(www.vknews.in) : ನಾವು ರಮಝಾನ್ ತಿಂಗಳಲ್ಲಿ ಇದ್ದೇವೆ. ಉಪವಾಸದ ದಿನಗಳು ಸಾಗುತ್ತಿವೆ. ಮಸೀದಿಗಳಲ್ಲಿ ಜನ ಹೆಚ್ಚಾಗಿದ್ದಾರೆ. ಪ್ರಾರ್ಥನೆಗಳು ದೀರ್ಘವಾಗಿವೆ. ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಎಲ್ಲೆಡೆ ಕಾಣುತ್ತಿದೆ. ಮನುಷ್ಯ ದೇವರತ್ತ ಸ್ವಲ್ಪ ಹೆಚ್ಚು ಹತ್ತಿರವಾಗುತ್ತಿದ್ದಾನೆ ಎನ್ನುವ ಭಾವನೆ ಈ ತಿಂಗಳಲ್ಲಿ ಮೂಡುತ್ತದೆ. ಆದರೆ ರಮಝಾನ್ ಇಷ್ಟೇ ಅಲ್ಲ, ಅದು ಒಂದು ಪ್ರಶ್ನೆ ಕೇಳುತ್ತಿದೆ, ನೀನು ದೇವರನ್ನು ನೆನಪಿಸಿಕೊಂಡೆಯಾ? ಸರಿ. ಆದರೆ ಅಲ್ಲಾಹನು ನೆನಪಿಸಿಕೊಟ್ಟ ಬಡವನ ಹಕ್ಕನ್ನು ನೆನಪಿಸಿಕೊಂಡೆಯಾ?
ಉಪವಾಸ ಮನುಷ್ಯನಿಗೆ ಹಸಿವಿನ ಅರ್ಥ ಕಲಿಸುತ್ತದೆ. ಸಂಜೆ ಒಂದು ತುಂತುರು ನೀರು ಕುಡಿಯುವ ಕ್ಷಣದಲ್ಲಿ ಆಹಾರದ ಮೌಲ್ಯ ಗೊತ್ತಾಗುತ್ತದೆ. ಅದೇ ಸಮಯದಲ್ಲಿ ಜೀವನಪೂರ್ತಿ ಕೊರತೆಯೊಂದಿಗೆ ಬದುಕುವವರ ನೆನಪು ಬರುತ್ತದೆ. ಈ ಅನುಭವದಿಂದಲೇ ಇಸ್ಲಾಂ ಒಂದು ಮಹತ್ವದ ತತ್ವವನ್ನು ಘೋಷಿಸಿತು. ನಿನ್ನ ಸಂಪತ್ತಿನಲ್ಲಿ ಬಡವರಿಗೆ ಹಕ್ಕು ಇದೆ ಎಂದು.
ಅದೇ ಝಕಾತ್. ಝಕಾತ್ ದಾನವಲ್ಲ. ಅದು ಕರುಣೆ ಅಲ್ಲ. ಅದು ಕಡ್ಡಾಯ ಧಾರ್ಮಿಕ ಕರ್ತವ್ಯ. ಇಸ್ಲಾಂನ ಕಡ್ಡಾಯ ಕರ್ಮಗಳಲ್ಲಿ ಒಂದು. ನೀವು ಸಂಪಾದಿಸಿದ ಸಂಪತ್ತಿನಲ್ಲಿ ಒಂದು ಭಾಗ ನಿಮ್ಮದು ಅಲ್ಲ ಎಂದು ಇಸ್ಲಾಂ ಹೇಳುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣದಲ್ಲೂ, ಮನೆಯಲ್ಲಿರುವ ಚಿನ್ನದಲ್ಲೂ, ವ್ಯಾಪಾರ ಲಾಭದಲ್ಲೂ ಬಡವರ ಪಾಲು ಸೇರಿಕೊಂಡಿದೆ. ಅದನ್ನು ಅವರಿಗೆ ಕೊಡಲೇಬೇಕು, ಇಲ್ಲಾಂದರೆ ಪರಲೋಕದಲ್ಲಿ ಶಿಕ್ಷೆ ಕಾದಿದೆ ಎನ್ನುತ್ತದೆ ಇಸ್ಲಾಂ.
