(www.vknews.in) : ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ನಡೆಯುತ್ತಿರುವ ಚರ್ಚೆಗಳಲ್ಲಿ ಹಲವರಿಗೆ ಗೊಂದಲವಿದೆ. ಈ ಎರಡು ವಿಷಯಗಳು ಒಂದಕ್ಕೊಂದು ಅವಿಭಾಜ್ಯವೆಂದು ತೋರಿಸುವ ಪ್ರಯತ್ನವೂ ನಡೆಯುತ್ತಿದೆ. ಮಹಿಳಾ ಮೀಸಲಾತಿ ಜಾರಿಯಾಗಬೇಕಾದರೆ ಕ್ಷೇತ್ರ ಮರುವಿಂಗಡಣೆಯಾಗಿ ಸಂಸತ್-ವಿಧಾನ ಸಭಾ ಸ್ಥಾನಗಳು ಹೆಚ್ಚಾಗಬೇಕಾದದ್ದು ಅನಿವಾರ್ಯ ಅಂತಾನೇ ಕೆಲವರು ತಿಳಿದಿದಂತಿದೆ. ಆದರೆ ವಾಸ್ತವದಲ್ಲಿ ಅವು ಎರಡು ಬೇರೆ ಪ್ರಕ್ರಿಯೆಗಳು. ಅವುಗಳನ್ನು ಒಂದಕ್ಕೊಂದು ಲಿಂಕ್ ಮಾಡಿದ್ದು 2023ರಲ್ಲಿ. ಆ ಲಿಂಕನ್ನು ತೆಗೆಯೋದಕ್ಕೆ ಇನ್ನೊಂದು ಮಸೂದೆ ಮಂಡಿಸಿದರೆ ಸಲೀಸಾಗಿ ಅದು ಪಾಸಾಗಿ ಆ ಲಿಂಕ್ ಬೇರ್ಪಡುತ್ತದೆ. ಹಾಗಾದ ತಕ್ಷಣಕ್ಕೆ 2023ರಲ್ಲಿ ಕಾನೂನಾದ ಮಹಿಳಾ ಮೀಸಲಾತಿ ಇಡೀ ದೇಶದಲ್ಲಿ ಜಾರಿಯಾಗಿಬಿಡುತ್ತದೆ!
ಕ್ಷೇತ್ರ ಮರುವಿಂಗಡಣೆ ಎಂದರೆ ಜನಗಣತಿಯ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಮರುಹಂಚುವ ಪ್ರಕ್ರಿಯೆ. ಇದು ಭಾರತದ ಸಂವಿಧಾನದ Article 81 ಮತ್ತು 82 ಅಡಿಯಲ್ಲಿ ಬರುತ್ತದೆ. 1976ರಲ್ಲಿ ಇಂದಿರಾ ಗಾಂಧಿ ಸರ್ಕಾರ 42nd Constitutional Amendment Act ಮೂಲಕ ಇದನ್ನು 2001ರವರೆಗೆ ಫ್ರೀಜ್ ಮಾಡಿತು. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂಬುದೇ ಕಾರಣ. ನಂತರ ಅಟಲ್ ಬುಹಾರಿ ವಾಜಪೇಯಿ ನೇತೃತ್ವದ ಸರ್ಕಾರ 84th Constitutional Amendment Act ಮೂಲಕ ಅದೇ ಕಾರಣವನ್ನು ಪರಿಗಣಿಸಿ ಈ ಸ್ಥಗಿತಾವಧಿಯನ್ನು 2026ರವರೆಗೆ ವಿಸ್ತರಿಸಿತು. ಅಂದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ಪ್ರತಿನಿಧಿತ್ವದಲ್ಲಿ ನಷ್ಟವಾಗಬಾರದು ಎಂಬ ಆತಂಕವನ್ನು ಆ ಕಾಲದ ಸರ್ಕಾರಗಳು ಗಮನದಲ್ಲಿಟ್ಟುಕೊಂಡಿದ್ದವು. ಇದೇ ವಿಚಾರವನ್ನು ಇಂದೂ ವಿಪಕ್ಷಗಳೂ ಮುಂದಿಡುತ್ತಿವೆ!
ಹಾಗಂತ ಈ “ಫ್ರೀಜ್” ಎಂದರೆ ಸಂಪೂರ್ಣ ಬದಲಾವಣೆ ನಿಲ್ಲಿಸಲಾಯಿತು ಎಂಬುದಲ್ಲ. ಬದಲಾವಣೆ ಆಗುತ್ತಾ ಬಂದಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಲೋಕಸಭೆ ಸೀಟುಗಳು 28 ಆಗಿಯೇ ಉಳಿದರೂ, 2002–2008ರ ಅವಧಿಯಲ್ಲಿ Delimitation Commission ಮೂಲಕ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸಲಾಯಿತು. ವಿಶೇಷವಾಗಿ ಬೆಂಗಳೂರು ಸೆಂಟ್ರಲ್ ಎಂಬ ಹೊಸ ಕ್ಷೇತ್ರ ರೂಪುಗೊಂಡಿತು; ಬೆಂಗಳುರು ನಾರ್ತ್ ಮತ್ತು ಬೆಂಗಳೂರು ಸೌತ್ ಕ್ಷೇತ್ರಗಳ ಗಡಿಗಳು ದೊಡ್ಡ ಮಟ್ಟದಲ್ಲಿ ಬದಲಾದವು. ಇದೇ ರೀತಿ ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿಲ್ಲೆಗಳ ಪುನರ್ವಿಂಗಡಣೆ ಮತ್ತು ಜನಸಂಖ್ಯೆ ಬದಲಾವಣೆಗಳಿಗೆ ಅನುಗುಣವಾಗಿ ಗಡಿ ತಿದ್ದುಪಡಿ ಮಾಡಲಾಯಿತು. ಅಂದರೆ, ಸಂಸತ್ ಸ್ಥಾನಗಳ ಸಂಖ್ಯೆ (543) ಸ್ಥಿರವಾಗಿದ್ದರೂ, ಕ್ಷೇತ್ರಗಳ ಒಳಗಿನ ರಚನೆ ಮತ್ತು ಮತದಾರರ ಹಂಚಿಕೆ ಬದಲಾಗಿತ್ತು.
