(www.vknews.in) : ಅಮೇರಿಕಾ ರಾಯಭಾರ ಕಚೇರಿ ಮತ್ತು ಬ್ರಿಟಿಷ್ ಹೈಕಮಿಷನ್ ನಿಂದ ಶ್ಲಾಘಿಸಲಾದ, ಇಂಗ್ಲಿಷ್ ಹೌಸ್ ಇಂಡಿಯಾ ಸಂಸ್ಥಾಪಕ, ಪ್ರೇರಕ ಭಾಷಣಗಾರ, ವ್ಯಕ್ತಿತ್ವ ವಿಕಸನ ಮತ್ತು ಆಂಗ್ಲ ಭಾಷೆ ತರಬೇತುದಾರ ಮುನವರ್ ಜಮಾ ಹೆಸರು ನೀವು ಕೇಳಿರಬಹುದು. ವಿದ್ಯಾರ್ಥಿಗಳ ನೆಚ್ಚಿನ ಮಾರ್ಗದರ್ಶಿ. ಅವರು ಕೇವಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಮದ್ರಸಾ ವಿದ್ಯಾರ್ಥಿಗಳಿಗೂ ನೆಚ್ಚಿನ ಗುರು. ಇಂಗ್ಲಿಷ್ ಎಂದರೆ ಏನು ಎಂದೇ ಗೊತ್ತಿಲ್ಲದ ಮದ್ರಸ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ವೃಂದಕ್ಕೆ ಸರಾಗಿವಾಗಿ, ವ್ಯಾಕರಣ ತಪ್ಪಿಲ್ಲದೆ ಹೇಗೆ ಧೈರ್ಯದಿಂದ ಸ್ಟೇಜ್ ಮೇಲೆ ನಿಂತು ಮಾತನಾಡಬೇಕು ಎಂದು ಕೇವಲ ಒಂದು ತಿಂಗಳ ಕೋರ್ಸ್ನಲ್ಲೇ ಕಲಿಸಿಬಿಡುತ್ತಾರೆ.
ಇಂಗ್ಲಿಷ್ ನಲ್ಲಿ ಚಟಪಟ ಮಾತನಾಡುವ ಆ ಮದ್ರಸ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಮತ್ತು ಬೋಧಕರನ್ನು ಕಂಡರೆ ಆಶ್ಚರ್ಯವಾಗುತ್ತದೆ. ಮದ್ರಸ ಹಿನ್ನೆಲೆಯಿಂದ ಬಂದವರಿಗೆ ಅರಬ್ಬಿ ಮತ್ತು ಉರ್ದು ಬಿಟ್ಟರೆ ಬೇರೇನು ಬರಲ್ಲ ಎಂಬ ಕಲ್ಪನೆ ಇದೆ. ಬಹುತೇಕ ಅದು ಸತ್ಯವೂ ಹೌದು. ಆದರೆ ಎಲ್ಲಾ ಮದ್ರಸಾಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಕೆಲವು ಮದ್ರಸಾಗಳು, ಮದ್ರಸಾಗಳ ಬಗ್ಗೆ ಕೆಲ ಬಿಕಾವ್ ಮೀಡಿಯಾಗಳು ಹುಟ್ಟಿಸುತ್ತಿರುವ ಕೆಟ್ಟಪರಿಕಲ್ಪನೆಗಳನ್ನು ಹುಸಿಯಾಗಿಸುವಷ್ಟು ಮುಂಚೂಣಿಯಲ್ಲಿವೆ.
ಈಜಿಪ್ಟ್ ನ ಅಲ್-ಅಜರ್ ವಿಶ್ವವಿದ್ಯಾಲಯದಿಂದ ಸೌದಿ ಅರೇಬಿಯಾದ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಮದೀನಾ ದವರೆಗೆ ವಿವಿಧ ಧಾರ್ಮಿಕ ಮದ್ರಸಾಗಳು ಮುಸ್ಲಿಂ ಜಗತ್ತಿನಲ್ಲಿ ಸ್ಥಾಪಿತಗೊಂಡಿವೆ. ಯುನೆಸ್ಕೋ ಮತ್ತು ಗಿನ್ನೆಸ್ ವಿಶ್ವದಾಖಲೆಗಳ ಪ್ರಕಾರ ವಿಶ್ವದಲ್ಲೇ ಅತ್ಯಂತ ಹಳೆಯದಾದ, ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ವಿಶ್ವದಲ್ಲಿ ಮೊದಲ ಪದವಿ ನೀಡುವ ಶಿಕ್ಷಣ ಸಂಸ್ಥೆ ಎಂದೇ ಪ್ರಸಿದ್ಧಿ ಪಡೆದಿರುವ ಅಲ್ ಕರಾವಿಯಿನ್ ವಿಶ್ವವಿದ್ಯಾಲಯ ಮೊರಾಕೋದಲ್ಲಿ ಸ್ಥಾಪಿತಗೊಂಡು ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊದಲ ಸ್ಥಾಪಿತವಾದ ಮದ್ರಸಾಗಳಲ್ಲಿ ಒಂದಾದ ನಿಜಾಮಿಯ ಮದ್ರಸಾ ಹನ್ನೊಂದನೇ ಶತಮಾನದ ಸಮಯದಲ್ಲಿ ಬಾಗ್ದಾದ್ ನಲ್ಲಿ ಆಹಾರ, ವಸತಿ ಮತ್ತು ಉಚಿತ ಶಿಕ್ಷಣವನ್ನು ನೀಡುವುದರ ಮೂಲಕ ನಿರ್ಮಿಸಲಾಯಿತು. ಅಂದಿನಿಂದ ಮದ್ರಸಾಗಳು ಮುಸ್ಲಿಂ ಪ್ರಪಂಚದಾದ್ಯಂತ ವೇಗವಾಗಿ ಹರಡಿತು ಮತ್ತು ಅವರ ಪಠ್ಯಕ್ರಮವೂ ಸ್ಥಳದಿಂದ ಸ್ಥಳಕ್ಕೆ ಬದಲಾದವು.
೧೧ನೇ ಶತಮಾನದಲ್ಲಿ ಸೆಲ್ಜುಕ್ ಗಳ ಅಡಿಯಲ್ಲಿ ವಜೀರ್ ಆಗಿದ್ದ ನಿಜಾಮುಲ್ ಮುಲ್ಕ್ ಮದ್ರಸಗಳ ಜಾಲವನ್ನು ಹರಡಲು ಕ್ರಮ ತೆಗೆದುಕೊಂಡರು. ಮದ್ರಸಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ಇರಾನ್, ಮೆಸಪಟೋಮಿಯಾ ಮತ್ತು ಖೋರಾಸಾನ್ ನಲ್ಲಿ ಅಧಿಕೃತ ಮದ್ರಸಾಗಳ ಮೊದಲ ಜಾಲವನ್ನು ನಿರ್ಮಿಸಲು ಕಾರಣರಾಗಿದ್ದರು. ಈಜಿಪ್ಟ್ ನ ಕೈರೊದಲ್ಲಿರುವ ಅಲ್ ಅಜರ್ ಮದ್ರಸಾ ಇಂದು ಸಾರ್ವಜನಿಕ ವಿಶ್ವವಿದ್ಯಾಲಯವಾಗಿದೆ. ಇಸ್ಲಾಮಿಕ್ ಕಲಿಕೆಗೆ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯವೆಂದು ಹೆಸರುವಾಸಿಯಾಗಿದೆ.
