ಬಂದು ಮುದರ್ರಿಸ್ ಆಗಿ ಸೇವೆ ಆರಂಭಿಸಿದರು.
ಮರ್ಹೂಂ ಅಯ್ಯೂಬ್ ಖಾನ್ ಸಅದಿ ಕೊಲ್ಲಂ ಎಂಬ ಆದರ್ಶಧೀರ ವಿದ್ವಾಂಸ ಬನ್ನೂರು ಮುದರ್ರಿಸ್ ಆಗಿದ್ದ ಕಾಲ. ಆಗ ನಾನು ಕಬಕ ಕಲ್ಲಂದಡ್ಕ ದಲ್ಲಿ ಖತೀಬ್ ಆಗಿ ಸೇವೆಯಲ್ಲಿದ್ದೆ.
ಕೊಡುಂಙಲ್ಲೂರು ಮಾಡವನ ಜಾಮಿಅಃ ಅಝೀಝಿಯ್ಯ ಅರಬಿಕ್ ಕಾಲೇಜ್ ನಿಂದ “ಝುಹ್ರಿ” ಪದವಿ ಪಡೆದು ಹೊರ ಬಂದಾಗ ಸುನ್ನೀ ಸಂಘಟನೆಗಳ ಅನಭಿಷಕ್ತ ದೊರೆ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಯವರು ಅವರು ಸೇವೆಯಲ್ಲಿದ್ದ ಸೂರಿಂಜೆ ಮಸೀದಿಯ ಅಧೀನದ ಶಿಬರೂರು ಎಂಬಲ್ಲಿ ಏಕ ವ್ಯಕ್ತಿ ಮದರಸದಲ್ಲಿ ಸೇವೆಗೆ ನಿಲ್ಲುವಂತೆ ಸೂಚಿಸಿದರು. ನಂತರ ಅಲ್ಲಿಂದ ನೇರವಾಗಿ ಬಂದದ್ದು ಕಲ್ಲಂದಡ್ಕ ಜುಮುಅಃ ಮಸ್ಜಿದ್ಗೆ.
ಅಯ್ಯೂಬ್ ಖಾನ್ ಸಅದಿ ಯವರು ಕಲ್ಲಂದಡ್ಕ ಜುಮುಅಃ ಮಸ್ಜಿದ್ ನ ಅಂದಿನ ಅಧ್ಯಕ್ಷರಾಗಿದ್ದ ಉಮರ್ ಕಲ್ಲಂದಡ್ಕ ರವರೊಂದಿಗೆ ಮಾತನಾಡಲು ಬರುತ್ತಿದ್ದ ಕಾರಣ ಅವರ ಪರಿಚಯವಾಯಿತು. ಅದೊಂದು ದಿನ ಬನ್ನೂರು ಮಸೀದಿಯ ವತಿಯಿಂದ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆ ಕಾರ್ಯಕ್ರಮಕ್ಕೆ ಮುಖ್ಯ ಭಾಷಣ ಗಾರರಾಗಿ ಆಗಮಿಸುವವರು ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನಂದಾವರ ಆದ ಕಾರಣ ಅವರ ಭಾಷಣ ಕೇಳಲು ನಾನು ಬನ್ನೂರಿಗೆ ಹೋದೆ. ಆಗ ಅವರು ಭಾಷಣ ರಂಗಕ್ಕೆ ಕಾಲಿಡುತ್ತಿದ್ದ ಸಂದರ್ಭವಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಅಯ್ಯೂಬ್ ಖಾನ್ ಸಅದಿ ಯವರು ಸಿಡಿಲಬ್ಬರದ ಭಾಷಣ ಮಾಡಿದರು. ಆ ಭಾಷಣ ಅಬ್ದುನ್ನಾಸರ್ ಮಅದನಿ ಯವರ ಕಂಚಿನ ಕಂಠದ ಆವೇಶ ಭರಿತ ಭಾಷಣವನ್ನು ನೆನಪಿಸುವಂತಿತ್ತು !!!
ಮುಖ್ಯ ಭಾಷಣ ಮಾಡಿದ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನಂದಾವರ ಅವರು ನೆರೆದವರನ್ನು ವಿಸ್ಮಯಗೊಳಿಸುತ್ತಾ ಅದ್ಭುತ ಭಾಷಣ ಮಾಡಿದರು. ಅವರ ಭಾಷಣವನ್ನು ಅದೇ ಮೊದಲ ಬಾರಿ ನಾನು ಕೇಳಿದ್ದು. ಇವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನದತ್ತ ತಲುಪುತ್ತಾರೆ ಎಂದು ನಾನು ಆಗಲೇ ಭಾವಿಸಿದ್ದೆ.
