(www.vknews.in) ; ಸರಕಾರಿ ಶಾಲೆಗಳ ಅಭಿವೃದ್ಧಿ ಕುರಿತು ಮಾತನಾಡುವ ಮೊದಲು ಈ ಪ್ರಶ್ನೆಗಳಿಗೆ ಉತ್ತರಗಳು ಸಿಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರಕಾರಿ ಶಾಲೆಗಳ ಕುರಿತು ಅನೇಕ ವಿಡಿಯೋಗಳು, ಪೋಸ್ಟ್ಗಳು ಮತ್ತು ಚರ್ಚೆಗಳು ನಡೆಯುತ್ತಿವೆ. ಕೆಲವು ಸಂದರ್ಭಗಳಲ್ಲಿ ಸರಕಾರಿ ಶಾಲೆಗಳ ಸಾಧನೆಗಳನ್ನು ಪ್ರಶಂಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಅವುಗಳ ಕೊರತೆಗಳನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ. ಆದರೆ ನಿಜವಾಗಿಯೂ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು, ಅವರ ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ ಎಂಬ ಪ್ರಶ್ನೆಗಳನ್ನು ಕೇಳುವವರು ಕಡಿಮೆಯಾಗಿದ್ದಾರೆ.
ಭಾರತ ಸಂವಿಧಾನದ 21A ವಿಧಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಘೋಷಿಸಿದೆ. ಇದನ್ನು ಜಾರಿಗೊಳಿಸಲು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ – 2009 (RTE Act, 2009) ಜಾರಿಗೆ ತರಲಾಗಿದೆ. ಈ ಕಾಯ್ದೆಯ ಉದ್ದೇಶ ಕೇವಲ ಮಕ್ಕಳನ್ನು ಶಾಲೆಗೆ ಸೇರಿಸುವುದಲ್ಲ, ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಾಗಿದೆ.
ಆದ್ದರಿಂದ ಮೊದಲು ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗಬೇಕು.
RTE ಕಾಯ್ದೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರ ಮತ್ತು ಶಾಲೆಗಳ ಕರ್ತವ್ಯ ಎಂದು ಹೇಳುತ್ತದೆ. ಆದರೆ ಎಲ್ಲಾ ಶಾಲೆಗಳಲ್ಲಿ ಪಾಠ ಬೋಧನೆ, ಕಲಿಕಾ ಫಲಿತಾಂಶಗಳು ಮತ್ತು ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿವೆಯೇ? ಶಾಲೆಗೆ ಬಂದ ಶಿಕ್ಷಕರು ತರಗತಿ ಕೊಠಡಿಗೆ ಹಾಜರು ಆಗುತ್ತ ಇದ್ದಾರೆಯೇ? ತರಗತಿ ಕೊಠಡಿಯಲ್ಲಿ ಇದ್ದವರು ಮಕ್ಕಳ ಕಲಿಕೆಗೆ ಒತ್ತು ಕೊಡುತ್ತ ಇದ್ದಾರೆಯೇ? ಎಂಬುದನ್ನು ಪರಿಶೀಲಿಸಬೇಕಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 (National Food Security Act, 2013) ಹಾಗೂ ಶಾಲಾ ಬಿಸಿಯೂಟ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಮಕ್ಕಳಿಗೆ ನಿಗದಿತ ಪ್ರಮಾಣದ ಪೌಷ್ಟಿಕ ಆಹಾರ ನೀಡಬೇಕು. ಉದಾಹರಣೆಗೆ ಹಾಲಿನ ಪುಡಿ, ಬೇಳೆ, ತರಕಾರಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸಬೇಕಾಗಿದೆ.*(ಒಂದು ಮಗುವಿಗೆ 18ಗ್ರಾಮ್ ಹಾಲಿನ ಹುಡಿ 5 ಗ್ರಾಮ್ ರಾಗಿಮಾಲ್ಟ್ ಹಾಕಿದ 250ml ಹಾಲು, 75 ಗ್ರಾಮ್ ತರಕಾರಿ 30 ಗ್ರಾಮ್ ಬೇಳೆ)* ಆದರೆ ಎಷ್ಟು ಶಾಲೆಗಳಲ್ಲಿ ಈ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ? ಎಷ್ಟು ಎಸ್ಡಿಎಂಸಿಗಳು ಇದರ ಮೇಲ್ವಿಚಾರಣೆ ಮಾಡುತ್ತಿವೆ?
ಸರ್ಕಾರ ಪ್ರತಿವರ್ಷ ಮಕ್ಕಳಿಗೆ ಉಚಿತ ಸಮವಸ್ತ್ರದ ಬಟ್ಟೆ ಒದಗಿಸುತ್ತದೆ. (ಹೈಕೋರ್ಟ್ ಆದೇಶದ ಪ್ರಕಾರ ಸಿದ್ಧಪಡಿಸಿದ ಸಮವಸ್ತ್ರ) ಆದರೆ ಅದರ ಗುಣಮಟ್ಟ, ಅಳತೆ ಮತ್ತು ಸಮಯಕ್ಕೆ ಸರಿಯಾಗಿ ವಿತರಣೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ ಸ್ಥಳೀಯ ಮಟ್ಟದಲ್ಲಿ ಇರಬೇಕು. ಶಾಲಾ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು RTE ಕಾಯ್ದೆಯು ಒತ್ತಿಹೇಳುತ್ತದೆ. ಆದ್ದರಿಂದ ಎಸ್ಡಿಎಂಸಿ ಸದಸ್ಯರು ಸಮವಸ್ತ್ರದ ಗುಣಮಟ್ಟವನ್ನು ಪರಿಶೀಲಿಸುವುದು ಅವರ ಕರ್ತವ್ಯದ ಭಾಗವಾಗಿದೆ.
