(www.vknews.in) ; ಸಂಪಾಜೆಯಲ್ಲಿ ಪ್ರತಿವರ್ಷ ನಡೆಯುತ್ತಿರುವ ಯಕ್ಷೋತ್ಸವ ಈ ವರ್ಷವೂ ಇದೇ ನವೆಂಬರ್ 6 ರಿಂದ 9 ರ ತನಕ ಅದ್ದೂರಿಯಿಂದ ನಡೆಯಿತು. ಕೊನೆಯ ಸಮಾಪನ ದಿನದಲ್ಲಿ ನಾನೂ ಭಾಗವಹಿಸಿದ್ದೆ. ಸಾಹಿತ್ಯ, ಸಾಂಸ್ಕೃತಿಕ ಉತ್ಸವಗಳು ಎಲ್ಲಾ ಕಡೆ ನಡೆಯುತ್ತವೆ. ಆದರೆ ಶ್ರೀ ಶ್ಯಾಮ್ ಭಟ್ಟರು ನಡೆಸುತ್ತಿರುವ ಈ ಯಕ್ಷೋತ್ಸವದ ಹಾಗೆ ಒಂದು ಸಾಂಸ್ಕೃತಿಕ ಉತ್ಸವ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ನಡೆಯುವುದಿಲ್ಲ ಎಂದು ನಾನು ಧೈರ್ಯದಿಂದ ಹೇಳಬಲ್ಲೆ.
ಈ ಉತ್ಸವದ ವಿಶೇಷತೆಗಳನ್ನು ಎಲ್ಲವನ್ನೂ ಒಂದು ಲೇಖನದಲ್ಲಿ ಅನಾವರಣಗೊಳಿಸುವುದು ಅಸಾಧ್ಯ. ಆದ್ದರಿಂದ ಸಂಕ್ಷಿಪ್ತವಾಗಿ ನಾನು ವಿವರಿಸುತ್ತೇನೆ. ಈ ಸಂಕ್ಷಿಪ್ತ ವಿವರಣೆಯನ್ನು ನೀವು ಮನಸ್ಸಿಟ್ಟು ಓದಿದರೆ “ಭಾರತದಲ್ಲೇ ಇಂತಹ ಉತ್ಸವ ನಡೆಯುವುದಿಲ್ಲ ” ಎಂದು ನಾನು ಹೇಳಿದುದರಲ್ಲಿ ಉತ್ಪ್ರೇಕ್ಷೆ ಖಂಡಿತ ಇಲ್ಲವೆಂದು ನೀವೇ ಹೇಳುತ್ತೀರಿ.
ಮೂಲತಃ ಕೈರಂಗಳದವರಾದ ಶ್ರೀ ಶ್ಯಾಮ್ ಭಟ್ಟರು ಐ.ಎ. ಎಸ್ ಆಗಿ ಉಡುಪಿ ಜಿಲ್ಲಾಧಿಕಾರಿಯಾಗಿ ನಂತರ ಬೆಂಗಳೂರಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಶ್ರೇಷ್ಠ ಸರಕಾರಿ ಅಧಿಕಾರಿಯಾಗಿ ವಿರಾಜಿಸಿ ನಿವೃತ್ತರಾದವರು. ಸಂಪಾಜೆಯಿಂದ ಅವರು ಮದುವೆಯಾದುದರಿಂದ ಕೈರಂಗಳಕ್ಕೆ ಸಿಗಬೇಕಾಗಿದ್ದ ಸೌಭಾಗ್ಯವು ಸಂಪಾಜೆಯ ಪಾಲಾಯಿತು.