ಅಲ್ ಅಜರ್ ಸರಿಸುಮಾರು ಎರಡು ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳ ರಾಷ್ಟ್ರೀಯ ಜಾಲವನ್ನು ನೋಡಿಕೊಳ್ಳುತ್ತದೆ. ನಾಲ್ಕು ಸಾವಿರಕ್ಕಿಂತ ಹೆಚ್ಚು ಬೋಧನಾ ಸಂಸ್ಥೆಗಳು ಅಲ್ ಅಜರ್ ನೊಂದಿಗೆ ಸಂಯೋಜಿತವಾಗಿವೆ. ಅದರ ವಿದ್ಯಾರ್ಥಿಗಳು ತರ್ಕ, ವ್ಯಾಕರಣ, ವಾಕ್ಚಾತುರ್ಯ ಮತ್ತು ಚಂದ್ರನ ಹಂತಗಳನ್ನು ಹೇಗೆ ಲೆಕ್ಕ ಹಾಕುವುದು, ಜೊತೆಗೆ ಕುರಾನ್ ಮತ್ತು ಇಸ್ಲಾಮಿಕ್ ಕಾನೂನನ್ನು ವಿವರವಾಗಿ ಅಧ್ಯಯನ ಮಾಡುತ್ತಾರೆ. ಅರಬ್ಬಿ ಸಾಹಿತ್ಯ ಮತ್ತು ಇಸ್ಲಾಮಿಕ್ ಕಲಿಕೆಯ ಜೊತೆ ಧಾರ್ಮಿಕೇತರ ವಿಷಯಗಳನ್ನು ಸಹ ಅದರ ಪಠ್ಯಕ್ರಮಕ್ಕೆ ಸೇರಿಸಲಾಗಿದೆ.
ಅರಬ್ಬಿ ಭಾಷೆಯಲ್ಲಿ ಶಾಲೆಯನ್ನು “ಮದ್ರಸಾ” ಎನ್ನುತ್ತಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಕಾರ ಭಾರತವು ೨೪೦೧೦ ಮದ್ರಸಾಗಳನ್ನು ಹೊಂದಿದೆ. ಮಕ್ಕಳ ಹಕ್ಕುಗಳ ರಕ್ಷಣೆ ರಾಷ್ಟ್ರೀಯ ಆಯೋಗವು ರಾಷ್ಟ್ರದ ಮದ್ರಸಾಗಳು ವಾರ್ಷಿಕವಾಗಿ ಸುಮಾರು ಹತ್ತು ಸಾವಿರ ಕೋಟಿ ರೂಗಳನ್ನು ದೇಣಿಗೆ ಪಡೆಯುತ್ತವೆ ಎಂದು ವರದಿ ಮಾಡಿದೆ.
ಮದ್ರಸಾಗಳಲ್ಲಿ ಎರಡು ವಿಧ. ಒಂದು ದೈನಂದಿನ ಮದ್ರಸಾ ಮತ್ತೊಂದು ವಿದ್ಯಾರ್ಥಿ ನಿಲಯ. ಸಾಮಾನ್ಯವಾಗಿ ದೈನಂದಿನಾ ಮದ್ರಸಾಗಳು ಮಸೀದಿ ವತಿಯಿಂದ ನಡೆಯುತ್ತವೆ. ಮಸೀದಿಯ ಅಕ್ಕಪಕ್ಕದ ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಕೇವಲ ಒಂದೆರಡು ತಾಸು ಅಲ್ಲಿಗೆ ಹೋಗಿ ಪ್ರಮುಖವಾಗಿ ಕುರಾನ್ ಓದಲು ಕಲಿಯುತ್ತಾರೆ. ಅರಬ್ಬಿ ವರ್ಣಮಾಲೆ, ಅಕ್ಷರಗಳ ಉಚ್ಚಾರ, ಪದಗಳನ್ನು ಜೋಡಿಸಿ ಓದುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಸುಮಾರು ಒಂದು ವರ್ಷದಲ್ಲಿ ಕುರಾನನ್ನು ಬೇರೆಯವರ ಸಹಾಯ ಇಲ್ಲದೆಯೇ ಓದುವುದನ್ನು ಕಲಿಯುತ್ತಾರೆ.
ಒಂದೆರಡು ತಾಸಿನಲ್ಲಿ ಕುರಾನ್ ಜೊತೆಗೆ ಧರ್ಮದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಳ್ಳುತ್ತಾರೆ. ನಮಾಜ್ ಮಾಡುವುದು ಹೇಗೆ ಎಂದು ಸಹ ಕಲಿತುಕೊಳ್ಳುತ್ತಾರೆ. ಸಣ್ಣಪುಟ್ಟ ಮೌಖಿಕ ಪರೀಕ್ಷೆ ಇರುತ್ತದೆ. ಅದರಲ್ಲಿ ಉತ್ತೀರ್ಣರಾದವರಿಗೆ ಬಹುಮಾನ ನೀಡಲಾಗುತ್ತದೆ. ಮಸೀದಿಯಿಂದ ಮನೆ ದೂರವಿದ್ದು, ಅನೇಕ ಕಾರಣಗಳಿಂದ ಮಕ್ಕಳು ಮಸೀದಿಯ ಮದ್ರಸಾಗಳಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಕೆಲ ಪೋಷಕರು ಮನೆಗೆ ಬಂದು ಮಕ್ಕಳಿಗೆ ಕುರಾನ್ ಹೇಳಿಕೊಡಲು ಉಪಾಧ್ಯಾಯರನ್ನು ನೇಮಿಸಿಕೊಳ್ಳುತ್ತಾರೆ. ಕೆಲವರು ಆನ್ ಲೈನ್ ಅರಬ್ಬಿ ಕ್ಲಾಸುಗಳಿಗೆ ಮೊರೆ ಹೋಗುತ್ತಾರೆ. ಕೆಲವು ಮಕ್ಕಳು ಯಾವುದರಲ್ಲೂ ರುಚಿ ತೋರಿಸುವುದಿಲ್ಲ.
ಕುರಾನ್ ಕಲಿಯುವ, ತಿಳಿಯುವ, ಬರೆಯುವ, ಪಠಿಸುವ, ಕಂಠಪಾಠ ಮಾಡುವ ಹಂಬಲ ಪ್ರವಾದಿವರ್ಯರ ಸಹಚರರಲ್ಲಿ, ಹಿಂಬಾಲಕರಲ್ಲಿ ಅತಿ ಹೆಚ್ಚಾಗಿತ್ತು. ಕುರಾನ್ ಕಂಠಪಾಠ ಮಾಡುವುದು ಪ್ರವಾದಿವರ್ಯರ ಕಾಲದಿಂದಲೇ ಪ್ರಾರಂಭವಾಯಿತು. ಧರ್ಮವನ್ನು ಕಲಿಯುವುದರಲ್ಲಿ ಸ್ತ್ರೀಯರು ಸಹ ಹಿಂದುಳಿಯಲಿಲ್ಲ. ಪ್ರವಾದಿಯವರ ಮರಣದ ನಂತರ ಅವರ ಪತ್ನಿ ಬೀಬಿ ಆಯಿಷಾ(ರ) ತನ್ನ ಮನೆಯಲ್ಲಿ ಮಹಿಳೆಯರಿಗಾಗಿ ಮೊದಲ ಮದ್ರಸಾವನ್ನು ಸ್ಥಾಪಿಸಿದರು.
ಆದರೆ ಅದಕ್ಕೆ ಹೆಸರಿರಲಿಲ್ಲ. ವಿದ್ಯೆ ಕಲಿಯುವ ಸ್ಥಳವೇ ಮದ್ರಸಾ. ಧರ್ಮದ ವಿಮರ್ಶಾತ್ಮಕ ವಿಷಯಗಳನ್ನು ಕಲಿಯಲು ದೂರದ ಸ್ಥಳಗಳಿಂದ ಪುರುಷರು ಸಹ ಅವರನ್ನು ಭೇಟಿ ಮಾಡುತ್ತಿದ್ದರು. ಕುರಾನ್, ಕಾನೂನು ಮತ್ತು ಕಾನೂನು ಬಾಹಿರ ಸಮಸ್ಯೆಗಳು, ಅರಬ್ಬಿ ಸಾಹಿತ್ಯ, ಅರಬ್ ಇತಿಹಾಸ ಮತ್ತು ಸಾಮಾನ್ಯ ವೈದ್ಯಕೀಯದಲ್ಲಿ ಪರಿಣಿತಿಗೆ ಹೆಸರುವಾಸಿಯಾಗಿದ್ದರಿಂದ ಅವರು ಮದ್ರಸಾಗಳ ಕಲಿಕೆಗಳ ಮೇಲೆ ಪ್ರಮುಖ ಪ್ರಭಾವ ಬೀರಿದರು. ಇಂದಿನ ಸಮಾಜದಲ್ಲೂ ಸಹ ಕುರಾನ್ ಕಲಿಕೆಯಲ್ಲಿ ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳದೇ ಮೇಲುಗೈ.
ಇನ್ನೊಂದು ರೀತಿಯ ಮದ್ರಸಾವೆಂದರೆ ವಿದ್ಯಾರ್ಥಿ ನಿಲಯ. ಅಲ್ಲಿ ಹಾಸ್ಟೆಲ್ ರೀತಿಯ ಎಲ್ಲಾ ವ್ಯವಸ್ಥೆ ಇರುತ್ತದೆ. ಕೆಲವು ಮದ್ರಸಾಗಳಲ್ಲಿ ಕುರಾನನ್ನು ಕಂಠಪಾಠ ಮಾತ್ರ ಮಾಡಿಸುತ್ತಾರೆ. ಸುಮಾರು ಮೂರರಿಂದ ನಾಲ್ಕು ವರ್ಷ ಅದರ ಸಮಯ. ಪರೀಕ್ಷೆ ಮುಗಿದ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಿ “ಹಾಫಿಜ್” ಎಂಬ ಬಿರುದು ನೀಡಲಾಗುತ್ತದೆ. ಹಾಫಿಜ್ ಆದವರು ರಂಜಾನ್ ತಿಂಗಳಿನಲ್ಲಿ ಜನರ ಮುಂದೆ ಮಸೀದಿಯಲ್ಲಿ ತರಾವೀಹ್ ನಮಾಜ್ ನಲ್ಲಿ ಸಂಪೂರ್ಣ ಕುರಾನನ್ನು ೩೦ ದಿನಗಳಲ್ಲಿ ಓದುವರು. ಜನರು ಗಮನ ವಹಿಸಿ ಕುರಾನ್ ಪಠಣ ಆಲಿಸುವರು.
ಪ್ರವಾದಿವರ್ಯರ ಸಹಚರರು ಕುರಾನನ್ನು ಕಂಠಪಾಠ ಮಾಡುತ್ತಿದ್ದರು. ಅಂತಹ ಹಾಫಿಜ್ ಗಳು ಧರ್ಮಯುದ್ಧದಲ್ಲಿ ಅನೇಕರು ಮಡಿದು ಹೋದರು. ಹಾಫಿಜ್ ಗಳ ಕೊರತೆ ಉಂಟಾಗಬಾರದೆಂದು, ಕುರಾನನ್ನು ಭೂಮಿಯ ಕೊನೆಯ ದಿನದವರೆಗೂ ಯಾರೂ ಒಂದಕ್ಷರವೂ ಬದಲಾವಣೆ ಮಾಡಬಾರದೆಂದು, ಅದರ ನೈಜ ರೂಪದಲ್ಲಿ ಹೀಗೆ ಮುಂದುವರೆಯಲೆಂದು ಕುರಾನ್ ಕಂಠಪಾಠ ಮಾಡಲು ಪ್ರೋತ್ಸಾಹಿಸಲಾಯಿತು. ಅವು ಸಹ ಮದ್ರಸಾಗಳೇ. ಅದರ ಪರಿಣಾಮ ಇಂದೂ ಸಹ ಕುರಾನ್ ನಲ್ಲಿ ಒಂದು ಅಕ್ಷರವೂ ಬದಲಾವಣೆಯಾಗಿಲ್ಲ.
ಪ್ರವಾದಿವರ್ಯರ ಸಹಚರರು ಕುರಾನನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿ, ಬರೆಸಿ, ಅದರ ಉಚ್ಚಾರದ ರೀತಿ ನೀತಿಗಳನ್ನು ನಿಯಮಿಸಿದರು. ಕುರಾನನ್ನು ಸುಮಧುರವಾಗಿ ನಿಯಮಾವಳಿಯಿಂದ ಹೇಗೆ ಪಠಿಸಬೇಕು ಎಂದು ಮದ್ರಸಾಗಳಲ್ಲಿ ಹೇಳಿ ಕೊಡಲಾಗುತ್ತದೆ. ಅದು ೨ ವರ್ಷದ ಕೋರ್ಸ್. ಆ ಕೋರ್ಸನ್ನು ಮುಗಿಸಿದವರನ್ನು “ಖಾರಿ” ಎಂಬ ಬಿರುದು ನೀಡಲಾಗುತ್ತದೆ. ನಮ್ಮ ಸಾಮಾನ್ಯ ಶಾಲೆಗಳಲ್ಲಿರುವಂತೆ ಮದ್ರಸಾಗಳಲ್ಲೂ ಸಹ ತರಗತಿಗೆಳಿಗೆ ಅನುಗುಣವಾಗಿ ಪಠ್ಯಕ್ರಮಗಳಿವೆ. ಆದರೆ ಈ ಸೌಕರ್ಯ ದೊಡ್ಡ ಮದ್ರಸಾಗಳಲ್ಲಿ ಮಾತ್ರ ಲಭ್ಯ. ಏಕೆಂದರೆ ಬಹುತೇಕ ಮದ್ರಸಾಗಳು ನಡೆಯುವುದೇ ದೇಣಿಗೆ ಹಣದಿಂದ. ಉಪಾಧ್ಯರ ಸಂಬಳ, ಮಕ್ಕಳ ಊಟದ ವ್ಯವ್ಯಸ್ಥೆ ಮತ್ತು ವಸತಿ ಸೌಕರ್ಯ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ.
