ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):– ಸಹಕಾರಿ ರಂಗವನ್ನು ಬಲಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ಒದಗಿಸುವ ಮೂಲಕ ಜನರ ರಕ್ತ ಹೀರುತ್ತಿರುವ ಖಾಸಗಿ ಫೈನಾನ್ಸ್ ಏಜೆನ್ಸಿಗಳಿಗೆ ಕಡಿವಾಣ ಹಾಕಲು ಬದ್ದತೆಯಿಂದ ಕೆಲಸ ಮಾಡಿ ಎಂದು ಪ್ಯಾಕ್ಗಳ ಸಿಇಒಗಳಿಗೆ ಶಾಸಕ ಕೆ.ಆರ್.ರಮೇಶ್ಕುಮಾರ್ ತಾಕೀತು ಮಾಡಿದರು.
ಗುರುವಾರ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ನಡೆದ ಶ್ರೀನಿವಾಸಪುರ ತಾಲ್ಲೂಕಿನ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘ ( ಪ್ಯಾಕ್ಸ್ )ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಿಸರ್ವ್ ಬ್ಯಾಂಕ್ ಲೈಸೆನ್ಸ್ ಪಡೆದ ಕೆಲವು ಫೈನಾನ್ಸ್ಗಳು , ಜನರಿಗೆ ಗೋಲ್ಡ್ ಲೋನ್ ನೀಡಿ , ಅವರು ಕಟ್ಟದ ಕಾರಣ ಇಂದು ಅಂದಾಜು ಮೂರೂವರೆ ಸಾವಿರ ಕೆಜಿ ಚಿನ್ನ ಹರಾಜು ಹಾಕಿವೆ , ರೈತ ಅಡವಿಟ್ಟಾಗ ಇದ್ದ ಚಿನ್ನದ ಬೆಲೆ ಹಾಗೂ ಈಗಿನ ಬೆಲೆಗೆ ಶೇ .೨೮೦ ಬೆಲೆ ಏರಿಕೆಯಾಗಿದೆ , ಹೆಚ್ಚಾದ ಈ ಹಣ ರೈತರಿಗೆ ನೀಡೊಲ್ಲ , ಇದೊಂದು ಸಾವಿರಾರು ಕೋಟಿಗಳ ಸ್ಯಾರಿ ಎಂದು ಟೀಕಿಸಿದರು. ಇಂತಹ ಕಂಪನಿಗಳಿಂದ ರೈತರು , ಮಹಿಳೆಯರನ್ನು ಉಳಿಸಲು ಸಹಕಾರಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದೆ , ಸೊಸೈಟಿ ವ್ಯಾಪ್ತಿಯಲ್ಲಿ ಮಹಿಳಾ ಸಂಘಗಳ ಸಂಖ್ಯೆ ಹೆಚ್ಚಿಸಿ , ಬಡ್ಡಿ ರಹಿತ ಸಾಲ ನೀಡುವ ಮೂಲಕ ಇಂತಹ ಫೈನಾನ್ಸ್ಗಳಿಗೆ ಬೀಗ ಹಾಕಿಸಬಹುದು ಮಹಿಳೆಯರಿಗೆ ಬಡ್ಡಿರಹಿತ ಸಾಲ ೫೦ ಸಾವಿರವನ್ನು ಒಂದು ಲಕ್ಷಕ್ಕೆ ಏರಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಮಾಲ್ ಸ್ಟಾಪಿಸಿ ರೈತರಿಗೆ ನೆರವಾಗಿ .
