“ಇವಿಡೆ ಓರ್ ವರುಮ್,ಇವಿಡತ್ತೆ ಮಣ್ಣುಂ ವೆಳ್ಳವುಂ ಔಷಧಮಾವುಂ”
ಇದು ಶೈಖುನಾ ಮಡವೂರು ಸಿ ಎಂ ವಲಿಯುಲ್ಲಾಹಿ ತಂಙ್ಙಳ್ರವರು ಅದೆಷ್ಟೋ ವರ್ಷಗಳ ಮುಂಚೆ ನಡೆಸಿದ ಪ್ರವಚನವಾಗಿತ್ತು!
(www.vknews.in) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಕೂರ ಎಂಬ ಕುಗ್ರಾಮದಲ್ಲಿ ವಾಸಿಸುತ್ತಿದ್ದ ಯೂಸುಫ್ ಹಾಜಿ ಎಂಬ ಮುತವಲ್ಲಿಯವರು ಕುಂಬೋಳ್ ಪಾಪಂ ಕೋಯ ತಂಙಳ್, ಶೈಖುನಾ ಸಿ ಎಂ ವಲಿಯುಲ್ಲಾಹಿ ಮಡವೂರು ಮುಂತಾದ ಆಧ್ಯಾತ್ಮಿಕ ದಿಗ್ಗಜರೊಂದಿಗೆ ಆತ್ಮೀಯ ನಂಟು ಹೊಂದಿದವರಾಗಿದ್ದರು.ಹಾಗಾಗಿಯೇ ಅವರು ಕೂರತ್ ಎಂಬ ಕುಗ್ರಾಮಕ್ಕೆ ಬಂದು ಹಾಜಿಯವರ ಮನೆಯಲ್ಲಿ ತಂಗುತ್ತಿದ್ದರು.ಹೀಗೆ ಬೇಟಿ ನೀಡಿದ ಸಂಧರ್ಭದಲ್ಲೊಮ್ಮೆ ಸಿಎಂ ವಲಿಯುಲ್ಲಾಹಿ ಹೇಳಿದ ಮಾತಾಗಿತ್ತು.”ಅವರು ಇಲ್ಲಿಗೆ ಬರುವರು,ಇಲ್ಲಿನ ಮಣ್ಣು ನೀರು ಔಷಧಿಯಾಗಲಿದೆ” ಪ್ರಸ್ತುತ ಪ್ರವಚನದ ಬಗ್ಗೆ ಅಂದು ಅವರಿಗೆ ಏನೆಂದು ಅರ್ಥವಾಗಲಿಲ್ಲವಾದರೂ ವರ್ಷಗಳ ನಂತರ ಸಯ್ಯದ್ ಕೂರತ್ ತಂಙಳ್ ಆ ಮಣ್ಣಿಗೆ ಕಾಲಿಟ್ಟಾಗ ಇತಿಹಾಸದ ಪ್ರಕಾಶ ಬೆಳಗಿತು.
ಕೇರಳದ ಪಯ್ಯನ್ನೂರು ಎಟ್ಟಿಕ್ಕುಳಂ ನಾಲೂರಪ್ಪಾಟ್ಠ್ ಮಟ ತಂಙಳ್ ಹೌಸ್ನ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್- ಪಝಯಂಙ್ಙಾಡಿ ಏಝಿಮಲ ತಂಙ್ಙಳ್ ಎಂದು ಪ್ರಸಿದ್ದಿ ಪಡೆದ ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ರವರ ಪುತ್ರಿ ಸಯ್ಯಿದತ್ ಫಾತಿಮಬೀವಿ ದಂಪತಿಗಳ ಪುತ್ರನಾಗಿ 1960 ರಲ್ಲಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ [ಕೂರತ್ ತಂಙಳ್] ರವರ ಜನನ.
