ನಂಬಿಕೆಯೇ ಬದುಕು
ಒಬ್ಬ ರಾಜನಿಗೆ ಆರ್ಥಿಕ ಸಂಕಷ್ಟ ಎದುರಾಯಿತು. ಆತ ಹಣ ಉಳಿತಾಯ ಮಾಡಲು ತನ್ನ ನೌಕರರನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದ. ಆ ರಾತ್ರಿ ಆತನಿಗೆ ಒಂದು ಕನಸು ಬಿತ್ತು. ಅರಮನೆ ಮುಂದೆ ಎತ್ತಿನ ಬಂಡಿಗಳಲ್ಲಿ ಜನರು ದಿನಸಿ ಸಾಮಾನುಗಳನ್ನು ತುಂಬುತ್ತಿದ್ದರು. ರಾಜ ಜನರಿಗೆ ಕೇಳಿದ – ಏನಿದು, ಎಲ್ಲಿಗೆ ಹೊರಡಲು ಸಿದ್ಧತೆಗಳು ನಡೆಯುತ್ತಿವೆ. ಜನರು ಹೇಳಿದರು – ನೀವು ನೌಕರರಿಗೆ ಕೆಲಸದಿಂದ ವಜಾ ಮಾಡಲು ನಿರ್ಧರಿಸಿದ್ದೀರಿ. ನಾವು ಅವರ ನಸೀಬಿನ ಅನ್ನವನ್ನು ಅವರ ಜೊತೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರು ಎಲ್ಲಿ ಕಾರ್ಯಗತರಾಗುತ್ತಾರೋ ಅಲ್ಲಿಗೆ ತಲುಪಿಸಿ ಬಿಡುತ್ತೇವೆ. ರಾಜ ಎಚ್ಚರಗೊಂಡ. ಕನಸಿನ ಅರ್ಥವನ್ನು ಅರಿತುಕೊಂಡು, ತನ್ನ ನಿರ್ಧಾರವನ್ನು ಬದಲಾಯಿಸಿದ. ಯಾರಿಗೂ ಕೆಲಸದಿಂದ ತೆಗೆಯಲಿಲ್ಲ.
ನಾವು ಬೇರೆಯವರಿಗೆ ಕೆಲಸ ನೀಡಿದ್ದೇವೆ, ನಾವೇ ಅವರ ಜೀವನದ ಮಾಲೀಕರು ಎಂಬ ಭ್ರಮೆಯಲ್ಲಿ ಸದಾ ಮುಳುಗಿರುತ್ತೇವೆ. ನಮ್ಮ ಆಸ್ತಿ ಅಂತಸ್ತು, ನಮ್ಮ ಬುದ್ಧಿಶಕ್ತಿಯಿಂದ, ಶ್ರಮದಿಂದ ಸಂಪಾದಿಸಿದ್ದೇವೆ ಎಂಬ ಅಹಂ ಭಾವನೆಯಲ್ಲಿ ಬದುಕುತ್ತಿರುತ್ತೇವೆ. ನಮ್ಮ ಸಾವು ಬದುಕು, ಆಸ್ತಿ ಅಂತಸ್ತು, ಮದುವೆ ಮತ್ತು ಕೆಲಸ ನಮ್ಮ ಕೈಯಲ್ಲಿ ಇಲ್ಲ ಎಂದು ಕರೋನ ಮಹಾಮಾರಿ ಸಾರಿ ಸಾರಿ ಹೇಲುತ್ತಿದ್ದರೂ ನಾವು ಅದರ ಬಗ್ಗೆ ಆಳವಾಗಿ ಯೋಚಿಸುತ್ತಿಲ್ಲ. ಕೆಲವರು ಕೆಲಸ ಕಳೆದುಕೊಂಡು ಅಳುತ್ತಿದ್ದಾರೆ. ಇನ್ನು ಕೆಲವರು ಸಾಕಷ್ಟು ಹಣವಿದ್ದರೂ ಅಳುತ್ತಿದ್ದಾರೆ. ಪರಿಸ್ಥಿತಿ ಆ ರೀತಿ ಸೃಷ್ಟಿಯಾಗಿದೆ. ಮಾನವ ಸಮಯದ ಗೊಂಬೆ. ಆ ಗೊಂಬೆಯ ಚಾಟಿ ಒಂದು ಶಕ್ತಿಯ ಬಳಿಯಿದೆ. ನಾಸ್ತಿಕರು ಅದನ್ನು ನಂಬಲಿ ಅಥವಾ ನಂಬದಿರಲಿ ಕಾಲ ಮಾತ್ರ ನಿಲ್ಲಲ್ಲ. ಅದಕ್ಕೆ ಇಂದಿನ ಪರಿಸ್ಥಿತಿಯೇ ಸಾಕ್ಷಿ. ಎಲ್ಲಾ ಸೂಪರ್ ಪವರ್ ದೇಶಗಳು ಸೇರಿ ಒಂದು ವೈರಸ್ ನಿಂದ ಮುಕ್ತಿ ಪಡೆಯಲು ಪರದಾಡುತ್ತಿವೆ. ದೇವರು ಒಬ್ಬನೇ, ಅವನೇ ದಾರಿದೀಪ. ಮನುಷ್ಯ ಇನ್ನೇನು ಹೇಳಲು ಸಾಧ್ಯ. ನಂಬಿಕೆಯೇ ಬದುಕು.
ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.