ಇಲ್ಲಿ “ನಿಸಾಬ್” ಎಂಬ ಒಂದು ಮಹತ್ವದ ಪದ ಬರುತ್ತದೆ. ನಿಸಾಬ್ ಎಂದರೆ ಝಕಾತ್ ಕಡ್ಡಾಯವಾಗುವ ಕನಿಷ್ಠ ಸಂಪತ್ತಿನ ಮಿತಿ. ಅಂದರೆ, ಒಬ್ಬ ವ್ಯಕ್ತಿಯ ಆಸ್ತಿ ಈ ಮಿತಿಯನ್ನು ತಲುಪಿದಾಗ ಮಾತ್ರ ಝಕಾತ್ ಕರ್ತವ್ಯ ಆರಂಭವಾಗುತ್ತದೆ. ಮತ ಪಂಡಿತದ ಪ್ರಕಾರ 84.764 ಗ್ರಾಂ ಚಿನ್ನದ ಮೌಲ್ಯದಷ್ಟು ಆಸ್ತಿ ಇದ್ದರೆ ಅದನ್ನು ನಿಸಾಬ್ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟಕ್ಕಿಂತ ಕಡಿಮೆ ಆಸ್ತಿ ಇದ್ದರೆ ಝಕಾತ್ ಕಡ್ಡಾಯವಿಲ್ಲ. ಆದರೆ ನಿಸಾಬ್ ಮಟ್ಟದ ಸಂಪತ್ತು ಒಂದು ಪೂರ್ಣ ಹಿಜರಿ ವರ್ಷ ವ್ಯಕ್ತಿಯ ಬಳಿ ಉಳಿದಿದ್ದರೆ, ಅದರ 2.5 ಶೇಕಡಾ ಭಾಗ ಝಕಾತ್ ರೂಪದಲ್ಲಿ ನೀಡಲೇಬೇಕು. ಇದು ಯಾರಿಗೋ ಮಾಡುವ ಉಪಕಾರವಲ್ಲ. ಅವರ ಹಕ್ಕು ಹಿಂದಿರುಗಿಸುವುದು ಮತ್ತು ತಾನು ಕರ್ತವ್ಯಮುಕ್ತನಾಗುವುದು!
ಝಕಾತ್ ರಮಝಾನ್ ತಿಂಗಳಲ್ಲೇ ಕೊಡಬೇಕು ಎಂಬ ಇಸ್ಲಾಮಿನಲ್ಲಿ ನಿಯಮ ಇಲ್ಲ. ಝಕಾತ್ ನೀಡುವ ಸಮಯ ನಮ್ಮ ಆಸ್ತಿ ನಿಸಾಬ್ ಮಟ್ಟ ತಲುಪಿ ಒಂದು ಇಸ್ಲಾಮಿಕ್ ವರ್ಷ ಪೂರ್ತಿ ನಮ್ಮಲ್ಲಿದ್ದರೆ ಝಕಾತ್ ಎಂಬ ಬಡವರಿಗೆ ಕೊಡುವ ತೆರಿಗೆ ಕಡ್ಡಾಯವಾಗುತ್ತದೆ. ಆದರೆ ರಮಝಾನ್ ಪುಣ್ಯದ ತಿಂಗಳು. ಈ ಸಮಯದಲ್ಲಿ ಮನುಷ್ಯನ ಮನಸ್ಸು ದಾನ-ಧರ್ಮದತ್ತ ಹೆಚ್ಚು ತಿರುಗುತ್ತದೆ. ಬಡವರ ಸ್ಥಿತಿ ಹೆಚ್ಚು ನೆನಪಾಗುತ್ತದೆ. ಅದರಿಂದ ಅನೇಕರು ತಮ್ಮ ಝಕಾತ್ ಅನ್ನು ರಮಝಾನ್ನಲ್ಲಿ ನೀಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅದು ನಿಯಮವಲ್ಲ, ಒಳ್ಳೆಯ ಅಭ್ಯಾಸ ಅಷ್ಟೇ.
ರಮಝಾನ್ ಕೊನೆಯಲ್ಲಿ ಮತ್ತೊಂದು ಮಹತ್ವದ ಕರ್ತವ್ಯ ಬರುತ್ತದೆ. ಅದುವೇ ಪಿತ್ರ್ ಝಕಾತ್. ಇದು ಸಂಪತ್ತಿನ ಮೇಲೆ ಅಲ್ಲ, ಪ್ರತಿಯೊಬ್ಬ ಮುಸ್ಲಿಮನ ಮೇಲಿರುವ ಕಡ್ಡಾಯ ದಾನ. ಈದ್ ದಿನ ಯಾರೂ ಹಸಿದಿರಬಾರದು ಎಂಬ ಉದ್ದೇಶದಿಂದ ಪ್ರತಿಯೊಬ್ಬರೂ ತಮ್ಮ ಹಾಗೂ ಕುಟುಂಬದ ಸದಸ್ಯರ ಪರವಾಗಿ ಸುಮಾರು 2.6 ಕೆಜಿ ಆಹಾರ ಧಾನ್ಯ ಈದ್ ನಮಾಝ್ಗೆ ಮುಂಚೆಯೇ ಬಡವರಿಗೆ ನೀಡಬೇಕು ಎಂದು ಇಸ್ಲಾಂ ಸೂಚಿಸುತ್ತದೆ.ಉಪವಾಸದ ಅವಧಿಯಲ್ಲಿ ಸಂಭವಿಸಿದ ಸಣ್ಣ ತಪ್ಪುಗಳಿಗೆ ಆತ್ಮಶುದ್ಧಿಯಾಗಿಯೂ, ಈದ್ ದಿನ ಯಾರೂ ಹಸಿದ ಹೊಟ್ಟೆಯಿಂದ ಇರಬಾರದು ಎಂಬ ಸಾಮಾಜಿಕ ಸಮಾನತೆಯ ಉದ್ದೇಶದಿಂದ ಇದನ್ನು ನೀಡಲಾಗುತ್ತದೆ.
