(www.vknews.in) : ದೇರಳಕಟ್ಟೆಯ ಸಾಮನ್ಯವಾದ ಒಂದು ಕುಟುಂಬದಲ್ಲಿ ಜನಿಸಿದ್ದ ಓರ್ವ ಸಾಮಾನ್ಯ ಯುವಕ ಇಂದು ಸೌದಿ ಮತ್ತು ದುಬೈನಲ್ಲಿ ಬಹುವಿಧ ಬಿಸ್ನೆಸ್ ಗಳ ಮಾಲಿಕನಾಗಿ ಹೆಸರಾಂತ ಉದ್ಯಮಿಯಾಗಿ, ಕೊಡುಗೈದಾನಿಯಾಗಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸೇವಾನಿರತನಾಗಿ ಕೀರ್ತಿಯ ಶಿಖರಕ್ಕೇರಿರುವುದು ಒಂದು ರೋಚಕ ವಿಚಾರವಾಗಿದೆ. ಡಾ. ಅಬ್ದುಲ್ ಶಕೀಲ್ !
ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿರುವ ಅಬ್ದುಲ್ ಖಾದಿರ್ ಹಾಜಿಯವರ ಸುಪುತ್ರ. ವಿದೇಶಗಳಲ್ಲಿ ಅನಿವಾಸಿ ಉದ್ಯಮದಲ್ಲಿ ತೊಡಗಿಕೊಂಡು ಯಶಸ್ಸಿನ ಮೆಟ್ಟಲೇರುತ್ತಾ ಬಂದಂತೆ ನಾಡಿನ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಇದೀಗ ಇವರು ಊರಲ್ಲೂ ವಿದೇಶದಲ್ಲೂ ಜನಾನುರಾಗಿಯಾಗಿದ್ದಾರೆ.
ಪವಿತ್ರ ರಂಝಾನ್ ಮಾಸದಲ್ಲಿ ಇವರು ತಾನೇ ಸ್ಥಾಪಕಾಧ್ಯಕ್ಷನಾಗಿರುವ ” ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್” ವತಿಯಿಂದ ಇಫ್ತಾರ್ ಕೂಟ ಹಾಗೂ ಖುರ್ಆನ್ ಪಾರಾಯಣ ಸ್ಪರ್ಧೆಯನ್ನು ನಡೆಸುತ್ತಾ ಬಂದು ದೇಶವಿದೇಶಗಳಲ್ಲಿ ವಿಶೇಷ ಗಮನ ಸೆಳೆದಿದ್ದಾರೆ. ಇದೀಗ ಈ ವರ್ಷದ ಪವಿತ್ರ ರಮಳಾನಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಗಳಾದ ನಾಸಿರ್ ಅಹ್ಮದ್ ಸಮೇತ ಅನೇಕ ಆಮಂತ್ರಿತ ಗಣ್ಯರ ಉಪಸ್ಥಿತಿ ಯಲ್ಲಿ ಜಿದ್ದಾದಲ್ಲಿ ಇವರು ನಡೆಸಿದ ಈ ಸಮಾರಂಭವು ಯಾವ ಮಟ್ಟದಲ್ಲಿ ಜನಾಕರ್ಷಣೆ ಪಡೆದಿತ್ತೆಂದರೆ ಕಾರ್ಯಕ್ರಮ ನಡೆದ ಜಿದ್ದಾ ಪ್ಯಾಲೇಸ್ ಗ್ರ್ಯಾಂಡ್ ಡೈಮಂಡ್ ಸಭಾಂಗಣವು ಪ್ರೇಕ್ಷಕರಿಂದ ಭರ್ತಿಯಾಗಿತ್ತು.
ಇತ್ತೀಚೆಗೆ ಇವರ ತಾಯಿ ನಿಧನ ಹೊಂದಿದ್ದಾಗ ದೇರಳಕಟ್ಟೆಯ ಅವರ ನಿವಾಸದಲ್ಲಿ ಅವರು ಸ್ವತಃ ಖುರ್ಆನ್ ಓದುತ್ತಿರುವುದನ್ನು ಗಮನಿಸಿದ್ದೆ. ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರು ಮಯ್ಯಿತ್ ಬಳಿ ಕೂತುಕೊಂಡು ಖುರ್ಆನ್ ಓದುವುದು ಅಪರೂಪ. ಏನೇ ಇದ್ದರೂ ಅದು ಮುಕ್ರಿ, ಮುತಅಲ್ಲಿಮರಿಗೆ ಸೀಮಿತವಾಗಿರುವುದು ರೂಢಿ. ಹಾಗಿರುವಾಗ ಇವರು ಕುರ್ಆನ್ ಪಾರಾಯಣ ಮಾಡುತ್ತಿದ್ದುದು ಮಾತ್ರವಲ್ಲದೆ ಅದರಲ್ಲಿ ಅವರು ಹೊಂದಿದ್ದ ತಾದಾತ್ಮ್ಯತೆ ನನ್ನ ಗಮನ ಸೆಳೆದಿತ್ತು. ಇದೀಗ ಖುರ್ಆನ್ ಅವತೀರ್ಣವಾದ ಪವಿತ್ರ ರಂಜಾನ್ ತಿಂಗಳಲ್ಲೇ ಲಕ್ಷಾಂತರ ಖರ್ಚು ಮಾಡಿ ಖುರ್ಆನ್ ಸ್ಪರ್ಧೆಯನ್ನು ಕೂಡಾ ನಡೆಸುತ್ತಾ ಬರುತ್ತಿದ್ದಾರೆಂದು ತಿಳಿದಾಗ ನಿಜಕ್ಕೂ ಇವರಿಗೆ ಖುರ್ಆನ್ ಮೇಲೆ ಒಂದು ವಿಶೇಷ ಒಲವು ಹಾಗೂ ಸ್ಪಂದನ ಇದೆ ಎಂದು ನನಗನ್ನಿಸಿತು.