ಮದ್ರಸಾದ ಮೊದಲ ಹಂತ: ಒಂದರಿಂದ ನಾಲ್ಕನೇ ತರಗತಿಯವರೆಗೆ ನಾಲ್ಕು ವರ್ಷಗಳ ಪ್ರಾಥಮಿಕ ಶಿಕ್ಷಣ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉರ್ದು ಭಾಷೆ, ಪವಿತ್ರ ಕುರಾನ್ ಓದುವಿಕೆ, ಮೂಲಭೂತ ಧಾರ್ಮಿಕ ಆಚರಣೆಗಳು ಮತ್ತು ಗಣಿತದಲ್ಲಿ ತರಬೇತಿ ನೀಡಲಾಗುತ್ತದೆ.
ಎರಡನೇ ಹಂತ: ಐದನೇ ತರಗತಿಯಿಂದ ೮ನೇ ತರಗತಿವರೆಗೆ, ನಾಲ್ಕು ವರ್ಷಗಳ ಪ್ರಾಥಮಿಕ ಶಿಕ್ಷಣ. ಈ ಹಂತದಲ್ಲಿ ಇಸ್ಲಾಮಿಕ್ ಅಧ್ಯಯನಗಳು, ನೈತಿಕ ಶಿಕ್ಷಣ, ಸಾಮಾಜಿಕ ಅಧ್ಯಯನಗಳು, ವ್ಯಾಕರಣ, ಮತ್ತು ಸಂಯೋಜನೆ, ಅರೇಬಿಕ್, ಪರ್ಷಿಯನ್ ಮತ್ತು ಫೊನೆಟಿಕ್ಸ್(ತಜ್ವೀದ್), ಗಣಿತ, ಭೂಗೋಳ, ಇತಿಹಾಸ ಮತ್ತು ಸಾಮಾನ್ಯ ವಿಜ್ಞಾನದಂತಹ ವಿಷಯಗಳನ್ನು ಕಲಿಸಲಾಗುತ್ತದೆ.
ಮೂರನೇ ಹಂತ: ಮಾಧ್ಯಮಿಕ ಶಿಕ್ಷಣ ಮತ್ತು ಪದವಿ. ಈ ಏಳು ವರ್ಷಗಳು ಮೆಟ್ರಿಕ್ಯುಲೇಷನ್(ಮೌಲ್ವಿ), ಮಧ್ಯಂತರ(ಆಲಿಮ್) ಮತ್ತು ಪದವಿ(ಫಾಜಿಲ್) ಒಳಗೊಂಡಿದೆ. ಮೊದಲ ಎರಡು ಹಂತಗಳು ತಲಾ ಎರಡು ವರ್ಷಗಳು ಮತ್ತು ಮೂರನೇ ಹಂತದ ಅವಧಿ ಮೂರು ವರ್ಷಗಳು. ಕುರಾನ್ ವ್ಯಾಖ್ಯಾನ (ತಫ್ಸೀರ್), ಪ್ರವಾದಿಯ ಮಾತುಗಳು (ಹದೀಸ್), ಇಸ್ಲಾಮಿಕ್ ನ್ಯಾಯಶಾಸ್ತ್ರ ಮತ್ತು ನಂಬಿಕೆಗಳು, ತರ್ಕ ಮತ್ತು ತತ್ವಶಾಸ್ತ್ರ, ಪ್ರವಾದಿಯ ಜೀವನಚರಿತ್ರೆ(ಸೀರತ್) ಮತ್ತು ಅರೇಬಿಕ್ ಸಾಹಿತ್ಯ ಈ ಹಂತದ ಮುಖ್ಯ ಕೋರ್ಸ್ ಗಳಾಗಿವೆ.
ನಾಲ್ಕನೇ ಹಂತ: ಐದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ನಾಲ್ಕು ವರ್ಷಗಳ ಪ್ರಾಥಮಿಕ ಶಿಕ್ಷಣ. ಈ ಕೋರ್ಸ್ ಅವಧಿ ಎರಡು ವರ್ಷಗಳು. ಅರ್ಹ ಪದವೀಧರರು(ಫಾಜಿಲ್) ಈ ಕೋರ್ಸ್ಗಳನ್ನು ಮಾಡಲು ಅರ್ಹರು. ವಿದ್ಯಾರ್ಥಿಗಳು ತಫ್ಸೀರ್ ಅಥವಾ ಹದೀಸ್ ಅಥವಾ ಫಿಕ್ (ನ್ಯಾಯಶಾಸ್ತ್ರ) ಅಥವಾ ಕಲಾಂ ಅಥವಾ ಅರೇಬಿಕ್ ಸಾಹಿತ್ಯ ಅಥವಾ ಇಸ್ಲಾಂ ಇತಿಹಾಸದಲ್ಲಿ ಯಾವುದಾದರು ಒಂದು ಆರಿಸಿಕೊಳ್ಳಬೇಕು.
ಪದವಿ(ಫಾಜಿಲ್) ಪಡೆದವರು ಸ್ನಾತಕೋತ್ತರ ಪದವಿ(ಕಾಮಿಲ್) ಪಡೆಯಲು ಅರ್ಹರು. ಕಾಮಿಲ್ ಪದವಿ ಪಡೆದವರು ಗೈಡ್ ಮಾರ್ಗದರ್ಶನದಲ್ಲಿ ಆಯ್ದ ವಿಷಯವನ್ನು ಕುರಿತು ಸಂಶೋಧನಾ (ಪಿಎಚ್ ಡಿ) ಕಾರ್ಯವನ್ನು ನಡೆಸಲು ಅರ್ಹರಾಗಿರುತ್ತಾರೆ.
ಕುರಾನ್ ತಫ್ಸೀರ್(ವ್ಯಾಖ್ಯಾನ): ಕುರಾನ್ ನ ಮೊದಲ ತರ್ಜುಮೆ ಆಗಿದ್ದು ಪಾರ್ಸಿ ಭಾಷೆಯಲ್ಲಿ. ಅದನ್ನು ಮಾಡಿದವರು ಹಜ್ರತ್ ಸಲ್ಮಾನ್ ಫಾರ್ಸಿ(ರ). ಇಂದು ಸಂಪೂರ್ಣ ಕುರಾನ್ ತರ್ಜುಮೆ ೪೭ ಭಾಷೆಗಳಲ್ಲಿ ಲಭ್ಯ ಮತ್ತು ಕುರಾನ್ ನ ಹಲವು ಭಾಗಗಳು ಪ್ರಪಂಚದ ೧೧೪ ಭಾಷೆಗಳಲ್ಲಿ ಲಭ್ಯವಾಗಿವೆ. ನಾನೊಬ್ಬ ಸಾಮಾನ್ಯ ಪ್ರಜೆ ಕನ್ನಡ ಭಾಷೆಯಲ್ಲಿ ಕುರಾನ್ ಓದಬಲ್ಲೆ, ಅದರ ತರ್ಜುಮೆ ಸಹ ಓದಬಲ್ಲೆ. ವಿವರಣೆಯೊಂದಿಗೆ ತಿಳಿದುಕೊಂಡರೆ ಅದರ ಮಾತೇ ಬೇರೆ. ಮದ್ರಸಾದಲ್ಲಿ ಓದಿ, ಧಾರ್ಮಿಕ ಜ್ಞಾನವುಳ್ಳ ಪಂಡಿತರು ಕುರಾನ್ ವ್ಯಾಖ್ಯಾನ ಮಾಡಬಲ್ಲರು. ಇಂದು ನೂರಾರು ವ್ಯಾಖ್ಯಾನಗಳು ಲಭ್ಯ ಇವೆ. ಕುರಾನ್ ನ ವ್ಯಾಖ್ಯಾನ ಮಾಡುವವರು ಕುರಾನ್ ನ ಪ್ರತಿ ಪಾಠದ ಹಿನ್ನಲೆಯನ್ನು ಸಂಶೋಧನೆ ಮಾಡಿ ಸೂಕ್ಷ್ಮವಾಗಿ ತಿಳಿದುಕೊಂಡಿರಬೇಕು. ತರ್ಜುಮೆಯನ್ನು ನಮ್ಮ ಮನಸ್ಸಿಗೆ ಬಂದಂತೆ ಊಹಿಸಿಕೊಂಡರೆ ತಪ್ಪಾಗುತ್ತದೆ. ಅನೇಕ ವಿದ್ವಾಂಸರು ಅನೇಕ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅದು ಅವರ ಸಂಶೋಧನೆಯ ಆಳ ಮತ್ತು ಅಗಲಕ್ಕೆ ಬಿಟ್ಟಿದ್ದು.
