ಬಂಟ್ವಾಳ (www.vknews.in) : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯ ವಿರುದ್ಧ ರಸ್ತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿಯ ವಾಹನಗಳನ್ನು ಸಾರ್ವಜನಿಕರು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ನಡೆದಿದೆ.
ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳು…. ಇದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ನಡೆದು ಬಂದ ಹಾದಿ, ಈ ಸಮಸ್ಯೆಯು ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ತಪ್ಪಿದ್ದಲ್ಲ.
ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿ ಆಗಾಗ ಭರವಸೆ ನೀಡುತ್ತಾರೆ ಮೇ ವಿನಃ ಇಲ್ಲಿನ ಸಮಸ್ಯೆ ಮಾತ್ರ ನಿತ್ಯ ನಿರಂತರವಾಗಿ ಕಳೆದ ಅನೇಕ ವರ್ಷಗಳಿಂದ ಸಾಗುತ್ತಾ ಬಂದಿದೆ. ಸಮಸ್ಯೆಯಿಂದ ಬಳಲಿ ರೊಚ್ಚಿಗೆದ್ದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು.
ಮಂಗಳೂರು-ಬೆಂಗಳೂರು ಜೊತೆಗೆ ಕೊಣಾಜೆ ಯೂನಿವರ್ಸಿಟಿ ಸಂಪರ್ಕದ ಕೇಂದ್ರ ಸ್ಥಾನವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನಿತ್ಯ ಗೋಳು ತಪ್ಪಿದ್ದಲ್ಲ. ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳಿನ ಸಮಸ್ಯೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಂಪೆನಿ ವಿಫಲವಾದ ಹಿನ್ನೆಲೆಯಲ್ಲಿ ,ತಾಳ್ಮೆಯನ್ನು ಕಳೆದಕೊಂಡ ಇಲ್ಲಿನ ವ್ಯಾಪಾರಸ್ಥರು, ಅಂಗಡಿ ಮಾಲಕರು, ಮತ್ತು ಸಾರ್ವಜನಿಕರು ಸೇರಿ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಕೇವಲ ಕಂಪೆನಿಯ ವಾಹನಗಳನ್ನು ಮಾತ್ರ ತಡೆದು ಪ್ರತಿಭಟನೆ ನಡೆಸಿದರು.
ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ,ಇದು ಒಂದು ಭಾಗವಾದರೆ, ಇಲ್ಲಿನ ಅಂಗಡಿಗಳಿಗೆ , ಪಾದಾಚಾರಿಗಳಿಗೆ ಹಾಗೂ ಬೈಕ್ ಸವಾರರ ಮೇಲೆ ಗುಂಡಿಯ ಕೆಸರು ನೀರು ಎರಚಿ ಕೆಸರು ನೀರಿನ ಸ್ನಾನ ಮಾಡಿಸಿದ ಕಂಪೆನಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಿನಗಳಿಂದ ಮಳೆ ನಿಂತ ಪರಿಣಾಮ ಮಣ್ಣು ಮಿಶ್ರಿತ ರಸ್ತೆಯಲ್ಲಿ ಧೂಳು ಏಳುತ್ತಿದ್ದು ಅಂಗಡಿ ಮಾಲಕರು ವ್ಯಾಪಾರ ಮಾಡುವಂತಿಲ್ಲ, ಹತ್ತಿರದ ಮನೆಯವರು ವಾಸ ಮಾಡುವಂತಿಲ್ಲ. ನಿತ್ಯ ಧೂಳಿನಿಂದ ಸ್ಥಳೀಯ ನಿವಾಸಿಗಳು ಕೆಮ್ಮು ಸಹಿತ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆಳಲು ತೋಡಿಕೊಂಡ ಸಾರ್ವಜನಿಕರು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಅಂಡರ್ ಪಾಸ್ ಮಾಡಿ ಇಲ್ಲಿನ ವ್ಯಾಪರಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದರು.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟವಾದ ದಿನದಂದು ಸಮಸ್ಯೆ ಬಗೆಹರಿಸುವ ಬಗ್ಗೆ ಮಾತು ಕೊಟ್ಟ ಬಳಿಕವೇ ತಡೆದ ವಾಹನಗಳನ್ನು ಹೋಗಲು ಬಿಡುವುದು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಕೊನೆಗೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಒಂದು ವಾರದೊಳಗೆ ಅಂದರೆ ಅ.18 ರಂದು ಸೋಮವಾರದ ಬಳಿಕ ಮೆಲ್ಕಾರಿನಲ್ಲಿ ರಸ್ತೆಗೆ ಡಾಮರು ಹಾಕಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.