SSLC ವಿದ್ಯಾಭ್ಯಾಸ ಪಡೆದ ಕೂರತ್ ತಂಙಳ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಊರಿನಲ್ಲೇ ಪಡೆದರು.ತದನಂತರ ತಂದೆ ತಾಜುಲ್ ಉಲಮಾ ಸೇವೆಗೆಯ್ಯುವ ಉಳ್ಳಾಲ ಸಯ್ಯಿದ್ ಮದನಿ ಅರಬಿಕಾಲೇಜಿನಲ್ಲಿ ಮೂರನೇ ತರಗತಿ ಪ್ರವೇಶಿಸಿದರು.1988ರಲ್ಲಿ ಮದನಿ ಬಿರುದು ಪಡೆದು ಆಲಿಮ್ ಕೋರ್ಸ್ ಪೂರ್ತಿ ಮಾಡಿದ ಬಳಿಕ ಮೂರು ವರ್ಷ ತಂದೆ ಪ್ರಿನ್ಸಿಪಾಲ್ ಆದ ಕಾಲೇಜಿನಲ್ಲೇ ಮುದರ್ರಿಸರಾಗಿ ಸೇವೆ ಆರಂಭಿಸಿದರು.ಈ ಮಧ್ಯೆ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾಗೆ ಹೋಗುವ ಭಾಗ್ಯ ಲಭಿಸಿತು.ಹಜ್ಜ್,ಮದೀನಾ,ಬಗ್ದಾದ್ ಝಿಯಾರತ್ ಎಲ್ಲವನ್ನು ಮುಗಿಸಿ ಊರಿಗೆ ಮರಳಿದಾಗ ಉಳ್ಳಾಲದಿಂದ ಹೊರಗೆ ಎಲ್ಲಿಯಾದರೂ ಸೇವೆಗೆಯ್ಯುವಂತೆ ಮನಸ್ಸು ಹೇಳಿತು.ಆದರೆ ತನ್ನ ಆಗ್ರಹವನ್ನು ತಂದೆ ತಾಜುಲ್ ಉಲಮಾರೊಂದಿಗೆ ಹಂಚಿಕೊಳ್ಳಲಿ ಏನೋ ಒಂದು ಭಯ! ಮುಖ್ಯವಾಗಿ ಅದಬ್ಗೆ ವಿರುದ್ದವಾಗಬಹುದೇನೋ ಎಂಬ ಆತಂಕ!!
ಆಗ ತನ್ನ ಆಗ್ರಹವನ್ನು ಹಂಚಿಕೊಳ್ಳಲು ಸೂಕ್ತವಾದ ವ್ಯಕ್ತಿ ತನ್ನ ಸಹೋದರಿಯನ್ನು ವರಿಸಿದ ಆಧ್ಯಾತ್ಮಿಕ ನಾಯಕ,ಕುಂಬೋಳ್ ಸಯ್ಯಿದ್ ಆಟ್ಟಕ್ಕೋಯ ತಂಙಳ್ರವರಾಗಿದ್ದಾರೆಂದು ಮನಗಂಡ ಕೂರತ್ ತಂಙಳ್ ತನ್ನ ಆಗ್ರಹವನ್ನು ಅವರ ಬಳಿ ತೋಡಿಕೊಂಡರು. “ಸರಿ,ನೋಡುವ” ಎಂಬ ಪ್ರತಿಕ್ರಿಯೆ ಬಂತು.ತಾಜುಲ್ ಉಲಮಾ [ಖ:ಸಿ] ರವರ ಶಿಷ್ಯರಿಂದರಲ್ಲಿ ಪ್ರಮುಖರು,ಪುತ್ರಿಯ ಗಂಡನೂ ಆಗಿರುವ ಕುಂಬೋಳ್ ಸಯ್ಯಿದ್ ಆಟ್ಠಕ್ಕೋಯ ತಂಙಳ್ ಕೂರತ್ ತಂಙಳ್ ರವರ ಆಗ್ರಹವನ್ನು ತಾಜುಲ್ ಉಲಮಾರವರ ಬಳಿ ತಿಳಿಸಿದರು. “ಹಾಗಾದರೆ ಕೋಯಮ್ಮನ ಆಗ್ರಹದಂತೆ ನಡೆಯಲಿ,ನೀವು ಸರಿಮಾಡಿ ಕೊಡಿ” ಇದಾಗಿತ್ತು ತಾಜುಲ್ ಉಲಮಾರವರ ಪ್ರತಿಕ್ರಿಯೆ.
