(www.vknews.in) : ಸಮುದ್ರದ ತೆರೆಮಾಲೆಗಳ ಮೂಲಕ ಹೇಗಾದರೂ ದಡ ತಲುಪಿದ ನಮ್ರೂದನು ಮನೆ ತಲುಪುವಾಗ ರಾತ್ರಿಯಾಗಿತ್ತು. ಯಾತ್ರೆಯಲ್ಲಿ ಕಂಡ ಅದ್ಭುತ ಮತ್ತು ಭಯಾನಕ ದೃಶ್ಯದ ಕಾರಣದಿಂದ ಆತನ ತಲೆ ಕೂದಲು, ಗಡ್ಡ, ಮೀಸೆ ಎಲ್ಲವೂ ಸಂಪೂರ್ಣವಾಗಿ ನರೆಯಾಗಿ ಬಿಳಿಯಾಗಿತ್ತು. ಆ ಕಾರಣದಿಂದ ಮೊದಲಿಗೆ ಕುಟುಂಬದವರಿಗೆ ಆತನನ್ನು ತಿಳಿಯಲು ಕಷ್ಟವಾದರೂ ನಂತರ ಶರೀರದ ಕೆಲವು ಗುರುತುಗಳಿಂದ ತಿಳಿಯಲು ಸಾಧ್ಯವಾಯಿತು.
ಅಲ್ಲಾಹನ ಹತ್ಯೆ ಮಾಡಲು ಆಕಾಶಕ್ಕೆ ಹೋದ ನಮ್ರೂದನು ಮನೆ ತಲುಪಿದ ವಿವರ ತಿಳಿದ ಕೂಡಲೇ ಹಝ್ರತ್ ಇಬ್ರಾಹೀಮರು ಕೂಡ ಆತನ ದರ್ಬಾರಿಗೆ ಬಂದು ಆತನಲ್ಲಿ ಕೇಳಿದರು. “ಹೇಗುಂಟು ಆಕಾಶ ಆರೋಹಣ? ಅಲ್ಲಾಹನ ಖುದುರತನ್ನು ನೋಡಿದಿಯಾ?” ಆಗ ಆತ ಹೇಳಿದ. “ಏನು ನೋಡುವುದು? ನಾನು ಅವನನ್ನು ಕೊಂದು ಬಂದಿದ್ದೇನೆ” ಎಂದು. ಇದನ್ನು ಕೇಳಿದ ಹಝ್ರತ್ ಇಬ್ರಾಹೀಮರು ಆತನಲ್ಲಿ ಕೇಳಿದರು. “ನಿನಗೆ ಅಲ್ಲಾಹನನ್ನು ಬಿಡು. ಅವನ ಸೃಷ್ಟಿಯಾದ ನನ್ನನ್ನು ಕೊಲ್ಲಲು ಸಾದ್ಯವಿದೆಯಾ?” ನಮ್ರೂದನು ಹೇಳಿದನು. “ಅದಕ್ಕೇನು ತೊಂದರೆ ಈಗಲೇ ನೋಡುವ.. ನೀನು ರೆಡಿಯಾ?” ಹಝ್ರತ್ ಇಬ್ರಾಹೀಮರು “ನಾನೂ ರೆಡಿ. ಒಮ್ಮೆ ನೋಡುವ” ಎಂದು ಹೇಳಿದರು.
