ರಿಯಾದ್(ವಿಶ್ವಕನ್ನಡಿಗ ನ್ಯೂಸ್): ಕುಟುಂಬ ಭೇಟಿ ವೀಸಾಗಳು ಮತ್ತು ಉಮ್ರಾ ವೀಸಾಗಳು ಸೇರಿದಂತೆ ವಿವಿಧ ರೀತಿಯ ಭೇಟಿ ವೀಸಾಗಳಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸಿರುವ ಅನೇಕ ಕುಟುಂಬಗಳು ತಾಯ್ನಾಡಿಗೆ ಮರಳಲು ಸಮಯ ಮಿತಿ ಇಂದು ಏಪ್ರಿಲ್ 18 ಕ್ಕೆ ಮುಗಿದಿದ್ದರೂ, ಹಲವಾರು ಮಂದಿ ಇನ್ನೂ ಮರಳಾಗದೆ ಸೌದಿ ಅರೇಬಿಯಾದಲ್ಲಿಯೇ ಇದ್ದಾರೆ. ಇಂದು ತಾಯ್ನಾಡಿಗೆ ಮರಳದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಸೌದಿ ಅಧಿಕಾರಿಗಳ ಎಚ್ಚರಿಕೆಗಳ ಹೊರತಾಗಿಯೂ ಅನೇಕ ಕುಟುಂಬಗಳು ಇನ್ನೂ ಹಿಂತಿರುಗಲು ಸಾಧ್ಯವಾಗುತ್ತಿಲ್ಲ.
ಯುದ್ಧದ ಕಾರಣದಿಂದಾಗಿ ಸೌದಿ ಸರ್ಕಾರವು ಈ ಹಿಂದೆ ಏಪ್ರಿಲ್ 18 ರವರೆಗೆ ವೀಸಾಗಳನ್ನು ವಿಸ್ತರಿಸಿತ್ತು. ವಿಮಾನಗಳ ಅನಿಶ್ಚಿತತೆ ಹಾಗೂ ಗಗನಕ್ಕೇರಿದ ವಿಮಾನ ಟಿಕೆಟ್ ಬೆಲೆಯ ಕಾರಣದಿಂದಾಗಿ ಹಲವಾರು ಕುಟುಂಬಗಳು ತಾಯ್ನಾಡಿಗೆ ಹಿಂದಿರುಗಲಾರದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ವೀಸಾಗಳು ಮುಗಿದ ನಂತರವೂ ಪ್ರಯಾಣಿಸಲು ಸಾಧ್ಯವಾಗದ ಕಾರಣ ಅನೇಕರು ಈಗ ಜವಾಝಾತ್ ಕಚೇರಿಗಳಿಗೆ ಹೋಗಿ ಬರುತ್ತಿದ್ದಾರೆ. ಯಾರಿಂದಲೂ ಸ್ಪಷ್ಟವಾದ ಭರವಸೆಗಳು ಸಿಗುತ್ತಿಲ್ಲ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ನಿಯಮಿತ ವಿಮಾನ ಸೇವೆಗಳ ಕೊರತೆಯು ತಾಯ್ನಾಡಿಗೆ ಮರಳಲು ಸಾಧ್ಯವಾಗದವರಿಗೆ ಪ್ರಮುಖ ಸವಾಲಾಗಿದೆ ಎಂದು ಹೇಳಲಾಗುತ್ತದೆ.
ಅಸ್ತಿತ್ವದಲ್ಲಿರುವ ಚಾರ್ಟರ್ಡ್ ವಿಮಾನಗಳು ಮತ್ತು ಇತರ ವಿಮಾನಯಾನ ಸಂಸ್ಥೆಗಳ ಟಿಕೆಟ್ ಬೆಲೆಗಳು ಸಾಮಾನ್ಯ ವಲಸಿಗರಿಗೆ ಕೈಗೆಟುಕದ ರೀತಿಯಲ್ಲಿದೆ. ಒಂದು ಸೀಟಿಗೆ ಸುಮಾರು 4000 ರಿಯಾಲ್ (ಸುಮಾರು 1 ಲಕ್ಷ ರೂಪಾಯಿ) ಪಾವತಿಸಿ ತಾಯ್ನಾಡಿಗೆ ಹೋಗಲಾರದ ಅನೇಕ ಕುಟುಂಬಗಳಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕುಟುಂಬಗಳು ವಿಮಾನ ಟಿಕೆಟ್ ಗಳ ಬೃಹತ್ ಮೊತ್ತದ ಕಾರಣ ತೊಂದರೆಗಳನ್ನು ಎದುರಿಸುತ್ತಿವೆ. ಜನ ಸಾಮಾನ್ಯರ ಇಂತರ ಸಂದಿಗ್ಧ ಪರಿಸ್ಥಿತಿಯನ್ನು ವಿಮಾನ ಕಂಪನಿಗಳು ಲಾಭ ಪಡೆಯಲು ಯತ್ನಿಸುತ್ತಿರುವುದು ಕೂಡ ವಿಪರ್ಯಾಸ. ಈ ಮಧ್ಯೆ, ಸಾಮಾಜಿಕ ಕಾರ್ಯಕರ್ತರು ಸೌದಿ ಅರೇಬಿಯಾದ ಪಾಸ್ಪೋರ್ಟ್ ನಿರ್ದೇಶಕರನ್ನು ಖುದ್ದಾಗಿ ಭೇಟಿಯಾಗಿ ವಿಮಾನ ಸೇವೆ ಪ್ರಾರಂಭವಾಗುವವರೆಗೆ ವೀಸಾ ದಿನಾಂಕವನ್ನು ವಿಸ್ತರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ ವೀಸಾ ಅವಧಿಯನ್ನು ವಿಸ್ತರಿಸಲು ಗಲ್ಫ್ ಮಲಯಾಳಿ ಫೆಡರೇಶನ್ ಅಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ರಫಿ ಪಂಗೋಡ್ ಅವರು ಸೌದಿ ಜವಾಸತ್ ನಿರ್ದೇಶಕರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ರಾಯಭಾರ ಕಚೇರಿ ಮಧ್ಯಪ್ರವೇಶಿಸಿದರೆ ಮಾತ್ರ ಅನುಕೂಲಕರ ನಿಲುವು ಬರುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ಆದಾಗ್ಯೂ, ರಾಯಭಾರ ಕಚೇರಿ ಈ ಮೊದಲು ಸಹಾಯ ಕೋರಿದವರಿಗೆ ಕೊನೆಯ ಕ್ಷಣದವರೆಗೆ ಕಾಯಬೇಡಿ ಎಂದು ಎಚ್ಚರಿಕೆ ನೀಡಿತ್ತು.
ಭಾರತೀಯರು ಸೇರಿದಂತೆ ವಿವಿಧ ರಾಷ್ಟ್ರೀಯತೆಗಳ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ದೇಶಗಳ ರಾಯಭಾರ ಕಚೇರಿಗಳು ಮತ್ತು ಸರ್ಕಾರಗಳು ಸೌದಿ ಆಡಳಿತದೊಂದಿಗೆ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಮಕ್ಕಳು ಸೇರಿದಂತೆ ತಮ್ಮ ಕುಟುಂಬಗಳನ್ನು ಸೌದಿ ಅರೇಬಿಯಾಕ್ಕೆ ಕರೆತಂದ ವಲಸಿಗರು ಅನುಕೂಲಕರ ನಿಲುವು ಸಿಗಬಹುದೆಂದು ಆಶಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡೆಯುತ್ತಿದ್ದು, ಒಟ್ಟಿನಲ್ಲಿ ಉಮ್ರಾ ಹಾಗೂ ವಿಸಿಟ್ ವೀಸಾದಲ್ಲಿ ಬಂದು ನಿಗದಿತ ಸಮಯಕ್ಕೆ ತಾಯ್ನಾಡಿಗೆ ಮರಳಲಾರದ ಕುಟುಂಬಗಳಿಗೆ ಸೌದಿ ಪಾಸ್ ಪೋರ್ಟ್ ವಿಭಾಗ ಹಾಗೂ ಭಾರತೀಯ ರಾಯಭಾರಿ ಕಛೇರಿಯಿಂದ ಒಂದು ಆಶ್ವಾಸನೆ ಸಿಗುವಂತಾಗಲಿ ಎಂಬುವುದೇ ನಮ್ಮ ಆಶಯ.
✍️ ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.