ಜಾಲ್ಸೂರು (www.vknews.in) : ಜ್ವರ ಮತ್ತು ಕೆಮ್ಮಿನ ಚಿಕಿತ್ಸೆಗೆ ಜಾಲ್ಸೂರಿನ ಖಾಸಗಿ ಕ್ಲಿನಿಕ್ಗೆ ಭೇಟಿ ನೀಡಿದ್ದ ರೋಗಿಯೊಬ್ಬರಿಗೆ ಅವಧಿ ಮೀರಿದ (ಎಕ್ಸ್ಪೈರ್) ಔಷಧಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ (THO) ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ (DHO) ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.
ಮಾಹಿತಿಯ ಪ್ರಕಾರ, ಕನಕಮಜಲು ನಿವಾಸಿಯಾದ ರೋಗಿಯೊಬ್ಬರು ಜ್ವರ ಹಾಗೂ ಕೆಮ್ಮಿನ ಹಿನ್ನೆಲೆಯಲ್ಲಿ ಜಾಲ್ಸೂರಿನ ಖಾಸಗಿ ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆದು ಔಷಧಿ ಪಡೆದಿದ್ದರು. ಬಳಿಕ ವೈದ್ಯರು ನೀಡಿದ ಔಷಧಿಯನ್ನು ಸೇವಿಸಿದ ಕೆಲವೇ ಸಮಯದಲ್ಲಿ ರೋಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದರಿಂದ ಅನುಮಾನಗೊಂಡ ಕುಟುಂಬದವರು ಔಷಧಿಯ ಬಾಟಲಿಯನ್ನು ಪರಿಶೀಲಿಸಿದಾಗ, ಅದರ ಮೇಲಿದ್ದ ಎಕ್ಸ್ಪೈರಿ ದಿನಾಂಕದ ಭಾಗವನ್ನು ಮಾರ್ಕರ್ ಪೆನ್ನಿನಿಂದ ಗೀಚಿ ಮುಚ್ಚಿರುವುದು ಕಂಡುಬಂದಿದೆ ಎನ್ನಲಾಗಿದೆ. ಬಳಿಕ ಆ ಭಾಗವನ್ನು ಸ್ಪ್ರೇ ಬಳಸಿ ಸ್ವಚ್ಛಗೊಳಿಸಿ ಪರಿಶೀಲಿಸಿದಾಗ, ಔಷಧಿಯ ಅವಧಿ ಒಂದೂವರೆ ತಿಂಗಳ ಹಿಂದೆಯೇ ಮುಕ್ತಾಯಗೊಂಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಬಹಿರಂಗವಾಗುತ್ತಿದ್ದಂತೆಯೇ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ಗ್ರಾಮೀಣ ಭಾಗದ ಜನರು ವೈದ್ಯರು ಮತ್ತು ಖಾಸಗಿ ಕ್ಲಿನಿಕ್ಗಳ ಮೇಲೆ ನಂಬಿಕೆ ಇಟ್ಟು ಚಿಕಿತ್ಸೆಗೆ ಬರುವಾಗ, ಅವಧಿ ಮೀರಿದ ಔಷಧಿ ವಿತರಣೆ ಆರೋಪ ಹೊರಹೊಮ್ಮಿರುವುದು ಗಂಭೀರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಇದೇ ಕ್ಲಿನಿಕ್ನಲ್ಲಿ ಇಂತಹ ರೀತಿಯ ಘಟನೆಗಳು ನಡೆದಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಈ ಕುರಿತು ಇನ್ನೂ ಅಧಿಕೃತವಾಗಿ ಯಾವುದೇ ದಾಖಲೆ ಅಥವಾ ದೃಢೀಕರಣ ಹೊರಬಿದ್ದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೋಗಿಯ ಕುಟುಂಬದವರು ಈಗಾಗಲೇ ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಸಂಬಂಧಿತ ಕ್ಲಿನಿಕ್ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಪ್ರಕರಣದ ಬಗ್ಗೆ ಸಂಬಂಧಿತ ಖಾಸಗಿ ಕ್ಲಿನಿಕ್ ಕಡೆಯಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಲಭ್ಯವಾಗಿಲ್ಲ. ಆರೋಗ್ಯ ಇಲಾಖೆ ದೂರು ಆಧರಿಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಇದೀಗ ಸ್ಥಳೀಯರ ಗಮನ ನೆಟ್ಟಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.