(www.vknews.in) ; ಭಾರತೀಯ ಸಂಸ್ಕೃತಿಕ ಕೇಂದ್ರದ ನೂತನ ಆಡಳಿತ ಸಮಿತಿಯ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸಾವಿರಾರು ಸದಸ್ಯರು ತಮ್ಮ ಮತವನ್ನು ಅಂತರ್ಜಾಲದ ಮುಖೇನ “ಡಿಜಿಪೋಲ್“ ತಂತ್ರಾಂಶದ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಚುನಾವಣೆಯಲ್ಲಿ ಕರ್ನಾಟಕದ ಬೈಂದೂರು ಮೂಲದ ಸುಬ್ರಮಣ್ಯ ಹೆಬ್ಬಾಗಿಲು ಅವರು ಸ್ಪರ್ಧಿಸಿದ್ದರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಡಿಯಲ್ಲಿ ನೊಂದಾಯಿಸಿಕೊಂಡಿರುವ ಸಂಘಗಳ ಪರವಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶ್ರೀ ಸುಬ್ರಹ್ಮಣ್ಯ ಅವರು ಜನರ ಸೇವೆಗೆ ಹೆಸರುವಾಸಿಯಾಗಿ ಈ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.
ಒಂದುವರೆ ದಶಕದಿಂದ ಕತಾರಿನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಶ್ರೀ ಸುಬ್ರಮಣ್ಯ ಅವರು ಕಳೆದ ಒಂದು ದಶಕದಿಂದ ತಮ್ಮನ್ನು ತಾವು ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕರೋನಾ ಮಹಾಮಾರಿ ತಾಂಡವದ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದಾರೆ.
ಇತರ ಕಾಲದಲ್ಲಿ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಆಯೋಜಿಸುವುದಕ್ಕೆ ಕಾರಣಕರ್ತರಾಗಿರುವುದು ಇವರ ಬಹುಮುಖ್ಯ ಪ್ರತಿಭೆಯ ಕೆಲವು ತುಣುಕುಗಳು. ಒಂದು ವಿಶೇಷ ಸೇವಾ ಗುಣವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಿದೆ. ವಿವಿಧ ಕಾರಣಗಳಿಂದ ದೈವಾಧೀನರಾದ ಭಾರತೀಯರ ಪಾರ್ಥಿವ ಶರೀರವನ್ನು ಕತ್ತರಿನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಶ್ರೀಯುತರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ನೂರಾರು ಇಂತಹ ವೈಕುಂಠ ಸೇವಾ ಕೈಂಕರ್ಯವನ್ನು ನೆರವೇರಿಸಿದ್ದಾರೆ.
ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ದೂತಾವಾಸದ ಅಧಿಕಾರಿಗಳು ಹಾಗೂ ಘನವೆತ್ತ ರಾಯಭಾರಿಗಳು ಇವರ ಸೇವೆಗೆ ಇವರನ್ನು ಮನಃ ಪೂರ್ವಕವಾಗಿ ಅಭಿನಂದಿಸಿದ್ದಾರೆ. ಘನವೆತ್ತ ರಾಯಭಾರಿಗಳಾದ ಶ್ರೀ ದೀಪಕ್ ಮಿತ್ತಲ್ ಅವರು ಹಾಗೂ ನಿಕಟ ಪೂರ್ವ ರಾಯಭಾರಿಗಳಾಗಿದ್ದ ಶ್ರೀ ಕುಮರನ್ ಅವರುಗಳು ಶ್ರೀ ಸುಬ್ರಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.