ಬಳಿಕ ನಮ್ರೂದನು ಹಝ್ರತ್ ಇಬ್ರಾಹೀಮರಲ್ಲಿ ಯುದ್ದ ಮಾಡಲು ತನ್ನ ಎಲ್ಲಾ ಪ್ರಾಂತಗಳಲ್ಲಿರುವ ಎಲ್ಲಾ ಸೈನಿಕರನ್ನು ಒಂದು ಕಡೆ ಜಮಾಯಿಸಿ ಮೊದಲೇ ನಿಶ್ಚಯಿಸಿದ ಒಂದು ಮೈದಾನಕ್ಕೆ ಅವರೊಂದಿಗೆ ಹೊರಟನು. ಹಝ್ರತ್ ಇಬ್ರಾಹೀಮರು ತನ್ನೊಂದಿಗಿರುವ ಬರೀ ಎಪ್ಪತ್ತು ಮಂದಿ ಮುಅ್ಮಿನುಗಳೊಂದಿಗೂ ಆ ಕಡೆ ಹೊರಟರು. ನಮ್ರೂದನ ಸೈನ್ಯ ಮೈದಾನ ತಲುಪುವ ಮೊದಲೇ ಅಲ್ಲಾಹನು ಆಕಾಶದಿಂದ ಒಂದು ತರ ಕಚ್ಚುವ ಸೊಳ್ಳೆಗಳನ್ನು ಕಳುಹಿಸಿದ್ದನು. ಸೊಳ್ಳೆಗಳು ಅವರನ್ನು ಮಾತ್ರ ಗುರಿಯಿಟ್ಟು ಮೈತುಂಬಾ ಕಚ್ಚ ತೊಡಗಿತು. ಎಲ್ಲಿ ನೋಡಿದರೂ ಸೊಳ್ಳೆಗಳ ಕಾಟ. ಒಟ್ಟಿನಲ್ಲಿ ನಮ್ರೂದನ ಸೈನ್ಯದಲ್ಲಿ ಸಾವಿರಾರು ಮಂದಿ ಸೊಳ್ಳೆ ಕಚ್ಚಿ ಸತ್ತುಹೋದರು. ಬಾಕಿಯಾದವರು ತಮ್ಮ ಮನೆಗೆ ಬಂದು ಬಾಗಿಲು ಮುಚ್ಚಿ ಕುಳಿತರು. ಆದರೆ ಅಲ್ಲಿಯೂ ಸೊಳ್ಳೆಗಳ ತೊಂದರೆ ಕಡಿಮೆಯಾಗಿರಲಿಲ್ಲ.
ನಮ್ರೂದನು ತನ್ನ ಸುಸಜ್ಜಿತ ದರ್ಬಾರಿನಲ್ಲಿ ತನ್ನ ಖಾಸಗಿ ಕೋಣೆಯ ಬಾಗಿಲು ಮುಚ್ಚಿ ಸುಖ ನಿದ್ರೆ ಮಾಡಲು ನೋಡಿದನು. ಅಲ್ಲಾಹನ ಖುದುರತಿನಲ್ಲಿ ಆ ವೇಳೆಯಲ್ಲಿ ಒಂದು ಸೊಳ್ಳೆಯು ಆತನ ಗಡ್ಡದಲ್ಲಿ ಬಂದು ಕುಳಿತಿತು. ಆತನು ಅದನ್ನು ಕೊಲ್ಲಲು ನೋಡಿದಾಗ ಅದು ಅವನ ಮೂಗಿನ ಮೂಲಕ ಮಿದುಳಿಗೆ ಹತ್ತಿತು. ಬಳಿಕ ಆವೊಂದು ಸಣ್ಣ ಸೊಳ್ಳೆ ನಲವತ್ತು ದಿನಗಳ ತನಕ ಆತನ ತಲೆಯಲ್ಲಿಯೇ ಮಿದುಳಿಗೆ ತೊಂದರೆ ಮಾಡುತ್ತಾ ಕುಳಿತಿತು. ಎಷ್ಟರತನಕವೆಂದರೆ, ಈ ನಲವತ್ತು ದಿನಗಳಲ್ಲಿ ಆತನಿಗೆ ನಿದ್ರೆ ಮಾಡಲೋ ತಿನ್ನಲೋ ಸಾದ್ಯವಾಗುತ್ತಿರಲಿಲ್ಲ. ಅಲ್ಲದೆ ಯಾವ ತಂತ್ರ ಪ್ರಯೋಗಿಸಿಯೂ ಆ ಸೊಳ್ಳೆಯನ್ನು ಹೊರತೆಗೆಯಲು ಕೂಡ ಸಾಧ್ಯವಾಗಲಿಲ್ಲ.
ತೀವ್ರ ನೋವಾದಾಗ ನೋವು ಸಹಿಸಲಾರದೆ ತನ್ನ ಕೆಲಸದವನೊಬ್ಬನಲ್ಲಿ ತನ್ನ ತಲೆಯನ್ನು ಕತ್ತಿಯಿಂದ ಇಬ್ಬಾಗ ಮಾಡಿ ಬಚಾವು ಮಾಡಲು ಹೇಳಿದನು. ಆತನು ಹೇಳಿದಂತೆ ಎರಡು ಭಾಗ ಮಾಡಿದಾಗ ಸೊಳ್ಳೆಯು ದೊಡ್ಡದಾದ ಒಂದು ಹಕ್ಕಿ ಮರಿಯ ರೂಪದಲ್ಲಿ ಹೊರ ಬರುತ್ತಾ ಹೇಳಿತು. “ಅಲ್ಲಾಹನ ಪ್ರವಾದಿಗಳನ್ನು ಧಿಕ್ಕರಿಸಿ ನಡೆಯುವ ಅಹಂಕಾರಿಗಳಾದ ಸತ್ಯ ನಿಷೇಧಿಗಳಿರುವ ಶಿಕ್ಷೆಯಾಗಿದೆ ಇದು” ಎಂದು.