ಮೊನ್ನೆ ಸಂಪಾಜೆ ಎಂಬ ನಾಡಿಗೆ ನಾಡೇ ಉತ್ಸವದ ಸಂಭ್ರಮದಲ್ಲಿ ಮೆರೆಯುತ್ತಿರುವಾಗ ಇದು ಕೈರಂಗಳದಿಂದ ಸಂಪಾಜೆ ಕಸಿದು ಕೊಂಡ ಸೌಭಾಗ್ಯ ಎಂಬುದೊಂದು ಭಾವನೆ ನನ್ನ ಮನದಾಳದಲ್ಲಿ ಮೂಡಿತ್ತು. ನಿಜಕ್ಕೂ ಒಂದು ಸರಕಾರಕ್ಕೆ ಅಥವಾ ಒಂದು ಒಂದು ದೊಡ್ಡ ಸಂಘಟನೆಗೆ ಸಾಧ್ಯವಾಗದ ವಿಧದಲ್ಲಿ ಶ್ರೀ ಶ್ಯಾಮ್ ಭಟ್ಟರೊಬ್ಬರದೇ ಖರ್ಚಿನಲ್ಲಿ ಇಂತಹ ಒಂದು ಕಲಾ ವೈಭವ ನಡೆಯುವುದೆಂದರೆ ಅತ್ಯಾಶ್ಚರ್ಯಕರವಾಗಿದೆ. ಬಹುಕಾಲದ ಆಪ್ತನಾಗಿದ್ದ ನನ್ನನ್ನು ಕಂಡ ಕೂಡಲೇ ಆ ಬ್ಯುಝಿಯ ನಡುವೆ ಕೂಡಾ ಕೆಲ ಕ್ಷಣಗಳನ್ನು ನನಗಾಗಿ ಬಿಟ್ಟು ಕೊಟ್ಟ ಅವರ ವಿಶಾಲ ಮನಸ್ಕತೆಗೆ ನಮೋ ಅನ್ನುತ್ತೇನೆ.
ಎಂತೆಂತಹ ಮಾಜಿ, ಹಾಲಿ ಕಲಾವಿದರ ಅಪೂರ್ವ ಸಂಗಮ. ನಿವೃತ್ತ ಅಧಿಕಾರಿಗಳ, ಹಾಲಿ ಅಧಿಕಾರಿಗಳ ಮಿಲನ, ಮುಖ್ಯವಾಗಿ ಯಕ್ಷಗಾನದ ಕಲೆಗೆ ಆದ್ಯತೆಯಾಗಿದ್ದರೂ ಎಲ್ಲಾ ವಿಧ ಪ್ರತಿಭೆಗಳ ಮಿಲನೋತ್ಸವ. ಹೆಸರಾಂತ ಸಾಹಿತಿಗಳು, ಕವಿಗಳು, ಯಕ್ಷಗಾನದ ದಿಗ್ಗಜರು ಮುಂತಾದವರನ್ನೆಲ್ಲ ಒಂದೇ ವೇದಿಕೆಯಲ್ಲಿ ಕಾಣುವ ಅಪರೂಪದ ಅವಕಾಶ.
