(www.vknews.in) ; ಅರುವತ್ತನೆಯ ಪ್ರಾಯದಲ್ಲಿ ಸರ್ವ ಆಸ್ತಿಪಾಸ್ತಿಗಳನ್ನು ಬಿಟ್ಟು ಮರಣಕ್ಕೆ ಶರಣಾದ ರಾಕೇಶ್ ಜುನ್ಜುನ್ವಾಲ ನಾಲ್ಕು ವರ್ಷಗಳ ಹಿಂದೆ ಹೇಳಿದ ಮಾತಿದು.
ಹಣ, ಆಸ್ತಿ, ಸಂಪಾದನೆ ಎಂದುಕೊಂಡು ಜೀವನವನ್ನು ಮರೆಯುವವರಿಗೆ ಇವರೊಂದು ಪಾಠ. ಶೇರು ಮಾರುಕಟ್ಟೆಯ ರಾಜ ಎಂದು ಖ್ಯಾತಿ ಪಡೆದಿದ್ದ ರಾಕೇಶ್ ಜನ್ಜುನ್ವಾಲ ನಲ್ವತ್ತು ವರ್ಷಗಳಲ್ಲಿ ಸಂಪಾದಿಸಿದ್ದು ನಲ್ವತ್ತು ಸಾವಿರ ಕೋಟಿ ರೂಪಾಯಿಗಳ ಆಸ್ತಿ. ಹಲವಾರು ಕಂಪೆನಿಗಳ ಮಾಲಕರಾಗಿದ್ದ ಇವರು ತನ್ನದ್ದು ಪೈಲ್ಯೂರ್ ಸ್ಟೋರಿ ಅಂದಿದ್ದರು. ನನ್ನದ್ದು ಸಕ್ಸಸ್ ಸ್ಟೋರಿ ಎಂದು ನೀವು ಭಾವಿಸಬಹುದು, ಆದರೆ ಹಣ ಕೂಡಿಡುವ ವಿಷಯದಲ್ಲಿ ಮಾತ್ರ ನಾನು ಸೆಕ್ಸಸ್ ಮ್ಯಾನ್, ಬದುಕಿನಲ್ಲಿ ನಾನು ಫೈಲ್ಯೂರ್ ಎಂದವರು ನಾಲ್ಕು ವರ್ಷಗಳ ಹಿಂದೆ ಒಂದು ಅವಾರ್ಡ್ ಸಮಾರಂಭದಲ್ಲಿ ಹೇಳಿದ್ದರು. ನನ್ನ ಜೀವನವು ಸ್ಟಾಕ್, ಫುಡ್, ಲಿಕ್ಕರ್ ಹಾಗೂ ಸಿಗರೇಟು ಎಂಬೀ ನಾಲ್ಕು ಕಾರ್ಯಗಳಲ್ಲೇ ಕಳೆಯಿತು. ಕುಟುಂಬದೊಂದಿಗೆ ಸಂತೋಷದಿಂದ ಕಳೆದಿಲ್ಲ, ಬಂಧುಗಳೊಡನೆ ಬೆರೆಯಲಿಲ್ಲ, ಮಡದಿ ಮಕ್ಕಳಿಗೆ ಸಂತೋಷ ಕೊಡಲು ನನಗೆ ಟೈಮಿರಲಿಲ್ಲ ಎಂದಿದ್ದರು.
