(www.vknews.in) : ಪವಿತ್ರ ರಮಲಾನ್ ತಿಂಗಳಲ್ಲಿ ಇಫ್ತಾರಿಗೆ ಹಲವಾರು ನಮೂನೆಯ ಖಾದ್ಯಗಳನ್ನು ಮಾಡುವ ರೂಡಿ ಬಹಳ ಪುರಾತನ ಕಾಲದಿಂದಲೇ ವಾಡಿಕೆಯಾಗಿ ಬಂದಿದೆ. ನಮ್ಮೂರಲ್ಲಿ ಹೆಚ್ಚಾಗಿ ಸಮೂಸ, ಕಟ್ಲೆಟ್, ರೋಲ್, ಬಜೆ, ಕಿನ್ನತ್ತಪ್ಪ, ಮಣ್ಣಿ, ಪಯರ್ ತನ್ನಿ (ಹೆಸರು ಕಾಳಿನ ಸೋಜಿ) ಮುಂತಾದ ತಿಂಡಿಗಳಿಗೆ ಹೆಚ್ಚಾಗಿ ಪ್ರಾಮುಖ್ಯತೆ ಕೊಡುವುದಾದರೆ, ಅರಬ್ ರಾಷ್ಟ್ರಗಳಲ್ಲಿ ಅರಬಿಗಳ ಮಧ್ಯೆ ಇತ್ಯಾದಿ ತಿಂಡಿಗಳು ಯಾವತ್ತೂ ಕಾಣಸಿಗಲು ಸಾಧ್ಯವಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅರಬಿ ಮನೆಗಳ ಅಡುಗೆ ಕೋಣೆಗಳು ಮಲೆಬಾರಿ ಅಡುಗೆಗಾರರ ಹಿಡಿತದಲ್ಲಿರುವ ಕಾರಣದಿಂದ ದಿನದಿಂದ ದಿನಕ್ಕೆ ನಮ್ಮ ಕರಾವಳಿಗರ ಮತ್ತು ಮಲಬಾರಿಗಳ ರಮಲಾನಿನಲ್ಲಿ ಕೈ ಬಿಡಲಾಗದ ಖಾದ್ಯ ಸಮೂಸ ಅವರ ಇಫ್ತಾರಿನಲ್ಲೂ ತನ್ನ ಹಾಜರಾತಿಯನ್ನು ವ್ಯಕ್ತ ಪಡಿಸಿ ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ಹೊಂದುತ್ತಿದೆ.
ಅರಬಿ ಇಫ್ತಾರಿನಲ್ಲಿ ಬಹಳ ಮುಖ್ಯವಾದ ಒಂದು ಖಾದ್ಯವಾಗಿದೆ ತ್ಸರೀದ್ (ثريد). ಜಗತ್ತಿನಲ್ಲಿ ಮೊದಲಾಗಿ ತ್ಸರೀದ್ ಪಾಕ ಮಾಡಿ ಜನರಿಗೆ ಬಡಿಸಿದ್ದು ಹಝ್ರತ್ ಇಬ್ರಾಹೀಮ್ (ಅ) ಆಗಿರುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಪಾರಂಪರಿಕವಾಗಿ ಅರಬಿ ವಂಶಜರಲ್ಲಿ ಬಂದ ಈ ಡಿಶ್ ಪ್ರವಾದಿ ಮುಹಮ್ಮದ್ ﷺ ರ ಕಾಲದಲ್ಲಿ ಮಾಡಿ ತೋರಿಸಿ ಪ್ರಚಾರಕ್ಕೆ ತಂದದ್ದು ಪ್ರವಾದಿಯವರ ಅಜ್ಜ ಹಝ್ರತ್ ಹಾಶಿಮ್ ರವರಾಗಿದ್ದರು. ಮಕ್ಕಾದಲ್ಲಿ ಒಮ್ಮೆ ಬರಗಾಲ ಬಂದಾಗ ಇವರು ಊರವರನ್ನು ತನ್ನ ಮನೆಗೆ ಆಂಮತ್ರಿಸಿ ಅವರಿಗೆ ತ್ಸರೀದ್ ಮಾಡಿ ಬಡಿಸಿದ್ದರು. ಅಮ್ರ್ ಎಂಬ ಹೆಸರಿನವರಾದ ಅವರು ಈ ಔತಣ ಮಾಡಿದ ನಂತರ ಹಾಷಿಮ್ ಎಂಬ ಹೆಸರಲ್ಲಿ ಪ್ರಸಿದ್ಧರಾದರು. ಅಂದರೆ ಈ ಖಾದ್ಯದಲ್ಲಿ ರೊಟ್ಟಿಯನ್ನು ಪುಡಿಮಾಡಿ ಮಾಂಸದೊಂದಿಗೆ ಬೆರಕೆ ಮಾಡುವುದರಿಂದ ಅರಬಿಯಲ್ಲಿ ಪುಡಿ ಮಾಡಿದವನು ಎಂಬ ಅರ್ಥಕ್ಕೆ ಬರುವ ಹಾಷಿಮ್ ಎಂಬ ಹೆಸರು ಬಂತು.