ರೈತರು ಬ್ಯಾಂಕಿಗೆ ಹೋಗೋದು ತಪ್ಪಿಸಿ ಸೊಸೈಟಗೆ ಬರಬೇಕು . ಸೊಸೈಟಿಗಳಲ್ಲಿ ರೈತರಿಗೆ ಅಗತ್ಯವಾದ ಎಲ್ಲಾ ಕೃಷಿ ಸಂಬಂಧಿ ಸಲಕರಣೆ ಸಿಗುವ ಮಾಲ್ಗಳನ್ನು ಸ್ಥಾಪಿಸಿ ಭಾರತದಲ್ಲೇ ಈ ಪ್ರಯೋಗಕ್ಕೆ ಬುನಾದಿ ಹಾಕೋಣ ಎಂದರು. ಟಿ ಎ ಪಿ ಸಿ ಎಂ ಎಸ್ ಗಳು ಮಾಲ್ ಮಾಡಿ ನೇರ ಕಂಪನಿಗಳಿಂದ ರೈತರಿಗೆ ಬೇಕಾದ ಸಲಕರಣೆ , ಔಷಧಿ , ಕೀಟನಾಶಕಗಳನ್ನು ತರಿಸಿ ಮಾರಾಟ ಮಾಡಬೇಕು , ರೈತರ ಸುಲಿಗೆ ತಪ್ಪಿಸಬೇಕು ಜತೆಗೆ ಜನೌಷಧಿ ಮಳಿಗೆ ಆರಂಭಿಸಿ ಬಡವರಿಗೆ ನೆರವಾಗಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಸಹಕಾರಿ ಸದಸ್ಯತ್ವ ಶೇ .೬ ರಷ್ಟಿದೆ , ಶ್ರೀಮಂತರದ ಸ್ವತ್ತಾಗಿದ್ದ ಬ್ಯಾಂಕುಗಳನ್ನು ಇಂದಿರಾಗಾಂಧಿ ರಾಷ್ಟ್ರೀಕರಣ ಮಾಡಿದರು , ಆದರೆ ಈ ಖುಷಿ ಸ್ವಲ್ಪ ದಿನ ಮಾತ್ರ ಇತ್ತು ನಂತರ ಈ ಬ್ಯಾಂಕುಗಳಿಂದ ಗ್ರಾಮೀಣ ಜನರಿಗೆ ಸಹಾಯವಾಗಲಿಲ್ಲ ಎಂದರು. ಸೊಸೈಟಿಗಳ ಸಿಇಒಗಳು ಸಾಲ ವಸೂಲಾತಿ , ವಿತರಣೆಗೆ ನೆಪ ಹೇಳುವುದಾದರೆ ನೀವು ಸಹಕಾರಿ ವ್ಯವಸ್ಥೆಯಲ್ಲಿ ಇರಲು ಯೋಗ್ಯರಲ್ಲಿ ಕೆಲಸ ಬಿಟ್ಟು ಹೋಗಿ ಎಂದರು.
ಕೆಸಿ ವ್ಯಾಲಿನೀರಿನಿಂದ ತಾಲ್ಲೂಕು ಸುಭಿಕ್ಷ ಇನ್ನೆರಡು ವರ್ಷಗಳಲ್ಲಿ ಕೆಸಿ ವ್ಯಾಲಿ ನೀರು ಎಲ್ಲಾ ಕೆರೆಗಳಿಗೆ ತುಂಬಿದರೆ ಅತರ್ಜಲ ವೃದ್ಧಿಯಾಗಿ ೫೦೦ ಅಡಿಗೆ ಬಂದರೆ ರೈತರು ಸ್ವಾಭಿಮಾನದಿಂದ ಬದುಕಬಹುದು , ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಲು ಇನ್ನಷ್ಟು ಎಸ್ ಎಸ್ಜಿಗಳ ರಚನೆಯಾಗಲಿ ಎಂದರು.
ಸೊಸೈಟಿಗಳು ಕ್ರಿಯಾಶೀಲವಾಗಿರಲಿ ಶ್ರೀನಿವಾಸಪುರ ತಾಲೂಕಿನ ಚಾಂಪಲ್ಲಿ , ರಾಯಲ್ಪಾಡು , ಅಡ್ಡಗಲ್ಲು ಸೊಸೈಟಿಗಳು ಕ್ರಿಯಾಶೀಲವಾಗಿಲ್ಲ ಎಂದು ಸಭೆಯಲ್ಲಿ ತಿಳಿಸಿದಾಗ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡು , ಚಾಂಪಲ್ಲಿ ಸೊಸೈಟಿ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗದಂತೆ ಆ ಗ್ರಾಮಗಳನ್ನು ರೋಣರು ಸೊಸೈಟಿಗೆ ಸೇರಿಸಲು ಸೂಚಿಸಿದರು. ಸುಗಟೂರು , ಅಣ್ಣಿಹಳ್ಳಿ ಸೊಸೈಟಿಗಳಲ್ಲಿ ತಲಾ ೫೦೦ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆ ಹಾಗೂ ೨೦ ಕೋಟಿಗೂ ಹೆಚ್ಚು ಸಾಲ ವಿತರಿಸಿರುವ ಕುರಿತು ಇವು ಇತರೆ ಸೊಸೈಟಿಗಳಿಗೆ ಮಾದರಿಯಾಗಿವೆ ಎಂದು ಅಭಿನಂದಿಸಿದರು.