ದಾನ ಅಥವಾ ಸದಖಾ ಇಲ್ಲಿ ಬೇರೆ ಅರ್ಥ ಪಡೆಯುತ್ತದೆ. ದಾನ ಮನಸ್ಸಿನ ಉದಾರತೆ. ಹಸಿದವನಿಗೆ ಊಟ ಕೊಡುವುದು, ವಿದ್ಯಾರ್ಥಿಗೆ ನೆರವಾಗುವುದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಇವೆಲ್ಲ ಐಚ್ಛಿಕ ದಾನ. ಹಣ ಇರಬೇಕೆಂದಿಲ್ಲ; ಒಳ್ಳೆಯ ಮಾತು ಹೇಳುವುದೂ ದಾನವೇ. ದಾನ ಕೊಡಲು ನಿಯಮವಿಲ್ಲ, ಮಿತಿ ಇಲ್ಲ. ಆದರೆ ನೀವು ಕರಣಾಮಯಿಯಾಗಿರಿ, ದಾನ ಮಾಡುತ್ತಾ ಇರಿ ಎನ್ನುತ್ತದೆ ಇಸ್ಲಾಂ!
ಝಕಾತ್, ದಾನ ಸಮಾಜದ ಸಮತೋಲನಕ್ಕೆ. ಝಕಾತ್ ಬಡತನವನ್ನು ತಡೆಯುವ ವ್ಯವಸ್ಥೆ. ದಾನ ಮಾನವೀಯತೆಯನ್ನು ಜೀವಂತವಾಗಿಡುವ ಭಾವನೆ. ಒಂದು ಕಡ್ಡಾಯ, ಇನ್ನೊಂದು ಕರುಣೆ. ಕೊಡುವ ವಿಧಾನವೂ ಅಷ್ಟೇ ಮುಖ್ಯ. ಬಡವನ ಗೌರವ ಉಳಿಯಬೇಕು. ಸಹಾಯ ಮಾಡುವಾಗ ಅವನ ಆತ್ಮಸಮ್ಮಾನ ಮುರಿಯಬಾರದು. ಪ್ರದರ್ಶನಕ್ಕಾಗಿ ನೀಡಿದ ದಾನ ಧರ್ಮವಾಗುವುದಿಲ್ಲ. ಮೌನವಾಗಿ ನೀಡಿದ ಸಹಾಯವೇ ಸಮಾಜವನ್ನು ಜೋಡಿಸುತ್ತದೆ.
ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಸೇರುತ್ತಾ ಹೋದರೆ ಸಮಾಜದಲ್ಲಿ ಅಸಮಾನತೆ ಹುಟ್ಟುತ್ತದೆ. ಅಸಮಾನತೆ ಅಸಹನೆಯನ್ನು ಹುಟ್ಟಿಸುತ್ತದೆ. ಝಕಾತ್, ದಾನ ಆ ಅಸಹನೆಯನ್ನು ತಡೆಯಲು ಇರುವ ಧಾರ್ಮಿಕ ಕಲ್ಪನೆ. ರಮಝಾನ್ ಮುಗಿದಾಗ ನಮ್ಮ ಪ್ರಾರ್ಥನೆಗಳ ಸಂಖ್ಯೆ ಮಾತ್ರ ಹೆಚ್ಚಿರಬಾರದು. ನಮ್ಮ ಸುತ್ತಲಿನ ಹಸಿವು ಸ್ವಲ್ಪವಾದರೂ ಕಡಿಮೆಯಾಗಿರಬೇಕು. ಅದೇ ಝಕಾತ್ನ ಆತ್ಮ. ಅದೇ ದಾನದ ನಿಜವಾದ ಅರ್ಥ.
— ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.