(www.vknews.in) ; ೨೭೦೦ ವರ್ಷಕ್ಕೂ ಪುರಾತನ ದೊಡ್ಡಸಂಪಿಗೆ ಮರ,ಜಮದಗ್ನಿಯ ತಪ,೧೦೦೧ ಲಿಂಗಗಳು, ಹರಿಯುವ _ಭಾರ್ಗವ ನದಿ_ ‘ದೊಡ್ಡ ಸಂಪಿಗೆ ಹಳ್ಳ'(ಕರ್ನಾಟಕದ ಏಕೈಕ ಗಂಡು ನದಿ? ) ಸೋಲಿಗರ ಸಂಕ್ರಾತಿ, ರೊಟ್ಟಿ ಹಬ್ಬ, ಶಿವರಾತ್ರಿಯ ಹಬ್ಬ ಗೊರುಕನ ಮೊದಲ ಸ್ತುತಿ, ನಾಗರಿಕತೆಯ ಪೂರ್ವದ ರಹಸ್ಯ ಪ್ರೇಮ ನಿವೇದನ ತಾಣದ ಸುತ್ತ!!!….”
“`ಕಾಡು“` ಪ್ರಕೃತಿ ಹಾಗೂ ಸಕಲ ಜೀವರಾಶಿಗಳ ಅಸ್ಮಿತೆ. ಪ್ರಸಕ್ತ ದಿನಮಾನಗಳಲ್ಲಿ ನಾಡು ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿದೆ ಅತಿಯಾದ ಆಧುನೀಕತೆಯ ಪ್ರಭಾವದಿಂದ ಕೃತಕ ಬದುಕಿಗೆ ಆಕರ್ಷಣೆಗೊಳ್ಳುವ ಮನುಷ್ಯ ಸೋಮಾರಿತನದ ಬದುಕಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಾನೆ ಒಂದರ್ಥದಲ್ಲಿ ಹೇಳಬೇಕೆಂದರೆ ಬದುಕಿನ ರಸಿಕತೆಯನ್ನೇ ಮರೆತುಬಿಟ್ಟಿದ್ದಾನೆಂದು ಹೇಳಬಹುದು ರಸಿಕತೆಯೆಂದರೆ ಬದುಕಿನ ರಸಿಕತೆ “ಕೃತಕವಾದ ಸ್ವರ್ಗವೇ ನಿಜವಾದ ನರಕ” ಎನ್ನುವ ಹಾಗೆ ನಾವು ಕೃತಕವಾದ ಸ್ವರ್ಗದಲ್ಲಿರುವ ಭ್ರಮಾನಿರಸನರು, ಕಾಡು ನನ್ನನ್ನು ತುಂಬಾ ಕಾಡುವ ಒಂದು ಅಧ್ಭುತ ದೈವಾಂಶ ಶಕ್ತಿಯಿರುವ ತಾಣ ಕಾಡಿನಲ್ಲಿ ಜರುಗುವ ಪ್ರಕ್ರಿಯೆಗಳು ಜೀವ ಸಂಕುಲಗಳು,ಪ್ರಾಣಿ,ಪಕ್ಷಿ ಸಂಕುಲಗಳು,ಕ್ರಿಮಿ ಕೀಟಗಳು, ಸೂಕ್ಷ್ಮಾಣು ಜೀವಿಗಳು, ಸಸ್ಯ ಸಂಕುಲಗಳು ಆಹಾರ ಸರಪಳಿ ಕ್ರಿಯೆಗಳು,ವನ್ಯ ಮೃಗಗಳು ವೈವಿಧ್ಯಮಯ ಕ್ರಿಯೆಗಳು ನನ್ನನ್ನು ಇನ್ನಿಲ್ಲದಂತೆ ಕಾಡುತ್ತವೆ ಜಾತಿಯ ಸುಳಿವೇ ಇಲ್ಲದ, ಧರ್ಮ ಧರ್ಮಗಳ ಘರ್ಷಣೆಯೇ ಇಲ್ಲದ, ಮೇಲು ಕೀಳೆಂಬ ಮನೋಭಾವವೇ ಇಲ್ಲದ ತಾಣವೇ ಕಾಡು ಹಚ್ಚ ಹಸಿರಿನ ಅರಣ್ಯದಲ್ಲಿ ಚಾರಣಗೈಯ್ಯುತ್ತಿದ್ದರೆ ಸ್ವರ್ಗ ಒಂದೆರಡೆ ಗೇಣು ಎಂಬ ಚೈತನ್ಯ ನಮ್ಮಲ್ಲಿ ಒಡಮೂಡುತ್ತದೆ ಇಂತಹುದೇ ಒಂದು ಪುರಾಣ ಪುಣ್ಯ ಕಥಾ ಹಂದರವಿರುವ ಒಂದು ತಾಣ ನಮ್ಮ ಗಡಿ ಜಿಲ್ಲೆ ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟದ *ದೊಡ್ಡ ಸಂಪಿಗೆ ಮರ* ನೋಡುಗರನ್ನು ಮನಸೂರೆಗೊಳ್ಳುತ್ತದೆ.
