(www.vknews.com) ಪೊನ್ನಂಪೇಟೆ: ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಿಸುತ್ತಿರುವ ವಿಕಲಚೇತನರಿಗೆ ಮತ್ತು ಅವರ ಕುಟುಂಬದವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರದಂದು ಆಹಾರ ಕಿಟ್ ಗಳನ್ನು ವಿತರಿಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಎ. ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ 4 ಜನರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ಕಾನೂರು ಸಮೀಪದ ಕೋತೂರು ಮತ್ತು ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ವಿಕಲಚೇತನರಿಗೆ ಕಾಂಗ್ರೆಸ್ ಪ್ರಮುಖರ ತಂಡ ಅವರ ಮನೆಗಳಿಗೆ ಭೇಟಿ ನೀಡಿ ಹಸ್ತಾಂತರಿಸಿತು.
ಕಿಟ್ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಅಜ್ಜಿಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಅವರು, ಜನ ಜೀವನವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ನಿಂದಾಗಿ ಇಂದು ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಪೈಕಿ ಬಹಳಷ್ಟು ಜನರು ತಮ್ಮ ಸಂಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದಾರೆ. ಇದನ್ನು ಮನಗಂಡ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್. ಪೊನ್ನಣ್ಣ ಅವರು ತೊಂದರೆ ಅನುಭವಿಸುತ್ತಿರುವ ಜನರ ಕಣ್ಣೀರು ಒರೆಸುವ ಪ್ರಯತ್ನದ ಭಾಗವಾಗಿ ಈ ಆಹಾರ ಕಿಟ್ ಗಳನ್ನು ಪ್ರಾಯೋಜಿಸಿದ್ದಾರೆ. ಅರ್ಹರಿಗೆ ಈ ಸೌಲಭ್ಯ ದೊರೆಯುವುದರ ಮೂಲಕ ಉದ್ದೇಶ ಈಡೇರಬೇಕು ಎಂಬ ಕಾರಣದಿಂದ ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಕಿಟ್ ಗಳನ್ನು ವಿತರಿಸಿದ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೀದೆರಿರ ನವೀನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರತ್ಯು, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಕೋತೂರಿನ ಕುಂಜ್ಹಿಮಾಡ ರಮೇಶ್, ಅಜ್ಜಿಕುಟ್ಟೀರ ಪ್ರಶಾಂತ್ ಮೊದಲಾದವರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.