ಪ್ರವಾದಿ ಮುಹಮ್ಮದ್ ﷺ ರಿಗೆ ತ್ಸರೀದ್ ಬಹಳ ಇಷ್ಟವಾಗಿತ್ತು. ಅಲ್ಲದೆ ಅದರ ಮಹತ್ವ ಪ್ರವಾದಿ ಹದೀಸಿನಲ್ಲೂ ದೃಡಪಟ್ಟಿದೆ. ಇತರ ಮಹಿಳೆಯರ ಮಧ್ಯೆ ಬೀವಿ ಆಯಿಶಾರ ಮಹತ್ವ ಹೇಗಿದೆಯೋ ಆ ರೀತಿಯಾಗಿದೆ ಇತರ ಖಾದ್ಯಗಳ ಮದ್ಯೆ ತ್ಸರೀದಿನ ಮಹಿಮೆ ಎಂಬ ಇಮಾಮ್ ಬುಖಾರಿ ವರದಿ ಮಾಡಿದ ಸ್ವಹೀಹಾದ ಹದೀಸನ್ನು ಇಮಾಮ್ ಇಬ್ನ್ ಜವ್ಝಿಯವರು ತನ್ನ ಪ್ರಸಿದ್ದ ಗ್ರಂಥವಾದ ತಿಬ್ಬುನ್ನಬವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರವಾದಿ ಮುಹಮ್ಮದ್ ﷺ ರು ಮದೀನಕ್ಕೆ ಹಿಜರಿ ಹೋದಾಗ ಮದೀನಾದ ಸ್ವಹಾಬಿಗಳಾದ ಅನ್ಸಾರಿಗಳು ಪ್ರವಾದಿಯವರಿಗೆ ಕೊಟ್ಟ ಮೊದಲ ಭೋಜನ ತ್ಸರೀದ್ ಆಗಿತ್ತು. ಅಲ್ಲದೆ ಸ್ವರ್ಗ ನಿವಾಸಿಗಳ ಮುಖ್ಯ ಆಹಾರದಲ್ಲಿ ತ್ಸರೀದ್ ಕೂಡ ಇದೆ.
ನೀರುಳ್ಳಿ, ಬೆಳ್ಳುಳ್ಳಿ, ಶೂಂಠಿ ಮತ್ತು ಟೊಮೆಟೊವನ್ನು ಶುದ್ದ ಝೈತ್ ಅಥವಾ ತೆಂಗಿನ ಎಣ್ಣೆಯಲ್ಲಿ ಸಾಮಾನ್ಯ ಮಾಂಸ ಪದಾರ್ಥಕ್ಕೆ ಹಾಕುವ ಮಸಾಲೆಗಳನ್ನು ಹಾಕಿ ಹುರಿದ ನಂತರ ಮೇಕೆ ಅಥವಾ ಕೋಳಿ ಮಾಂಸದ ದೊಡ್ಡದಾದ ತುಂಡುಗಳನ್ನು ಹಾಕಿ ನೀರು ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿ ಬಳಿಕ ಕ್ಯಾರೆಟ್, ಕೂಸ, ಅಲೂಗಡ್ಡೆ, ಬದನೆ, ಬೀನ್ಸ್ ಮುಂತಾದ ಕಾಯಿಪಲ್ಯಗಳನ್ನು ತುಂಡು ಮಾಡಿ ಮಾಂಸದೊಂದಿಗೆ ಬೆರಸಿ ಪುನಃ ಒಮ್ಮೆ ಚೆನ್ನಾಗಿ ಬೇಯಿಸಬೇಕು. ಕೊನೆಗೆ ಅರಬಿಕ್ ರೊಟ್ಟಿ ಅಥವಾ ಇನ್ಯಾವುದೇ ಕೋರಿರೊಟ್ಟಿ ತರದ ರೊಟ್ಟಿಯನ್ನು ಚೆನ್ನಾಗಿ ತುಂಡು ಮಾಡಿ ಒಂದು ಪಾತ್ರೆಗೆ ಹಾಕಿ ಬೇಯಿಸಿದ ತರಕಾರಿ ಮಿಶ್ರಿತ ಮಾಂಸ ಪದಾರ್ಥವನ್ನು ಅದಕ್ಕೆ ಹಾಕಿ ಸ್ವಲ್ಪ ಹೊತ್ತು ಕಳೆದು ತಿನ್ನುವುದಾಗಿದೆ ಇದರ ಒಂದು ರೂಪ. ಕೊಲ್ಲಿ ರಾಷ್ಟಗಳಂತೆಯೇ ಈಜಿಪ್ತ್, ಸಿರಿಯಾ, ಮೊರೊಕ್ಕೊ ಮುಂತಾದ ಎಲ್ಲಾ ಅರಬ್ ದೇಶಗಳಲ್ಲಿ ಇದು ಚಿರಪರಿಚಿತ. ಆದಾಗ್ಯೂ ಮಾಡುವ ರೂಪ ಮತ್ತು ಹೆಸರಿನಲ್ಲಿ ಅಲ್ಲರೆ ಚಿಲ್ಲರೆ ಬದಲಾವಣೆ ಇದೆ.
ಮಾಂಸ, ತರಕಾರಿ ಮತ್ತು ರೊಟ್ಟಿ ಮಿಶ್ರಿತ ಆಹಾರ ಬಹಳ ಪೌಷ್ಟಿಕ ಮತ್ತು ಆರೋಗ್ಯದಾಯಕವಾಗಿದೆ. ಆದ್ದರಿಂದ ಬಹಳ ಇತಿಹಾಸದ ಪಾರಂಪರ್ಯವಿರುವ ಈ ಖಾದ್ಯ ಮುಂದಿನ ದಿನಗಳಲ್ಲಿ ನಮ್ಮ ಮನೆ ಗೃಹಿಣಿಯರ ಪಾಲು ಕೂಡ ಆಗಲಿ….
ಸಂಗ್ರಹ: ಶೈಖ್ ಇಬ್ನ್ ಜವ್ಝಿಯವರ ಅತ್ತಿಬ್ಬುನ್ನಬವೀ
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.