ಕುಂಬೋಳ್ ಆಟ್ಠಕ್ಕೋಯ ತಂಙಳ್ ರವರ ಪಿತರಾದ ಸಯ್ಯಿದ್ ಪಾಪಂ ಕೋಯ ತಂಙಳ್ ರವರನ್ನು ಅತಿಯಾಗಿ ಪ್ರೀತಿಸುವವರಾಗಿದ್ದರು ಕೂರತ್ ಎಂಬ ಕುಗ್ರಾಮದ ಜನರು. ಅಲ್ಲಿನ ಮಸೀದಿಯ ಅಭಿವೃದ್ಧಿ ಕಾರ್ಯವನ್ನು ಬಹುಮಾನ್ಯರಾದ ಕುಂಬೋಳ್ ಪಾಪಂ ಕೋಯ ತಂಙಳ್ ರವರೇ ನಡೆಸಿದ್ದರು.ಪ್ರಸ್ತುತ ಮಸೀದಿಗೆ ಖತೀಬ್ ಒಬ್ಬರ ಅಗತ್ಯವಿದ್ದ ಸಮಯದಲ್ಲಾಗಿದೆ ಸಯ್ಯಿದ್ ಫಝಲ್ ಕೋಯಮ್ಮ ಎಂಬ ಕೂರತ್ ತಂಙಳ್ರವರನ್ನು ಅಲ್ಲಿನ ಖತೀಬ್ ಆಗಿ ನೇಮಕ ಮಾಡಲಾಗುತ್ತದೆ. 1991 ರಲ್ಲಾಗಿತ್ತು ತಂಙಳ್ರವರು ಕೂರತ್ ಎಂಬ ಪ್ರದೇಶಕ್ಕೆ ಕಾಲಿಟ್ಟು ಸೇವೆ ಆರಂಭಿಸುವುದು. ಸದಾ ಸಮಯ ಆರಾಧನೆಯಲ್ಲಿ ಮುಳುಗುತ್ತಿದ್ದ ತಂಙಳ್ರವರು ಆಗಲೇ ಐಹಿಕ ಜೀವನದೊಂದಿಗೆ ವಿರಕ್ತಿ ತೋರಿ ಅಧಿಕ ಸಮಯವೂ ಪವಿತ್ರ ಖುರ್ಆನ್ ಪಾರಾಯಣದಲ್ಲೇ ತಲ್ಲೀನರಾಗುತ್ತಿದ್ದರು.ಸ್ವಂತ ಊರಾದ ಎಟ್ಠಿಕುಳಕ್ಕೆ ಹೋಗುವುದು ತಿಂಗಳಲ್ಲಿ ಒಂದು ಬಾರಿ ಮಾತ್ರ! ಅತ್ಯಗತ್ಯ ಘಟ್ಟದಲ್ಲಿ ಕೆಲವೊಮ್ಮೆ ಹೋಗಿ ಬರುತ್ತಿದ್ದರು.
ಮಂಗಳೂರು ರೈಲ್ವೆ ಸ್ಟೇಷನ್ ಇಳಿದು ಬಸ್ ಮಾರ್ಗವಾಗಿ ಪುತ್ತೂರಿಗೆ ಬಂದು ಅಲ್ಲಿಂದ ಕಾಣಿಯೂರು ಸುಬ್ರಮಣ್ಯ ಹೋಗುವ ಬಸ್ಸಲ್ಲಿ ಸಂಚರಿಸಿ ಕೂರತ್ ಇಳಿದು ಮಸೀದಿ ತಲುಪುತ್ತಿದ್ದರು.ಸೂಕ್ಷ್ಮ ಜೀವನ ನಡೆಸುತ್ತಾ,ಇಲಾಹಿ ಚಿಂತೆಯಲ್ಲಿದ್ದು, ಝಿಕ್ರ್ ಹೇಳುತ್ತಾ,ಖುರ್ಆನ್ ಓದುತ್ತಾ ಸಾತ್ವಿಕ ಬದುಕು ಸವೆಸಿದರು.ತಂಙಳ್ ರವರು ಭಕ್ತಿತುಂಬಿದ ತಖ್ವಾ ಬದುಕನ್ನು ಕಂಡವರು ಕಾಲಕ್ರಮೇಣ ತಮ್ಮ ದುಖ,ದುಮ್ಮನ ದುಗುಡ,ರೋಗಗಳಿಗೆ ಪರಿಹಾರ ಹರಸಿ ತಂಙಳ್ರವರ ಬಳಿ ಬಂದು ಪರಿಹಾರ ಬೇಡಿದಾಗ ಸಯ್ಯಿದ್ರವರು ನೀರು ಮಂತ್ರಿಸಿ ಕೊಡುತ್ತಿದ್ದರು.ಆ ನೀರು ಅದ್ಬುತ ಫಲ ನೀಡುತ್ತಿತ್ತು!
