(www.vknews.com) : ಶಾಲಾ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಮಸ್ಯೆ ಮತ್ತು ಸವಾಲುಗಳನ್ನು ಆಲಿಸಲು ಮುಲ್ಕಿ ಜುಮ್ಮಾ ಮಸೀದಿಯ ಖತೀಬರಾದ ಎಸ್.ಬಿ ದಾರಿಮಿ ಮತ್ತು ಆಡಳಿತ ಸಮಿತಿಯವರು ಕಳೆದ ಹಲವಾರು ದಿನಗಳಿಂದ ಮುಲ್ಕಿ ಭಾಗದ ಶಾಲಾ-ಕಾಲೇಜುಗಳ ಆಡಳಿತವನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದರು. ಶಾಲಾ -ಕಾಲೇಜಿನ ಮಾಹಿತಿಗಳನ್ನು ಸಂಗ್ರಹಿಸಿದ ನಂತರ, ವಿದ್ಯಾರ್ಥಿಗಳಲ್ಲೂ ಅವರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ನಿನ್ನೆ ಮುಲ್ಕಿ ಶಾಫಿ ಜುಮ್ಮಾ ಮಸೀದಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎರಡೂ ಭಾಗದ ಅಭಿಪ್ರಾಯ ಕ್ರೂಡಿಕರಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಸೀದಿ ಕಮಿಟಿಯೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಬೇಡಿಕೆ ಮತ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕು, ಹಾಗೇ, ಶಾಲಾ -ಕಾಲೇಜಿನಲ್ಲಿ ಉತ್ತಮ ವ್ಯಕ್ತಿತ್ವ, ಮೌಲ್ಯಧಾರಿತ ಬದುಕು, ವಿಧೇಯ ವಿದ್ಯಾರ್ಥಿಗಳಾಗಿ, ಕಲಿಕೆಗಾಗಿ ಸಮರ್ಪಣೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಯಿತು. ಕಾರ್ಯಕ್ರಮದ ಪ್ರಯೋಗವನ್ನು ಪರಿಣಾಮಕಾರಿ ಮಾಡಲು ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಹಕಾರ ಪಡೆಯಲಾಯಿತು.
ಜಿಲ್ಲೆಯಲ್ಲಿ ಇದೊಂದು ಹೊಸ ಆಲೋಚನೆಯಾಗಿದ್ದು, ಮಸೀದಿ ಆಡಳಿತ ಕಮಿಟಿಯು ಸ್ಥಳೀಯ ವಿದ್ಯಾರ್ಥಿಗಳ ವೀಕ್ಷಣೆ ಮಾಡುವುದು ಮತ್ತು ಅವರ ಪ್ರಗತಿಯ ವರದಿಯನ್ನು ಪಡೆದು, ಭವಿಷ್ಯದ ತಲೆಮಾರನ್ನು ಉತ್ತಮ ಸಮುದಾಯ ಮತ್ತು ಪ್ರೊಡಕ್ಟಿವ್ ಆಗಿ ರೂಪಿಸಲು ಇದು ಸಹಕಾರಿಯಾಗಲಿದೆ. ಶಾಲಾ -ಕಾಲೇಜು ಆಡಳಿತದೊಂದಿಗೆ ಮಸೀದಿ ಆಡಳಿತ ಕಮಿಟಿ ಸಂಪರ್ಕ ಸಾಧಿಸಿ, ಆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ದುಡಿಯುವುದು ಪ್ರಸ್ತುತ ಅನಿವಾರ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ಪ್ರಯತ್ನ ಶ್ಲಾಘನೀಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕೆಟ್ಟ ಚಟ-ಹವ್ಯಾಸ ಮತ್ತು ದುರ್ವರ್ತನೆ ತಡೆಯಬಹುದು. ಅವರಲ್ಲಿ ಇರುವ ಆತಂಕ ಮತ್ತು ಅಭದ್ರೆತೆ ನಿವಾರಿಸಬಹುದು, ಅವರಲ್ಲಿ ವ್ಯಕ್ತಿತ್ವ-ಮೌಲ್ಯ ಮತ್ತು ಸುಜ್ಞಾನ ಬೆಳೆಸಬಹುದು, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ-ಪ್ರೋತ್ಸಾಹ -ನೆರವು ನೀಡುವ ಮೂಲಕ ಮುಂದಿನ ತಲೆಮಾರನ್ನು ಉತ್ತಮವಾಗಿ ಬೆಳೆಸಬಹುದು, ಮಸೀದಿಗಳು ಆಕ್ಟಿವ್ ಆಗುತ್ತದೆ, ಮಕ್ಕಳನ್ನು ಒಳಿತಿನ ಮತ್ತು ಸಮಾಜಮುಖಿ ಕಾರ್ಯದಲ್ಲಿ ಎಂಗೇಜ್ ಮಾಡಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳನ್ನು ಮಸೀದಿಗೆ ಕರೆಯಿಸಿ, ಅವರ ಮೌಲ್ಯಮಾಪನ ಮಾಡಿ, ಅವರ ಆಸಕ್ತಿ- ಕೌಶಲ್ಯ- ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯ ತಿಳಿದುಕೊಂಡು ಅವರ ಅಗತ್ಯತೆಯನ್ನು ಪೂರೈಸುವ ಈ ಪ್ರಯತ್ನದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ಸಹಭಾಗಿತ್ವ ನೀಡಿತ್ತು. ಸಣ್ಣ ಪ್ರಯತ್ನ ಮತ್ತು ಆರಂಭ ಇದಾಗಿದೆ. ಇದಕ್ಕೆ ಮುನ್ನುಡಿ ಬರೆದ ಮುಲ್ಕಿ ಜುಮ್ಮಾ ಮಸೀದಿಯ ಖತೀಬರಾದ ಎಸ್.ಬಿ ದಾರಿಮಿ ಉಸ್ತಾದರ ಇಚ್ಚಾಶಕ್ತಿ ಮತ್ತು ಆಡಳಿತ ಕಮಿಟಿಯ ನೇತೃತ್ವ ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ಪರಿಣಾಮಕಾರಿ ಪದ್ದತಿಯೊಂದು ಬೆಳೆದು ಬರಲು ಕಾರಣವಾಗಲಿ. ನಾವು ಮಸೀದಿಗಳನ್ನು ನಿರಂತರ ಸಮಾಜ ಸುಧಾರಣೆಯ ಕೇಂದ್ರ ಮಾಡಬೇಕು ಎನ್ನುವ ಕನಸು ಈ ಮೂಲಕ ನನಸಾಗಲಿದೆ. ವಿದ್ಯಾರ್ಥಿಗಳ ನಿರಂತರ ವೀಕ್ಷಣೆಯು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಮಸೀದಿ ಕೇಂದ್ರಿತ ಈ ಪ್ರಯತ್ನ ದೊಡ್ಡ ಮಟ್ಟದ ಫಲಿತಾಂಶ ನೀಡಲಿದೆ. ವಿದ್ಯಾರ್ಥಿಗಳು ಮಸೀದಿಯೊಂದಿಗೆ ಸಂಪರ್ಕ ನಿರಂತರ ಸಾಧಿಸಿದರೆ ಅದು ಅವರ ವ್ಯಕ್ತಿತ್ವ ಮತ್ತು ಮೌಲ್ಯಾಧಾರಿತ ಬದುಕಿಗೆ ದೊಡ್ಡ ಕೊಡುಗೆ ಆಗಲಿದೆ. ಈ ನಿಟ್ಟಿನಲ್ಲಿ ನಿನ್ನೆಯ ಕಾರ್ಯಕ್ರಮ ಬಹಳ ಮಹತ್ವದ್ದೇ ಆಗಿದೆ.
ಹನೀಫ್ ಪುತ್ತೂರುಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.