ದುಬೈ (www.vknews.in) : ಜನಾಬ್ ಮಹಮ್ಮದ್ ರಫೀಕ್ ಆತೂರ್ ರವರು ಕೊನೆಯುಸಿರೆಳೆದರು ಎಂಬ ವಾರ್ತೆಯು ದಾರುನ್ನೂರ್ ಮತ್ತು ಯು ಎ ಇ ಯಲ್ಲಿರುವ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರನ್ನು ಬೆಚ್ಚಿಬೀಳಿಸಿತು. 2014 ರಲ್ಲಿ ದಾರುನ್ನೂರ್ ಯು ಎ ಇ ಯಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸಿದಾಗ ರಫೀಕ್ ಆತೂರ್ ರವರು ಮುಂಚೂಣಿಯಲ್ಲಿ ನಿಂತು ಅದನ್ನು ಬೆಳೆಸಲು ಸಹಕರಿಸಿದರು. ಸುಮಾರು 4 ವರ್ಷಗಳ ಕಾಲ ದುಬೈ ಸ್ಟೇಟ್ ಇದರ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿ ದಾರುನ್ನೂರನ್ನು ಮುಗಿಲೆತ್ತರಕ್ಕೆ ಒಯ್ಯಲು ಸಹಕರಿಸಿದರು. ಎಲ್ಲಾ ಕಾರ್ಯಕರ್ತರನ್ನು ಒಟ್ಟಿಗೆ ಸೇರಿಸಿ ಕಾರ್ಯಕಲಾಪಗಳನ್ನು ಉತ್ತಮವಾಗಿ ನೆರವೇರಿಸುವ ಚಾಕಚಕ್ಯತೆ ಅವರಲ್ಲಿತ್ತು. ಅವರ ಮಾತಿಗೆ ಉತ್ತಮ ಗೌರವ ಸಲ್ಲುತ್ತಿತ್ತು.
ದಾರುನ್ನೂರ್ ಕೇಂದ್ರ ಸಮಿತಿ ಸದಸ್ಯರಾಗಿ, ದಾರುನ್ನೂರ್ ಯು ಎ ಇ ರಾಷ್ಟ್ರೀಯ ಸಮಿತಿ ಉಪಾದ್ಯಕ್ಷರಾಗಿ, ದಾರುನ್ನೂರ್ ಯೂತ್ ಟೀಮ್ ಇದರ ಸಲಹೆಗಾರರಾಗಿ, ದಾರುನ್ನೂರ್ ಮುರಕ್ಕಾಬಾತ್ ಶಾಖೆಯ ಅದ್ಯಕ್ಷರಾಗಿ, ದಾರುನ್ನೂರ್ ಕಟ್ಟಡ ಸಮಿತಿ ಸದಸ್ಯರಾಗಿ ಹೀಗೆ ಹಲವು ರೀತಿಯಲ್ಲಿ ದಾರುನ್ನೂರಿನ ಅಭಿವೃದ್ದಿಯ ರುವಾರಿಗಳಲ್ಲಿ ಒರ್ವರಾಗಿದ್ದರು.
ಕಳೆದ ಒಂದೆರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ದುಬೈಗೆ ವಿದಾಯ ಹೇಳಿ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಾಹನ ವಿಧಿಯಂತೆ ಕೊನೆಗೆ ದಿನಾಂಕ 01/06/2022 ನೇ ಬುಧವಾರದಂದು ರಾತ್ರಿ 10:00 ಗಂಟೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಮರಣಕ್ಕೆ ತಲೆಬಾಗಿ ಶಾಶ್ವತ ಲೋಕದತ್ತ ಪ್ರಯಾಣ ಬೆಳೆಸಿದರು. ರಫೀಕ್ ಆತೂರ್ ರವರ ಮರಣ ದಾರುನ್ನೂರಿಗೆ ತುಂಬಲಾರದ ನಷ್ಟವನ್ನು ನೀಡಿದ್ದು ಅವರ ಲವ ಲವಿಕೆ , ಉತ್ಸಾಹ, ಕಾರ್ಯಕ್ರಮಗಳಲ್ಲಿ ಸಕ್ರಿಯತೆ, ನಿಸ್ವಾರ್ಥ ಸೇವೆ, ನೇತೃತ್ವ ಎಲ್ಲವೂ ಮರೆಯಲಾಗದ ಅನುಭವಾಗಿರುತ್ತದೆ.