6 ರಿಂದ 9 ರ ತನಕ ನಾಲ್ಕು ದಿನ ನಡೆದ ಈ ಉತ್ಸವದಲ್ಲಿ ಮೊದಲು ಮೂರು ದಿನಗಳ ಕಲಾ ಯಕ್ಷಗಾನ ಸ್ಪರ್ಧೆಯಾಗಿತ್ತು. ಆ ಸಂದರ್ಭದಲ್ಲೂ ಕಲಾವಿದರಿಗೂ ಪ್ರಕ್ಷೇಕರಿಗೂ ಊಟ ಉಪಹಾರ, ಚಹಾದ ವ್ಯವಸ್ಥೆಯಿತ್ತು. ನಾಲ್ಕನೆಯ ಸಮಾಪನ ದಿನದಲ್ಲೂ ಕಲಾವಿದರೂ ಕಲಾಭಿಮಾನಿಗಳು ಸೇರುವ ದಶಸಹಸ್ರ ಸಂಖ್ಯೆಯ ಜನರಿಗೂ ಇಡೀ ದಿನ ರಾತ್ರಿ ಹಗಲಿನ ಎಲ್ಲಾ ಊಟೋಪಹಾರ ಮತ್ತು ಚಹಾದ ವ್ಯವಸ್ಥೆ ಮಾಡುವುದೆಂದರೆ ಅದೊಂದು ಅದ್ಭುತ ವ್ಯವಸ್ಥೆಯಾಗಿದೆ. ಮತ್ತು ಶ್ರೀ ಶ್ಯಾಮ್ ಭಟ್ ಮತ್ತು ಅವರ ಕುಟುಂಬದ ಹೃದಯ ವೈಶಾಲ್ಯತೆಯ ವಿಸ್ಮಯವಾಗಿದೆ. ನಾವು ಸಾವಿರ ಮಂದಿ ಭಾಗವಹಿಸುವ ಮದುವೆ ಸಮಾರಂಭಕ್ಕೆ ಒಂದು ಹೊತ್ತಿನ ಊಟ ಕೊಡಲು ಎಷ್ಟು ಕಾಳಜಿ ವಹಿಸಬೇಕು, ಅದರ ಸಿದ್ಧತೆಗಳಿಗೆ ಎಷ್ಟು ಕಷ್ಟಗಳನ್ನು ಅನುಭವಿಸಬೇಕು ಎಂಬುದನ್ನು ಯೋಚಿಸಿದಾಗ ಶ್ರೀ ಶ್ಯಾಮ್ ಭಟ್ಟರ ಈ ಊಟೋಪಹಾರದ ವ್ಯವಸ್ಥೆಯ ಮಹತ್ವವು ಗೊತ್ತಾಗುತ್ತದೆ.
ಅದೂ ಕೂಡಾ ಎಂತಹ ಊಟ ಅಂತೀರಿ? ಎಷ್ಟು ವಿಧಗಳ ಪಲ್ಯ, ಖಾದ್ಯಗಳು ಅಂತೀರಿ! ಅದೂ ಶ್ರೇಷ್ಠ ಗುಣಮಟ್ಟದ್ದು. ಅದನ್ನು ಬಡಿಸಿಕೊಡುವವರ ವಿನಯ, ತಾಳ್ಮೆ, ಅತಿಥಿ ಗೌರವಗಳನ್ನು ಕಂಡೇ ತಿಳಿಯಬೇಕು. ಸಾವಿರಾರು ಮಂದಿಗೆ ಒಂದು ಕಡೆಯಲ್ಲಲ್ಲ, ಎರಡು ಕಡೆಯಲ್ಲಿ ಊಟ ಅನ್ನುವುದು ಇನ್ನಷ್ಟು ಅಚ್ಚರಿ. ಉತ್ಸವ ನಡೆಯುವ ಸಂಪಾಜೆ ಶಾಲೆಯ ಬಳಿ ಒಂದು ವ್ಯವಸ್ಥೆ ಯಾದರೆ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಶ್ರೀ ಶ್ಯಾಮ್ ಭಟ್ಟರ ಮನೆಯಲ್ಲಿ ಇನ್ನೊಂದು ವ್ಯವಸ್ಥೆ. ಮನೆಗೆ ಬರುವ ವಿಶಿಷ್ಠಾತಿಥಿಗಳಿಗೆ ಅಲ್ಲಿನ ವ್ಯವಸ್ಥೆ. ಅವರ ಮನೆಯಲ್ಲಿ ಊಟ ಮಾಡಿದ ನನ್ನ ಜೊತೆಗಾರ ಸಾಹಿತಿಯೊಬ್ಬರು; ” ನನ್ನ ಜೀವಮಾನದಲ್ಲೇ ಇಂತಹ ಊಟ ಸವಿದುದು ಇದೇ ಮೊದಲು” ಅಂದರು. ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟರೂ ಕೂಡಾ ಅವರ ಮನೆಯಲ್ಲಿ ನನ್ನ ಜೊತೆಗೇ ಊಟ ಮಾಡಿದ್ದರು. ಅವರು ಕೂಡಾ ಊಟದ ವೈವಿಧ್ಯತೆ, ರುಚಿಶುದ್ಧಿ, ನೈರ್ಮಲ್ಯ ಹಾಗೂ ಊಟ ಬಡಿಸುವವರ ಉತ್ತಮ ಗುಣ ಸಂಪನ್ನತೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ಶಾಲೆಯ ಬಳಿಯ ಊಟೋಪಹಾರದ ವ್ಯವಸ್ಥೆಯ ಅಚ್ಚುಕಟ್ಟು ವರ್ಣನಾತೀತ. ಸಾವಿರಾರು ಮಂದಿ ಊಟ ಮಾಡಿದರೂ ನೂಕುನುಗ್ಗಲಿಲ್ಲದೆ ಎಲ್ಲರೂ ಸರಾಗವಾಗಿ ಉಣ್ಣುವ ವ್ಯವಸ್ಥೆ. ಸಂಜೆ ನಾಲ್ಕು ಗಂಟೆಗೆ ಚಹಾ ಮತ್ತು ಎರಡು ಮೂರು ಬಗೆಯ ತಿಂಡಿಗಳನ್ನು ನಾವು ಸವಿಯುತ್ತಿರುವಾಗಲೇ ನೂರಾರು ಜನರು ಸವಿಯುತ್ತಿದ್ದರು. ರಾತ್ರಿ ಏಳು ಗಂಟೆಗೆ ನೋಡುತ್ತೇನೆ ಆಗಲೂ ನೂರಾರು ಜನರು ಚಹಾ ತಿಂಡಿ ಸವಿಯುತ್ತಿದ್ದರು. ಹಾಗಾದರೆ ಎಷ್ಟು ಸಾವಿರ ಮಂದಿ ಚಹಾ, ತಿಂಡಿ ಸವಿದಿರಬಹುದು ಎಂಬುದನ್ನು ಯೋಚಿಸಿ ನೋಡಿ. ರಾತ್ರಿಯ ಊಟವನ್ನು ನಾವು ಶಾಲೆಯಲ್ಲೇ ಮಾಡಿದೆವು. ಅದು ಮರುದಿನ ಬೆಳಗ್ಗಿನ ತನಕ ಮುಂದುವರಿದಿತ್ತು. ಆ ಮೇಲೆ ಅದೇ ರೀತಿ ಬೆಳಗ್ಗಿನ ಉಪಾಹಾರ!