ಅದೊಂದು ದೇವದುರ್ಗಮ ಹಾದಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸಹಾಯದಿಂದ ಮಾತ್ರ ದೊಡ್ಡ ಸಂಪಿಗೆ ಮರದ ಬಳಿ ತೆರಳಲು ಸಾಧ್ಯ ಬಹು ವರ್ಷಗಳ ಹಿಂದೆ ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಚಿಂತಕರು ಆದ ನಮ್ಮ ಭಾಗದ ಕುಂಬಾರ ವೀರಭದ್ರಪ್ಪ (ಕುಂವೀ) ಸರ್ ಶ್ರೀಧರ್! ದೊಡ್ಡ ಸಂಪಿಗೆ ಮರ ನೋಡಿದಿಯೇನೋ? ಎಂದಾಗ ನಾನು ಇಲ್ಲ ಸರ್ ಎಂದಾಗ ‘ಬಾಳ ಚೆಂದನ ಪ್ಲೇಸ್ ಪಾ ಶ್ರೀಧರ್ ಹೋಗಿ ಬಾ ಒಂದ್ಸಲ’ ಎಂದಾಗ ದೊಡ್ಡ ಸಂಪಿಗೆ ನನ್ನ ತಲೆಯಲ್ಲಿ ಆಗಾಗ ಕಾಡುತ್ತಿತ್ತು ಹೀಗೆ ಅಚಾನಕ್ಕಾಗಿ ದೊಡ್ಡ ಸಂಪಿಗೆ ಮರದೆಡೆ ತೆರಳವ ಸದಾವಕಾಶ ಒದಗಿ ಬಂದಾಗ ತಡ ಮಾಡದೆ ಬಟ್ಟೆ ಬದಲಾಯಿಸಿಕೊಂಡು ಕುತೂಹಲದ ಮೂಟೆಯನ್ನೊತ್ತು ಹೊರಟೆ ಆ ದಾರಿಯಲ್ಲಿ ನಾನು ಸುಮಾರು ಬಾರಿ ಓಡಾಡಿದ್ದೇನೆ ಆದರೆ ದೊಡ್ಡ ಸಂಪಿಗೆ ಇತ್ತಕಡೆಯೆ ಇದೆಯೆಂಬ ಖಚಿತ ಮಾಹಿತಿ ನನಗಿರಲಿಲ್ಲ ನಮ್ಮ ಪ್ರಯಾಣ ಸಾಗಿತು ನನಗೆ ಎಂತಹ ಸಂಭ್ರಮಾಶ್ಚರ್ಯವೆಂದರೆ ಆ ಪ್ರಕೃತಿಯ ಶುದ್ಧ ಗಾಳಿಯನ್ನು ಆಸ್ವಾದಿಸುವುದೇ ಒಂದು ಪರಮಾನಂದ!