ಪ್ರತಿ ಹೋಬಳಿ , ಗ್ರಾಮಗಳಲ್ಲೂ ಬೀದಿ ಬದಿ ವ್ಯಾಪಾರಸ್ಥರು ಇದ್ದಾರೆ ಅವರನ್ನು ಗುರುತಿಸಿ ಯಾವುದೇ ಕ್ಷೇತ್ರದವರಿಗೆ ಸಾಲ ದೊರಕಿಸಲು ನಾನೇನು ಕಮಿಷನ್ ಪಡೆದುಕೊಳ್ಳುತ್ತಿಲ್ಲ . ಇದರಿಂದ ರಾಜಕೀಯ ಮಾಡಬೇಕೆಂಬ ಆಸೆಯಿಲ್ಲ.ಬಡವರಿಗೆ ನೆರವಾಗುವ ಉದ್ದೇಶ ನನ್ನದು ಅಷ್ಟೆ ಎಂದರು.
ಮಾರ್ಟ್ಗೇಜ್ ವಿಳಂಬಕ್ಕೆ ಕ್ರಮ ಯಾರೋ ಸಾಲ ಕಟ್ಟಲಾಗದ ಒಂದಿಬ್ಬರಿಗಾಗಿ ಸೊಸೈಟಿ ಅಡವಿಟ್ಟರೆ ಹೇಗೆ ಎಂದು ಪ್ರಶ್ನಿಸಿ , ರೈತರಿಗಾಗಿ ಸೊಸೈಟಿಗಳು ಸ್ಥಾಪಿಸಲಾಗಿದೆ. ಸಾಲ ನೀಡಿದಷ್ಟೇ ವಸೂಲಿಗೂ ಬದ್ದತೆ ಇರಲಿ , ಗಂಭೀರವಾಗಿ ಪರಿಗಣಿಸಿ ರೈತರಿಗೆ ಕಷ್ಟಕಾಲದಲ್ಲಿ ಸಾಲ ನೀಡಿ ಎಂದರು.
ಸೊಸೈಟಿಗಳು ಡಿಸಿಸಿ ಬ್ಯಾಂಕಿಗೆ ಸಾಲದ ಪ್ರಸ್ತಾವನೆ ಸಲ್ಲಿಸಲು ರೈತರ ಜಮೀನು ಮಾರ್ಟ್ಗೇಜ್ ಮಾಡಿಕೊಡಲು ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ರಮೇಶ್ ಕುಮಾರ್ ಸೋಮವಾರ ತಹಸೀಲ್ದಾರ್ , ಆರ್ಐ , ನೋಂದಣಾಧಿಕಾರಿಗಳ ಸಭೆ ಕರೆದು ಒಂದೇ ದಿನದಲ್ಲಿ ಈ ಕಾರ್ಯ ಮಾಡಿಕೊಡಲು ನಿರ್ದೇಶನ ನೀಡುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಲ ಪಳ್ಳಿ ಗೋವಿಂದಗೌಡ ಮಾತನಾಡಿ , ಶಕ್ತಿ ಅನುಷ್ಟಾನ ಹಾಗೂ ಪ್ರಾಕ್ಗಳ ಗಣಕೀಕರಣದಲ್ಲಿ ರಾಜೀ ಇಲ್ಲ ಎಂದು ಎಚ್ಚರಿಸಿ . ಈ ಕಾರ್ಯಕ್ಕೆ ಸ್ಪಂದಿಸದ ಪಿನಹಳ್ಳಿ , ಮರಸನಪಲ್ಲಿ ವೇಂಪಲ್ಲಿ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡರು .ಎಸ್ಎಸ್ಜಿಗಳ ರಚನೆ , ಗಣಕೀಕರಣ , ಸಾಲ ವಸೂಲಾತಿ , ಸಾಲ ವಿತರಣೆಗೆ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿರುವ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡು ಕೆಲಸಮಾಡುವುದಾದರೆ ಇರಿ ಇಲ್ಲವೇ ಹೊರಹೋಗಿ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ , ಎಂ.ಎಲ್.ಅನಿಲ್ಕುಮಾರ್ , ವೆಂಕಟರೆಡ್ಡಿ , ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ , ಡಿಸಿಸಿ ಬ್ಯಾಂಕ್ ವೃತ್ತಿನಿರತ ನಿರ್ದೇಶಕ ಎಸ್.ವಿ.ಸುಧಾಕರ್ , ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ಬ್ಯಾಂಕ್ ಎಜಿಎಂ ಶಿವಕುಮಾರ್ , ಎಸ್ಎಫ್ ಸಿಎಸ್ ಅಧ್ಯಕ್ಷರಾದ ತಿಮ್ಮರಾಯಪ್ಪ , ಅಣ್ಣಿಹಳ್ಳಿ ನಾಗರಾಜ್ , ಮತ್ತಿತರರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.