” ತುಂಬಾ ವರ್ಷಗಳಿಂದ ಇಫ್ತಾರ್ ಕೂಟ ನಡೆಸುತ್ತಾ ಬಂದಿದ್ದೆ. ಆದರೆ ಯಾವಾಗಲೂ ಒಂದೇ ಮಾಮೂಲಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ಏನಾದರೊಂದು ವಿಭಿನ್ನ ಕಾರ್ಯಕ್ರಮವನ್ನು ಕೂಡಾ ನಡೆಸಬೇಕು ಎಂಬ ಯೋಚನೆಯಿಂದ ಹುಟ್ಟಿಕೊಂಡ ಯೋಜನೆಯಾಗಿದೆ ಈ ಖುರ್ಆನ್ ಪಾರಾಯಣ ಸ್ಪರ್ಧೆ. ಸುಮಾರು ಮೂರು ವರ್ಷಗಳಿಂದ ಇದು ನಡೆಯುತ್ತಾ ಇದೆ ” ಎಂದು ನನಗೆ ನೀಡಿದ ಖಾಸಗಿ ಸಂದೇಶದಲ್ಲಿ ಡಾ. ಅಬ್ದುಲ್ ಶಕೀಲ್ ತಿಳಿಸಿದರು.
ಯು.ಟಿ. ಇಫ್ತಿಕಾರ್ ಫರೀದ್, ಸೈಫುಲ್ಲಾ ಅಲಿ ಅಂಬ್ರಿ, ಮಾಜಿ ಶಾಸಕ ಮೊಯಿದಿನ್ ಬಾವ, ಮುಹಮ್ಮದ್ ಅಸ್ಲಮ್ ಖಾಝಿ , ಜಾವೀದ್ ಅಬ್ದುಲ್ ವಹ್ಹಾಬ್ ಮುಂತಾದ ಬಹು ವಿಧ ಸಂಸ್ಥೆ, ಉದ್ಯಮಗಳ ಮೇಧಾವಿಗಳು ಕೂಡಾ ಪ್ರಸ್ತುತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇಂದಿನ ಕಾಲದಲ್ಲಿ ಆಟೋಟ, ಸಂಗೀತ, ಕಾಮಿಡಿ ಮುಂತಾದ ಸಮಾರಂಭಗಳಿಗೆ ನಮ್ಮ ಯುವಕರು ಆಕರ್ಷಿತರಾಗುತ್ತಾರೆ. ಅವರನ್ನು ಧಾರ್ಮಿಕ ಟ್ರ್ಯಾಕ್ ಗೆ ತರಲು ಖುರ್ಆನ್ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಅಗತ್ಯ. ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡಿರುವ ಡಾ. ಅಬ್ದುಲ್ ಶಕೀಲ್ ರವರ ಚಿಂತನೆ ಈ ನಿಟ್ಟಿನಲ್ಲಿ ಹರಿದು ಖುರ್ಆನ್ ಕಂಟೆಸ್ಟ್ ಆಯೋಜಿಸಿದ್ದು ಅವರ ಸೃಜನಶೀಲತೆ, ಚಿಂತನಶೀಲತೆ ಹಾಗೂ ಧಾರ್ಮಿಕ ಶ್ರದ್ಧೆಗೆ ಸಾಕ್ಷಿಯಾಗಿದೆ.