ಫಿಕ್(ನ್ಯಾಯಶಾಸ್ತ್ರ): ಅರಬ್ಬಿ ಭಾಷೆಯಲ್ಲಿ “ಫಿಖ್ಹ್” ಪದದ ಅರ್ಥ ಆಳವಾದ ತಿಳುವಳಿಕೆ. ಇಸ್ಲಾಮಿಕ್ ಮೂಲಗಳಿಂದ ಕಾನೂನು ತೀರ್ಪುಗಳ ಬಗ್ಗೆ ಜ್ಞಾನ ಹೊಂದಿರುವವರಿಗೆ ಫುಖಹ ಎನ್ನುತ್ತಾರೆ. ಫುಖಹ ಆದವರು ನ್ಯಾಯಶಾಸ್ತ್ರದ ವಿವಿಧ ಚರ್ಚೆಗಳಲ್ಲಿ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು. ಅವರು ಮಾತ್ರ “ಫತ್ವಾ”(ತೀರ್ಪು) ಕೊಡಲು ಅರ್ಹರು. ಫತ್ವಾ ಕೊಡುವವರು “ಮುಫ್ತಿ” ಪದವಿ ಅಥವಾ ಬಿರುದು ಪಡೆದಿರಬೇಕು. ಕಠಿಣವಾದ ಅಥವಾ ಅತಿ ಸೂಕ್ಷ್ಮವಾದ ತೀರ್ಪನ್ನು ನೀಡಬೇಕಾದರೆ “ಮಜ್ಲಿಸ್ ಎ ಷೂರ” ಎಂಬ ಸಲಹಾ ಮಂಡಳಿ ಇರುತ್ತದೆ. ಅದರಲ್ಲಿ ಸುಮಾರು ಐದು ಅತ್ಯುನ್ನತ ದರ್ಜೆಯ ಧಾರ್ಮಿಕ ವಿದ್ವಾಂಸರು ಇರುತ್ತಾರೆ.
ಆಳವಾಗಿ ಚರ್ಚೆ ನಡೆಸಿ ತೀರ್ಪನ್ನು ಕೊಡಲಾಗುತ್ತದೆ. ಯಾರಿಗೂ ಹೆದರುವುದಿಲ್ಲ. ಎಲ್ಲರಿಗೂ ಒಂದೇ ನ್ಯಾಯ. ಆದರೆ ಇಂದಿನ ಕಾಲದಲ್ಲಿ ಫತ್ವಾ ಮಾರಾಟಕ್ಕಿದೆ. ಕೆಲವರು ಮಾಡಿದ ತಪ್ಪು ಕೆಲಸಕ್ಕೆ ನಾವು ಎಲ್ಲರನ್ನು ಸಾರಾಸಗಟಾಗಿ ಟೀಕಿಸುವುದು ಬೇಡ. ಇಸ್ಲಾಮಿಕ್ ಕಾನೂನಿಗೆ ಸಂಬಂಧಿಸಿದ ನಿರ್ಧಾರಗಳನ್ನು ನೀಡುವ ಸ್ಥಳಕ್ಕೆ “ದಾರುಲ್ ಇಫ್ತಾಹ್” ಅಥವಾ “ದಾರುಲ್ ಖಜಾ” (ನ್ಯಾಯಾಲಯ) ಎನ್ನುತ್ತಾರೆ. ಇಂತಹ ಮಂಡಳಿಗಳು ದೊಡ್ಡ ಜಿಲ್ಲೆಗಳಲ್ಲಿ ಉಂಟು. ಪ್ರತಿ ರಾಜ್ಯಕ್ಕೆ ಓರ್ವ “ಅಮೀರ್ ಎ ಶರಿಯತ್” ಇರುತ್ತಾರೆ. ಅಂದರೆ ಇಡೀ ರಾಜ್ಯಕ್ಕೆ ಧಾರ್ಮಿಕ ಮುಖಂಡ.
ಹದೀಸ್: ಪ್ರವಾದಿವರ್ಯರ ಮಾತುಗಳು. ಅವರ ಹಿಂಬಾಲಕರು ಪ್ರವಾದಿವರ್ಯರ ಮಾತುಗಳನ್ನು ಆರು ಪುಸ್ತಕಗಳಲ್ಲಿ ಸಂಗ್ರಹಿಸಿದ್ದಾರೆ. ಸಹಿ ಅಲ್ ಬುಖಾರಿ, ಸಹಿ ಮುಸ್ಲಿಂ, ಸುನಂ ಅಬು ದಾವೂದ್, ಸುನನ್ ಅಲ್ ತಿರ್ಮಜಿ, ಸುನನ್ ಅಲ್ ನಸಾಯಿ, ಸುನನ್ ಇಬ್ನ್ ಮಾಜ.
ಮದ್ರಸಾ ಪದವೀಧರರು ಇದನ್ನೆಲ್ಲಾ ಓದಿರುತ್ತಾರೆ. ಮದ್ರಸಾಗಳಲ್ಲಿ ನಾಲ್ಕು ಮುಖ್ಯ ಪಂಥಗಳಿವೆ. ಹನಫಿ, ಶಾಫಿ, ಮಾಲಿಕಿ ಮತ್ತು ಹಂಬಲಿ. ಇವು ಒಂಬತ್ತು ಮತ್ತು ಹತ್ತನೇ ಶತಮಾನದಲ್ಲಿ ಹೊರಹೊಮ್ಮಿದ ಪಂಥಗಳು ಅಥವಾ ಪಂಗಡಗಳು. ಹನ್ನೆರಡನೆಯ ಶತಮಾನದ ವೇಳೆಗೆ ಬಹುತೇಕ ಎಲ್ಲಾ ನ್ಯಾಯಶಾಸ್ತ್ರಜ್ಞರು ನಿರ್ದಿಷ್ಟ ಪಂಥದೊಂದಿಗೆ ತಮ್ಮನ್ನು ತಾವು ಜೋಡಿಸಿಕೊಂಡರು. ಈ ನಾಲ್ಕು ಶಾಲೆಗಳು ಪರಸ್ಪರ ಸಿಂಧುತ್ವವನ್ನು ಗುರುತಿಸುತ್ತವೆ ಮತ್ತು ಅವರು ಶತಮಾನಗಳಿಂದ ಕಾನೂನು ಚರ್ಚೆಯಲ್ಲಿ ಸಂವಹನ ನಡೆಸುತ್ತಾರೆ.
