(www.vknews.in) ; ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ……….
ಅಕ್ಷರ ಸಾಹಿತ್ಯ……
ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು ಇತ್ಯಾದಿ ಎಲ್ಲಾ ಪ್ರಕಾರದ ಬರಹಗಳನ್ನು ಮೂಡಿಸುತ್ತಾ ಹೋಗುವುದು. ತನಗೆ ತಿಳಿದಿರುವ ಅಥವಾ ತನ್ನ ಜ್ಞಾನದ ಮಿತಿಯಲ್ಲಿ ಬರೆಯುವುದು. ಇದರಲ್ಲಿ ಅಕ್ಷರದ ಅಥವಾ ಪದಗಳ ಲಾಲಿತ್ಯವೇ ಮೇಲುಗೈ ಪಡೆದಿರುತ್ತದೆ ಜೊತೆಗೆ ತನ್ನ ಬುದ್ದಿಯ ಪ್ರದರ್ಶನವೂ ಸೇರಿರುತ್ತದೆ. ನನ್ನ ವೈಯಕ್ತಿಕ ಅನಿಸಿಕೆಯ ಪ್ರಕಾರ ಇದರಲ್ಲಿ ಹೆಚ್ಚು ಜೀವ ಇರುವುದಿಲ್ಲ. ಒಣ ಅಥವಾ ಶುಷ್ಕ ವಾತಾವರಣದ ರೀತಿಯಲ್ಲಿ ಈ ಬರಹಗಳು ಇರುತ್ತವೆ. ಇದರಲ್ಲಿ ಹೆಚ್ಚು ಆಳವಾದ ಅಥವಾ ಅಧ್ಯಯನದ ಒಳ ಅರ್ಥಗಳು ಗೋಚರಿಸುವ ಸಾಧ್ಯತೆ ಕಡಿಮೆ. ನಿರೂಪಣೆಯೇ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ಅನುಭವ ಸಾಹಿತ್ಯ……*
ಅಕ್ಷರ ಜ್ಞಾನದ ಜೊತೆಗೆ ಬದುಕಿನ ಅನುಭವದ ಆಧಾರದ ಮೇಲೆ ಬರೆಯುವ ಪ್ರಕಾರ. ಅಂದರೆ ಇಲ್ಲಿ ಅನುಭವಗಳಿಗೆ ಅಕ್ಷರದ ರೂಪ ನೀಡುವುದು. ಒಂದಷ್ಟು ಅಧ್ಯಯನ ಚಿಂತನೆಗಳು ಇಲ್ಲಿ ಅಡಕವಾಗಿರುವ ಸಾಧ್ಯತೆ ಇರುತ್ತದೆ. ಬರೆಯುವ ತುಡಿತ ಹೆಚ್ಚಾಗಿರುತ್ತದೆ. ಆ ಅಕ್ಷರಗಳಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಗುರುತಿಸಬಹುದು.
ಅಕ್ಷರಗಳಿಂದ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಿತ್ಯಿಕವಾಗಿ ಉತ್ತಮ ಗುಣಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ.
ಅನುಭಾವ ಸಾಹಿತ್ಯ…
” ರವಿ ಕಾಣದ್ದನ್ನು ಕವಿ ಕಂಡ ” ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ಅಕ್ಷರ ಜ್ಞಾನದ ಜೊತೆಗೆ ಅನುಭವವೂ ಸೇರಿ ಅದರಿಂದ ಮೇಲೇರಿ ಇನ್ನಷ್ಟು ಆಳವನ್ನು ಹುಡುಕುತ್ತಾ ಒಳನೋಟಗಳನ್ನು, ವಿವಿಧ ಮುಖಗಳನ್ನು ಗ್ರಹಿಸುತ್ತ, ಬರೆಯುತ್ತಾ ಹೋಗುವುದು ಅನುಭಾವ ಸಾಹಿತ್ಯ ತುಂಬಾ ಸೂಕ್ಷ್ಮ ಮತ್ತು ದೂರ ದೃಷ್ಟಿ ಇದರಲ್ಲಿ ಸಿಗುತ್ತದೆ. ಅಧ್ಯಯನ ಮತ್ತು ಚಿಂತನೆಯೂ ಇಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಜೀವ ಮೈತುಂಬಿ ಹರಿಯುತ್ತದೆ..
ಬರಹಗಳಲ್ಲಿ ಸಹ ಗುಣಮಟ್ಟವನ್ನು ಅಳೆಯಬಹುದು. ಅನೇಕ ಬರಹಗಳು ಕಾಲದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಈಗಲೂ ಪ್ರಸ್ತುತವಾಗಿ ಉಳಿದಿರುವುದಕ್ಕೆ ಕಾರಣ ಅವುಗಳ ಆಳದಲ್ಲಿ ಇರುವ ಅನುಭಾವ.
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಅನೇಕ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ರಚಿಸಲು ಜನಸಾಮಾನ್ಯರಿಗೆ ಒಂದು ಅತ್ಯುತ್ತಮ ವೇದಿಕೆ ದೊರೆತಿದೆ. ಆದರೆ ಅದು ಅಕ್ಷರ ಸಾಹಿತ್ಯ ದಾಟಿ ಅನುಭವ ಸಾಹಿತ್ಯ ಮೀರಿ ಅನುಭಾವ ಸಾಹಿತ್ಯವಾಗಲಿ ಎಂಬುದು ಒಂದು ಆಶಯ.
ನಿಜವಾದ ಸಾಹಿತ್ಯ ಮಾನವೀಯತೆಯ ವಿಕಾಸವಾದದ ಕುರುಹುಗಳಾಗಿ ಉಳಿಯಬೇಕೇ ಹೊರತು ಶಿಕ್ಷಣ ಆಧಾರಿತ ಮಾನವೀಯ ಮೌಲ್ಯಗಳ ವಿನಾಶದ ಮಾರ್ಗವಾಗಬಾರದು…………. ಇದೊಂದು ಸರಳ ನಿರೂಪಣೆ. ಸಾಹಿತ್ಯದ ಆಳ ಅಗಲಗಳು ಅನಂತ……..
— ವಿವೇಕಾನಂದ. ಎಚ್. ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.