ಇಂದು ಶಾಫಿ ಸಅದಿ ಬೆಂಗಳೂರು ಎಂಬ ಹೆಸರು ಇಡೀ ಕರ್ನಾಟಕದಲ್ಲಿ ಚಿರಪರಿಚಿತ. ಅಂದು ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನಂದಾವರ ಎಂಬ ಹೆಸರಿನಲ್ಲಿ ಖ್ಯಾತಿ ಪಡೆದಿದ್ದ ಯುವ ವಿದ್ವಾಂಸ ಇಂದು ಶಾಫಿ ಸಅದಿ ಬೆಂಗಳೂರು ಹೆಸರಿನಲ್ಲಿ ಕರ್ನಾಟಕದ ಜನತೆಯ ಅಧಿಕೃತ ಶಬ್ದವಾಗಿ ಮಾರ್ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಅದಿಯಾ ಫೌಂಡೇಶನ್ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿಯ ಅಲೆಗಳನ್ನೆಬ್ಬಿಸುತ್ತಾ ಸರಕಾರದ ಉನ್ನತ ಹುದ್ದೆಯಲ್ಲೂ ಸೇವೆ ಸಲ್ಲಿಸುತ್ತಾ ಮುಸ್ಲಿಂ ಸಮುದಾಯದ ಸಮಸ್ಯೆಗಳಿಗೆ ದ್ವನಿಯಾಗುತ್ತಿರುವ ಶಾಫಿ ಸಅದಿ ಯವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಬಳಿಕ ಮುಸ್ಲಿಂ ಸಮುದಾಯಕ್ಕೆ ಎಷ್ಟೋ ಸವಲತ್ತುಗಳನ್ನು ದೊರಕಿಸಿ ಕೊಟ್ಟ ಮಹಾನ್ ನಾಯಕರಾಗಿದ್ದಾರೆ.
ಶಾಫಿ ಸಅದಿ ಯವರ ಪ್ರತಿಭೆಯನ್ನು ಗಮನಿಸಿದ ಅಂದಿನ ಬಿಜೆಪಿ ಸರಕಾರ ಅವರನ್ನು ವಕ್ಫ್ ಸದಸ್ಯರನ್ನಾಗಿ ನೇಮಕ ಮಾಡಿತು. ಸರಕಾರ ಯಾವುದೇ ಪಕ್ಷದ್ದಾದರೂ ಜನರು ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆದರೆ ಶಾಫಿ ಸಅದಿ ಯವರು ವಕ್ಫ್ ಮಂಡಳಿ ಸದಸ್ಯರಾಗುತ್ತಿದ್ದಂತೆ ಕೆಲವರು ಬಿಜೆಪಿ ಸಅದಿ ಎಂದು ಗೇಲಿ ಮಾಡಿದರು. ನಿಜವಾಗಿ ಶಾಫಿ ಸಅದಿ ಯವರು ಇಂದಿಗೂ ಕೂಡ ಯಾವುದೇ ಒಂದು ಪಕ್ಷದ ಬೆಂಬಲಿಗರಲ್ಲ.
ಆದರೆ ಬಿಜೆಪಿ ಸರಕಾರ ಶಾಫಿ ಸಅದಿ ಯವರನ್ನು ವಕ್ಫ್ ಮಂಡಳಿ ಸದಸ್ಯರಾಗಿ ನೇಮಕ ಮಾಡಿದ ಕಾರಣ ದ್ವೇಷ ಸಾಧನೆ ಮಾಡುವವರು ಬಿಜೆಪಿ ಸಅದಿ ಎಂದು ನಿಂದಿಸುತ್ತಲೇ ಇದ್ದರು.
ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಯಿರುವಾಗಲೂ ಹೆಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಯಿರುವಾಗಲೂ ಶಾಫಿ ಸಅದಿ ವಕ್ಫ್ ಮಂಡಳಿ ಸದಸ್ಯರಾಗಿದ್ದರು. ಆಗ ಯಾರು ಕೂಡ ಕಾಂಗ್ರೆಸ್ ಸಅದಿ, ಜೆಡಿಎಸ್ ಸಅದಿ ಎಂದು ನಿಂದಿಸಲಿಲ್ಲ.