ಹನಫಿ(ಟರ್ಕಿ, ಬಾಲ್ಕನ್ಸ್, ಲೆವಂಟ್, ಮಧ್ಯ ಏಷ್ಯಾ, ಭಾರತೀಯ ಉಪಖಂಡ, ಚೀನಾ, ಅಲೆಗ್ಸಾಂಡ್ರಿಯಾ, ಈಜಿಪ್ಟ್ ಮತ್ತು ರಷ್ಯಾದ ಮುಸ್ಲಿಂ ಸಮುದಾಯ). ಮಾಲಿಕಿ(ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ ಮತ್ತು ಪೂರ್ವ ಅರೇಬಿಯಾ). ಶಾಫಿ(ಕುರ್ದಿಸ್ತಾನ್, ಇಂಡೋನೇಷ್ಯಾ, ಮಲೇಷ್ಯಾ, ಬ್ರೂನಿ, ಕೈರೋ, ಪೂರ್ವ ಆಫ್ರಿಕಾ, ದಕ್ಷಿಣ ಯೆಮನ್ ಮತ್ತು ಭಾರತದ ದಕ್ಷಿಣ ಭಾಗಗಳು). ಹಂಬಲಿ(ಸೌದಿ ಅರೇಬಿಯಾ). ಶಿಯಾ(ಜಾಫರಿ, ಇಸ್ಮಾಯಿಲಿ ಮತ್ತು ಜೈದಿ ಪಂಥ) ಜಾಫರಿ(ಇರಾನ್, ಅಜರ್ಬೈಜಾನ್, ಇರಾಕ್, ಲೆಬನಾನ್). ಇಸ್ಮಾಯಿಲಿ(ಮಧ್ಯ ಏಷ್ಯಾ, ಲೆವಂಟ್, ಇಂಡಿಯಾ ಮತ್ತು ಪಾಕಿಸ್ತಾನ). ಜೈದಿ(ಉತ್ತರ ಯೆಮನ್). ನಲ್ಲಿ ಕಾಣಬಹುದಾಗಿದೆ.
ಭಾರತದ ಮದ್ರಸಾಗಳು: ರಾಜಕೀಯ ಏರುಪೇರುಗಳಲ್ಲಿಯೂ ಮದ್ರಸಾಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ಅಂಶವನ್ನು ಎಂದಿಗೂ ಚರಿತ್ರೆಯಿಂದ ಅಳಿಸಲಾಗದು. ಉದಾಹರಣೆಗೆ, ೧೭೩೧ರಲ್ಲಿ, ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯದ ಹೋರಾಟದ ಯೋಜನೆಯನ್ನು ಹಜ್ರತ್ ಷಾ ವಲಿಯುಲ್ಲಾ ದೆಹಲ್ವಿ ಮತ್ತು ಷಾ ಅಬ್ದುಲ್ ಅಜೀಜ್ ಅವರಂತಹ ಮದ್ರಸಾ ಪದವೀಧರರು ಸಿದ್ಧಪಡಿಸಿದರು.
ಇಂದು ಭಾರತದ ಅತ್ಯಂತ ಪ್ರಸಿದ್ಧ ಮದ್ರಸಾ ದಾರುಲ್ ಉಲೂಮ್ ದೇವ್ ಬಂದ್ ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಗಿದೆ. ೧೯೧೩ರಲ್ಲಿ ಮಹ್ಮದ್ ಹಸನ್ ದೇವ್ಬಂದಿ ಸ್ವಾತಂತ್ರ್ಯ ಚಳುವಳಿಯಲ್ಲಿ ನಾಯಕರಾಗಿದ್ದರು. ೧೯೨೭ರಲ್ಲಿ ಮದ್ರಸಾ ಮುಖಂಡರ ಸಭೆಗಳಲ್ಲಿ ಮದ್ರಸಾ ಪದವೀಧರರು ಭಾರತದ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು. ಭಾರತವನ್ನು ವಿಭಜಿಸಲು ಹಜ್ರತ್ ಮದನಿಯವರು ನಿರಾಕರಿಸಿದರು. ಇಸ್ಲಾಂ ನಲ್ಲಿ ಸಾಮಾಜಿಕ ಅಪಶ್ರುತಿ ಅಥವಾ ಅಸ್ವಸ್ಥತೆಯನ್ನು ಸೃಷ್ಟಿಸುವುದು, ಶಾಂತಿಯ ಉಲ್ಲಂಘನೆ, ಗಲಭೆ, ರಕ್ತಪಾತ, ಲೂಟಿ ಅಥವಾ ಜಗತ್ತಿನಲ್ಲಿ ಎಲ್ಲಿಯಾದರೂ ಅಮಾಯಕರನ್ನು ಕೊಲ್ಲುವುದು – ಎಲ್ಲವನ್ನೂ ಅತ್ಯಂತ ಅಮಾನವೀಯ ಅಪರಾಧಗಳೆಂದು ಪರಿಗಣಿಸಲಾಗಿದೆ ಎಂದು ಭಯೋತ್ಪಾದನೆಯ ವಿರುದ್ಧ ಫತ್ವಾವನ್ನು ದೆಹಲಿಯಲ್ಲಿ ಸಾರ್ವಜನಿಕ ಪಥಸಂಚಲನ ಮಾಡಿ ನೀಡಲಾಯಿತು. ಭಾರತಾದ್ಯಂತ ಸುಮಾರು ಆರು ಸಾವಿರ ಮದ್ರಸಾಗಳಿಂದ ಸುಮಾರು ಒಂದು ಲಕ್ಷ ಜನರು ಮತ್ತು ಎಲ್ಲಾ ಮದ್ರಸಾ ಪಂಥಗಳ ಪ್ರತಿನಿಧಿಗಳು ಭಾಗವಿಹಿಸಿದ್ದರು.
ತಬ್ಲೀಗ್ ಜಮಾತ್ ಮುಖಂಡರೆಲ್ಲ ದೇವ್ ಬಂದ್ ಮದ್ರಸಾವನ್ನು ಹಿಂಬಾಲಿಸುತ್ತಾರೆ. ಅಲ್ಲಿ ತೇರ್ಗಡೆ ಹೊಂದಿದ ಪದವೀಧರರು ತಮ್ಮ ಹೆಸರುಗಳ ಜೊತೆ ದೇವ್ಬಂದಿ ಎಂದು ಸೇರಿಸಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ದೊಡ್ಡ ಮದ್ರಸಾಗಳ ಕಡೆಗೆ ರಾಜಕೀಯದ ಕರಿ ನೆರಳು ಸಹ ಬೀಳುತ್ತಿದೆ. ಅದನ್ನು ಮತ್ತೊಂದು ದಿನ ಚರ್ಚಿಸೋಣ.