ಹಣಕ್ಕಿಂತ ಮುಖ್ಯ ಕುಟುಂಬ ಮತ್ತು ಆರೋಗ್ಯ, ನೀವು ಈಯೆರಡು ಕಾರ್ಯಗಳಿಗೆ ಪ್ರಾಧಾನ್ಯ ಕೊಡಿ ಎಂದಿದ್ದರು. ಹಣ, ಹಣ ಎಂದು ಒದ್ದಾಡ್ತಾ ಒದ್ದಾಡ್ತಾ ಐವತ್ತನೆಯ ಪ್ರಾಯ ತಲುಪಿದಾಗ ರಾಕೇಶ್ ರವರಿಗೆ ಆರೋಗ್ಯ ಕೈಕೊಟ್ಟಿತ್ತು. ಬಿ. ಪಿ. ಶುಗರ್, ಲಿವರ್ ದೋಷ, ಪಕ್ಷಪಾತ ಮುಂತಾದ ಅನೇಕ ರೋಗಗಳಿಂದ ತತ್ತರಿಸಿದ ಅವರ ಎರಡು ಕಾಲುಗಳು ಸ್ವಾಧೀನ ಕಳಕೊಂಡಿದ್ದವು. ವಾರಕ್ಕೊಮ್ಮೆ ಡಯಾಲಿಸಿಸ್ ಮಾಡುತ್ತಾ ದಿನಂಪ್ರತಿ ಬಗೆಬಗೆಯ ಮಾತ್ರೆ ನುಂಗುತ್ತಾ ಹತ್ತು ವರ್ಷಗಳ ಕಾಲ ಚಿಂತಾಜನಕ ಜೀವನ ಸಾಗಿಸಬೇಕಾಯಿತು. ಒಮ್ಮೆ ಅವರು ಆಸ್ಪತ್ರೆಯಲ್ಲಿದ್ದಾಗ ಅವರ ತಂದೆಯವರು; ನೀನು ಇಷ್ಟೆಲ್ಲ ಸಂಪಾದನೆ ಮಾಡಿದ್ದರೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿಲ್ಲ. ಇಂತಹ ನಿನ್ನ ದುಡ್ಡಿನಿಂದ ಏನು ಪ್ರಯೋಜನ ಎಂದು ಕೇಳಿದ್ದರು. ಈ ಮಾತು ಮನಸ್ಸಿಗೆ ನಾಟಿದ್ದರಿಂದ ಉದಾರಿಯಾಗತೊಡಗಿದ್ದರು. ಆದರೆ ಕಾಲವು ಮಿಂಚಿತ್ತು.
ಅವರೇ ಹೇಳಿದ ಮಾತು ಮಾರ್ಮಿಕ; “ಬಡ ಮೀನುಗಾರನೊಬ್ಬ ಮೀನು ಹಿಡಿದು ಮಾರಿ ಬದುಕುತ್ತಾನೆ. ಅವನಿಗೆ ಇರುವಷ್ಟು ನೆಮ್ಮದಿ, ಸಂತೋಷ ನನಗಿದೆಯೆಂದು ಹೇಳಲಾರೆ. ಬದುಕಿನಲ್ಲಿ ನಾವು ಜನರಿಗೆ ಸಹಾಯ ಮಾಡಿದರೆ ಅವರ ಆಶೀರ್ವಾದವೇ ಶಾಶ್ವತ, ನಾವು ಮಾಡುವ ಪುಣ್ಯ ಕರ್ಮಗಳೇ ನಮಗೆ ಎಂದೆಂದಿಗೂ ಉಳಿಯುವುದು. ನನಗೆ ದುಡ್ಡಿನಲ್ಲಿ ಯಶಸ್ಸು ಸಾಧಿಸಲು ಇಪ್ಪತ್ತೈದು ವರ್ಷ ಸಾಕಾಗಿತ್ತು, ಆದರೆ ಬದುಕೆಂದರೆ ದುಡ್ಡಲ್ಲ, ದುಡ್ಡಿನ ಆಚೆಗೆ ಒಂದು ಬದುಕು ಇದೆ ಎಂದು ನನಗೆ ಗೊತ್ತಾಗಲು ಐವತ್ತು ವರ್ಷ ಬೇಕಾಯಿತು”
ಇದೊಂದು ಉತ್ತಮ ಪಾಠ. ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ನಮಗೆ ಬದುಕಲು ಹಣ ಬೇಕು, ಸಂಪಾದನೆ ಮಾಡಬೇಕು ಎಂಬುದು ನಿಜ. ಆದರೆ ಅದುವೇ ಪರಮ ಎಂಬ ಭಾವನೆ ತಪ್ಪು. ಜೀವನವು ಕಾಲದ ಜೊತೆಗೆ ಕರಗಿ ಹೋಗುತ್ತದೆ. ಸ್ವ ಆರೋಗ್ಯ, ಕುಟುಂಬ ಹಾಗೂ ಪರೋಪಕಾರಗಳನ್ನು ಜೊತೆಯಾಗಿಟ್ಟುಕೊಂಡು ಸಂಪಾದನೆ ಮಾಡಿದರೆ ಮಾತ್ರ ಅದಕ್ಕೊಂದು ಅರ್ಥ. ಇಲ್ಲವಾದಲ್ಲಿ ಎಲ್ಲವೂ ವ್ಯರ್ಥ.
— ಡಿ.ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.