ಯಾಕೆಂದರೆ ಮುಸ್ಲಿಂ ಸಮುದಾಯ ಹೆಚ್ಚಾಗಿ ಸದಸ್ಯತನ ಪಡೆಯದ ಬಿಜೆಪಿಯೊಂದಿಗೆ ಒಬ್ಬ ಮುಸ್ಲಿಮನನ್ನು ಸೇರಿಸಿ ಹೇಳಿದರೆ ಸಮುದಾಯ ಬೇಗ ಅವರ ವಿರುದ್ಧ ತಿರುಗಿ ಬೀಳುತ್ತದೆ ಎಂಬುದು ಅಪಪ್ರಚಾರ ಮಾಡುವವರ ಲೆಕ್ಕಾಚಾರ.
ಸಮುದಾಯ ತಪ್ಪು ಗ್ರಹಿಕೆ ಇಡಲಿ,ಬಿಡಲಿ,ಈ ರೀತಿ ಒಬ್ಬರನ್ನು ನಿಂದಿಸುವ ಪರಿಪಾಠವಿದೆಯಲ್ಲಾ ಅದು ಖಂಡಿತ ಅಪಾಯಕಾರಿ. ಶಾಫಿ ಸಅದಿ ಆಗಲಿ, ಯಾರೇ ಆಗಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಅವರಿಗೆ ಜವಾಬ್ದಾರಿಯುತ ಸ್ಥಾನ ಕೊಟ್ಟಾಗ ಇದು ಸಮುದಾಯಕ್ಕೆ ಸರಕಾರದ ಕೊಡುಗೆ ಎಂದು ನಾವು ಹೃದಯ ವಿಶಾಲತೆ ತೋರಿಸಬೇಕೇ ವಿನಃ ಆ ಪಕ್ಷದ ವಕ್ತಾರರಾಗಿ ಬಿಂಬಿಸುವುದು ಯಾರಿಗೂ ಒಳಿತು ತರದು.
ಶಾಫಿ ಸಅದಿ ಯವರು ಇಂದು ಉಲಮಾ ವರ್ಗಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡಲು ನಿರಂತರ ಪ್ರಯತ್ನಿಸುತ್ತಿದ್ದಾರೆ.
ಮುಸ್ಲಿಂ ಸಮುದಾಯದ ಮಧ್ಯೆ ಇದ್ದ ಹಲವು ಸಮಸ್ಯೆಗಳನ್ನು ಪರಿಹರಿಸಲು ಮುಂದಾಳತ್ವ ವಹಿಸಿದ್ದಾರೆ. ವಕ್ಫ್ ಮಂಡಳಿ ಯಿಂದ ಮಸೀದಿಗಳಿಗೆ ಸಿಗುವ ಸವಲತ್ತುಗಳನ್ನು ನೀಡುತ್ತಿದ್ದಾರೆ.
ಇಂಥಾ ಒಬ್ಬ ವಿದ್ವಾಂಸ ಸರಕಾರದ ಪ್ರತಿನಿಧಿಯಾಗಿ ಇರುವುದಕ್ಕೆ ನಾವು ಅಭಿಮಾನ ಪಡಬೇಕೇ ವಿನಃ ಸಂಕುಚಿತ ಮನೋಭಾವದಿಂದ ನೋಡಬಾರದು.
ಶಾಫಿ ಸಅದಿ ಯವರಂಥಾ ಒಬ್ಬ ಪ್ರತಿನಿಧಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆ ಸರಕಾರದ ನಿಕಟವರ್ತಿಯಾಗಿ ಇರಬೇಕೆಂಬುದು ಇದುವರೆಗಿನ ಅವಧಿಯಲ್ಲಿ ಇಡೀ ರಾಜ್ಯದ ಜನತೆಗೆ ಮನದಟ್ಟಾಗಿದೆ.
ಒಬ್ಬ ಮುಸ್ಲಿಂ ವಿದ್ವಾಂಸನಾಗಿದ್ದು ಕೊಂಡು ಸರಕಾರದ ಕೆಳಹಂತದಿಂದ ಮೇಲಿನ ಹಂತದವರೆಗೆ ಮುಖ್ಯಮಂತ್ರಿ, ಸಚಿವರು,ಶಾಸಕರು ಮತ್ತು ಇತರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ತನ್ನ ಬಿಡುವಿಲ್ಲದ ಧಾರ್ಮಿಕ,ಶೈಕ್ಷಣಿಕ ಸೇವೆಯ ನಡುವೆಯೂ ಸಮಾಜಸೇವೆ ಯನ್ನೂ ಮಾಡುತ್ತಿರುವ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ಅವರಿಗೆ ಅಲ್ಲಾಹು ದೀರ್ಘಾಯುಷ್ಯ, ಆಯುರಾರೋಗ್ಯ,ಉನ್ನತ ಪದವಿಗಳನ್ನು ನೀಡಿ ಅನುಗ್ರಹಿಸಲಿ.
✍️ ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.