(www.vknews.in) : ಹದೀಸ್ನ ಗ್ರಂಥಗಳಲ್ಲಿ ಸ್ವರ್ಣಾಕ್ಷರದಲ್ಲಿ ನಮೂದಿಸಲ್ಪಟ್ಟಿರುವ ಬಹಳ ತೂಕದ ಸಲಹೆ, ಮಾರ್ಗದರ್ಶನಗಳತ್ತ ಸಮುದಾಯ ಕಣ್ಣೋಡಿಸಬೇಕು. ಈ ಸಮಾಜದಲ್ಲಿ ಜನರು ನಾಲ್ಕು ಉದ್ದೇಶಗಳನ್ನಿಟ್ಟು ಸ್ತ್ರೀಯನ್ನು ಮದುವೆಯಾಗುತ್ತಾರೆ. ಆಕೆಯ ಸೊತ್ತಿಗಾಗಿ, ಆಕೆಯ ಸೌಂದರ್ಯಕ್ಕಾಗಿ, ಆಕೆಯ ಕುಲಮಹಿಮೆಗಾಗಿ (ಮನೆತನ) ಮತ್ತು ಆಕೆಯ ಧರ್ಮನಿಷ್ಠೆಗಾಗಿ. ಸಮಾಜ ಅವುಗಳ ಹಿಂದೆ ಬಿದ್ದಿರುವಾಗ, ನೀವು ಆಕೆಯ ಧರ್ಮನಿಷ್ಠೆಯನ್ನು ಪರಿಗಣಿಸಿ ವಿವಾಹವಾಗುವಂತೆ ಪ್ರವಾದಿವರ್ಯ(ಸ)ರು ಸೂಚಿಸಿದ್ದಾರೆ. ಮಾತ್ರವಲ್ಲ ಅದು ನಿಮ್ಮಿಂದ ಸಾಧ್ಯವಾದರೆ, ನಿಮಗೆ ಒಳಿತಾಗಲೆಂದೂ ಶುಭ ಹಾರೈಸಿದ್ದಾರೆ.
ಹೌದು, ಮದುವೆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಉಜ್ವಲ ಭವಿಷ್ಯಕ್ಕೆ ಹೇತುವಾಗಬೇಕು. ಹಾಗೆಯೇ ದಾಂಪತ್ಯದ ಹೊಸ್ತಿಲಿಗೆ ಹೆಜ್ಜೆಯಿಕ್ಕುವ ಹೆಣ್ಣಿನೊಂದಿಗೂ, ಆದರ್ಶನಿಷ್ಟೆ ಮತ್ತು ಒಳ್ಳೆಯ ಗುಣನಡತೆ ಇರುವ ವ್ಯಕ್ತಿಯ ಕಡೆಯಿಂದ, ನಿನ್ನ ಹೆತ್ತವರು ಅಥವಾ ಪೋಷಕರು ವಿವಾಹ ಪ್ರಸ್ತಾಪ ತಂದರೆ ನೀನದನ್ನು ಸ್ವೀಕರಿಸಿ ಮದುವೆಯಾಗುವಂತೆ ಸೂಚಿಸಿದ್ದಾರೆ. ಕನಿಷ್ಠ ನಮಾಝ್ನ ಪ್ರಜ್ಞೆಯೂ ಇಲ್ಲದವನನ್ನು ಕಟ್ಟಿಕೊಂಡು ಬದುಕು ರೂಪಿಸಲು, ಸರಿಪಡಿಸಲು ಸಾಧ್ಯವೇ?
ಇಸ್ಲಾಮೀ ಶರೀಅತ್ನಲ್ಲಿ ನಮಾಝ್ ಅತ್ಯಂತ ಮಹತ್ವದ ಆರಾಧನಾ ಕರ್ಮ. ಯಾವ ಕಾರಣಕ್ಕೂ ಅದನ್ನು ತೊರೆಯುವಂತಿಲ್ಲ. ನಾಳೆ ಪರಲೋಕದಲ್ಲಿ ಪ್ರಥಮ ವಿಚಾರಣೆಯೂ ನಮಾಝ್ನ ಕುರಿತಾಗಿದೆ. ಅದಿಲ್ಲದವನಲ್ಲಿ ಯಾವ ಒಳಿತಿರಬಹುದು? ಆರಂಭದಲ್ಲಿ ಒಟ್ಟಿಗೆ ಓಡಾಡುವಾಗ ಆಕೆಯ ನಮಾಝ್ನ ಕುರಿತು ತುಟಿಬಿಚ್ಚದ ಪತಿ, ಆಕೆ ನಮಾಝ್ ನಿರ್ವಹಿಸುತ್ತಿಲ್ಲವೆಂದು ಈಗ ದೂರು ತಂದಿದ್ದಾನೆ. ಆದರೆ ಆಕೆ ಸುಮ್ಮನಿರುವಳೇ? ಆಕೆಯೂ ಬಾಯಿ ಅಗಲಿಸಿದ್ದಾಳೆ. ಹನಿಮೂನ್ಗೆ ಹೋದಾಗ ನೀವೆಷ್ಟು ನಮಾಝ್ ಮಾಡಿದ್ದೀರಿ. ಈಗಲೂ ಫಜ್ರ್ ನಮಾಝ್ನ ಹೊತ್ತಲ್ಲಿ ಗೊರಕೆ ಹೊಡೆದು ನಿದ್ರಿಸುವುದಲ್ಲವೇ? ಆಕೆಯ ಘರ್ಜನೆಗೆ ಆತ ನಿರುತ್ತರನಾದ. ಸ್ತ್ರೀಯನ್ನು ಅವರ ಬಾಹ್ಯ ಸೌಂದರ್ಯ ಮತ್ತು ಹಣದ ಕಾರಣಕ್ಕೆ ವಿವಾಹವಾಗದಿರಿ.