ತಂದೆ ತಾಜುಲ್ ಉಲಮಾರವರ ನಿಯಂತ್ರಣ ಮತ್ತು ಸೂಫಿವರ್ಯ ವಲಿಯ್ಯ್ ಏಝಿಮಲ ತಂಙಳ್ ಸುಪುತ್ರಿಯಾದ ಫಾತಿಮಾ ಬೀವಿ ಎಂಬ ಕೂರತ್ ತಂಙಳ್ ರವರ ತಾಯಿ ಮಗನಿಗೆ ಸಣ್ಣ ಪ್ರಾಯದಲ್ಲೇ ದೀನ್ ಕಲಿಸಿಕೊಟ್ಟಿದ್ದರು.ತಾಯಿ ಕೂಡಾ ವಿದ್ವಾಂಸೆಯಾಗಿದ್ದರಿಂದಲೇ ಪತ್ತ್ ಕಿತಾಬ್ ಸಹಿತ ಖುರ್ಆನ್ ಪಾರಾಯಣ ಮತ್ತು ಹಲವು ದೀನಿ ಪಾಠಗಳ ದರ್ಸ್ ಮಗನಿಗೆ ತಾಯಿಂದಲೇ ಕಲಿಯುವ ಭಾಗ್ಯ ಲಭ್ಯವಾಯಿತು. ಆಧ್ಯಾತ್ಮಿಕ ಸಜ್ಜನ ವ್ಯಕ್ತಿತ್ವದ ತಾಜುಲ್ ಉಲಮಾ ಎಂಬ ತಂದೆ ಮತ್ತು ಸೂಫಿವರ್ಯೆ ತಾಯಿ ಬೀವಿ ಫಾತಿಮಾರ ಆಧ್ಯಾತ್ಮಿಕ ತರಬೇತಿಯಲ್ಲಿ ಪಳಗಿದ ಸಯ್ಯಿದ್ ಕೂರತ್ ತಂಙಳ್ ಸಣ್ಣ ವಯಸ್ಸಿನಲ್ಲೇ ತಸವ್ವುಫ್ನ ದಾರಿ ಸ್ವೀಕರಿಸಿ ಉನ್ನತಿ ಪಡೆದಿದ್ದರು.
ಇದೀಗ ಅವರು ಮಂತ್ರಿಸಿದ ನೀರಿಗೆ ಅದ್ಬುತ ಸಿದ್ದಿ ಲಭ್ಯವಾಗಿ ಸಾವಿರಾರು ಜನರು ದೂರದ ಊರುಗಳಿಂದ ಕೂರಾ ಎಂಬ ಕುಗ್ರಾಮಕ್ಕೆ ಹರಿಯಲು ಆರಂಭಿಸಿದರು. ಅದಾಗಲೇ ಹಲವಾರು ವರ್ಷಗಳ ಮುಂಚೆ ಶೈಖುನಾ ಸಿಎಂ ವಲಿಯುಲ್ಲಾಹಿ ಹೇಳಿದ “ಇಲ್ಲಿನ ನೀರು ಮತ್ತು ಮಣ್ಣು ಔಷಧವಾಗಲಿದೆ” ಎಂಬ ಮಾತಿನ ತಾತ್ಪರ್ಯ ಎಲ್ಲರಿಗೂ ಅರ್ಥವಾಯಿತು. ಅಧಿಕ ಸಮಯವೂ ಖುರ್ಆನ್ ಪಾರಾಯಣದಲ್ಲಿ ತಲ್ಲೀನರಾಗುತ್ತಿದ್ದ ತಂಙಳ್ರವರು ಪವಿತ್ರ ರಮಳಾನ್ ತಿಂಗಳಲ್ಲಿ 20 ಖತಮ್ ಪೂರ್ತಿ ಮಾಡುತ್ತಿದ್ದರು.
ತನಗೆ ಸತ್ಯವೆಂದು ಮನಗಂಡ ವಿಷಯದಲ್ಲಿ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಂತು ಇಡೀ ಊರಿಗೆ ಊರೇ ವಿರುದ್ದವಾಗಿ ನಿಂತರೂ ಜಗ್ಗದೆ ಬಗ್ಗದೆ ಎದೆಯೊಡ್ಡಿ ನಿಂತು ಹೋರಾಡುವ ಎದೆಗಾರಿಕೆ ತಂದೆ ತಾಜುಲ್ ಉಲಮಾ [ಖ:ಸಿ] ರವರಿಂದ ಲಭಿಸಿದ ವಿರಾಷತ್ ಆಗಿತ್ತು.ಕುಬೇರ ಶ್ರೀಮಂತ ಎಂದು ನೋಡದೆ ಮುಖ ನೋಡಿ ಸತ್ಯ ಎತ್ತಿ ಹೇಳುವ ಧೈರ್ಯ ಸಯ್ಯಿದ್ ಕೂರತ್ ತಂಙಳ್ ರವರ ವೈಶಿಷ್ಟ್ಯವಾಗಿತ್ತು.
ದುನಿಯಾದ ಸರ್ವ ಸುಖ ಸಂಪತ್ತು ಕಾಲಡಿಯಲ್ಲಿ ಬಿದ್ದಿದ್ದರೂ ತಾನು ಅದ್ಯಾವುದನ್ನು ಲಕ್ಕಿಸದೆ ದೀನೀ ಖಿದ್ಮತ್ನಲ್ಲಿ ತಲ್ಲೀನರಾಗಿ ಸರಳ ಜೀವನ ನಡೆಸಿ, ದುನಿಯಾದ ಫಸಾದ್ ಮತ್ತು ವಂಚನೆಯ ಬಗ್ಗೆ ಸದಾ ಎಚ್ಚರಿಕೆ ನೀಡುತ್ತಲೇ ಇದ್ದರು! ಸಮಸ್ತ ಮುಶಾವರ ಸದಸ್ಯರು, ನೂರಾರು ಮೊಹಲ್ಲಾಗಳ ಖಾಝಿಗಳಾಗಿ ನೇತೃತ್ವ ವಹಿಸುತ್ತಿರುವಾಗಲೂ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆಟಕುವ ರೀತಿಯಲ್ಲಿ ಜೀವನ ಸಾಗಿಸಿದರು.ಕೂರ ಮಸೀದಿಯ ವರಾಂಡದ ನೆಲದಲ್ಲಿ ಕುಳಿತು ಅಲ್ಲಿನ ಅಧ್ಯಾಪಕರೊಂದಿಗೆ ಕುಶಲೋಪರಿ ಮಾತುಗಳನ್ನು ಆಡುತ್ತಾ ಆಹಾರ ಸೇವಿಸುತ್ತಿದ್ದರು. ವಫಾತ್ವರೆಗೂ ತನ್ನ ಅದೇ ಶೈಲಿಯನ್ನು ಮುಂದುವರೆಸಿದರು.
ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೆ ಸಮಯಕ್ಕೆ ಸರಿಯಾಗಿ ತಲುಪಿ ದುಅಕ್ಕೆ ನೇತೃತ್ವ ನೀಡುತ್ತಿದ್ದರು. ಅಪಾರ ಜನೋಸ್ತಮ ಇದ್ದರೂ ಅಲ್ಪ ಜನರಿದ್ದರೂ ತಂಙಳ್ರವರ ಪ್ರಭಾಷಣ ದುನಿಯಾದ ವಂಚನೆ,ಮರಣ,ಪರಲೋಕ ಆಗಿತ್ತು. ಅಲ್ ಹಂದುಲಿಲ್ಲಾಹ್! ದಕ್ಷಿಣಕನ್ನಡದ ನಾವು ಭಾಗ್ಯವಂತರು .ಶೈಖುನಾ ಸಿಎಂ ವಲಿಯುಲ್ಲಾಹಿ [ಖ:ಸಿ] ರವರ ಪ್ರವಚನ ಅಂತ್ಯದಿನದವರೆಗೂ ದೃಷ್ಟಾಂತವಾಗಿ ನೆಲೆಗೊಳ್ಳಲಿದೆ. ಕೂರಾದ ಮಣ್ಣು ನೀರು ಇನ್ನು ಸದಾ ಸಮಯ ಔಷಧಿಯಾಗಲಿದೆ.ಅ ನಾಡನ್ನು ತನ್ನ ಅದ್ಬುತ ಸಿದ್ಧಿಗಳಿಂದ ಪ್ರಕಾಶಮಾನಗೊಳಿಸಿದ ಖುರ್ರತ್ ಸ್ಸಾದಾತ್ ಕೂರತ್ ಸಯ್ಯಿದ್ರವರು ಸದಾ ನಮ್ಮ ನಾಡಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.
ಕೂರಾ- ಕಾಣಿಯೂರು ಮುಖ್ಯ ರಸ್ತೆಯ ಪಕ್ಕದಲ್ಲೇ ಮಹಾನುಭಾವರ ಮಖ್ಬರ ನೆಲೆಗೊಂಡಿದೆ. ತನ್ನ ಬದುಕಿನುದ್ದಕ್ಕೂ ಯಾರಿಗೂ ತೊಂದರೆ ಕೊಡದೆ ಸರ್ವರಿಗೂ ಸಾಂತ್ವನ ಕೊಡುತ್ತಿದ್ದ ಸಯ್ಯಿದ್ರವರ ವಫಾತ್ ಕೂಡಾ ಸರ್ವರಿಗೂ ಸಂದರ್ಶನ ಅನುಕೂಲವಾಗುವ ರೀತಿಯಲ್ಲಾಗಿತ್ತು. ವಫಾತ್ನ ಮುಂಚಿನ ದಿನ ಸಂಜೆ ನಾನು ಸೇವೆಗೆಯ್ಯುವ ಮೈದಾನಿಮೂಲೆಗೆ ಬೇಟಿ ನೀಡಿದ್ದರು.ಅಂದೇ ರಾತ್ರಿ ಕೇರಳದಲ್ಲೊಂದು ಆಧ್ಯಾತ್ಮಿಕ ಸಭೆ ಮುಗಿಸಿ ಎಟ್ಟಿಕ್ಕುಳಕ್ಕೆ ಹೋಗಿ ಪತ್ನಿ ಮಕ್ಕಳನ್ನು ಕಂಡು ವಸಿಯ್ಯತ್ ಹೇಳಿ ಎಲ್ಲರೊಂದಿಗೂ ಬೆರೆತು ತನಗೆ ಹೋಗಲು ಸಮಯವಾಯಿತು ಎಂದು ಹೇಳುತ್ತಾ ಕಲಿಮ ‘ಲಾಇಲಾಹ ಇಲ್ಲಲ್ಲಾಹ್’ ಪಠಿಸಿ ಅಲ್ಲಾಹನ ರಹ್ಮತ್ಗೆ ಯಾತ್ರೆಯಾಗುತ್ತಾರೆ.
ನಿಜವಾಗಿಯೂ ಸಯ್ಯಿದ್ ಕೂರತ್ ತಂಙಳ್ ರವರನ್ನು ಆಧ್ಯಾತ್ಮಿಕ ಗುರುವಾಗಿ ಕಾಣುವ ದೊಡ್ಡ ಸಮೂಹ ಕೇರಳದ ತಿರುವನಂತಪುರದಿಂದ ಆರಂಭಿಸಿ ಇತ್ತ ಕಾಸರಗೋಡು ತನಕ ಇದ್ದಾರೆ.ಎಟ್ಟಿಕುಳಂನಲ್ಲಿ ವಫಾತ್ ನಡೆದುದರಿಂದ ಅವರೆಲ್ಲರಿಗೂ ಬರಲು ಸಾದ್ಯವಾಯಿತು.ಒಂದೊಮ್ಮೆ ತಂಙಳ್ ವಫಾತ್ ನಮ್ಮ ಪುತ್ತೂರು ಕೂರಾದಲ್ಲಿ ಆಗಿದ್ದರೆ ಕೇರಳದವರಿಗೆ ಧಾರಾಕಾರ ಸುರಿಯುವ ಮಳೆ ಮತ್ತು ಬಹು ದೂರ ಪ್ರಯಾಣ ಮಾಡಿ ಬರುವುದು ಕಷ್ಟವಾದೀತು.ಆದರೆ ಅದರೆ ಅಲ್ಲಾಹನು ತಂಙಳ್ರವ ದರಜದಂತೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಟ್ಟನು. [ಅಲ್ ಹಂದುಲಿಲ್ಲಾಹ್!]