ಆ ಮರದ ತೊಗಟೆಗಳೋ ನನ್ನನ್ನು ಪೂಚಂತೇ ರವರ ಕರ್ವಾಲೋ ಕಾದಂಬರಿಯನ್ನೇ ನೆನಪಿಗೆ ತರಿಸುತ್ತವೆ, ಅಲ್ಲಲ್ಲಿ ಕಾಡಿನ ಮರಗಳ ಬೇರನ್ನು ತಾಗಿಸಿಕೊಂಡು ಹರಿಯುವ ತಿಳಿ ನೀರು ಶುದ್ಧ ಆಯುರ್ವೇದದ ನಾರು ಬೇರುಗಳಿಂದ ತಯಾರುಗೊಂಡಂತೆ ಭಾಸವಾಗುತ್ತದೆ, ಜುಯ್ಹ್ ಎಂದು ಕೂಗುವ ಜೇನ್ನೊಣಗಳ ಸದ್ದು, ಮರದ ತೊಗಟೆಯಾಕವಿರುವ ಆನೆ ಸೊಳ್ಳೆಗಳು ಶರ್ಟ್ ಮೇಲಿಂದಲೇ ಚುಚ್ಚಿ ರಕ್ತ ಹೀರುತ್ತವೆ, ಕೆಸರು ಸಹಿತ ಹಾದಿ ಮರದ ನೆರಳಿನ ಮಧ್ಯ ಆಗಾಗ ಬರುವ ಹೊಂಬಿಸಿಲು ರಜತರೇಖೆಯಂತೆ ಕಾಣುತ್ತದೆ. ಕೆಂಪು ನೀರಿನ ಹೊಂಡಾದಲ್ಲಿ ಮದವೇರಿ ಮಲಗಿದ ಮಿಸ್ಟರ್ BRT ಖ್ಯಾತಿಯ ಗಜರಾಯನ ದರ್ಶನ ನಮ್ಮನ್ನು ನಿಬ್ಬೆರಗಾಗಿಸಿತು.
ಆ ಮದತುಂಬಿದ ಆನೆಯ ಮೇಲೆ ಕುಳಿತ ಹೆಸರಿಲ್ಲದ ಗುಬ್ಬಿ ಪ್ರಮುಖ ಆಕರ್ಷಣೆ ತಾಸು ಹೊತ್ತಾದರೂ ಗಜರಾಜ ನೀರಿನಿಂದ ಮೇಲೆದ್ದು ಬರಲೇ ಇಲ್ಲ ಸುಖಜೀವಿ ಎಂದು ಮುಂದೆ ಸಾಗಿದೆವು ನೂರಿನ್ನೂರು ಮೀಟರ್ ಉದ್ದದ ಕಲ್ಲಿನ ಮೆಟ್ಟಿಲಿನಿಂದ ಇಳಿಯುತ್ತಾ ಹೊರಟರೇ ಸದ್ದಿಲ್ಲದೇ ನಮ್ಮ ಪಾದದಲ್ಲಿ ಅಡಗಿದ ಲೀಚಸ್ (ಜಿಗಣೆಗಳು) ರಕ್ತಹೀನತೆ ಶುರುಹಚ್ಚಿದ್ದವು ಗಾಬರಿಗೊಂಡರು ಲೀಚಸ್ ಯಾವುದೆ ಗಾಯ ಮಾಡುವುದಿಲ್ಲ ನೋವೆ ಆಗದ ರೀತಿ ರಕ್ತಕುಡಿಯುತ್ತವೆ ಮೃದುದಾಳಿಯೇ ಎನ್ನಬಹುದು ಇದೊಂದು ರೀತಿಯ ಹೊಸ ಅನುಭವ ಹಾಗೂ ಹೊಸ ಮಾಹಿತಿ ಸಂಗ್ರಹವೆನಿಸಿತು.
