ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸೈಕಲ್ ಜಾಥಾ ನಡೆಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸಿದರು.
ನಗರದ ಕಾಂಗ್ರೆಸ್ ಕಚೇರಿ ಮುಂದೆ ಸೈಕಲ್ ಜಾಥಾಗೆ ಚಾಲನೆ ನೀಡಿದ ಮಾಜಿ ಸಭಾಪತಿ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್. ಸುದರ್ಶನ್ ಮಾತನಾಡಿ, ಇಂಧನ ತೈಲ ಬೆಲೆ ಇಳಿಸಿ ಜನಸಾಮಾನ್ಯರ ಮೇಲಿನ ಹೊರೆ ಇಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ತೈಲ ಮೇಲೆ ಹಾಕಿರುವ ತೆರಿಗೆ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ನಡೆಯುತ್ತಿರುವ ಆಡಳಿತದ ದುರವಸ್ಥೆ, ಜನಸಾಮಾನ್ಯರು, ರೈತರು ತತ್ತರಿಸಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ದುರಾಡಳಿತದಿಂದ ಕೂಡಿದೆ. ಕೋವಿಡ್ ಲಾಕ್ ಡೌನ್ ಹೇರಿದ ಸರ್ಕಾರ ಕಷ್ಟದಲ್ಲಿ ಜನರ ನೆರವಿಗೆ ಧಾವಿಸುವ ಕೆಲಸ ಮಾಡಲಿಲ್ಲ ಎಂದು ದೂರಿದರು.
ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ, ಅನಿಲ ಬೆಲೆ ಏರಿಸಿ ಬಡವರು, ಜನಸಾಮಾನ್ಯರ ಪಾಲಿಗೆ ಮಾರಕ ನಡೆ ಪ್ರದರ್ಶಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತ ವಿರೋಧಿಸಿ ಕಾಂಗ್ರೆಸ್ ಪಕ್ಷ ಜನ ಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದೆ ಎಂದರು. ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಯಂತೆ ಕೆಲಸ ಮಾಡದೆ ಯುವಕರ, ರೈತರ, ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಪೆಟ್ರೋಲ್ ಏರಿಕೆಯಾಗಿದೆ. ದರ ಏರಿಕೆ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಿಂದ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆ. ಜಿಪಂ ಯ 33ಸ್ಥಾನಗಳಲ್ಲಿ 25ಸ್ಥಾನ ಕಾಂಗ್ರೆಸ್ ವಶಪಡಿಸಿಕೊಳ್ಳುತ್ತದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್, ಪಕ್ಷದ ಉಸ್ತುವಾರಿಗಳಾದ ಮಲಜಮ್ಮ, ಕಾಂಚೇಗೌಡ, ಮದನ್ ಪಾಟೀಲ್, ಕಾರ್ಯದರ್ಶಿ ಬಲರಾಮ್, ಊರುಬಾಗಿಲು ಶ್ರೀನಿವಾಸ್, ಸ್ವ್ಯಾಂಡ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಕೆಪಿಸಿಸಿ ಓಬಿಸಿ ಕಾರ್ಯದರ್ಶಿ ಎನ್.ಮಂಜುನಾಥ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಆಪ್ ಕಾಮ್ಸ್ ಮಾಜಿ ಅಧ್ಯಕ್ಷ ಗೋಪಾಲ ಗೌಡ, ಮುಖಂಡರಾದ ಉದಯಕುಮಾರ್, ಕುಮಾರ್, ಸೀತಿ ಮುರಳಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.