ಮಂಗಳೂರು (www.vknews.in) : ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಪಕ್ಷಕ್ಕೆ ಮತ ಹಾಕಿದವರು, ಪಕ್ಷಕ್ಕಾಗಿ ದುಡಿದವರು ಮಾತ್ರ ಪಕ್ಷದ ವಿಚಾರದಲ್ಲಿ ಮಾತನಾಡಲಿ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮುಸ್ಲಿಮರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕೆಲವು ಮುಸ್ಲಿಂ ಮುಖಂಡರು ನಡೆಸಿದ ಸುದ್ದಿಗೋಷ್ಠಿ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಬೇರೆ ಬೇರೆ ಹೆಸರು ಇಟ್ಟುಕೊಂಡು ‘ಸಮಾನ ಮನಸ್ಕರು’ ಎಂದು ಹೇಳಿಕೊಂಡು ಬರುವುದು ಬೇಡ. ಕಾಂಗ್ರೆಸ್ಗೆ ಬುದ್ಧಿವಾದ ಹೇಳುವ ಅಗತ್ಯ ಇವರಿಗೆ ಇಲ್ಲ. ಇವರ ಸಲಹೆ-ಸೂಚನೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಖಾದರ್, “ಪಕ್ಷವನ್ನು ವಿರೋಧಿಸಿದ್ದವರು ಇಂದು ಕೂತು ಕಾಂಗ್ರೆಸ್ಗೆ ನಿರ್ದೇಶನ ನೀಡುವ ಅವಶ್ಯಕತೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಮಾತ್ರವಲ್ಲ, ಹಲವು ರೀತಿಯ ಅವಕಾಶಗಳನ್ನು ನೀಡಿದೆ” ಎಂದರು.
“ಝಮೀರ್ ಅಹ್ಮದ್ ಸೇರಿದಂತೆ ನಾವು ಎಲ್ಲ ಮುಸ್ಲಿಂ ನಾಯಕರು ಒಟ್ಟಾಗಿದ್ದೇವೆ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಸೇರಿ ಅಲ್ಪಸಂಖ್ಯಾತರಿಗೆ ಸೂಕ್ತ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ರಾಜಕೀಯವಾಗಿ ಈ ವಿಚಾರವನ್ನು ಬಿಗಡಾಯಿಸಲು ಯತ್ನಿಸುವ, ಕಾಂಗ್ರೆಸ್ಗೆ ಮತ ಹಾಕದವರನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.