ಕಲ್ಲಿನ ಮೆಟ್ಟಿಲಿನಿಂದ ಇಳಿಯುತ್ತಾ ಹೋದಂತೆ ಒಂದು ನದಿ ರೂಪದಲ್ಲಿ ಹರಿಯುವ ದೊಡ್ಡಸಂಪಿಗೆಯ ಹಳ್ಳದ ದರ್ಶನವಾಯಿತು ಅಚ್ಚರಿಯೆಂದರೆ ಈ ನದಿ ರೂಪದ ಹಳ್ಳವನ್ನ ದಾಟಿಯೇ ದೊಡ್ಡಸಂಪಿಗೆ ಮರದ ಬಳಿ ತೆರಳಬೇಕು ಅಬ್ಬಾ ತಲೆಯೆತ್ತಿ ನೋಡುವಂತಹ ನಾಗರಿಕತೆಯ ಏಳುಬೀಳುಗಳನ್ನು ಕಂಡ ಪುರಾತನ ಮರವೆನ್ನಬಹುದು “ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಜಮದಗ್ನಿ ಋಷಿಮುನಿಯು ಈ ಸಂಪಿಗೆ ಮರದ ಬಳಿ ತಪೋಗೈದರು ಹಾಗೂ ಈ ದೊಡ್ಡ ಸಂಪಿಗೆ ಸುಮಾರು ೨೭೦೦ ವರ್ಷದಷ್ಟೂ ಪುರಾತನವಾದದ್ದು ಇದರ ಸುತ್ತಲೂ ಹರಿಯುವ ನದಿಯೇ ಭಾರ್ಗವ ನದಿಯಾಗಿದೆ ಹಾಗೂ ಈ ದೊಡ್ಡ ಸಂಪಿಗೆಯ ಬಳಿ ೧೦೦೧ ಲಿಂಗಗಳಿವೆ ಹಾಗೂ ಈಗ ಮರದ ಅರ್ಧಭಾಗ ಮುರಿದು ಹೋಗಿದೆಯೆಂದು ಸ್ಥಳೀಯರು ಹೇಳುತ್ತಾರೆ,
ಕಾರಮಕ್ಕ ಕಾದಂಬರಯಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಾಗರಿಕತೆ ಬೆಳೆಯುದಕ್ಕೂ ಪೂರ್ವಲ್ಲಿ ಸುಂದರ ಯುವತಿಯರಿಗೆ ಪ್ರೀತಿಯನ್ನ ನಿವೇದಿಸಿಕೊಳ್ಳಲು ದೊಡ್ಡ ಸಂಪಿಗೆ ಮರದ ಹೂವು ತಂದಕೊಟ್ಟರೆ ಮಾತ್ರ ಪ್ರೀತಿಯನ್ನು ಅಂಗೀಕರಿಸುತ್ತಿದ್ದರಂತೆ ಈ ಮರವನ್ನು ಹತ್ತಬೇಕೆಂದರೆ ಗಟ್ಟಿ ಗುಂಡಿಗೆ ಇರುವ ಗಂಡಸಿಗೆ ಮಾತ್ರ ಸಾದ್ಯ ಎಂಬ ವಿಚಾರಗಳು ಉಲ್ಲೇಖವಿದೆ”. ಸಂಪಿಗೆ ಹೂವಿನ ವಾಸನೆಯ ಘಮಲು ಇಡೀ ಅರಣ್ಯ ದ ತುಂಬೆಲ್ಲ ಹಬ್ಬುತ್ತದೆ ಪಕ್ಕದಲ್ಲಿಯೇ ಪುಳಿಮಾವು,ನೈಟ್ ಜಾರ್ಜ್ ಗಿಡಗಳು ಇವೆ ಸಂಕ್ರಾತಿಯ ದಿನದಂದು ಸೋಲಿಗರು ಇಲ್ಲಿ ಬಹು ಸಂಭ್ರಮದಿಂದ ಆಚರಿಸುತ್ತಾರೆ ಶಿವರಾತ್ರಿಯನ್ನು ಸಹ ಪೂಜೆ ಪುನಸ್ಕಾರಗಳನ್ನು ಮಾಡಿ ಗೊರುಕನ ಹಾಡನ್ನು ಸ್ತುತಿಸಿ ಸೋಲಿಗರು ತಮ್ಮ ಸಂಸ್ಕೃತಿಯನ್ನು ಸಂಭ್ರಮಿಸುತ್ತಾರೆ.
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ ಚಾಮರಾಜನಗರ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.