(www.vknews.in) : ಸುಳ್ಯ ತಾಲೂಕಿನ ಬೆಳ್ಳಾರೆಯ ಅಬೂಬಕ್ಕರ್ ಹಾಜಿ ಮತ್ತು ಆಯೇಷಾ ಹಜ್ಜುಮ್ಮ ಅವರ ದ್ವಿತೀಯ ಪುತ್ರನಾಗಿ 1961ರ ಫೆಬ್ರವರಿ 20ರಂದು ಬೆಳ್ಳಾರೆ ಸಮೀಪದ ಉಜ್ರೋಳಿ ಎಂಬಲ್ಲಿ ಜನಿಸಿದ್ದ ಕೆ.ಎಂ. ಮಹಮ್ಮದ್ ಹಾಜಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಧರೀಣರಾಗಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಚಿರಪರಿಚಿತರು.
ಮಹಮ್ಮದ್ ಹಾಜಿಯ ಮೇಲಿನ ಪ್ರೀತಿಯಿಂದ ಎಲ್ಲರೂ ಅವರನ್ನು ಮಾಮು ಅಥವಾ ಮಾಮು ಹಾಜಿ ಎಂದು ತುಂಬಾ ಆತ್ಮೀಯತೆಯಿಂದ ಸಾರ್ವಜನಿಕವಾಗಿ ಕರೆಯುತ್ತಿದ್ದರು. ಶಾಲೆಯಲ್ಲಿ ಹತ್ತನೇ ತರಗತಿ ಮತ್ತು ಮದ್ರಸದಲ್ಲಿ ಏಳನೇ ತರಗತಿವರೆಗೆ ಕಲಿತಿದ್ದ ಮಾಮು ಹಾಜಿ ಸಾಮಾಜಿಕ ಕಳಕಳಿ ಮತ್ತು ಸಮುದಾಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.
ಆರಂಭದಲ್ಲಿ ಮುಂಬೈಯಲ್ಲಿ ಹೊಟೇಲ್ ನಡೆಸುತ್ತಿದ್ದ ಮಾಮು ಹಾಜಿ ಬಳಿಕ ತನ್ನ ಸಹೋದರ ರಶೀದ್ ಹಾಜಿಯ ಜೊತೆ ಊರಲ್ಲೇ ವ್ಯಾಪಾರ ಆರಂಭಿಸಿದರು. ನಂತರ ರಶೀದ್ ಹಾಜಿ ವಿದೇಶದಲ್ಲಿ ಉದ್ಯಮ ಸ್ಥಾಪಿಸಿದಾಗ ಮಾಮು ಹಾಜಿ ಕೂಡ ವಿದೇಶಕ್ಕೆ ತೆರಳಿದ್ದರು. ಕೆಲವು ವರ್ಷಗಳ ಬಳಿಕ ತಾಯ್ನೆಡಿಗೆ ಮರಳಿದ ಮಾಮು ಹಾಜಿ ಊರಲ್ಲೇ ಉದ್ಯಮ ಸ್ಥಾಪಿಸಿದರು. ಪರೋಪಕಾರಿಯಾಗಿದ್ದ ಮತ್ತು ಸದಾ ನ್ಯಾಯದ ಪರ ನಿಲ್ಲುವ ಉದಾರ ಮನಸ್ಸಿನ ವ್ಯಕ್ತಿಯಾಗಿದ್ದ ಮಾಮು ಹಾಜಿ ಊರಿನ ಮಸೀದಿಯ ಕೆಲಸ ಕಾರ್ಯಗಳಲ್ಲಿ ಅಪಾರ ಒಲವು ತೋರುತ್ತಿದ್ದರು.
ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಾಮು ಹಾಜಿ ಬೆಳ್ಳಾರೆಯಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದ್ದರು. ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ ಆರಂಭದಿಂದಲೇ ಹೊಸ ಕ್ರಮವೊಂದನ್ನು ಜಾರಿಗೊಳಿಸಿದರು. ಅಂದರೆ ತಾನು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವವರೆಗೂ ಪ್ರತೀ ಶುಕ್ರವಾರ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಬಹುಷಃ ಗ್ರಾಮೀಣ ಪ್ರದೇಶದ ಜಮಾಅತ್ ವ್ಯಾಪ್ತಿಯಲ್ಲಿ ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆಯ ಯೋಜನೆ ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ, ಬೆಳ್ಳಾರೆಯ ಸುನ್ನಿ ಸೌಹಾರ್ದ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿ, ಸುಳ್ಯ ಸಂಯುಕ್ತ ಜಮಾತ್ ಸಮಿತಿಯ ಸದಸ್ಯರಾಗಿ, ಜನತಾ ದಳದ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಇಸ್ಲಾಮಿಕ್ ವಿದ್ಯಾಕೇಂದ್ರವಾದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಸ್ಥಾಪಕ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಹೀಗೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾಮು ಹಾಜಿ ಅಲ್ಪಕಾಲದ ಅನಾರೋಗ್ಯದಿಂದ 2025ರ ಮಾರ್ಚ್ 30ರಂದು ನಿಧನರಾದರು.
ಅವರಿಗೆ ಪತ್ನಿ ಹಫ್ಸಾ ಹಾಗೂ ಪುತ್ರರಾದ ಅಬೂಬಕ್ಕರ್ ಆಶಿಕ್, ಅಫ್ರೀದ್ ಮತ್ತು ಪುತ್ರಿಯರಾದ ಅಸಿಮೀನ್, ಅಝ್ಮೀನ್, ಅಫ್ನಾನ್ ಇದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದ ಅಲ್ಫಾ ಅನ್ಸಾರ್ ಬೆಳ್ಳಾರೆ ಅವರ ಸಹೋದರ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಹಾಲಿ ಸದಸ್ಯೆ ಸಾರಾ ಅಲಿ ಪರ್ಲಡ್ಕ ಅವರ ಸೊಸೆ ಆಗಿರುವರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.