ಜನಾಬ್ ರಫೀಕ್ ಆತೂರ್ ರವರ ಅಕಾಲ ಮರಣದಲ್ಲಿ ದಾರುನ್ನೂರ್ ಯು ಎ ಇ ಇದರ ಅದ್ಯಕ್ಷರಾದ ಜನಾಬ್ ಮಹಮ್ಮದ್ ಮಾಡಾವು, ಪೋಷಕರಾದ ಜನಾಬ್ ಅಬ್ದುಲ್ಲಾ ಹಾಜಿ ಮದುಮೂಲೆ, ಜನಾಬ್ ಅಹ್ಮದ್ ಮತೀನ್ ಚಿಲ್ಮಿ ಮಂಗಳೂರು, ಪ್ರಮುಖ ಧಾರ್ಮಿಕ ಸಲಹೆಗಾರರಾದ ಉಸ್ತಾದ್ ಅಬ್ದುಲ್ ಸಲಾಂ ಬಾಖವಿ, ಗೌರವ ಸಲಹೆಗಾರ ಮತ್ತು ನಿಕಟ ಪೂರ್ವ ಅದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿ, ಗೌರವಾದ್ಯಕ್ಷರಾದ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಸಲಹೆಗಾರರಾದ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ , ಜನಾಬ್ ಮೋಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ , ಜನಾಬ್ ಸಂಶುದ್ದೀನ್ ಕಲ್ಕಾರ್ , ಉಸ್ತಾದ್ ಶೌಕತ್ ಹುದವಿ , ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ , ಜನಾಬ್ ಸಂಶುದ್ದೀನ್ ವಳಪಟ್ಟಣಂ, ಜನಾಬ್ ಮೊಹ್ಸಿನ್ ಅಹ್ಮದ್ ಕಾರ್ಕಳ, ಜನಾಬ್ ಇಕ್ಬಾಲ್ ಬಾವ ಬಂಟ್ವಾಳ್ , ಜನಾಬ್ ಅಶ್ರಫ್ ಖಾನ್ ಮಾಂತೂರ್, ಜನಾಬ್ ಯೂಸುಫ್ ಈಶ್ವರ ಮಂಗಲ ,ಜನಾಬ್ ಬಶೀರ್ ಬಂಟ್ವಾಳ್, ಜನಾಬ್ ಮಹಮ್ಮದ್ ಕಲ್ಲಾಪು, ಎಡ್ವೋಕೇಟ್ ಇಬ್ರಾಹಿಂ ಖಲೀಲ್, ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ, ಜನಾಬ್ ಜಬ್ಬಾರ್ ಎಡನೀರ್, ಜನಾಬ್ ಅಶ್ರಫ್ ನಾಟೆಕಲ್ , ಜನಾಬ್ ಅನ್ವರ್ ಹುಸೈನ್ ಅಡ್ಡೂರ್ ಮೊದಲಾದವರು ಅಗಾಧ ಸಂತಾಪವನ್ನು ಸೂಚಿಸಿದರು.
