(www.vknews.in) : ಬಿಹಾರದ ಎಕ್ಸಿಟ್ ಪೋಲ್ಗಳನ್ನು ನೋಡುತ್ತಿದ್ದೆ. ಬಹುತೇಕ ಎಲ್ಲ ಎಕ್ಸಿಟ್ ಪೋಲ್ಗಳು NDA ಗೆ ಭರ್ಜರಿ ಜಯದ ಮುನ್ಸೂಚನೆ ನೀಡಿವೆ. ಮತ ಎಣಿಕೆಯ ದಿನ ಯಾವ ಫಲಿತಾಂಶ ಬರುತ್ತದೋ ಗೊತ್ತಿಲ್ಲ. ಎಕ್ಸಿಟ್ ಪೋಲ್ಗಳೇ ನಿಜವಾದರೂ ಅಚ್ಚರಿ ಇಲ್ಲ.
ಬಿಹಾರದ ಜನತೆ ನಿತೀಶ್ ಕುಮಾರ್ ಅಥವಾ ನರೇಂದ್ರ ಮೋದಿಯ ಆಡಳಿತದ ಬಗ್ಗೆ ರೋಸಿ ಹೋಗಿದ್ದಾರೆ ನಿಜ. ಅವರು ಇವರಿಬ್ಬರನ್ನು ಮೆಚ್ಚಿ NDAಗೆ ಮತ ಹಾಕಲು ಇವರ ಯಾವ ಸಾಧನೆಗಳು ಕಾರಣಗಳೇ ಅಲ್ಲ. ಬಿಹಾರದಲ್ಲಿ NDA ಗೆದ್ದರೆ ಅದಕ್ಕೆ ಕಾರಣ ಬಿಹಾರದ ಮಹಿಳೆಯರಿಗೆ ಚುನಾವಣೆ ಘೋಷನೆಯಾಗುವ ಕೆಲವೇ ದಿನಗಳ ಮೊದಲು ಮೋದಿ ಸರ್ಕಾರ ವರ್ಗಾಯಿಸಿದ ಆ ಹತ್ತು ಸಾವಿರ ರೂಪಾಯಿಗಳು ಮತ್ತು ವೋಟ್ ಚೋರಿ ಮಾತ್ರ.
ತಿಂಗಳಿಗೆ ತಲಾ ಹತ್ತು ಸಾವಿರ ಆದಾಯ ಗಳಿಸಲಾಗದ ಬಿಹಾರದಲ್ಲಿ ಮೋದಿ ಚುನಾವಣೆಗೆ ಕೆಲವೇ ದಿನಗಳ ಮುನ್ನ ಸುಮಾರು ಒಂದು ಕೋಟಿ ಮಹಿಳೆಯರ ಖಾತೆಗೆ ಹತ್ತು ಸಾವಿರ ವರ್ಗಾಯಿಸುತ್ತಾರೆ. ಚುನಾವಣೆ ಘೋಷಣೆಯಾದ ಮೇಲೆ ಒಂದು ರಸ್ತೆ ಗುಂಡಿ ತುಂಬಿ ಸರಿ ಮಾಡಿದರೂ ಅದನ್ನು ನೀತಿಸಂಹಿತೆಯ ಉಲ್ಲಂಘನೆ ಎಂದು ಬೊಬ್ಬೆ ಹೊಡೆಯಲಾಗುತ್ತದೆ. ಆದರೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಹತ್ತು ಸಾವಿರ ಮತದಾರನ ಖಾತೆಗೆ ವರ್ಗಾಯಿಸುವುದರ ಬಗ್ಗೆ ಚುನಾವಣಾ ಆಯೋಗವೂ ಕೇಳುವುದಿಲ್ಲ. ಮೊದಿಯ ಗೋದಿ ಮೀಡಿಯಾ ಚುನಾವಣೆಯಲ್ಲಿ ಗೆಲ್ಲಲು ಆಮಿಷದಂತೆ ಕೊಡುವ ಈ ಮೊತ್ತದ ಬಗ್ಗೆ ಕನಿಷ್ಟ ನೈತಿಕತೆಯ ಪ್ರಶ್ನೆಗಳನ್ನು ಎತ್ತುವುದಿಲ್ಲ. ಬಿಜೆಪಿಗೆ ಈ ಕುರಿತು ಪ್ರಶ್ನೆಗಳನ್ನೂ ಕೇಳುವುದಿಲ್ಲ. ಇಡೀ ವ್ಯವಸ್ಥೆ ಈ ಬಗ್ಗೆ ಮೌನ ವಹಿಸುತ್ತದೆ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ವೇಳೆಯಲ್ಲೂ ಇಂತಹುದೇ ಹಣದ ಆಟ ನಡೆದಿತ್ತು. ಬಿಜೆಪಿ ದೊಡ್ಡ ಗೆಲುವು ಸಾಧಿಸಿತ್ತು.