ನಮ್ರೂದನ ಕತೆ ಮುಗಿದ ಬಳಿಕ ಇಡೀ ಜಗತ್ತೇ ಅಲುಗಾಡಿದಂತಹಾ ಒಂದು ಮಹಾ ಭೂಕಂಪ ಉಂಟಾಯಿತು. ಅದರಲ್ಲಿ ಇತರ ಸತ್ಯ ನಿಷೇಧಿಗಳ ಅಂತ್ಯವಾಯಿತು. ನಂತರ ಹಝ್ರತ್ ಇಬ್ರಾಹೀಮರು ತನ್ನ ಕುಟುಂಬದಿಂದಲೇ ಸಾರ ಎಂಬ ಮಹಿಳೆಯನ್ನು ಮದುವೆಯಾದರು. ದಾಂಪತ್ಯ ಬದುಕಿಗೆ ಕಾಲಿಟ್ಟ ನಂತರ ಅಲ್ಲಾಹನ ನಿರ್ದೇಶದಂತೆ ಪತ್ನಿ ಸಾರರೊಂದಿಗೆ ಸಿರಿಯಾದ ಹರಾನ್ ಎಂಬ ಪಟ್ಟಣಕ್ಕೆ ವಾಸ ಬದಲಾವಣೆ ಮಾಡಿದರು. ಅಲ್ಲಿ ಒಂದು ದೀರ್ಘ ಕಾಲ ದೀನೀ ಬೋಧನೆ ನಡೆಸಿದ ನಂತರ ಅಲ್ಲಿಂದ ಪತ್ನಿಯೊಂದಿಗೆ ಜೋರ್ಡಾನಿಗೆ ಪಯಣ ಮಾಡಿದರು. ಜೋರ್ಡಾನಿನಲ್ಲಿ ಅಂದು ಆಡಳಿತ ನಡೆಸುತ್ತಿದ್ದ ಸ್ವದೂಖ್ ಎಂಬವನು ಸುಂದರಿ ಹೆಣ್ಣಂದಿರನ್ನು ಕಂಡರೆ ಬಾಯಿ ಚಪ್ಪರಿಸುವವನಾಗಿದ್ದನು.
ಒಂದು ದಿನ ಹಝ್ರತ್ ಇಬ್ರಾಹೀಮ್ (ಅ) ಮತ್ತು ಪತ್ನಿ ಸಾರರವರು ಆತನ ಅರಮನೆಯ ಎದುರಿನಲ್ಲಿರುವ ಹಾದಿಯಾಗಿ ನಡೆದು ಹೋಗುತ್ತಿರುವಾಗ ಈತನ ದೃಷ್ಟಿಗೆ ಬಿದ್ದರು. ಆತ ಇಬ್ಬರನ್ನೂ ಮನೆಗೆ ಕರೆಯಿಸಿ ಹಝ್ರತ್ ಇಬ್ರಾಹೀಮರಲ್ಲಿ ಕೇಳಿದನು. “ನೀವು ಯಾರು? ನಿಮ್ಮ ಊರು ಎಲ್ಲಿ?” ಆಗ ಹಝ್ರತ್ ಇಬ್ರಾಹೀಮರು “ನಾನು ಪ್ರವಾದಿ ಇಬ್ರಾಹೀಮ್. ನಾನು ಅಲ್ಲಾಹನ ಖಲೀಲ್. ನನ್ನೊಂದಿಗೆ ಸೆಣಸಾಟವಾಡಿದ ನಮ್ರೂದನ ಕತೆ ನಿನಗೆ ಗೊತ್ತಿಲ್ಲವೇ?” ಎಂದು ಉತ್ತರ ಕೊಟ್ಟರು. ಬಳಿಕ ಆತ ಕೇಳಿದನು. “ಹಾಗಾದರೆ ಈ ಹೆಂಗಸು ಯಾರು?” (ಸಾರರವರಿಗೆ ಸನ್ನೆ ಮಾಡಿ) ಅದಕ್ಕೆ ಅವರು “ಇದು ನನ್ನ ಸಹೋದರಿ” ಎಂದು ಅಪ್ರತ್ಯಕ್ಷವಾದ ಉತ್ತರ ಕೊಟ್ಟರು.