ಅದೇ ರೀತಿ ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ಕೋಶಾಧಿಕಾರಿ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ದಾರುನ್ನೂರ್ ಅಬುಧಾಬಿ ಸ್ಟೇಟ್ ಅದ್ಯಕ್ಷ ಜನಾಬ್ ರವೂಫ್ ಹಾಜಿ ಕೈಕಂಬ, ದಾರುನ್ನೂರ್ ದುಬೈ ಸ್ಟೇಟ್ ಅದ್ಯಕ್ಷರಾದ ಜನಾಬ್ ಇಲ್ಯಾಸ್ ಕಡಬ, ದಾರುನ್ನೂರ್ ಶಾರ್ಜಾ ಸ್ಟೇಟ್ ಅದ್ಯಕ್ಷರಾದ ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್,ದಾರುನ್ನೂರ್ ಯೂತ್ ಟೀಮ್ ಅದ್ಯಕ್ಷ ಜನಾಬ್ ಅನ್ಸಾಫ್ ಪಾತೂರ್, ದಾರುನ್ನೂರ್ ಮಜ್ಲಿಸುನ್ನೂರ್ ಚೇರ್ಮೇನ್ ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ ದಾರುನ್ನೂರ್ ಇಂಟರ್ ನ್ಯಾಷನಲ್ ಕೋರ್ಡಿನೇಟರ್ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್, ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿ ಸ್ಟೇಟ್ ಸಮಿತಿ ಪ್ರಮುಖರು ಮತ್ತು ಎಲ್ಲಾ ಶಾಖೆಗಳ ಅದ್ಯಕ್ಷರು ಮತ್ತು ಕಾರ್ಯಕರ್ತರು ಅಗಾಧ ಸಂತಾಪವನ್ನು ಸೂಚಿಸಿದ್ದು, ಅವರ ಪಾರತ್ರಿಕ ಮೋಕ್ಷಕ್ಕೆ ಮಯ್ಯಿತ್ ನಮಾಝ್ ಮತ್ತು ತಹಲೀಲ್ ಸಮರ್ಪಣೆ ಮತ್ತು ಅನುಸ್ಮರಣೆಯನ್ನು ಶನಿವಾರದಂದು ದುಬೈ ಲ್ಯಾಂಡ್ ಮಾರ್ಕ್ ಹೋಟೆಲ್ ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಮಹಮದ್ ರಫೀಕ್ ರವರ ವ್ಯಕ್ತಿ ಪರಿಚಯ.
ಮಹಮ್ಮದ್ ರಫೀಕ್ ನನಗೆ ವಯಸ್ಸಿಗೆ ಚಿಕ್ಕದಾದರೂ ಬಾಲ್ಯ ಸ್ನೇಹಿತ, ಅವರ ಅಣ್ಣ ನನ್ನ ಸಹಪಾಠಿ. ಬಾಲ್ಯದಲ್ಲಿ ಮದ್ರಸ ವಿದ್ಯಾಭ್ಯಾಸ ಒಟ್ಟಿಗೆ ನಡೆಯುತ್ತಿತ್ತು. ಮದ್ರಸಾ ಮುಗಿದ ಬಳಿಕ ಕಬಡ್ಡಿ ಆಟ ಸಾಮಾನ್ಯವಾಗಿತ್ತು. ಅವರ ತಂದೆ ಅತೂರು ಆದಂ ಬ್ಯಾರಿಯವರದ್ದು ತುಂಬಾ ಸಾಧು ವ್ಯಕ್ತಿತ್ವ, ನನ್ನ ತಂದೆಯ ಆತ್ಮೀಯ ಸ್ನೇಹಿತ. ವೃತ್ತಿಯಲ್ಲಿ ಕೃಷಿಕ, ರಫೀಕ್ ಬಾಲ್ಯದಲ್ಲಿ ಕೃಷಿಯಲ್ಲಿ ತಂದೆಗೆ ಸಹಕಾರಿಯಾಗಿದ್ದ. ಬಳಿಕ ಸಣ್ಣ ಪ್ರಾಯದಲ್ಲೇ ಹೈದರಾಬಾದ್ ನಲ್ಲಿ ಆತೂರಿನ ಕೆಲವು ಮಿತ್ರರೊಂದಿಗೆ ಸೇರಿ ಸುಮಾರು 10 ವರ್ಷಗಳ ಕಾಲ ಹೋಟೆಲ್ ಉದ್ಯಮ ತೊಡಗಿದ್ದರು.
