(www.vknews.in) : ಇತ್ತೀಚೆಗೆ ಲಿಂಗ ಪರಿವರ್ತನೆ ಹೆಚ್ಚಾಗಿರುವ ಕುರಿತು ಬೆಚ್ಚಿಬೀಳುವ ಸುದ್ದಿಗಳು ಕೇಳಿಬರುತ್ತಿದೆ. ಅದರಲ್ಲೂ ಮಂಗಳೂರಿನದ್ದೆಂದು ಹೇಳುವ ಕೆಲವೊಂದು ಪ್ರಕರಣಗಳು ಕೂಡ ವಾಟ್ಸಪ್ ಗಳಲ್ಲಿ ಸದ್ದು ಮಾಡುತ್ತಿದೆ. ಕರಾವಳಿಯ ಹುಡುಗರು ನಾಪತ್ತೆಯಾಗುತ್ತಿದ್ದು, ಕೆಲವೇ ದಿನಗಳೊಳಗೆ ಲಿಂಗ ಪರಿವರ್ತನೆಗೊಳಿಸಿದ ವಿಚಾರ ಬೆಳಕಿಗೆ ಬರುತ್ತಿದೆ ಎಂಬ ಆತಂಕವನ್ನೂ ಮುಂದಿಡುತ್ತಿದ್ದಾರೆ. ಇಂತಹ ಪ್ರಕರಣಗಳ ಹಿನ್ನೆಲೆ ಕಥೆಗಳನ್ನು ಕೇಳುವಾಗ ಹೆಚ್ಚಿನವುಗಳು ಅವರ ಸ್ವಯಂ ಇಚ್ಛಾಶಕ್ತಿಯಿಂದಲ್ಲ; ಯಾರದೋ ಒತ್ತಡ ಅಥವಾ ಆಮಿಷಕ್ಕೊಳಗಾಗಿ ಈ ಸಾಹಸಕ್ಕೆ ಹೊರಟವರು ಅನಿಸುತ್ತಿದೆ. ಇದರ ಹಿಂದೆ ದೊಡ್ಡದೊಂದು ಜಾಲ ಕ್ರಿಯಾಶೀಲವಾಗಿದೆ ಅಂತ ಹೇಳಲಾಗುತ್ತಿದೆ. ಏನಿದರ ಸತ್ಯಾಂಶ?
ಸ್ವಂತ ಇಚ್ಛೆಯಿಂದ ಒಬ್ಬ/ಒಬ್ಬಳು ಲಿಂಗ ಪರಿವರ್ತನೆ ಮಾಡಿಸಿಕೊಂಡರೆ ಅದು ತಪ್ಪೆಂದು ವಾದಿಸಲಾಗುವುದಿಲ್ಲ. ಒಬ್ಬ ಹುಡುಗನಲ್ಲಿ ಹೆಣ್ತನವಿದ್ದು, ಆತ ಹೆಣ್ಣಿನಂತೆ ಬದುಕಲು ಇಷ್ಟಪಡುವುದಾದರೆ ಅಥವಾ ಒಬ್ಬಾಕೆಗೆ ಗಂಡಾಗಿ ಬದುಕುವ ಇಚ್ಛೆಯಿದ್ದಲ್ಲಿ ಅವರು ಲಿಂಗ ಪರಿವರ್ತನೆಯ ಕಡೆ ಚಲಿಸುವುದನ್ನು ತಡೆಯಲಾಗದು. ಯಾಕೆಂದರೆ ತಾನು ಯಾವ ರೀತಿಯಲ್ಲಿ ಬದುಕಬೇಕು ಎಂದು ತೀರ್ಮಾನಿಸುವಲ್ಲಿ ಅವರು ಸಂಪೂರ್ಣ ಸ್ವತಂತ್ರರಾಗಿರುತ್ತಾರೆ ಮಾತ್ರವಲ್ಲ ಕಾನೂನು ಕೂಡ ಇದಕ್ಕೆ ಪೂರಕವಾಗಿ ಸಮ್ಮತಿಯನ್ನೂ ನೀಡಿದೆ. ಇನ್ನು ಧಾರ್ಮಿಕವಾಗಿ (ಯಾವುದೆದ ಧರ್ಮವಿರಲಿ) ಈ ಕುರಿತುಳ್ಳ ಅಭಿಪ್ರಾಯಗಳೇನು ಅನ್ನೋದು ತಿಳಿದಿಲ್ಲ. ಅದಾಗ್ಯೂ ಲಿಂಗ ಪರಿವರ್ತನೆಯ ಮೂಲಕ ಗಂಡು ಹೆಣ್ಣಾಗಿ ಬದಲಾಗಿ/ಹೆಣ್ಣು ಗಂಡಾಗಿ ಬದಲಾಗುವದನ್ನು ತಪ್ಪೆನ್ನಲಾಗದು. ತನ್ನ ಶರೀರ ರಚನೆಗೆ ವ್ಯತಿರಿಕ್ತವಾದ ಹಾರ್ಮೋನುಗಳು ದೇಹದೊಳಗಿದ್ದು ಕಾರ್ಯಾಚರಿಸುವ ಕಾರಣಕ್ಕಾಗಿ ಅವರ ಚಲನವಲನದಲ್ಲಿ ಭಿನ್ನವಾಗಿರುತ್ತದೆಯೆನ್ನುವುದು ವೈಜ್ಞಾನಿಕ ಕಾರಣದ ಸಂಕ್ಷಿಪ್ತ ರೂಪ. ಹಾಗಿರುವಾಗ ಹೆಣ್ತನವಿರುವ ಗಂಡಿಗೂ, ಗಂಡಸ್ತನವಿರುವ ಹೆಣ್ಣಿಗೂ ಅದೇ ಪಾಟಿಯಲ್ಲಿ ಬದುಕುವುದು ಕಷ್ಟವೆನಿಸಿಕೊಂಡಾಗ ಅನಿವಾರ್ಯವಾಗಿ ತಮಗೆ ಅನುಕೂಲವಾದ ಲಿಂಗಕ್ಕೆ ಕೃತಕವಾಗಿ ಮಾರ್ಪಾಡುಗೊಳ್ಳುತ್ತಾರೆ.
ಇಲ್ಲಿ ಸಮಸ್ಯೆಯಿರುವುದು ಸಮಾಜ ಅಂತವರನ್ನು ನಡೆಸಿಕೊಳ್ಳುವ ರೀತಿಯಲ್ಲಿ. ಲಿಂಗ ಬದಲಾವಣೆಯ ಮೂಲಕ ಮಂಗಳಮುಖಿಯರೆನಿಸಕೊಂಡವರನ್ನು ನಾವು ನೋಡುವ ದೃಷ್ಟಿಕೋನ ಅವರು ತೃತೀಯ ದರ್ಜೆಯೆಂದು ದೂರಕ್ಕೆ ತಳ್ಳಲ್ಪಡುತ್ತಾರೆ. ಅಪಹಾಸ್ಯ, ಮೂದಲಿಕೆ, ಅವಮಾನಗಳಿಗೆ ಗುರಿಯಾಗಬೇಕಾಗುತ್ತದೆ. ಸಮಾಜದಲ್ಲಿ ಎಲ್ಲರಂತೆ ಸ್ವತಂತ್ರವಾಗಿ ಬದುಕಲಾಗದೇ ಒದ್ದಾಡುತ್ತಾರೆ. ಹೋರಾಡುತ್ತಾರೆ. ಸ್ವಲ್ಪ ಹಿಂದಕ್ಕೆ ಹೋದರೆ ಇವತ್ತಿಗಿಂತಲೂ ನೀಚವಾಗಿ ಅವರನ್ನು ಸಮಾಜ ಗುರುತಿಸುತ್ತಿತ್ತು. ಅವರೊಳಗಿನ ಹಾರ್ಮೋನುಗಳ ರಚನೆ ಆ ಪರಸ್ಥಿತಿಗೆ ತಂದೊಡ್ಡಿದೆಯೆನ್ನುವ ವೈಜ್ಞಾನಿಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದೇ ಅವರದೇನೋ ತಪ್ಪೆನ್ನುವ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದೆವು. ಈಗ ಒಂದಷ್ಟು ಬದಲಾಗಿದೆ ಅನ್ನೋಣವಾದರೂ ಸಂಪೂರ್ಣವಾಗಿ ಮಂಗಳಮುಖಿಯರನ್ನು ಸ್ವೀಕರಿಸುವಲ್ಲಿ ಪ್ರಬುದ್ಧರಾಗಿಲ್ಲವೆನ್ನುವುದು ಸತ್ಯ.
