ಭುವನೇಶ್ವರ (www.vknews.in) : ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಕಾಡಾನೆಯೊಂದು ಅವರ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯ ವೇಳೆ ಮತ್ತೆ ದಾಳಿ ನಡೆಸಿ ಮೃತದೇಹವನ್ನು ವಿರೂಪಗೊಳಿಸಿದ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ರಾಯ್ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ.
ವೃದ್ಧೆಯು ಗುರುವಾರ ಬೆಳಗ್ಗೆ ಕೊಳವೆ ಬಾವಿಯಿಂದ ನೀರು ಸಂಗ್ರಹಿಸುವಾಗ ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಬಂದ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿದೆ. ಆನೆಯ ತುಳಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇದಾದ ಬಳಿಕ ಅವರ ಕುಟುಂಬ ಸದಸ್ಯದರು ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸುವಾಗ ಮತ್ತೆ ಅಲ್ಲಿಗೆ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟ ಆನೆ, ವೃದ್ಧೆಯ ಮೃತದೇಹವನ್ನು ಹೊತ್ತೊಯ್ದು ಮತ್ತೆ ಮೃತದೇಹದ ಮೇಲೆಯೇ ದಾಳಿ ಮಾಡಿ, ಮತ್ತಷ್ಟು ವಿರೂಪಗೊಳಿಸಿ, ಎತ್ತೆಸೆದು ಅಲ್ಲಿಂದ ಪರಾರಿಯಾಗಿದೆ.
ಅಂತಿಮವಾಗಿ ವೃದ್ಧೆಯ ಅಂತ್ಯಕ್ರಿಯೆಯನ್ನು ಅದೇ ದಿನ ಕೆಲ ಗಂಟೆಗಳ ಬಳಿಕ ನಡೆಸಲಾಗಿದೆ. ಆನೆಯ ಈ ವಿಚಿತ್ರ ವರ್ತನೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಸ್ಗೋವಿಂದಪುರ ಠಾಣೆಯ ಇನ್ಸ್ಪೆಕ್ಟರ್ ಲೋಪಾಮುದ್ರ ನಾಯಕ್ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.