ಬಿಹಾರದ ಈ ಪ್ರಯೋಗ ಯಶಸ್ವಿಯಾದರೆ ಇನ್ನು ಮುಂದೆ ಎಲ್ಲ ರಾಜ್ಯದ ಚುನಾವಣೆಗಳಲ್ಲೂ ಬಿಜೆಪಿ ಬಿಹಾರದ ಮಾದರಿ ಅನುಸರಿಸಿದರಾಯಿತು. ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ದೇಶದ ಬೊಕ್ಕಸದಿಂದ ಕೊಳ್ಳೆಹೊಡೆದ ಮತ್ತು ಸಾರ್ವಜನಿಕರಿಂದ ಹಲವು ರೀತಿಗಳಲ್ಲಿ ದೋಚಿದ ಪಾರ್ಟಿ ಫಂಡ್ನಿಂದ ಮತದಾರರಿಗೆ ಐನೂರು, ಸಾವಿರ ಕದ್ದು ಮುಚ್ಚಿ ಹಂಚುವುದು ಈ ದೇಶದಲ್ಲಿ ಮಾಮೂಲಿ. ಈಗೀಗ ಹೀಗೆ ಹಣ ಕೊಟ್ಟು ವೋಟ್ ನಿಮ್ಮ ಪಾರ್ಟಿಗೆ ಹಾಕುತ್ತೇವೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸುವುದೂ ನಡೆಯುತ್ತಿದೆ. ಇಷ್ಟೆಲ್ಲ ಕದ್ದುಮುಚ್ಚಿ ಮಾಡುವುದಕ್ಕಿಂತ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಟಾಲಂ ಕಂಡುಹಿಡಿದ ಈ ಹೊಸ ಮಾರ್ಗ ನೇರ, ದಿಟ್ಟ ಮತ್ತು ಪಕ್ಕಾ ಪರಿಣಾಮಕರಿ. ಸೀದಾ ಮತದಾರನ ಖಾತೆಗೆ ಸರ್ಕಾರದ ದುಡ್ಡನ್ನು ವರ್ಗಾಯಿಸಿದರೆ ಆಯಿತು. ರಗಾಳೆ ಇಜ್ಜಿ.
ಚುನಾವಣೆ ಗೆಲ್ಲಲು ಮುಸ್ಲಿಮ್ ಮತದಾರರನ್ನು ಮತದಾನದಿಂದ ವಂಚಿಸಲು ಕಾನೂನುಬಾಹಿರವಾಗಿ ಅವರ ಮತದಾನದ ಅಧಿಕಾರವನ್ನು ಇಲ್ಲವಾಗಿಸಲು ಚುನಾವಣಾ ಪೂರ್ವದಲ್ಲಿ ಸ್ಪೆಷಲ್ ಇಂಟೆನ್ಸಿವ್ ರಿವಿಷನ್ ಎಂಬ ಕಸರತ್ತನ್ನು ಚುನಾವಣಾ ಆಯೋಗ ನಡೆಸುತ್ತದೆ. ಅದೂ ಸಾಲದೆಂಬಂತೆ ಲಕ್ಷಾಂತರ ಬಿಜೆಪಿ ವೋಟ್ಗಳನ್ನು ಚುನಾವಣೆಗೆ ಮುನ್ನ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಒಬ್ಬ ಬಿಜೆಪಿ ಮತದಾರ ಹಲವು ರಾಜ್ಯಗಳಲ್ಲಿ ವೋಟ್ ಮಾಡುತ್ತಾನೆ. ಭಿಜೆಪಿಯ ಗೆಲುವಿಗೆ ಬಿಜೆಪಿಗಿಂತ ಹೆಚ್ಚು ಶ್ರಮ ಚುನಾವಣಾ ಆಯೋಗ ಹಾಕುತ್ತದೆ. ಅದರ ಜೊತೆಗೆ ಮತದಾರನ ಖಾತೆಗೆ ನೇರ ದುಡ್ಡು ಟ್ರಾನ್ಸ್ಫರ್. ಬಿಜೆಪಿ ಗೆಲ್ಲಲು ಇನ್ನೇನು ಬೇಕು?
ಇಷ್ಟೆಲ್ಲ ಆಗಿಯೂ ಬಿಹಾರದಲ್ಲಿ ಏನಾದರೂ ಮಹಾಘಟ್ಬಂಧನ್ ಗೆದ್ದರೆ ಈ ದೇಶ ಮತ್ತು ಇಲ್ಲಿನ ಪ್ರಜಾಪ್ರಭುತ್ವದ ಬಗ್ಗೆ ಸಣ್ಣ ಆಸೆ ಕಮರದೇ ಉಳಿದುಕೊಳ್ಳುತ್ತದೆ. ಆದರೆ ಅಂತಹ ಭರವಸೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ.
– ಶಶಿಧರ ಹೆಮ್ಮಾಡಿ..
–
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.