ಕೊನೆಯದಾಗಿ ಸಯ್ಯಿದ್ರವರ ಪಾವನ ಮುಖ ನೋಡಿ ಸಂತೃಪ್ತಿಗೊಳ್ಳುವ ಉದ್ದೇಶದಿಂದ ಎಟ್ಟಿಕುಳದಲ್ಲಿ,ಜಾಮಿಅ ಸಅದಿಯ್ಯದಲ್ಲಿ,ಉಳ್ಳಾಲದಲ್ಲಿ,ಕೂರದಲ್ಲಿ ಜನ ಸೇರಿದ್ದರು.ಆದರೆ ಎಲ್ಲರಿಗೂ ಆ ಪಾವನ ಮುಖ ತೋರಿಸಲು ಮನಸ್ಸು ಮಾಡಿದ್ದರೆ ವಾರ ಕಳೆದರೂ ಜನರ ಹರಿವು ಮುಗಿಯುತ್ತಿರಲಿಲ್ಲ.ಕೊನೆಗೆ ಕೂರತ್ ಎಲ್ಲರಿಗೂ ಸಾವಾಧನದಿಂದ ತೋರಿಸುವ ಭರವಸೆ ಉಲಮಾಗಳು,ಸಯ್ಯಿದ್ಗಳು ನೀಡಿದ್ದರು.ಕೊನೆಗೆ ಅಲ್ಲಿ ಸೇರಿದ್ದ ಜನಸಾಗರವನ್ನು ಹತೋಟಿಗೆ ತರಲು ಅತ್ಯಂತ ತ್ರಾಸದಾಯಕವೆಂದು ಮನಗಂಡು ನಾಯಕರು ಎರಡುಮೂರು ಜನಾಝ ನಮಾಜು ಮುಗಿದ ತಕ್ಷಣ ಪವಿತ್ರ ಜನಾಝವನ್ನು ದಫನ್ ಕಾರ್ಯಕ್ಕೆ ಕೊಂಡೊಯ್ದರು.ಅದರೆಡೆಯಲ್ಲಿ ಜನಾಝ ಇದ್ದ ಅಷ್ಟೂ ಸಮಯ ಜನಾಝದ ಸಮೀಪವಿದ್ದವರಿಗೆ ಆ ಮುಖ ನೋಡುವ ಭಾಗ್ಯ ಸಿಕ್ಕಿತು. ಒಂದಿಷ್ಟು ಸಮಯ ಆ ಪ್ರಕಾಶಿತ ಮುಖವನ್ನು ನೋಡುವ ಭಾಗ್ಯ ನನಗೂ ಸಿಕ್ಕಿತು. ಮುಖ ದರ್ಶನ ಸಿಗದೆ ಇದ್ದರೂ ನಮ್ಮ ಸಾನಿಧ್ಯ ಅಲ್ಲಿ ಇರುವುದೇ ನಮ್ಮ ಭಾಗ್ಯ.ಅದೂ ಲಭಿಸದೆ ಕೊರಗುವ ಅದೆಷ್ಟೋ ಮಂದಿ ಇದ್ದರು.