ಈ ಲಿಂಗ ಪರಿವರ್ತನೆ ಮಾಡಿಕೊಂಡ ಸಮೂಹ ಕೇವಲ ಭಿಕ್ಷಾಟನೆ ಮತ್ತು ಲೈಂಗಿಕ ಚಟುವಟಿಕೆಗೆ ಮಾತ್ರ ಸೀಮಿತವಾದವರು ಎಂಬ ಸಂಕಲ್ಪದಿಂದ ನಾವು ಹೊರಬರಬೇಕು. ಅವರಿಗೂ ನಮ್ಮಂತೇ ತಲೆಯೆತ್ತಿ ನಡೆಯುವ ಅಧಿಕಾರವಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ನಿರಾಳತೆಯನ್ನೀಯುವ ಸಂಗತಿಯೆಂದರೆ, ಈಗ ಅವರ ಪೈಕಿ ಬಹುತೇಕರು ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶನಕ್ಕಿಡುತ್ತಿದ್ದಾರೆನ್ನುವುದು. ಸರ್ಕಾರಿ ಹುದ್ದೆಗಳಲ್ಲಿ, ಕೆಲವು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸ್ಥಾಪಿಸಿಕೊಂಡವರಿದ್ದಾರೆ. ಸ್ವ ಉದ್ಯಮದಲ್ಲಿ ಯಶಸ್ಸು ಕಾಣುವವರಿದ್ದಾರೆ. ಸಿನೆಮಾ ಇಂಡಸ್ಟ್ರಿ ಗಳಲ್ಲೂ ತಮ್ಮ ಕೈಯಚ್ಚು ಅಂಟಿಸಿಕೊಂಡಿದ್ದಾರೆ. ಸೆಕ್ಸ್ ಮತ್ತು ಭಿಕ್ಷೆಯೆಂಬ ಎರಡು ಅಸಹ್ಯಗಳಿಂದ ಹೊರಬಂದು ಹಲವು ಸವಾಲುಗಳನ್ನು ಎದುರಿಸುತ್ತಾ ನಮ್ಮ ನಡುವೆ ಸಾಮಾನ್ಯರಂತಹ ಬದುಕನ್ನು ಪಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆಯಾದರೂ ಇನ್ನಷ್ಟು ಮುನ್ನೆಲೆಗೆ ಬರಲೇಬೇಕಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕಾದವರು ನಾನು ಮತ್ತು ನೀವು.
ಮೊನ್ನೆಯಿಂದ ವಾಟ್ಸಪ್ ಆಳುತ್ತಿರುವ ಮಂಗಳೂರಿನ ಹುಡುಗನೊಬ್ಬ ಲಿಂಗ ಪರಿವರ್ತನೆ ಮಾಡಿಕೊಂಡ ಫೋಟೋ ಜೊತೆಗೆ ಒಂದು ದೂರವಾಣಿ ಸಂಭಾಷಣೆಯನ್ನೊಳಗೊಂಡ 15 ನಿಮಿಷದ ಆಡಿಯೋ ಕೇಳಲ್ಪಟ್ಟೆ. ಆ ಹುಡುಗನ ಪರಿಸ್ಥಿತಿ ಯೋಚಿಸಿ ದುಃಖಿಸುತ್ತಿರುವ ತಾಯಿಯ ಕುರಿತೂ ಅದರಲ್ಲಿ ವಿವರಿಸಲಾಗಿತ್ತು. ಆ ಹುಡುಗ ತನ್ನಿಚ್ಛೆಯಂತೆ ಲಿಂಗ ಪರಿವರ್ತನೆಗೆ ಹೊರಟಿದ್ದಾನೆಂದು ಹೇಳಿಕೊಂಡಿದ್ದರೂ ಕೂಡ ನನಗೆ ಅನುಮಾನವಿದೆ. ಯಾಕೆಂದರೆ, ಎಲ್ಲಾ ಕಡೆ ಇರುವಂತೆ ಇಲ್ಲಿ ಕೂಡ ಒಂದು ಮಾಫಿಯಾ ಕಾರ್ಯಪ್ರವೃತ್ತವಾಗಿದೆ. ಸಣ್ಣಮಟ್ಟಿನಲ್ಲಿ ಹೆಣ್ತನದ ಒಲವಿರುವ ಹುಡುಗರನ್ನು ಪತ್ತೆ ಹಚ್ಚಿ ಅವರನ್ನು ಮಾನಸಿಕವಾಗಿ ಉತ್ತೇಜಿಸಿ ಅಥವಾ ಆಮಿಷವೊಡ್ಡಿ ಅಥವಾ ಒತ್ತಾಯಪೂರ್ವಕವಾಗಿ ಲಿಂಗ ಪರಿವರ್ತನೆಗೆ ತಳ್ಳುತ್ತಾರೆ. ಆ ಮೂಲಕ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚದಲ್ಲಿ ಕಮಿಷನ್ ಪಡೆಯಲು ದಲ್ಲಾಳಿಗಳಿರುತ್ತಾರೆ. ಹಾಗೆಯೇ ಶಸ್ತ್ರಚಿಕಿತ್ಸೆ ಮುಗಿಸಿ ಲಿಂಗ ಪರಿವರ್ತನೆ ಯಶಸ್ವಿಗೊಂಡ ಬಳಿಕ ಅವರನ್ನು ಬಲವಂತವಾಗಿ ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಗೆ ಕಳುಹಿಸಿ ಅದರಿಂದಲೂ ಕಮಿಷನ್ ಬಾಚಿಕೊಳ್ಳುವ ದೊಡ್ಡ ಜಾಲವೊಂದು ತೆರೆಮರೆಯಲ್ಲಿದೆ. ಹೇಗೆ ಹೆಣ್ಣುಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿ ಅದರಿಂದ ಹಣ ಸಂಪಾದನೆ ಮಾಡುವ ದುರುಳರಿದ್ದಾರೋ ಅದೇ ರೀತಿ.