ಡಿಜಿಟಲ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ ಎಂಬ ಪದಗಳು ಹೆಚ್ಚು ಕೇಳಿಬರುತ್ತಿವೆ. ಆದರೆ ಅನೇಕ ಶಾಲೆಗಳಲ್ಲಿ ಸಾಕಷ್ಟು ತರಗತಿ ಕೊಠಡಿಗಳು, ಶಿಕ್ಷಕರು ಅಥವಾ ಮೂಲಭೂತ ಶಿಕ್ಷಣವೇ ಇಲ್ಲದಿರುವುದು ವಾಸ್ತವ.
RTE Act Schedule ಪ್ರಕಾರ ಶಾಲೆಗಳಲ್ಲಿ ಮೂಲಸೌಕರ್ಯಗಳು ಕಡ್ಡಾಯವಾಗಿವೆ. ಮೊದಲು ಮೂಲಸೌಕರ್ಯಗಳನ್ನು ಬಲಪಡಿಸಿ(,ಮೂಲಸೌಕರ್ಯ ಅಂದರೆ ಕಟ್ಟಡ ಮಾತ್ರವಲ್ಲ,ಗುಣಮಟ್ಟದ ಶಿಕ್ಷಣವೇ ಮೂಲ ಆಗಿರಬೇಕು) ನಂತರ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿದೆ.
RTE ಕಾಯ್ದೆಯ ಉದ್ದೇಶ ಕೇವಲ ಪಾಠಪುಸ್ತಕ ಶಿಕ್ಷಣವಲ್ಲ; ಮಗುವಿನ ಸರ್ವತೋಮುಖ ಅಭಿವೃದ್ಧಿಯಾಗಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ನಾಯಕತ್ವ ತರಬೇತಿ ಮತ್ತು ಜೀವನ ಕೌಶಲ್ಯಗಳ ಬೆಳವಣಿಗೆ ಕೂಡ ಶಿಕ್ಷಣದ ಭಾಗವೇ ಆಗಿದೆ.ದೈಹಿಕ ಶಿಕ್ಷಣ ಶಿಕ್ಷಕರು ಇದ್ದೂ ಮಕ್ಕಳನ್ನು ಕ್ರೀಡಾಕೂಟಗಳಿಗೆ ಸಿದ್ಧಪಡಿಸದಿದ್ದರೆ ಅದರ ಬಗ್ಗೆ ಪ್ರಶ್ನಿಸುವ ಹಕ್ಕು ಎಸ್ಡಿಎಂಸಿ ಮತ್ತು ಪೋಷಕರಿಗಿದ್ದೂ ಎಷ್ಟು ಎಸ್ಡಿಎಂಸಿ ಯವರು ಪ್ರಶ್ನಿಸುತ್ತಾರೆ.
RTE Act, 2009 ರ Section 21 ಮತ್ತು 22 ರ ಪ್ರಕಾರ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಶಾಲೆಯ ಅಗತ್ಯಗಳನ್ನು ಗುರುತಿಸುವುದು, ಅನುದಾನಗಳ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಕೆಲಸ ಮಾಡುವುದು ಹಾಗೂ ಶಾಲಾ ಅಭಿವೃದ್ಧಿ ಯೋಜನೆಯನ್ನು ರೂಪಿಸುವುದು ಇದರ ಕರ್ತವ್ಯವಾಗಿದೆ.
ಹೀಗಿರುವಾಗ ಶಾಲೆಗಳ ಬಗ್ಗೆ ಕೇವಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದರಿಂದ ಪ್ರಯೋಜನವಿಲ್ಲ. ನಿಜವಾದ ಕಾಳಜಿ ಇದ್ದರೆ ಶಾಲೆಗಳಿಗೆ ಭೇಟಿ ನೀಡಿ, ಎಸ್ಡಿಎಂಸಿಯೊಂದಿಗೆ ಕೈಜೋಡಿಸಿ, ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು.
ನಾನು ಸರಕಾರಿ ಶಾಲೆಗಳನ್ನು ಟೀಕಿಸುತ್ತಿಲ್ಲ. ಸರಕಾರಿ ಶಾಲೆಗಳು ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿವೆ. ಆದರೆ ಶಾಲೆಗಳ ಕುರಿತು ಮಾತನಾಡುವವರು ಮೊದಲು ಮಕ್ಕಳಿಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡಬೇಕು.
ಸರಕಾರಿ ಶಾಲೆಗಳು ಯಾರಿಗಾದರೂ ಒಂದು “ಕಂಟೆಂಟ್” ಆಗಬಾರದು. ಅವು ಮಕ್ಕಳ ಭವಿಷ್ಯದ ಅಡಿಪಾಯವಾಗಬೇಕು. ಸರ್ಕಾರದ ಉತ್ತಮ ಯೋಜನೆಗಳು ಪ್ರತಿಯೊಬ್ಬ ಮಗುವಿಗೂ ತಲುಪಬೇಕು. ಅದಕ್ಕಾಗಿ ಎಸ್ಡಿಎಂಸಿಗಳು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು, ಪೋಷಕರು ಭಾಗವಹಿಸಬೇಕು ಮತ್ತು ಶಿಕ್ಷಣ ಇಲಾಖೆ ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಬೇಕು.
ಶಾಲೆ ಉಳಿಯಬೇಕಾದರೆ ಜವಾಬ್ದಾರಿಯುತ ಪಾಲ್ಗೊಳ್ಳುವಿಕೆ ಮತ್ತು ಪ್ರಾಮಾಣಿಕ ಪ್ರಯತ್ನಗಳೂ ಅಗತ್ಯ..
ಮೊಯ್ದಿನ್ ಕುಟ್ಟಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.