ತಾಜುಲ್ ಉಲಮಾ ವಫಾತ್ ನಂತರ ಸಯ್ಯಿದ್ ಖುರ್ರತ್ ಸ್ಸಾದಾತ್ ತಂಙಳ್ ಉಳ್ಳಾಲ ಮತ್ತು ಪರಿಸರದ ನೂರಾರು ಮೊಹಲ್ಲಾದ ಖಾಝಿಯಾಗಿದ್ದರು.ಸಮಸ್ತ ಮುಶಾವರ ಸದಸ್ಯರಾಗಿದ್ದರು.ಎಟ್ಠಿಕುಳಂ ತಾಜುಲ್ ಉಲಮಾ ಟ್ರಸ್ಟ್ ಸಕ್ರೇಟರಿ,ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ನಿರ್ದೇಶಕರು ಸಹಿತ ನೂರಾರು ಸುನ್ನೀ ಸಂಘ ಸಂಸ್ಥೆಗಳ ಗೌರವಧ್ಯಕ್ಷರಾಗಿ ತನ್ನ ಇಸ್ಲಾಮೀ ದಅವತ್ಗಳಲ್ಲಿ ಸಕ್ರಿಯರಾಗಿದ್ದಾಗಲೇ ವಫಾತ್ ಸಂಭವಿಸಿದೆ.
ಧರ್ಮ ಪತ್ನಿ: ಪಾಪಿನಶ್ಶೇರಿ ಸಯ್ಯಿದ್ ಮುಹ್ಳರ್ ತಂಙಳ್ರವರ ಪುತ್ರಿ ಸಯ್ಯಿದತ್ ಆಟ್ಠಬೀವಿ ಮಕ್ಕಳು: ಸಯ್ಯಿದ್ ಮಶ್ಹೂದ್ ಮುಈನಿ ಅಲ್ ಅಝ್ಹರಿ,ಸಯ್ಯಿದ್ ಮುಸ್ಅಬ್ ತಂಙಳ್, ಸಯ್ಯಿದತ್ ಬೀವಿ ಸಫೀರಾ,ಸಯ್ಯಿದತ್ ರುಪೈದಾ ಬೀವಿ,ಸಯ್ಯಿದತ್ ಝಕಿಯ್ಯ ಬೀವಿ,ಸಯ್ಯಿದತ್ ಸಫಾನಾ ಬೀವಿ, ಅಳಿಯಂದಿರು: ಸಯ್ಯಿದ್ ಆಮಿರ್ ತಂಙಳ್, ಡಾ.ಸಯ್ಯಿದ್ ಶುಹೈಬ್ ತಂಙಳ್, ಸಯ್ಯಿದ್ ಮಿಸ್ಅಬ್ ತಂಙಳ್
ಸಹೋದರರು: ಸಯ್ಯಿದ್ ಹಾಮಿದ್ ಇಂಬಿಚ್ಚಿಕ್ಕೋಯ ತಂಙಳ್, ಸಯ್ಯಿದತ್ ಬೀ ಕುಞ್ಞಿಬೀವಿ,ಸಯ್ಯಿದತ್ ಮುತ್ತ್ ಬೀವು,ಸಯ್ಯಿದತ್ ಕುಞ್ಞಾಟ್ಠ ಬಿವಿ,ಸಯ್ಯಿದತ್ ಚೆರಿಯ ಬಿವಿ,ಸಯ್ಯಿದತ್ ರಂಲ ಬೀವಿ ಕುಂಬೋಳ್. ಸಯ್ಯದ್ ಕೂರತ್ ತಂಙಳ್ ರವರ ದಫನ ಕಾರ್ಯಮುಗಿದು ಇದೀಗ ಸಂದರ್ಶಕರ ಸಾಲು ನಿರಂತರ ಹರಿಯುತ್ತಲೇ ಇದೆ. ಸದಾ ಖುರ್ಆನ್ ಪಾರಾಯಣಲ್ಲಿ ತಲ್ಲೀನರಾಗುತ್ತಿದ್ದ ಸಯ್ಯಿದ್ ಕೂರತ್ ತಂಙಳ್ ರವರ ಬಳಿ ಖುರ್ಆನ್ ಪಾರಾಯಣ ನಿರಂತರವಾಗಿ ನಡೆಯುತ್ತಲೇ ಇದೆ. ಅಲ್ಲಾಹು ಸಯ್ಯಿದ್ರವರ ದರಜ ಉನ್ನತಿಗೇರಿಸಲಿ ಆಮೀನ್.
— ಅಬೂಶಝ ಕೂರ್ನಡ್ಕ, @ಮೈದಾನಿಮೂಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.