ಹುಬ್ಬಳ್ಳಿ (www.vknews.in) : ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮತ್ತು ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಧಿಕಾ ಮಲ್ಲೇಶ್ ಗಡ್ಡಿಹೊಳಿ (19) ಮೃತಪಟ್ಟ ಗರ್ಭಿಣಿ ಮಹಿಳೆ. ಪತ್ನಿ ಸಾವಿನ ಸುದ್ದಿ ತಿಳಿದು ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ಮಲ್ಲೇಶ್(25) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮಲ್ಲೇಶ್ಗೆ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 2 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬೆಳಗಾವಿ ಮೂಲದ ರಾಧಿಕಾ ಗಡ್ಡಿಹೊಳಿ ಸಾವಿನ ಮನೆ ಸೇರಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ರಾಧಿಕಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲಮಟ್ಟಿ ಗ್ರಾಮದ ರಾಧಿಕಾ ವಯಸ್ಸು ಕೇವಲ 19 ವರ್ಷ. ಎಂಟೂವರೆ ತಿಂಗಳ ಗರ್ಭಿಣಿ ಆಗಿದ್ದ ರಾಧಿಕಾಗೆ 6 ಬಾರಿ ಫಿಟ್ಸ್ ಬಂದಿತ್ತು. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಫಿಟ್ಸ್ ಬಂದು ಸೀರಿಯಸ್ ಆಗಿದ್ದರು. 2 ಆಸ್ಪತ್ರೆಗೆ ಅಲೆದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿರಲಿಲ್ಲ. ಕೊನೆಗೆ ಬೆಳಗಾವಿಯ ಬಿಮ್ಸ್ಗೆ ಕರೆದುಕೊಂಡು ಬರುವಷ್ಟರಲ್ಲಿ ಶಿಶು ಗರ್ಭಿಣಿಯ ಹೊಟ್ಟೆಯಲ್ಲೇ ಮೃತಪಟ್ಟಿತ್ತು. ರಾಧಿಕಾ ಸ್ಥಿತಿಯೂ ಗಂಭೀರವಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಬಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ರಾಧಿಕಾ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.