ಹಝ್ರತ್ ಸಾರರವರ ಸೌಂದರ್ಯ ಕಂಡು ಮರುಳಾದ ಆತ “ಅವರನ್ನು ನನಗೆ ಮದುವೆ ಮಾಡಿ ಕೊಡುತ್ತೀರಾ?” ಎಂದು ಕೇಳಿದಾಗ “”ಅದು ಸಾಧ್ಯವಿಲ್ಲ. ಅದರ ಬಗ್ಗೆ ಬೇಕಾದರೆ ಅವಳಲ್ಲಿಯೇ ಕೇಳಿ” ಎಂದು ಜವಾಬು ಕೊಟ್ಟರು. ಹಝ್ರತ್ ಇಬ್ರಾಹೀಮರ ಉತ್ತರ ಕೇಳಿದಾಗ ಕುಪಿತನಾದ ಆತ ಬೀವಿ ಸಾರರವರನ್ನು ತನ್ನ ಖಾಸಗಿ ಕೋಣೆಗೆ ಎಳೆದುಕೊಂಡು ಹೋದನು. ಪ್ರವಾದಿ ಇಬ್ರಾಹೀಮರು ಕೂಡಲೇ ಈತನ ಕುತಂತ್ರದಿಂದ ಬಚಾವು ಆಗಲು ಅಲ್ಲಾಹನಲ್ಲಿ ದುಆ ಮಾಡಿದರು. ಸುಬ್ಹಾನಲ್ಲಾಹ್ ಕೋಣೆಯಲ್ಲಿ ಹೋಗಿ ಸಾರರವರ ಮೈಗೆ ಕೈ ಹಾಕಲು ಧುಮುಕಿದಾಗ ಆತನ ಕೈ ಎತ್ತಿದಲ್ಲಿಗೆ ಮರಗಟ್ಟಿ ಹೋಯಿತು. ಮಾತ್ರವಲ್ಲ ಇಡೀ ಅರಮನೆ ಗಡಗಡ ಅಲುಗಾಡಿತು.
ಈ ಭಯಾನಕ ದೃಶ್ಯ ಕಂಡ ಆತ ಬೀವಿ ಸಾರರವರಲ್ಲಿ ಕೇಳಿದನು?. ” ಈಗ ಏನಾಯಿತು? ನನಗೆ ಏನಾಗಿದೆ?” ಆಗ ಬೀವಿಯವರು ಹೇಳಿದರು. “ನೀವು ಅಲ್ಲಾಹನ ಖಲೀಲಾದ ಇಬ್ರಾಹೀಮರಿಗೆ ದ್ರೋಹ ಮಾಡಿದ್ದೀರಿ. ಈಗಲೇ ಅವರಲ್ಲಿ ತಪ್ಪುಕೇಳಿ ನನ್ನನ್ನು ಮೋಕ್ಷ ಮಾಡಿದರೆ ನೀವು ಈ ದುರಂತದಿಂದ ಬಚಾವು ಆಗುತ್ತೀರಿ” ಎಂದು. ಆತ ಕೂಡಲೇ ಹೊರಗಿರುವ ಹಝ್ರತ್ ಇಬ್ರಾಹೀಮರನ್ನು ಕರೆಯಿಸಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡನು. ಅಲ್ಲದೆ ಬೀವಿ ಸಾರರವರನ್ನು ಬಿಡುಗಡೆ ಕೂಡ ಮಾಡಿದನು.
ಹಝ್ರತ್ ಇಬ್ರಾಹೀಮರು ಆತನ ಕೈ ಸರಿಯಾಗಲು ಅಲ್ಲಾಹನಲ್ಲಿ ದುಆ ಮಾಡಿದರು. ದುಆ ಮಾಡಿದ್ದೇ ತಡ ಆತನ ಕೈ ಮೊದಲಿನಂತಾಯಿತು. ಪ್ರವಾದಿಯೊಬ್ಬರ ಪವಾಡವನ್ನು ಕಣ್ಣಾರೆ ಕಂಡ ಆತ ಕೂಡಲೇ ಇಸ್ಲಾಮ್ ಧರ್ಮ ಸ್ವೀಕಾರ ಮಾಡಿದನು. ಅಲ್ಲದೆ ಸಂತೋದಿಂದ ಬೀವಿ ಸಾರರವರಿಗೆ ತನ್ನ ಬಳಿಯಿದ್ದ ದಾಸಿಯರಲ್ಲಿ ಹಾಜರ ಎಂಬ ಹೆಸರಿನ ಒಬ್ಬರು ದಾಸಿಯನ್ನು ದಾನವಾಗಿ ಕೊಟ್ಟನು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ : ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.