ಇದಕ್ಕೆಲ್ಲ ಬಳಕೆಯಾಗುವ ಸಾಮಾನುಗಳ ವಿಷಯ ಬಿಡಿ, ಬರೀ ಸುಪಾರಿ ಪ್ಲೇಟ್ ಗಳಿಗೆ ದುಡ್ಡು ಎಷ್ಟು ಬೇಕಾದೀತೆಂದು ಊಹಿಸಿ ನೋಡಿ! ಇಷ್ಟೆಲ್ಲ ಅಪಾರವಾದ ಊಟೋಪಹಾರದ ವ್ಯವಸ್ಥೆಯನ್ನು ಒಬ್ಬ ವ್ಯಕ್ತಿ ನಡೆಸುವುದೆಂದರೆ ಆಶ್ಚರ್ಯವಲ್ಲವೇ? ಅದೆಂತಹ ಅಚ್ಚುಕಟ್ಟು! ಅದೆಂತಹ ನೈರ್ಮಲ್ಯ! ಅದೆಂತಹ ಹೃದಯ ವೈಶಾಲ್ಯ! ನೂಕುನುಗ್ಗಲಿದೆ, ಗೌಜಿ ಗದ್ದಲವಿಲ್ಲದೆ, ಪ್ರಯಾಸವಿಲ್ಲದೆ ಅನಾಯಾಸವಾಗಿ ಒಂದೇ ಕಡೆ ಸಾವಿರಾರು ಮಂದಿ ಮೂರು ಹೊತ್ತಿನ ಊಟ ಮತ್ತು ಸಂಜೆಯ ಚಹಾ, ಉಪಾಹಾರವನ್ನು ಸವಿಯುವುದೆಂದರೆ ಆ ವ್ಯವಸ್ಥೆಯ ಹಿಂದಿನ ಇಚ್ಛಾ ಶಕ್ತಿ ನಿಜಕ್ಕೂ ಆಶ್ಚರ್ಯಕರ. ಒಂದು ಸರಕಾರಕ್ಕೆ ಕೂಡಾ ಹೀಗೆ ನಡೆಸಲು ಸಾಧ್ಯವಿಲ್ಲವೇನೋ ಎಂದೆನಿಸುತ್ತದೆ. ಸರಕಾರಕ್ಕೆ ಇದಕ್ಕಿಂತಲೂ ಹೆಚ್ಚಿನ ಜನರಿಗೆ ಅನ್ನ ಹಾಕಲು ಸಾಧ್ಯವಾಗಬಹುದು. ಆದರೆ ಪ್ರತಿಯೊಬ್ಬರಿಗೂ ಆತಿಥ್ಯ ಗೌರವ ನೀಡಿ ಶಾಂತಿ ಸುವ್ಯವಸ್ಥಿತವಾಗಿ ಈ ರೀತಿ ಅನ್ನಾಹಾರ ನೀಡಲು ಯಾವ ಸರಕಾರಕ್ಕೂ ಖಂಡಿತ ಸಾಧ್ಯವಿಲ್ಲ. ಸರಕಾರದ ಕೊಡುಗೆಯಲ್ಲಿ ಫಲಾನುಭವಿಗಳ ಮೇಲೆ ಗೌರವವಿರುವುದಿಲ್ಲ. ಆದರೆ ಈ ಯಕ್ಷೋತ್ಸವದಲ್ಲಿ ಊಟೋಪಹಾರ ಮಾಡುವ ಯಾವನೇ ಇರಲಿ, ವಿ. ಐ. ಪಿ. ಇರಲಿ, ಕಡುಬಡವನೋ ಅವಿದ್ಯಾವಂತನೋ ಯಾವ ಜಾತಿ ಧರ್ಮದವನೇ ಆಗಿರಲಿ ಪ್ರತಿಯೊಬ್ಬರೂ ತಾನು ವಿಶಿಷ್ಠಾತಿಥಿ ಎಂಬ ಭಾವದಲ್ಲೇ ಅನ್ನಾಹಾರ ಸೇವಿಸುವಂತಹ ಅದ್ಭುತ ವಾತಾವರಣವನ್ನು ಶ್ರೀ ಶ್ಯಾಮ್ ಭಟ್ಟರು ಇಲ್ಲಿ ಸೃಷ್ಠಿಸಿದ್ದಾರೆ.
