ರಿಯಾದ್(www.vknews.in): ರಿಯಾದ್ನಲ್ಲಿ ಎಸಿ ಸ್ಫೋಟಗೊಂಡು ಅನಿರೀಕ್ಷಿತವಾಗಿ ಸಾವನ್ನಪ್ಪಿದ ಕೇರಳದ ಕಾರ್ಮಿಕ ಜಿಯಾದ್ ಅವರ ಮೃತದೇಹವನ್ನು ಸಮಾಧಿಗೆ ಇಳಿಸುತ್ತಿರುವಾಗ ಆತನ ಪ್ರಾಯೋಜಕನು ಅಳುತ್ತಿರುವ ದೃಶ್ಯಗಳು ಎಂತಹವರ ಕಲ್ಲು ಹೃದಯವನ್ನು ಕಲಕುವಂತಿತ್ತು. ಮಗನಂತೆ ಪ್ರೀತಿಸಿದ ಜಿಯಾದ್ನ ಅನಿರೀಕ್ಷಿತ ಮರಣವು ಪ್ರಾಯೋಜಕನಿಗೆ ಸಹಿಸಲಾಗಲಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ ಅವರ ಮುಖ ಮತ್ತು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು.
ಎರ್ನಾಕುಲಂನ ಪರವೂರಿನ ಮಂಜಲಿಯ ಕಣಿಯಾಂಪರಂಪಿಲ್ನ ಬಶೀರ್ ಅವರ ಮಗ ಜಿಯಾದ್ (36) ಕಳೆದ ಶುಕ್ರವಾರ ರಿಯಾದ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಿದ್ದಾಗ, ಎಸಿ ಕಂಪ್ರೆಸರ್ ಸ್ಫೋಟಗೊಂಡು ಜಿಯಾದ್ ಗಂಭೀರ ಸುಟ್ಟಗಾಯಗಳಿಗೆ ಒಳಗಾದರು. ಈ ಅಪಘಾತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಜಿಯಾದ್ ಅವರ ದೇಹವನ್ನು ಮರುದಿನ ರಿಯಾದ್ನ ಹಾಯುಲ್ ಸಲಾಮ್ ಮಕ್ಬರಾದಲ್ಲಿ ಸಮಾಧಿ ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಪ್ರಾಯೋಜಕರು ಕಣ್ಣೀರು ಸುರಿಸುತ್ತಾ ಅಳುತ್ತಿದ್ದರು, ಇದನ್ನು ನೋಡಿ ಅಲ್ಲಿದ್ದ ಎಲ್ಲರೂ ಕಣ್ಣೀರು ಹಾಕಿದರು. ವಯೋವೃದ್ಧರಾದರೂ, ಅವರು ಜಿಯಾದ್ ಅವರ ಮೃತದೇಹವನ್ನು ಸಮಾಧಿ ಮಾಡಲು ಸಹಾಯ ಮಾಡಿದರು.
ದಫನದ ನಂತರ ಪ್ರಾಯೋಜಕರು ಹಾಜರಿದ್ದವರನ್ನು ತಮ್ಮ ಮನೆಗೆ ಆಹ್ವಾನಿಸಿ ಅವರೊಂದಿಗೆ ಬಹಳ ಹೊತ್ತು ಮಾತನಾಡಿದರು. ಜಿಯಾದ್ ಮೇಲಿನ ತಮ್ಮ ಪ್ರೀತಿಯ ಆಳ ಮತ್ತು ನಷ್ಟದ ಭಾವನೆಯನ್ನು ವ್ಯಕ್ತಪಡಿಸುತ್ತಾ, ಪ್ರಾಯೋಜಕರು ತಮ್ಮ ಮನೆಯ ಹೊರಗೆ “ಜಿಯಾದ್ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ” ಎಂದು ಬರೆದಿರುವ ಫಲಕವನ್ನು ಸಹ ಹಾಕಿಸಿದ್ದರು.
ಇದಲ್ಲದೆ, ಜಿಯಾದ್ ತಂದೆತಾಯಿಯಂದಿರು ಜೀವಂತವಾಗಿರುವವರೆಗೂ ಅವರ ಕುಟುಂಬಕ್ಕೆ ಪ್ರತೀ ತಿಂಗಳ ಸಂಬಳವನ್ನು ಪಾವತಿಸುವುದನ್ನು ಮುಂದುವರಿಸುವುದಾಗಿ ಪ್ರಾಯೋಜಕರು ಅಸಾಮಾನ್ಯ ಘೋಷಣೆ ಮಾಡಿದರು. ಈ ಘಟನೆಯು ಮತ್ತೊಮ್ಮೆ ಮಾನವ ಸಂಬಂಧಗಳು ಎಲ್ಲಕ್ಕಿಂತಲೂ ಮಿಗಿಲು ಎಂಬುವುದನ್ನು ಮತ್ತೊಮ್ಮೆ ನೆನಪಿಸಿತು. ಅಲ್ಲಿ ಸೇರಿದ್ದ ಸೌದಿ ನಾಗರಿಕರು ಮತ್ತು ವಲಸಿಗರು ಸೌದಿ ಪ್ರಾಯೋಜಕನ ಈ ಕರುಣೆಯ ಹಾಗೂ ಮಾನವೀಯತೆಯ ಮನಸ್ಸನ್ನು ಶ್ಲಾಘಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.