ಮತ್ತೊಂದು ಪ್ರಸಿದ್ಧ ಮದ್ರಸಾ ಎಂದರೆ ಸೂಫಿ ಸಂತ ಅಹ್ಮದ್ ರಜಾ ಖಾನ್ ರವರ ಮದ್ರಸಾ. ಅದು ಸಹ ಉತ್ತರ ಪ್ರದೇಶದ ಬರೇಲಿಯಲ್ಲಿದೆ. ಇಪ್ಪತ್ತೆರಡು ಸಾವಿರ ಪುಟಗಳ “ಫತಾವ ಎ ರಜ್ವಿಯಾ” ಎಂಬ ನ್ಯಾಯಶಾಸ್ತ್ರವನ್ನು ಬರೇಲ್ವಿ ಮದ್ರಸಾದ ಪದವೀಧರ ಹಜ್ರತ್ ಅಹ್ಮದ್ ರಜಾ ರವರು ಬರೆದಿದ್ದಾರೆ. ಇದು ಧರ್ಮ, ವ್ಯವಹಾರ, ಯುದ್ಧ, ಮದುವೆ, ದೈನಂದಿನ ಸಮಸ್ಯೆಗಳಿಗೆ ಮತ್ತು ಅನೇಕ ಜಟಿಲ ವಿಷಯಗಳಿಗೆ ನ್ಯಾಯಸಮ್ಮತ ಪರಿಹಾರವನ್ನೊಳಗೊಂಡಿದೆ. ಪ್ರಪಂಚದಲ್ಲಿ ಅವರಿಂದ ಸುಮಾರು ಇನ್ನೂರು ಮಿಲಿಯನ್ ಜನರು ಪ್ರೇರಿತರಾಗಿದ್ದರೆ. ಸುನ್ನಿ ಜಮಾತ್ ಮದ್ರಸಾಗಳೆಲ್ಲ ಬರೇಲಿ ಮದ್ರಸಾವನ್ನು ಹಿಂಬಾಲಿಸುತ್ತಾರೆ. ಹಜ್ರತ್ ಅಹ್ಮದ್ ರಜಾರವರ ಹೆಸರಲ್ಲಿ ಭಾರತ ಸರ್ಕಾರ ಅಂಚೆ ಚೀಟಿ ಸಹ ಬಿಡುಗಡೆ ಮಾಡಿದೆ.
ನದ್ವತುಲ್ ಉಲೆಮಾ ಮದ್ರಸಾದ ಹಜ್ರತ್ ಹಸನ್ ಅಲಿ ನದ್ವಿಯವರ ಸೇವೆಯನ್ನು ಯಾರೂ ಮರೆಯುವಂತಿಲ್ಲ. ಸಾಮೂಹಿಕವಾಗಿ ಮಾನವೀಯತೆಗಾಗಿ ಕೆಲಸ ಮಾಡುವುದನ್ನು ಒತ್ತಿ ಹೇಳಿದರು.
ಅಹ್ಲೇಹದೀಸ್ ಪಂಥ ಸಲಫಿ ವಹಾಬಿ ಮದ್ರಸಾಗಳನ್ನು ಮತ್ತು ಅದರ ವಿದ್ವಾಂಸರನ್ನು ಹಿಂಬಾಲಿಸುತ್ತಾರೆ. ಪ್ರಸಿದ್ಧ ವಿದ್ವಾಂಸ ಡಾ. ಜಾಕಿರ್ ನಾಯಕ್ ಈ ಪಂಗಡಕ್ಕೆ ಸೇರಿದವರು. ಇವರ ಶಾಲೆಗಳು ಸಾಮಾನ್ಯ ಶಾಲೆಗಳಂತೆ ನಡೆಯುತ್ತವೆ. ಮದ್ರಸಾಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಶಾಲಾಪಠ್ಯಕ್ರಮದ ಜೊತೆಯೇ ಅವರು ಧಾರ್ಮಿಕ ಪಠ್ಯಕ್ರಮವನ್ನು ಸಹ ಬೋಧಿಸುತ್ತಾರೆ.
ಜಮಾತೆ ಇಸ್ಲಾಮಿ ಪಂಗಡದವರು ಹಜ್ರತ್ ಅಬುಲ್ ಅಲಾ ಮೌದೂದಿಯವರನ್ನು ಹಿಂಬಾಲಿಸುತ್ತಾರೆ.
ಬೆಂಗಳೂರಿನ ಪ್ರಸಿದ್ಧ ಮದ್ರಸಾ ದಾರುಲ್ ಉಲೂಮ್ ಸಬೀಲುರ್ರಶಾದ್ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಈ ಮದ್ರಸಾ ದಾರುಲ್ ಖಜಾ ಮತ್ತು ದಾರುಲ್ ಇಫ್ತಾಹ್ (ನ್ಯಾಯಾಲಯ) ಸಹ ನಡೆಸುತ್ತಿದೆ. ಇಂದಿನ ಕರ್ನಾಟಕ ರಾಜ್ಯದ “ಅಮೀರ್ ಎ ಶರಿಯತ್” (ಇಡೀ ರಾಜ್ಯಕ್ಕೆ ಧಾರ್ಮಿಕ ಮುಖಂಡ) ಈ ಮದ್ರಸಾದೊಂದಿಗೆ ಗುರುತಿಸಿಕೊಳ್ಳುವವರಾಗಿರುತ್ತಾರೆ. ಬೆಂಗಳೂರಿನಲ್ಲಿ “ಹಿಲಾಲ್ ಕಮಿಟಿ” ಸಹ ಇದೆ. ಎಲ್ಲಾ ಪಂಥದವರು ಇದರ ಸದಸ್ಯರಾಗಿರುತ್ತಾರೆ. ಈ ಕಮಿಟಿ ಚಂದ್ರಮಾನ ತಾರೀಖುಗಳನ್ನು ವೀಕ್ಷಿಸುವ ಜವಾಬ್ದಾರಿ ನಿಭಾಯಿಸುತ್ತದೆ. ರಂಜಾನ್ ತಿಂಗಳ ಉಪವಾಸ ಚಂದ್ರನನ್ನು ನೋಡಿ ಪ್ರಾರಂಭಿಸುವುದುಂಟು. ಎಂದಿನಿಂದ ಉಪವಾಸ ಪ್ರಾರಂಭಿಸಬೇಕು ಮತ್ತು ಮುಕ್ತಗೊಳಿಸಬೇಕು ಎಂದು ಇಡೀ ರಾಜ್ಯಕ್ಕೆ ಸಂದೇಶವನ್ನು ರವಾನಿಸುವ ಜವಾಬ್ದಾರಿ ಈ ಮಂಡಳಿಯ ಹೆಗಲ ಮೇಲಿದೆ.
ಕರ್ನಾಟಕದಲ್ಲಿ ಮದ್ರಸಾಗಳ ಇತಿಹಾಸ ಬಹಳ ಪ್ರಾಚೀನವಾದುದು. ಬೀದರ್ ನಲ್ಲಿ ಮಹಮ್ಮದ್ ಗವಾನ್ ನಿರ್ಮಿಸಿದ ಮದ್ರಸಾದ ಕಟ್ಟಡ ಇನ್ನೂ ಇತಿಹಾಸ ಸಾರುತ್ತಿದೆ. ಬಹಮನಿ ಸುಲ್ತಾನರ ಅಡಿಯಲ್ಲಿ ೧೪೬೦ರ ದಶಕದಲ್ಲಿ ಇದನ್ನು ನಿರ್ಮಿಸಲಾಯಿತು. ಊಟ ಮತ್ತು ವಸತಿಯ ವ್ಯವಸ್ಥೆ ಇತ್ತು. ಮದ್ರಸಾದಲ್ಲಿ ಸುಮಾರು ಮೂರು ಸಾವಿರ ಜ್ಞಾನಭರಿತ ಪುಸ್ತಕಗಳಿದ್ದವು. ಬೀದರನ್ನು ವಿದ್ಯಾಕೇಂದ್ರವನ್ನಾಗಿ ಮಾಡುವುದು ಗವಾನನ ಕನಸಾಗಿತ್ತು. ಇಂದು ಆ ಮದ್ರಸಾದ ಕಟ್ಟಡ ಪಾಳುಬಿದ್ದಿದೆ.