ತನ್ನ ಎಲ್ಲಾ ಮುನ್ನೇರಿಕೆಗೆ ನನ್ನ ತಾಯಿತಂದೆಯರೇ ಸ್ಪೂರ್ತಿ ಎನ್ನುತ್ತಿರುವ ಇವರು ಇವರ ಶಿಕ್ಷಣ ಮುಂತಾದ ವಿಷಯಗಳಲ್ಲಿ ಮುತುವರ್ಜಿವಹಿಸಿದ್ದ ಸ್ವಂತ ಅಣ್ಣನ ಬಗ್ಗೆಯೂ ಕೃತಜ್ಞತೆಯಿಂದ ಹೇಳುತ್ತಿದ್ದಾರೆ. ಊರಲ್ಲಿ ಶಿಕ್ಷಣ ಮುಗಿಸಿದ ನಂತರ ಬಿಸ್ನೆಸ್ ಆರಂಭಿಸಿದ್ದ ಇವರು ಅದರಲ್ಲಿ ನಷ್ಟವುಂಟಾದಾಗ ಉದ್ಯೋಗ ನಿಮಿತ್ತ ಜಿದ್ದಾಕ್ಕೆ ತೆರಳಿದ್ದರು. ಅಲ್ಲಿ ಎರಡು ವರ್ಷ ದುಡಿದು ನಂತರ ಒಂದು ಬಿಸ್ನೆಸ್ ಆರಂಭಿಸಿದ್ದರು. ಅದರಲ್ಲೂ ಸೋತಾಗ ಛಲ ಬಿಡದೆ ಕೆವಲ ಮೂರು ಕಾರ್ಮಿಕರನ್ನು ಇಟ್ಟುಕೊಂಡು ಆರಂಭಿಸಿದ್ದ ಹೊಸ ಬಿಸ್ನೆಸ್ ಚಿಗುರೊಡೆಯತೊಡಗಿತ್ತು. ವರ್ಷ ಕಳೆದಂತೆ ಬೆಳೆಯುತ್ತಾ ಹೋಯಿತು. ಇದೀಗ ಸೌದಿ ಮತ್ತು ದುಬಾಯಿಯಲ್ಲಿ ವಿವಧ ಬಿಸ್ನೆಸ್ ಗಳ ಮಾಲಿಕರಾಗಿದ್ದಾರೆ.
ಚಾರಿಟಿಯಲ್ಲಿ ತೀವ್ರ ಉತ್ಸಾಹ ಹೊಂದಿದ್ದ ಇವರು ಜುಜುಬಿ ವೇತನಕ್ಕೆ ದುಡಿಯುತ್ತಿದ್ದ ಸಂದರ್ಭದಲ್ಲೂ ಕೂಡಾ ತನ್ನ ಕೈಲಾದ ಚಾರಿಟಿಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಜನಸೇವೆಯ ಹಾಗೂ ಜಾತಿಬೇಧರಹಿತವಾದ ಮಾನವೀಯ ಪ್ರೇಮದ ಆಳ ಅರಿಯಬೇಕಾದರೆ ಕೊರೋನಾ ಕಾಲದಲ್ಲಿ ಇವರು ಕೊಡಮಾಡಿದ ಕಿಟ್ ಗಳು ಸಾಕ್ಷಿ. ಊರಲ್ಲಿ ಎಲ್ಲಾ ಕಡೆ ಅರ್ಹರನ್ನು ಗುರುತಿಸುವುದು ಪ್ರಯಾಸಕರವಾದುದರಿಂದ ಆಯಾ ಊರಿನ ಮಸ್ಜಿದ್, ಚರ್ಚ್, ಹಾಗೂ ದೇವಸ್ಥಾನಗಳಿಗೆ ಕಳಿಸಿ ಅಲ್ಲಿನ ಆಡಳಿತ ಮಂಡಳಿಗಳವರು ಅವರವರ ಊರಿನ ಅರ್ಹರನ್ನು ಗುರುತಿಸಿ ಕೂಡುವ ವ್ಯವಸ್ಥೆ ಮಾಡಿದ್ದರು. ಹಾಗೆ ಇವರ ಚಾರಿಟಿ ಟ್ರಸ್ಟ್ ಕೊರೋನಾ ಸಮಯದಲ್ಲಿ ದಾನ ನೀಡಿದ್ದ ಕಿಟ್ ಗಳ ಒಟ್ಟು ಸಂಖ್ಯೆ ಬರೋಬ್ಬರಿ ಹದಿನೈದು ಸಾವಿರ!! ಇಂತಹ ಮಹಾನ್ ಸಾಧಕ ನಮ್ಮ ದೇರಳಕಟ್ಟೆಯವರು ಅನ್ನುವುದು ನಮಗೆಲ್ಲ ತುಂಬಾ ಅಭಿಮಾನದ ವಿಚಾರವಾಗಿದೆ.
ಇವರ ಎಲ್ಲಾ ಸೇವೆಗಳನ್ನು ಅಲ್ಲಾಹು ಖಬೂಲ್ ಮಾಡಲಿ. ಅವರ ಉದ್ಯಮ ಇನ್ನಷ್ಟು ಬೆಳೆಯಲಿ, ಜೊತಗೇ ಅವರ ಸೃಜನಶೀಲತೆ ಮತ್ತು ಸೇವಾ ವ್ಯಾಪ್ತಿ ಕೂಡಾ ಇನ್ನಷ್ಟು ವಿಸ್ತಾರವಾಗಲಿ, ಅವರಿಗೆ ಆಯುರಾರೋಗ್ಯವನ್ನು ಅಲ್ಲಾಹು ಕರುಣಿಸಲಿ ಎಂದು ತುಂಬು ಮನದಿಂದ ಪ್ರಾರ್ಥಿಸುತ್ತಿದ್ದೇನೆ.
– ಡಿ. ಐ. ಅಬೂಬಕರ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.