ಮಂಗಳೂರು ಮೂಲವಾಗಿ ಈಗ ಹಲವು ಹುಡುಗರ ನಾಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಪೈಕಿ ಕೆಲವರು ಲಿಂಗ ಪರಿವರ್ತನೆ ಮಾಡಿರುವ ವಿಚಾರ ಕೂಡ ತಡವಾಗಿ ಕೇಳಿಬರುತ್ತಿದೆ. ಮೊದಲೇ ನಾನು ಹೇಳಿರುವಂತೆ ಸ್ವ ಇಚ್ಛೆಯನುಸಾರ ಈ ಸಾಹಸಕ್ಕೆ ಧುಮುಕುವವರಿಗೆ ಸಂಪೂರ್ಣ ಸಹಕಾರ ನೀಡುತ್ತಲೇ, ಯಾರದೋ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ, ಬಲವಂತವಾಗಿ ಆ ಕಡೆ ನಮ್ಮ ನಡುವಿನ ಹುಡುಗ/ಹುಡುಗಿಯರನ್ನು ದೂಡಲ್ಪಡುವ ವಿಷಯವಾಗಿ ನಾವು ಜಾಗೃತಗೊಳ್ಳುವುದು ಕೂಡ ತುರ್ತು ಅಗತ್ಯ.
ಇದಕ್ಕಾಗಿ ನಾವು ಲಿಂಗ ಪರಿವರ್ತನೆಯ ಸಾಧಕ-ಬಾಧಕಗಳು, ಅದರಿಂದ ಉಂಟಾಗುವ ಸಮಸ್ಯೆಗಳು, ಎದುರಿಸಲೇಬೇಕಾಗುವ ಸವಾಲುಗಳು, ಎದುರಿಸುವ ರೀತಿ, ಸಿಗಬೇಕಾದ ಸವಲತ್ತುಗಳು, ಸಿಗದೇ ಹೋಗುವ ಅವಕಾಶಗಳು, ಮಾನಸಿಕ ಸಂಘರ್ಷಗಳು, ಧಾರ್ಮಿಕ ನಿಲುವುಗಳು, ಕಾನೂನು ಸಲಹೆಗಳು, ಸಮಾಜ ಅವರನ್ನು ಸ್ವೀಕರಿಸಬೇಕಾದ ಸರಿಯಾದ ರೀತಿ, ಆರೋಗ್ಯ ಸಮಸ್ಯೆಗಳು, ಶಸ್ತ್ರಚಿಕಿತ್ಸೆಯ ವಿಧಾನಗಳು… ಹೀಗೆ ಈ ಕುರಿತು ಸಂಬಂಧಪಟ್ಟ ಎಲ್ಲಾ ವಿಚಾರಗಳಲ್ಲೂ ಚರ್ಚೆ ಮುನ್ನೆಲೆಗೆ ಬರಬೇಕಿದೆ. ಜನರ ನಡುವೆ ಇವರ ಕುರಿತಾಗಿರುವ ಕೀಳರಿಮೆ ತೊಲಗುವುದರೊಂದಿಗೆ, ಒತ್ತಾಯಪೂರ್ವಕವಾಗಿ ಬಲೆಯಲ್ಲಿ ಬೀಳುವ ಮೂಲಕ ಉಂಟಾಗುವ ಅನಾಹುತಗಳ ಬಗ್ಗೆಯೂ ಎಚ್ಚರಿಕೆ ಮನವರಿಕೆಯಾಗುವ ಪ್ರಯತ್ನ ನಡೆಯಬೇಕು.
– ಹಕೀಂ ಪದಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.