ಬಂಟ್ವಾಳ (www.vknews.in) : ಬಂಟ್ವಾಳ ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯು ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬಿಸಿರೋಡಿನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬಂಟ್ವಾಳದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಎಂಬಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆ ಭವನದಲ್ಲಿ ನಡೆಯಿತು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕುಡಿಯುವ ನೀರು ಉಚಿತವಾಗಿ ನೀಡಲಾಗುತ್ತಿದೆ , ಆದರೆ ಮಂಗಳೂರಿಗೆ ನೀರು ಒದಗಿಸುವ ಬಂಟ್ವಾಳಕ್ಕೆ ಉಚಿತವಾಗಿ ನೀರು ಕೊಡುತ್ತಿಲ್ಲ, ಬಂಟ್ವಾಳ ನಗರೋತ್ಥಾನ ಕ್ರಿಯಾ ಯೋಜನೆಯ ಬಗ್ಗೆ ಪುರಸಭೆ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ, ಪ್ರತೀ ಸಾಮಾನ್ಯ ಸಭೆಯಲ್ಲಿ ಕ್ರೀಯಾ ಯೋಜನೆಯ ತಯಾರಿಸಿದ್ದೇವೆ, ಎಂದು ಜಿಲ್ಲಾ ಯೋಜನಾ ಕಚೇರಿಗೆ ಕೈ ತೋರಿಸುವುದು ಕಂಡು ಬರುತ್ತಿದೆ, ಪ್ರತೀ ಮೂರು ತಿಂಗಳಿಗೊಮ್ಮೆ ಕುಂದು ಕೊರತೆಗಳ ಬಗ್ಗೆ ಸಭೆ ಕರೆಯಬೇಕು, ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿರಬೇಕು, ಪುರಸಭೆ ಇಲಾಖೆ ಪ.ಜಾತಿ, ಪ.ಪಂಗಡದ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡದೆ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ, ಸಭೆಯಲ್ಲಿ ನಡೆಯುವ ನಿರ್ಣಯಗಳು ಕೇವಲ ದಾಖಲಾತಿ ಮಾತ್ರವೇ ಹೊರತು ಕಾರ್ಯರೂಪಕ್ಕೆ ಅಧಿಕಾರಿಗಳು ತರುತ್ತಿಲ್ಲ, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳೀಯ ಪ್ರತಿಭೆಗಳಿಗೆ ನಿಯಮಾನುಸಾರವಾಗಿ ನೇಮಕಾತಿ ಪ್ರಕ್ರಿಯೆ ಮಾಡದೆ ಅಕ್ರಮ ವ್ಯವಸ್ಥೆಯ ಮೂಲಕ ನೇಮಕಾತಿ ಮಾಡಿದ್ದಾರೆ, ಅಡ್ಯನಡ್ಕ ಸಂಚಾರಿ ಆಸ್ಪತ್ರೆಗೆ ವಾಹನವಿಲ್ಲದೆ ಅಲ್ಲಿನ ವೈದ್ಯರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಗುಡ್ಡಗಾಡು ಪ್ರದೇಶದ ಸಮುದಾಯಕ್ಕೆ ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಅನ್ಯಾಯವಾಗಿದೆ.
ಹಳೆಯ ವಾಹನಕ್ಕೆ 15 ವರ್ಷವಾದ ಹಿನ್ನೆಲೆಯಲ್ಲಿ ವಾಹನವನ್ನು ಗುಜರಿಗೆ ಸರಕಾರದ ನಿಯಮದಂತೆ ನೀಡಿದ್ದಾರೆ. ಆದರೆ ಬದಲಾಗಿ ಇಲಾಖೆ ಹೊಸ ವಾಹನವನ್ನು ಇದುವರೆಗೆ ನೀಡಿಲ್ಲ, ಸರಕಾರದ ಸ್ಪಷ್ಟವಾದ ಆದೇಶವಿದ್ದರೂ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿದ್ದಾರೆ. ಬಡವರ ಮಕ್ಕಳು ಹೋಗುವ ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಸಾಧ್ಯಗಳು ಇವೆ. ಅದ್ದರಿಂದ ಈ ಬಗ್ಗೆ ಕಠಿಣವಾದ ನಿರ್ಣಯವನ್ನು ತೆಗೆದುಕೊಳ್ಳಬೇಕು, ಮಂಚಿಕಜೆ ಎಂಬಲ್ಲಿ ಗಾಂಜಾ ಸೇವನೆ ಮಾಡಿ ಯುವಕರು ಸಾರ್ವಜನಿಕವಾಗಿ ತೊಂದರೆ ನೀಡುವುದು ಜಾಸ್ತಿಯಾಗಿದ್ದು,ಈ ಬಗ್ಗೆ ಪೋಲೀಸ್ ಇಲಾಖೆ ಕ್ರಮ ವಹಿಸಬೇಕು.
ಭಜನೆ, ಯೂಟ್ಯೂಬ್ ಚಾನೆಲ್ ಮತ್ತು ಟ್ಯಾಬ್ಲೋಗಳಲ್ಲಿ ಕೀಳು ಮಟ್ಟದ ಪದಗಳ ಬಳಕೆ ಮಾಡದಂತೆ ಕ್ರಮವಹಿಸಬೇಕು ಮೊದಲಾದ ಸಮಸ್ಯೆ, ಬೇಡಿಕೆ, ಕುಂದು ಕೊರತೆಗಳ ಬಗ್ಗೆ ಪ.ಜಾತಿ, ಪ.ಪಂಗಡದ ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್, ಗಂಗಾಧರ, ಹೊನ್ಮಪ್ಪ ಕುಂದರ್, ಅಶೋಕ್, ಸತೀಶ್ ಅರಳ, ಜನಾರ್ದನ ಚೆಂಡ್ತಿಮಾರು, ಸೇಸಪ್ಪ ಬೆದ್ರಕಾಡು ಮೊದಲಾದವರು ಸಭೆಯ ಮುಂದಿಟ್ಟರು.
ಉಚಿತವಾಗಿ ಕುಡಿಯುವ ನೀರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ತಹಶೀಲ್ದಾರ್ ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ಗ್ರಾಮಪಂಚಾಯತ್ ಮಟ್ಟದ ನಿಯಮಗಳು ವ್ಯತ್ಯಾಸವಿದೆ, ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಶ್ರೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಮನೀಶ್, ಬಂಟ್ವಾಳ ನಗರ ಪೋಲೀಸ್ ನಿರೀಕ್ಷಕ ಆನಂತ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.