(www.vknews.in) : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಹುಟ್ಟು ಹಾಕಿರುವ ಒಂದು ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಕೇಳುತ್ತಾ ಬೆಳೆದಿದ್ದೇವೆ. ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಹೇಳುತ್ತೇನೆ, ಕೇಳಿ… ದೇಶದ ಎಲ್ಲಾ ಕೆಲಸಕಾರ್ಯಗಳನ್ನು ಪ್ರಜೆಗಳು ಮಾಡಲು ಸಾಧ್ಯವಿಲ್ಲ, ಅದಕ್ಕೆ ಒಂದು ಸುಸಜ್ಜಿತ ವ್ಯವಸ್ಥೆಯ ಅಗತ್ಯವಿದೆ ಎಂದು ತಿಳಿದು, ಆ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು, ಕೆಲಸಗಾರರನ್ನು ನೇಮಿಸಬೇಕು ಎಂದು ಯೋಚಿಸಿ, ಚುನಾವಣೆ ಎಂಬ ಮಾನದಂಡವನ್ನು ಜಾರಿಗೊಳಿಸಲಾಯಿತು. ಒಳ್ಳೆಯ ಕೆಲಸಗಾರರು ಸಿಕ್ಕಿದರೆ ಪ್ರಜೆಗಳ ಸಮಸ್ಯೆಗಳು ಬೇಗ ಅಂತ್ಯ ಕಾಣುತ್ತವೆ ಎಂಬ ನಂಬಿಕೆ ಇತ್ತು.
ನಾವು ಅಂದರೆ ಪ್ರಜೆಗಳು ಕೆಲಸಕ್ಕೆ ಇಟ್ಟುಕೊಂಡ ಆ ಪ್ರಜೆಗಳೇ ಚುನಾಯಿತ ಸದಸ್ಯರು, ಶಾಸಕರು, ಮಂತ್ರಿಗಳು. ಜನರ ಸೇವೆ ಮಾಡಲು ಖುದ್ದು ಜನರೇ ಅವರನ್ನು ಆರಿಸಿದ್ದು. ಅವರಿಗೆ ಸಂಬಳ ಸಹ ಕೊಡಲಾಗುತ್ತದೆ. ಪ್ರಜೆಗಳು ಆರಿಸಿದ ಪ್ರಜೆಗಳಿಗೆ ಚುನಾಯಿತ ಪ್ರಜಾಪ್ರತಿನಿಧಿಗಳು, ಸೇವಕರು ಅಂದರೆ ಕೆಲಸಗಾರರು ಏನಾಗಬೇಕು? ಮಾಲೀಕರೇ ..? ಸೇವಕರೇ…? ಸೇವಕರಾಗಬೇಕು. ಏಕೆಂದರೆ ನಾವೇ ಅವರಿಗೆ ಕೆಲಸ ಕೊಟ್ಟಿದ್ದು. ಆದರೆ ನಮ್ಮ ಸುತ್ತಮುತ್ತ ಏನು ಕಾಣುತ್ತಿದ್ದೇವೆ? ಪ್ರಜೆಗಳು ನೇಮಿಸಿದ ಕೆಲಸಗಾರರು ಸರ್ವಾಧಿಕಾರಿಗಳಾಗಲು ಹೊರಟಿದ್ದಾರೆ. ಪ್ರಜೆಗಳು ನಿಸ್ಸಹಾಯಕ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ? ಬೇರಾರು ಅಲ್ಲ ನಾವೇ ಅಂದರೆ ಪ್ರಜೆಗಳು.
ಒಬ್ಬ ಸಾಮಾನ್ಯ ಪ್ರಜೆ ಮಂತ್ರಿಗಳಿಗೆ ಭೇಟಿಯಾಗಲು, ತಮ್ಮ ಅಹವಾಲನ್ನು ಹೇಳಲು ಸಾಧ್ಯವೇ ? ಒಮ್ಮೆ ಪ್ರಯತ್ನಿಸಿ ನೋಡಿ. ನಾನು ಹಿರಿಯರ ಒಂದು ಮಾತನ್ನು ಕೇಳುತ್ತ ಬಂದಿದ್ದೇನೆ. ಅದೇನೆಂದರೆ ಗೌರವ ಕೊಡುವುದು ಬೇರೆ, ಗುಲಾಮಗಿರಿ ಬೇರೆ. ನಾವು ರಾಜಕೀಯ ವ್ಯಕ್ತಿಗಳಿಗೆ ಗೌರವ ಕೊಡುವ ನೆಪದಲ್ಲಿ ಗುಲಾಮರಾಗಿ ಹೋಗಿದ್ದೇವೆ. ಮಂತ್ರಿಗಳೇನು ಆಕಾಶದಿಂದ ಇಳಿದು ಬಂದಿಲ್ಲ. ನಮ್ಮಂತಹ ಸಾಮಾನ್ಯ ಶರೀರವುಳ್ಳ ಜನರೇ. ಆದರೆ ನಮ್ಮ ಅಂಧಭಕ್ತಿ ಪ್ರಜಾಪ್ರತಿನಿಧಿಗಳ ಚಿತ್ರಗಳನ್ನು, ಮೂರ್ತಿಗಳನ್ನು ಸಹ ಪೂಜೆ ಮಾಡುವಷ್ಟು ಅಂಧರಾಗಿ ಹೋಗಿದ್ದೇವೆ. ಇಂದಿನ ಯಾವುದೇ ರಾಜಕೀಯ ವ್ಯಕ್ತಿಯ ಹಿನ್ನಲೆಯನ್ನು ನೋಡಿ ಅಥವಾ ಕೇಳಿ. ಒಳ್ಳೆಯವರು ಸಿಗುವುದು ಬಹಳ ಕಷ್ಟ. ಕೆಟ್ಟವರೇ ಹೆಚ್ಚು . ಆತ ಯಾವುದಾದರು ಒಂದು ಮೊಕದ್ದಮೆಯಲ್ಲಿ, ಹಗರಣದಲ್ಲಿ ಸಿಲುಕಿರುತ್ತಾನೆ, ಲೂಟಿಕೋರನಾಗಿರುತ್ತಾನೆ, ಮೋಸಗಾರನಾಗಿರುತ್ತಾನೆ, ಕಾಮುಕನಾಗಿರುತ್ತಾನೆ, ಕೊಲೆಗಾರನಾಗಿರುತ್ತಾನೆ, ಸಂವಿಧಾನಕ್ಕೆ ದ್ರೋಹ ಬಗೆದಿರುವವನಾಗಿರುತ್ತಾನೆ. ಆದರೂ ಅವರ ಜೈಕಾರ ಹಾಕುವುದು ಪ್ರಜೆಗಳು ನಿಲ್ಲಿಸುವುದಿಲ್ಲ.
ಎತ್ತಾ ನೋಡಿದರು ಕಾನೂನಿನ ದುರ್ಬಳಕೆ, ಅಧಿಕಾರದ ದುರ್ಬಳಕೆ, ಹಣದ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ, ಸಂಸ್ಥೆಗಳ ದುರ್ಬಳಕೆ, ಧರ್ಮಗಳ ದುರ್ಬಳಕೆ, ಜಾತಿಗಳ ದುರ್ಬಳಕೆ – ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ. ಮಂತ್ರಿಗಳ ಅಸ್ತಿ ಪಾಸ್ತಿಗಳ ಬಗ್ಗೆ ಜನಸಾಮಾನ್ಯರು ಮಾತನಾಡಿಕೊಳ್ಳುವುದುಂಟು, ಸಾವಿರಾರು ಕೋಟಿ ಸಂಪತ್ತು ಅವರ ಬಳಿ ಹೇಗೆ ಬಂತು? ಸದಸ್ಯರು, ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳು ಸಹ ಗೊಣಗಾಡುವುದುಂಟು, ನಿಮ್ಮ ವೋಟ್ ಖರೀದಿ ಮಾಡಲು ನೂರಾರು ಕೋಟಿ ಹಣ ಸುರಿದಿಲ್ಲವೇ …! ಯಥಾ ರಾಜ ತಥಾ ಪ್ರಜಾ, ತಥಾ ಪ್ರಜಾ ಯಥಾ ರಾಜ, ಮಾಡಿದ್ದುಣ್ಣೋ ಮಾರಾಯ, ನಿಮ್ಮ ಆಶೀರ್ವಾದ ನಮ್ಮೇಲಿರಲಿ, ನಮ್ಮ ಆಶೀರ್ವಾದ ನಿಮ್ಮೇಲೆ ಐದು ವರ್ಷ ಇರುತ್ತೆ, ಅಷ್ಟೆ.
ಐದು ಚಟಗಳು ಬಹಳ ಅಪಾಯಕಾರಿ ಎಂದು ಹಿರಿಯರು ಹೇಳುತ್ತಾರೆ. ಹೆಣ್ಣಿನ ಚಟ, ಸಂಪತ್ತಿನ ಚಟ, ಅಧಿಕಾರದ ಚಟ, ಆಡಳಿತದ ಚಟ ಮತ್ತು ಬಲಪ್ರದರ್ಶನದ ಚಟ. ಮನುಷ್ಯ ಈ ಚಟಗಳ ದಾಸನಾಗಿಬಿಟ್ಟರೆ, ಆತನಿಗೆ ಸರಿ-ತಪ್ಪು ತೋಚುವುದಿಲ್ಲ. ತನ್ನ ಗುರಿ ಸಾಧಿಸಲು, ಅಹಂ ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧನಾಗಿ ಹೋಗುತ್ತಾನೆ. ದೇಶದ ಇನ್ನೊಂದು ದುರಂತ ಏನೆಂದರೆ ಅವಿದ್ಯಾವಂತರಿಗಿಂತ ವಿದ್ಯಾವಂತರೇ ದೇಶದ ಸಂಪತ್ತನ್ನು, ಪ್ರಜೆಗಳನ್ನು ಲೂಟಿಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಐ.ಎ.ಎಸ್. ದರ್ಜೆಯಂತಹ ಅಧಿಕಾರಿಗಳು ಅವಿದ್ಯಾವಂತರೇ ? ವಕೀಲರು, ನ್ಯಾಯಾಧೀಶರು ಅವಿದ್ಯಾವಂತರೇ ? ಆಸ್ಪತ್ರೆಗಳು, ಶಾಲಾಕಾಲೇಜುಗಳು, ಇನ್ನಿತರೆ ಕಂಪನಿಗಳನ್ನು ನಡೆಸುವವರು ಅವಿದ್ಯಾವಂತರೇ ? ನಾನಾ ಇಲಾಖೆಗಳಲ್ಲಿ ವೃತ್ತಿನಿರತರಾಗಿರುವವರು ಅವಿದ್ಯಾವಂತರೇ ?