ಇದನ್ನೇ ಹಿನ್ನೆಲೆಯಾಗಿ ಮಹಿಳಾ ಮೀಸಲಾತಿ ವಿಚಾರವನ್ನು ನೋಡಬೇಕು. 2023ರಲ್ಲಿ ಅಂಗೀಕರಿಸಲಾದ 106th Constitutional Amendment Act ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿಗೆ ಸಂವಿಧಾನಾತ್ಮಕ ಆಧಾರ ನೀಡಲಾಗಿದೆ. ಆದರೆ ಇದೇ ಸಂವಿಧಾನ ತಿದ್ದುಪಡಿಯಲ್ಲೇ ಒಂದು ಪ್ರಮುಖ ಷರತ್ತು ಸೇರಿಸಲಾಗಿದೆ. ಅದರಂತೆ ಕ್ಷೇತ್ರ ಮರುವಿಂಗಡಣೆ ಬಳಿಕ ಮಾತ್ರ ಇದು ಜಾರಿಗೆ ಬರಲಿದೆ.
ಇಲ್ಲಿಯೇ ಸಮಸ್ಯೆಯ ಮೂಲ ಇದೆ. ಮಹಿಳಾ ಮೀಸಲಾತಿ ಹೊಸ ಕಲ್ಪನೆಯಲ್ಲ. ಆದರೆ ಅದನ್ನು ಕ್ಷೇತ್ರ ಮರುವಿಂಗಡಣೆಗೆ (ಕ್ಷೇತ್ರಗಳ ಹೆಚ್ಚಳಕ್ಕೆ) ಕಡ್ಡಾಯವಾಗಿ ಕಟ್ಟಿ ಹಾಕಿರುವುದು ಹೊಸ ನಿರ್ಧಾರ. ಹೀಗಾಗಿ “ಮೀಸಲಾತಿಗೆ delimitation ಅನಿವಾರ್ಯ” ಎಂದಾಗಿದ್ದು 2023ರ ತಿದ್ದುಪಡಿಯಿಂದ ಬಂದ ಹೊಸ ಷರತ್ತಿನಿಂದ. ಅದನ್ನು ಮತ್ತೆ ತೆಗೆದುಹಾಕಿದರೆ (ಉಭಯ ಸದನಗಳಲ್ಲಿ ಮಂಡಸಿದರೆ ವಿಪಕ್ಷಗಳು ಪರ ಮತ ಹಾಕೇ ಹಾಕುತ್ತದೆ) ಮಹಿಳಾ ಮೀಸಲಾತಿ ತನ್ನಷ್ಟಕ್ಕೆ ಜಾರಿಯಾಗಿಯೇಬಿಡುತ್ತದೆ.
ಜನಸಂಖ್ಯೆ ಆಧಾರದ ಮೇಲೆ ಮಾತ್ರ ಸೀಟು ಹಂಚಿಕೆ ಮಾಡಿದರೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗುವ ಸಾಧ್ಯತೆ ಇದೆ. ದಕ್ಷಿಣ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವುದರಿಂದ, ಅವುಗಳ ಪಾಲು ಕಡಿಮೆಯಾಗಬಹುದು ಎಂಬ ಆತಂಕ ಸಹಜವಾದದ್ದೇ. ಈ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸುತ್ತಿವೆಯೇ ಹೊರತು ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ.
ಹೀಗಾಗಿ ವಿಷಯ ಸರಳ. ಇದು ಕೇವಲ ಕಾನೂನು ಅಥವಾ ಒಂದು ಪಕ್ಷದ ನಿರ್ಧಾರವಲ್ಲ; ದೇಶದ ಪ್ರತಿನಿಧಿತ್ವದ ಸಮತೋಲನದ ಪ್ರಶ್ನೆ. ಯಾವುದೇ ನಿರ್ಧಾರವೂ ಕೆಲ ರಾಜ್ಯಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ಇರಬಾರದು. ಪ್ರತಿನಿಧಿತ್ವದ ಸಮತೋಲನ ಕಾಪಾಡುವ ದಿಕ್ಕಿನಲ್ಲೇ ಮುಂದಿನ ನಿರ್ಧಾರಗಳು ಇರಬೇಕು.
— ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.