ಇಷ್ಟೆಲ್ಲ ಮಾಡಿದರೂ ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಖ್ಯ ಅತಿಥಿಯೊಬ್ಬರು ತನ್ನ ಭಾಷಣದಲ್ಲಿ; ದಾನಿಗಳಾದರೆ ಶ್ಯಾಮ್ ಭಟ್ಟರಂತಿರಬೇಕು, ಅವರು ಎಲ್ಲವನ್ನೂ ಮಾಡುತ್ತಾರೆ, ಆದರೆ ಕಾಣಸಿಗುವುದಿಲ್ಲ” ಎಂದು ಹೇಳಿದ ಮಾತು ಅಕ್ಷರಶಃ ಸತ್ಯ. ಕಲಾವಿದರಿಗೂ ಯಥೇಚ್ಛ ಸಂಭಾವನೆ ಹಾಗೂ ಲಕ್ಷಾಂತರ ರೂಪಾಯಿಗಳ ನಗದು ಹಾಗೂ ಲಕ್ಷಾಂತರ ವೆಚ್ಚದಲ್ಲಿ ಟ್ರೋಪಿ, ಪ್ರಶಸ್ತಿ ಪತ್ರಗಳನ್ನು ಕೂಡಾ ಸ್ವಂತ ವೆಚ್ಚದಲ್ಲಿ ಮಾಡುತ್ತಿದ್ದರೂ ಕೂಡಾ ತನ್ನನ್ನು ಜನರು ಗುರುತಿಸಿ ಗೌರವ ಕೊಡಬೇಕು ಎಂಬ ಭಾವನೆಯಿಲ್ಲದ ವಿನಯದ ಪ್ರತಿರೂಪವಾಗಿರುವ ಶ್ರೀ ಶ್ಯಾಮ್ ಭಟ್ಟರು ಪ್ರೇಕ್ಷಕರಲ್ಲೊಬ್ಬರಾಗಿ ಸಭೆಯಲ್ಲಿ ಕೂತಿರುತ್ತಾರೆ. ಇಂತಹ ಓರ್ವ ಕಲೋಪಾಸಕ ಈ ಭಾರತದಲ್ಲೇ ಅಪರೂಪ.
ಅವರಿಗೆ ಆಯುರಾರೋಗ್ಯವನ್ನು ದೇವರು ಕರುಣಿಸಲೆಂದು ಪ್ರಾರ್ಥಿಸುತ್ತಿದ್ದೇನೆ. ಕಾರ್ಯಕ್ರಮಗಳೆಲ್ಲವೂ ಯಕ್ಷಗಾನ ರಂಗದ ಅನುಭವ ಸಂಪನ್ನ ವ್ಯಕ್ತಿಗಳಿಂದಲೇ ನಡೆಯುತ್ತವೆ. ತೀರ್ಪುಗಾರರು, ನಿರೂಪಕರು ಎಲ್ಲರೂ ಪಕ್ವಗೊಂಡ ನಿಪುಣ ಕಲಾವಿದರು. ಅವರ ಭಾಷೆ, ಉಚ್ಚಾರ ಶುದ್ಧಿ, ಅವರ ನಿರೂಪಣೆಗಳೂ ಕೂಡಾ ಒಂದು ರಸದೌತಣ. ಒಟ್ಟಿನಲ್ಲಿ ಕನ್ನಡ ಸಾಹಿತ್ಯದ ಸೊಬಗನ್ನು ಕೂಡಾ ಕಾಣಲು ಸಾಧ್ಯವಾಗುವ ಒಂದು ಉತ್ಸವವಿದು. ಜಾತ್ಯಾತೀತ ಭಾವದ ಸಂಗಮವಿದು. ಇಲ್ಲಿ ಧರ್ಮ, ಜಾತಿಗಳ ಪರಿಗಣನೆಯಿಲ್ಲ, ಕಲೆ, ಸಾಹಿತ್ಯ, ಪ್ರತಿಭೆ, ವಿದ್ವತ್ತು ಗಳೆಂಬ ಜಾತಿಬೇಧ ರಹಿತವಾದ ಪ್ರತಿಭೋತ್ಸವ. ಇದೆಲ್ಲವೂ ಶ್ರೀ ಶ್ಯಾಮ್ ಭಟ್ಟರು ಕಲೆಯನ್ನು ರಕ್ತಗತ ಮಾಡಿಕೊಂಡಿರುವುದರ ಸತ್ಪಲ. ಕಲೆಯನ್ನು ಉಸಿರಾಗಿಸಿಕೊಂಡು ದುಡಿಯುವ ಇತರ ಸಹಕಾರಿಗಳ ನಿಯ್ಯತ್ತಿನ ಫಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.