ದೇಶದ ಪ್ರಗತಿಗಿಂತ ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ಕೆಲ ರಾಜಕೀಯ ವ್ಯಕ್ತಿಗಳು ಸಮಾಜದಲ್ಲಿ ನಾನಾ ರೀತಿಯ ಕುತಂತ್ರಗಳನ್ನು ರೂಪಿಸುತ್ತಾರೆ. ಸಾಮಾನ್ಯ ಜನರು ಅದರ ಬಲಿಪಶುಗಳು ಆಗುತ್ತಲೇ ಇದ್ದಾರೆ. ಯಾವುದೇ ರಾಜಕೀಯ ಪಕ್ಷಗಳನ್ನು, ಸಂಸ್ಥೆಗಳನ್ನು, ಅಧಿಕಾರಿಗಳನ್ನು, ವ್ಯವಸ್ಥೆಯನ್ನು ಟೀಕಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಏಕೆಂದರೆ ದೇಶದ ಪರಿಸ್ಥಿಗಳ ಸೃಷ್ಟಿಕರ್ತರು ನಾವೇ. ಮೊದಲು ನಾವು ಪ್ರಾಮಾಣಿಕರಾಗಿರೋಣ. ಹನಿ ಹನಿ ಸೇರಿದರೆ ಸಮುದ್ರ. ಸಮಾಜ ತಾನಾಗಿಯೇ ಬದಲಾವಣೆಯ ಹಾದಿಯತ್ತ ಸಾಗುತ್ತದೆ.
ನಾವೇ ಪ್ರಾಮಾಣಿಕರಾಗಿಲ್ಲವೆಂದರೆ, ತಪ್ಪು ಮಾಡುವವರಿಗೆ ಪ್ರಶ್ನೆ ಕೇಳುವ ಹಕ್ಕು ನಮಗಿರಲ್ಲ. ಬೇರೆಯವರ ಅಜೆಂಡಾ ಅಥವಾ ಐಡಿಯೋಲಾಜಿ ನಮಗೆ ಬೇಕಾಗಿಲ್ಲ. ನಮ್ಮಲ್ಲಿ ಜಾಗೃತಿ ಮೂಡಬೇಕು. ನಮ್ಮ ಸುತ್ತಮುತ್ತಲ ಸರಿತಪ್ಪುಗಳನ್ನು ಅರ್ಥಮಾಡಿಕೊಳ್ಳಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳ ನಾಟಕ ನಡೆಯುತ್ತಲೇ ಇರುತ್ತದೆ. ಜನರನ್ನು ಕಂಡರೆ ರಾಜಕೀಯ ಪಕ್ಷಗಳು ಹೆದರಿಕೊಳ್ಳಬೇಕು, ಅದೇ ಪ್ರಜಾಪ್ರಭುತ್ವ. ಅಂದರೆ ಪ್ರಜಾಪ್ರತಿನಿಧಿಗಳು/ಸೇವಕರು/ಕೆಲಸಗಾರರು ಕೈಕಟ್ಟಿ ನಿಂತು ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕಬೇಕು. ಸೇವಕರಿಗೆ ಪ್ರಜೆಗಳು ರಾಜಮರ್ಯಾದೆ ಕೊಟ್ಟರೆ ಅವರು ಪ್ರಜೆಗಳನ್ನು ಗುಲಾಮರೆಂದು ತಿಳಿದುಕೊಂಡು ನಾವೇ ದೇವರ ಅವತಾರ ಎಂದು ತಿಳಿದುಕೊಳ್ಳುತ್ತಾರೆ. ಗೌರವ ಬೇರೆ, ಗುಲಾಮಗಿರಿ ಬೇರೆ ಅರ್ಥ ಮಾಡಿಕೊಳ್ಳಿ..
ಸ್ವಾತಂತ್ರ್ಯ ಬಂದು ಬ್ರಿಟೀಷರಿಂದ ಗುಲಾಮಗಿರಿ ಮುಕ್ತರಾಗಿ ನಮ್ಮ ಪೂರ್ವಜರು ಅದೆಷ್ಟು ಸಂತೋಷ ಪಟ್ಟಿದ್ದರೋ… ಇಂದಿನ ದೇಶದ ಸ್ಥಿಯನ್ನು ನೋಡಿ ಅದೆಷ್ಟು ನೊಂದುಕೊಳ್ಳುತ್ತಿದ್ದರೋ….
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.