2002 ರಲ್ಲಿ ದುಬೈಗೆ ಬಂದು ರಾಸ್ ಅಲ್ ಖೈಮಾ ದಲ್ಲಿ ಒಂದು ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. 1996 ರಲ್ಲಿ ಆತೂರ್ ಮುಸ್ಲಿಂ ಜಮಾತ್ ವೆಲ್ಫೇರ್ ಕಮಿಟಿಯನ್ನು ಆರಂಬಿಸಲಾಗಿತ್ತು. ಆ ಕಮಿಟಿಯಲ್ಲಿ 2003 ರಲ್ಲಿರಫೀಕ್ ಆತೂರ್ ಉಪಾದ್ಯಕ್ಷರಾಗಿ ತನ್ನ ಸಾಮಾಜಿಕ ಸೇವೆ ರಂಗಕ್ಕೆ ಕಾಲಿಟ್ಟಿದ್ದರು. ಬಳಿಕ 1999 ರಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಮೂಳೂರು ದುಬೈ ನಲ್ಲಿ ಎ ಬಿ ಹಸನುಲ್ ಫೈಝಿ ಆರಂಭಿಸಿದ್ದರು. ಅದರ ಪರಿಚಯ ನಾನು ಮಾಡಿ ಕೊಟ್ಟೆ. ಆ ಬಳಿಕ DKSC ದೇರಾ ಶಾಖೆಯ ಸಕ್ರಿಯ ಕಾರ್ಯಕರ್ತರಾಗಿ ಮಾರ್ಪಟ್ಟರು. ಅವರ ಕೆಲಸ ರಾಸ್ ಅಲ್ ಖೈಮಾ ದಿಂದ ದುಬೈ ಗೆ ಬದಲಾಯಿತು. ಅವರು DKSC ಮುರಕ್ಕಾಬಾತ್ ಶಾಖೆಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. DKSC ಯ ಮೀಲಾದ್ ಮತ್ತು ಇಫ್ತಾರ್ ಕಾರ್ಯಕ್ರಮಗಳಲ್ಲಿ ನಿದ್ದೆಗೆಟ್ಟು ಸಹಕರಿಸುತ್ತಿದ್ದರು.
2001 ರಲ್ಲಿ ಕರ್ನಾಟಕ ಇಸ್ಲಾಮಿ ಸೆಂಟರ್ ಕುಂಬ್ರ (KIC) ಹುಸೈನ್ ದಾರಿಮಿ ರೇಂಜಲಾಡಿಯವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು. ಅದರಲ್ಲೂ ರಫೀಕ್ ಆತೂರ್ ಸಕ್ರಿಯರಾದರು. ಬಳಿಕ KIC ಅಧೀನದಲ್ಲಿ ಆರಂಭಗೊಂಡ ಅಲ್ ಕೌಸರ್ ಯೂತ್ ವಿಂಗ್ ಇದರ ಗೌರವಾದ್ಯಕ್ಷರಾಗಿಯೂ, KIC ಇದರ ಕಾರ್ಯಾದ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಆ ಬಳಿಕ ಸಂಶುಲ್ ಉಲಮಾ ಎಜುಕೇಷನ್ ಟ್ರಸ್ಟ್ ತೋಡಾರ್ ಇದರ ಸಕ್ರಿಯ ಕಾರ್ಯಕರ್ತರಾಗಿಯೂ ಸೇವೆಯನ್ನು ಮುಂದುವರಿಸಿದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರು ದಾರುನ್ನೂರ್ ಎಜುಕೇಷನ್ ಸೆಂಟರ್ ಇದರ ಇದರ ಪ್ರಚಾರಾರ್ಥ ದುಬೈ ಗೆ ಆಗಮಿಸಿದಾಗ ಅದರ ಸಕ್ರಿಯ ಕಾರ್ಯಕರ್ತರಾಗಿ ಬಳಿಕ ದುಬೈ ಸ್ಟೇಟ್ ಸಮಿತಿ ಅದ್ಯಕ್ಷರಾಗಿ ಸೇವೆಯನ್ನು ಮುಂದುವರಿಸಿದರು.