ಸಣ್ಣಪುಟ್ಟ ಮದ್ರಸಾಗಳಿಗೆ ದೇಶದಲ್ಲಿ ಬರ ಇಲ್ಲ. ಅದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. ಕೆಲವರು ಮದ್ರಸಾ ನಡೆಸುತ್ತಿದ್ದೇವೆ ಎಂದು ಜನರ ಬಳಿ ದೇಣಿಗೆಯನ್ನು ಕೇಳಿ ಪಡೆಯುತ್ತಾರೆ. ಆದರೆ ಮದ್ರಸಾ ಮಕ್ಕಳಿಗೆ ಅದರ ಲಾಭ ಸಿಗುತ್ತಿಲ್ಲ. ಸರಿಯಾದ ಊಟದ ವ್ಯವಸ್ಥೆ ಇಲ್ಲ, ವಿದ್ಯೆ ಸರಿಯಾಗಿ ಸಿಗುತ್ತಿಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಮಕ್ಕಳು ಬೆಳೆದು ಹಿರಿಯರಾದರೆ ಅವರು ದಿಕ್ಕು ತೋಚದ ಪ್ರಾಣಿಗಳಾಗಿ ಹೋಗುತ್ತಾರೆ. ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಾರೆ. ಅವರ ಮುಂದಿನ ಜೀವನದ ಗತಿ ಏನು? ಸರಿಯಾದ ಮಾರ್ಗದರ್ಶನವೇ ಇಲ್ಲ. ಬುದ್ಧಿವಂತರ, ಧಾರ್ಮಿಕ ಮುಖಂಡರ ವರ್ಗ ಇತ್ತ ನಿಗಾ ವಹಿಸಬೇಕಾಗಿದೆ. ಮದ್ರಸಾ ಮಕ್ಕಳ ಸರ್ವತೋನ್ಮುಖ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ.
ಅದನ್ನೇ ಮುನವರ್ ಜಮಾ ಮಾಡಲು ಪ್ರಯತ್ನಿಸುತ್ತಿರುವುದು. ಶ್ರೀಮಂತ ವರ್ಗ ಅಂಥವರಿಗೆ ಬೆಂಬಲಿಸಿದರೆ ಅವರು ಮದ್ರಸಾ ವಿದ್ಯಾರ್ಥಿಗಳ ಭವಿಷ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು. ಮದ್ರಸಾಗಳಲ್ಲಿ ಏನು ಕಲಿಸುತ್ತಾರೆ ಪ್ರಪಂಚಕ್ಕೆ ಗೊತ್ತಾಗಬೇಕು. ನಾಲ್ಕು ಗೋಡೆಗಳ ಮಧ್ಯೆ ಜ್ಞಾನಭಂಡಾರವನ್ನು ಇಟ್ಟುಕೊಂಡರೆ ಅದರಿಂದ ಏನು ಲಾಭ ? ವಿದ್ಯೆಯನ್ನು ಕಲಿಯಲು ಚೀನಾ ದೇಶಕ್ಕೆ ಹೋಗಬೇಕಾದರೂ ಹೋಗಿ ಎಂದು ಪ್ರವಾದಿವರ್ಯರು ಹೇಳಲಿಲ್ಲವೇ. ಆ ಕಾಲದಲ್ಲಿ ಅರಬ್ ದೇಶ ಎಲ್ಲಿ, ಚೀನಾ ಎಲ್ಲಿ…! ತಾತ್ಪರ್ಯ ಏನೆಂದರೆ ಸಾವಿರಾರು ಮೈಲಿಗಳು ಹೋಗಬೇಕಾದರೂ ಪರವಾಗಿಲ್ಲ ವಿದ್ಯೆ ಕಲಿಯಿರಿ ಎಂದಲ್ಲವೇ. ಪ್ರವಾದಿವರ್ಯರು ವಿದ್ಯೆಗೆ ಎಷ್ಟು ಮಹತ್ವ ನೀಡಿದರು ಎಂದು ಯೋಚಿಸಬೇಕಾಗುತ್ತದೆ. ಅರಬ್ಬಿ ಭಾಷೆ ಬಿಟ್ಟು ಬೇರೆ ಭಾಷೆ ಕಲಿಯಬಾರದು ಎಂದು ಹೇಳಲಿಲ್ಲ. ಅಲ್ಲವೇ ? ಪ್ರವಾದಿವರ್ಯರು ಕೆಲ ಸಹಚರರಿಗೆ ಹೀಬ್ರೂ ಭಾಷೆ ಕಲಿಯಲು ಹೇಳಿದರು.
ಏಕೆಂದರೆ ಅಂದು ಅದರ ಅವಶ್ಯಕತೆ ಇತ್ತು. ತಾವು ಇರುವ ರಾಜ್ಯದ, ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪೇನಿದೆ. ನಿಮ್ಮ ಜ್ಞಾನಭಂಡಾರವನ್ನು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬಿಚ್ಚಿಡಿ. ಕೆಲವು ಬಿಕಾವ್ ಮೀಡಿಯಾಗಳು ಮದ್ರಸಾ ವಿದ್ಯಾರ್ಥಿಗಳನ್ನು ಭಯೋದ್ಪಾದಕರು ಎಂಬಂತೆ ಬಿಂಬಿಸುತ್ತಿದ್ದಾರೆ. ಅದಕ್ಕೆ ಪ್ರತಿ ಉತ್ತರ ನೀಡಿ. ಪ್ರತಿ ಜಾತಿಯಲ್ಲಿ ಧರ್ಮದಲ್ಲಿ ಒಳ್ಳೆಯ ಮತ್ತು ಕೆಟ್ಟ ಜನರು ಇದ್ದೇ ಇರುತ್ತಾರೆ. ಎಲ್ಲರಿಗೂ ಒಂದೇ ರೀತಿಯ ಹಣೆಪಟ್ಟಿ ಕಟ್ಟುವುದು ತಪ್ಪಾಗುತ್ತದೆ. ಮದ್ರಸಾಗಳು, ಮಠಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇನ್ನಿತರೆ ಧಾರ್ಮಿಕ ಸಂಸ್ಥೆಗಳು ತಮ್ಮ ಧಾರ್ಮಿಕ ಜ್ಞಾನವನ್ನು ಜನರ ಮುಂದೆ ಜನರ ಭಾಷೆಯಲ್ಲಿ ಬಿಚ್ಚಿಡಬೇಕು. ಆಗಲೇ ಜನರಲ್ಲಿ ಧರ್ಮಗಳ ಬಗ್ಗೆ ಹುಟ್ಟುತ್ತಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಸಾಧ್ಯ. ವಿಶ್ವಶಾಂತಿಯನ್ನು ಕಾಪಾಡಿಕೊಳ್ಳುವುದು ಎಲ್ಲಾ ಜಾತಿಯ ಧರ್ಮಗುರುಗಳ ಕರ್ತವ್ಯ ಮತ್ತು ಜವಾಬ್ದಾರಿ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.