ಸೌಂದರ್ಯದ ದರ್ಪದಿಂದ ಆಕೆ ಉತ್ತಮ ಪತ್ನಿಯ ಸ್ಥಾನ ಅಲಂಕರಿಸಲು ಆಕೆಗೆ ಸಾಧ್ಯವಾಗದಿರಬಹುದು. ಹಣದ ಮದ ಆಕೆಯನ್ನು ಬಂಡುಕೋರರಾಗಿಯೂ ಅನಿಯಂತ್ರಿತರಾಗಿಯೂ ಮಾಡಬಹುದು. ಅಂದರೆ ಧರ್ಮನಿಷ್ಠೆಯನ್ನು ಸಂಪೂರ್ಣ ಕಡೆಗಣಿಸಿ ಹಣ ಮತ್ತು ಸೌಂದರ್ಯಕ್ಕಾಗಿ ಹಾತೊರೆಯುವುದು ಆ ನಂತರ ಖೇದಿಸಲು ಕಾರಣವಾಗ ಬಹುದೆಂಬ ಪ್ರವಾದಿವರ್ಯ(ಸ)ರ ಮುನ್ನೆಚ್ಚರಿಕೆಯನ್ನು ಕಡೆಗಣಿಸಿರುವುದೂ ಸಮುದಾಯ ಇಂದು ಅನುಭವಿಸುತ್ತಿರುವ ದಾಂಪತ್ಯ ನರಕಯಾತನೆಗೆ ಕಾರಣ.
ಆದ್ದರಿಂದ ಕೌಟುಂಬಿಕ ಬದುಕು ಅರ್ಥಪೂರ್ಣವಾಗಬೇಕಾದರೆ, ನಂದಾ ದೀಪದಂತೆ ಬೆಳಗಬೇಕಾದರೆ ಜೋಡಿಗಳು ಆದರ್ಶದ ಬುನಾದಿಯಲ್ಲಿ ಜತೆ ಗೂಡಬೇಕು. ಅಂತಹ ಜೋಡಿಗಳಿಂದಲೇ ಬಾಧ್ಯತೆಗಳನ್ನು ನಿರ್ವಹಿಸಲು ಸಾಧ್ಯ. ಅಲ್ಲಿ ಅಲ್ಪಸ್ವಲ್ಪ ಅಸಮಾಧಾನಗಳು, ಮನಸ್ತಾಪಗಳೆದ್ದರೂ ಅದನ್ನು ಅಲ್ಲೇ ಚಿವುಟಿ ಹಾಕಬಹುದು. ಅದರ ನೆಪದಲ್ಲಿ ಖಂಡಿತ ಹೊಗೆ ಭುಗಿಲೇಳದು. ಏನಿದ್ದರೂ ಉಂಡು ಮಲಗುವ ತನಕ ಮಾತ್ರ. ಪ್ರತೀಕಾರ, ಮುಯ್ಯಿಗೆ ಅಲ್ಲಿ ಸ್ಥಾನವಿಲ್ಲ. ಯಾರೊಡನೆ ಪ್ರತೀಕಾರ? ಇದುವರೆಗೂ ಒಟ್ಟಿಗೆ ತಿಂದುಂಡು ಓಡಾಡಿದವರೇ ಪರಸ್ಪರ ಶಪಿಸಲು ಸಾಧ್ಯವೇ?
ಆದ್ದರಿಂದ ಸಹನೆ, ಸಂಯಮವೇ ಬಾಳಿನ ಬೆಳಕು. ತಗ್ಗುವ, ಬಗ್ಗುವ ಮತ್ತು ಪರಸ್ಪರ ಕ್ಷಮಿಸುವ ಮನಸ್ಸುಗಳು ಕೌಟುಂಬಿಕ ಭದ್ರತೆಯನ್ನು ಮತ್ತಷ್ಟು ಉಳಿಸಿ ಬೆಳೆಸುತ್ತದೆ…
ಮುಂದುವರಿಯುವುದು…… ✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.