ಬಳಿಕ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಇದರ ಪ್ರಚಾರಾರ್ಥ ಉಸ್ತಾದ್ ಹನೀಫ್ ಹುದವಿ ದೇಲಂಪಾಡಿ ಆಗಮಿಸಿದಾಗ ಅದರಲ್ಲೂ ಸಕ್ರಿಯ ಕಾರ್ಯಕರ್ತರಾಗಿ ಸೇವೆಯನ್ನು ಮುಂದುವರಿಸಿದರು.ಇದೇ ಸಂದರ್ಭದಲ್ಲಿ ದಾರುಸ್ಸಲಾಮ್ ಬೆಳ್ತಂಗಡಿ ಇದರ ಪ್ರಚಾರಾರ್ಥ ಸಯ್ಯದ್ ಜಿಫ್ರಿ ತಂಗಳ್ ಅಡ್ಯಾರ್ ಕಣ್ಣೂರ್ ಆಗಮಿಸಿದಾಗ ಅದರ ಉಪಾದ್ಯಕ್ಷರಾಗಿ ಆಯ್ಕೆಗೊಂಡರು. ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಯಾವುದೇ ಸಂಘ ಸಮಿತಿಗೆ ಮಾಡುವ ಸೇವೆ ಮತ್ತು ಸಹಕಾರದಿಂದ ದೂರ ಉಳಿಯುತ್ತಿರಲಿಲ್ಲ. ಡಿ ಕೆ ಯಸ್ಸಿ, ದಾರುನ್ನೂರ್ , ಕೆ ಐ ಸಿ, ನೂರುಲ್ ಹುದಾ, ದಾರುಸ್ಸಲಾಮ್, ಸಂಶುಲ್ ಉಲಮಾ ತೋಡಾರ್ ಮೊದಲಾದ ಸಂಘ ಸಂಸ್ಥೆಗಳಲ್ಲಿ ಏನಾದರೂ ಕಾರ್ಯಕ್ರಮ ನಡೆಯುತ್ತಿದ್ದರೆ ರಫೀಕ್ ಆತೂರ್ ಗೆ ನಿದ್ದೆ ಬರುತ್ತಿರಲಿಲ್ಲ. ಕಾರ್ಯಕ್ರಮದ ಯಶಸ್ವಿಯ ಹಿಂದೆ ರಫೀಕ್ ಆತೂರ್ ರವರ ಪಾತ್ರ ಪ್ರಮುಖವಾಗಿತ್ತು.
ಯಸ್ ಕೆ ಯಸ್ ಯಸ್ ಯಫ್ ಇದರ ಸಕ್ರಿಯ ಕಾರ್ಯಕರ್ತರಾಗಿ ಕ್ಲೀನ್ ಆಫ್ ದ ವರ್ಲ್ಡ್ ಮೊದಲಾದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯಸ್ ಕೆ ಯಸ್ ಯಸ್ ಯಫ್ ವಿಖಾಯ ವಿಂಗ್ ಇದರ ಉಪಾದ್ಯಕ್ಷರಾಗಿ ಕೊರೋನಾ ಮಹಾ ಮಾರಿಯ ಭೀಕರ ಹಾವಳಿಯ ಸಂದರ್ಭ ತನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ಆಹಾರ ಸರಬರಾಜು, ವಿಮಾನ ಯಾನ ಸೌಖರ್ಯ, ಆಕ್ಸಿಜನ್ ಕಿಟ್ ರವಾನೆ ಮೊದಲಾದ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ದಾರುನ್ನೂರ್ , DKSC , KIC ಮೊದಲಾದ ಸಂಸ್ಥೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ, ವಾಲಿಬಾಲ್ ಪಂದ್ಯಾಟ , ಕ್ರಿಕೆಟ್ ಮೊದಲಾದವುಗಳಲ್ಲಿ ಸಕ್ರಿಯಾರಾಗಿ ಪಾಲ್ಗೊಳ್ಳುತ್ತಿದ್ದರು.
ರಫೀಕ್ ಆತೂರ್ ಒಬ್ಬ ಕೊಡುಗೈ ದಾನಿಯಾಗಿದ್ದರು. ಯಾರೇ ಕೇಳಿದರೂ ಇಲ್ಲ ಎನ್ನುವ ಸ್ವಭಾವ ಅವರಲ್ಲಿ ಇರಲಿಲ್ಲ. ಬಡ ಹೆಣ್ಣು ಮಕ್ಕಳ ವಿವಾಹ, ಊರಿನ ಮಸೀದಿಗಳಲ್ಲಿ ನಡೆಯುವ ಕಾರ್ಯಕ್ರಮ, ರೋಗಿಗಳಿಗೆ ಸಹಕಾರ ಮೊದಲಾದ ವಿಷಯಗಳಲ್ಲಿ ತಕ್ಷಣ ನಮ್ಮೊಂದಿಗೆ ಸಂಪರ್ಕಿಸಿ ಯೋಗ್ಯ ಸಹಕಾರವನ್ನು ಮಾಡುತ್ತಿದ್ದರು. ಆತೂರ್ ವೆಲ್ಫೇರ್ ಕಮಿಟಿಯ ಮುಖಾಂತರ ಜಮಾಅತಿನ ಬಡವರ ಕಣ್ಣೀರೊರೆಸಲು ಮುತುವರ್ಜಿ ವಹಿಸುತ್ತಿದ್ದರು. ಅವರು ಊರಿಗೆ ಹಿಂತಿರುವಾಗ ಆತೂರ್ ವೆಲ್ಫೇರ್ ಕಮಿಟಿಯ ಕೋಶಾಧಿಕಾರಿಯಾಗಿದ್ದರು. ಎಲ್ಲರೊಂದಿಗೆ ಹೊಂದಾಣಿಕೆ ಸ್ವಭಾವ ಹೊಂದಿದ್ದರು. ಮುಂಬಾಗದವನು ಎಷ್ಟೇ ಪ್ರಭಾವಿಯಾದರೂ ಮುಚ್ಚುಮರೆಯಿಲ್ಲದೆ ಮಾತನಾಡುತ್ತಿದ್ದರು.
ಆವಶ್ಯಕ ಸಂದರ್ಭಗಳಲ್ಲಿ ಹೆಚ್ಚಾಗಿ ನನ್ನೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ದುಬೈಯಲ್ಲಿ ಅವರೊಂದಿಗೆ ನವಾಝ್ ಬಿ ಸಿ ರೋಡ್, ಸಿರಾಜ್ ಬಿ ಸಿ ರೋಡ್, ಮಹಮ್ಮದ್ ಶಬ್ಬೀರ್ ಫರಂಗಿಪೇಟೆ ಮೊದಲಾದವರು ಅತ್ಯಂತ ನಿಕಟರಾಗಿದ್ದರು. ಅವರು ದುಬೈ ಯಿಂದ ಊರಿಗೆ ಹೊರಡುವಾಗ ಎಲ್ಲಾ ಸಂಘ ಸಂಸ್ಥೆಗಳ ಹುದ್ದೆಗಳಿಗೆ ರಾಜೀನಾಮೆ ನೀಡಿರಲಿಲ್ಲ. ರೋಗ ಶಮನವಾದರೆ ತನ್ನ ಜವಾಬ್ಧಾರಿಯನ್ನು ಅದೇ ರೀತಿ ಪೂರೈಸಬೇಕೆಂಬುದು ಅವರ ಆಕಾಂಕ್ಷೆಯಾಗಿತ್ತು. ಎಲ್ಲವನ್ನೂ ಕೈ ಬಿಟ್ಟು ಕೊನೆಗೆ ಅವರು ಹೊರಟೇ ಹೋದರು . ತನ್ನ ಓರ್ವ ಮಿತ್ರನನ್ನು ಕಳೆದುಕೊಂಡಿರುವುದು ತಾಳಲಾಗದ ನೋವನ್ನು ನೀಡಿದ್ದು, ಅಲ್ಲಾಹನು ರಫೀಕ್ ನವರ ಪಾರತ್ರಿಕ ಜೀವನವನ್ನು ವಿಜಯಪ್ರಧಗೊಳಿಸಿ ಅನುಗ್ರಹಿಸಲಿ, ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಂದುಗೂಡಿಸಲಿ ಎನ್ನುವುದೇ ನನ್ನ ಪ್ರಾರ್ಥನೆ.
ಲೇಖನ ; ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.