ಕೆನಡಾ (www.vknews.in) : ಕೇರಳದ ಮಲಪ್ಪುರಂ ಮೂಲದ ಹಾಗೂ ಮಾದಿನ್ ಎಬಲ್ ವರ್ಲ್ಡ್ ಸ್ಪೆಷಲ್ ಸ್ಕೂಲ್ ಮತ್ತು ಲೈಫ್ ಶೋರ್ ಪುನರ್ವಸತಿ ಕೇಂದ್ರದ ಹಳೆಯ ವಿದ್ಯಾರ್ಥಿ ಮೊಹಮ್ಮದ್ ರಯಾನ್ ಕೆನಡಾದಲ್ಲಿ ಅಂಗವೈಕಲ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಪ್ರತಿಷ್ಠಿತ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ. ರಿಕ್ ಹ್ಯಾನ್ಸೆನ್ ಫೌಂಡೇಶನ್ ವತಿಯಿಂದ ನೀಡಲಾಗುವ “ಸ್ಕೂಲ್ ಪ್ರೋಗ್ರಾಂ 2026 ಡಿಫರೆನ್ಸ್ ಮೇಕರ್ ಆಫ್ ದಿ ಇಯರ್” ಪ್ರಶಸ್ತಿಗೆ ರಯಾನ್ ಆಯ್ಕೆಯಾಗಿದ್ದು, ಈ ಗೌರವವನ್ನು ಪಡೆದ ಮೊದಲ ಭಾರತೀಯ ಹಾಗೂ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೈಹಿಕ ಮತ್ತು ಮಾನಸಿಕ ಸವಾಲುಗಳ ನಡುವೆಯೂ ವಿಕಲಚೇತನರ ಹಕ್ಕುಗಳು, ಸಮಾನ ಅವಕಾಶಗಳು ಹಾಗೂ ಸಾಮಾಜಿಕ ಸೇರ್ಪಡೆಗಾಗಿ ರಯಾನ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆನಡಾದ ನೋವಾ ಸ್ಕಾಟಿಯಾದ ವಲಸಿಗ ಸಮುದಾಯಗಳು ಹಾಗೂ ಕೇರಳದ ವಿಕಲಚೇತನರ ನಡುವೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ರಯಾನ್ ಅವರು ಇನ್ಕ್ಲೂಷನ್ ನೋವಾ ಸ್ಕಾಟಿಯಾ, ನೋವಾ ಸ್ಕಾಟಿಯಾ ಲೀಗ್ ಫಾರ್ ಈಕ್ವಲ್ ಆಪರ್ಚುನಿಟೀಸ್, ಈಸ್ಟರ್ ಸೀಲ್ಸ್ ನೋವಾ ಸ್ಕಾಟಿಯಾ ಹಾಗೂ ಹ್ಯಾಲಿಫ್ಯಾಕ್ಸ್ ಮಲಯಾಳಿ ಅಸೋಸಿಯೇಷನ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಕೈಜೋಡಿಸಿ ಅಂಗವೈಕಲ್ಯ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
2023ರಲ್ಲಿ ಕುಟುಂಬದೊಂದಿಗೆ ಕೆನಡಾಕ್ಕೆ ವಲಸೆ ಹೋದ ಬಳಿಕ ಅಲ್ಲಿನ ವಿಕಲಚೇತನರ ಕಲ್ಯಾಣ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ಅದರ ಮಾಹಿತಿಯನ್ನು ಕೇರಳದ ವಿಕಲಚೇತನರು ಹಾಗೂ ಹೊಸ ವಲಸಿಗರೊಂದಿಗೆ ಹಂಚಿಕೊಳ್ಳುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಈ ಹಿಂದೆ 2025ರಲ್ಲಿ ಹವರ್ ಗ್ಲಾಸ್ ಆಕ್ಷನ್ ಅವಾರ್ಡ್ – ಯಂಗ್ ಚಾಂಪಿಯನ್ ಪ್ರಶಸ್ತಿ ಹಾಗೂ 2024ರಲ್ಲಿ ಮೇಕ್-ಎ-ವಿಶ್ ಫೌಂಡೇಶನ್ ಆಯೋಜಿಸಿದ್ದ ವಿಶೇಷ ಅಮೆರಿಕ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕವೂ ರಯಾನ್ ಗಮನ ಸೆಳೆದಿದ್ದರು.
ಮಾದಿನ್ ಅಕಾಡೆಮಿಯ ಅಧ್ಯಕ್ಷ ಸೈಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ರಯಾನ್ ಅವರ ಸಾಧನೆಯನ್ನು ಅಭಿನಂದಿಸಿ, ಇದು ಮಾದಿನ್ ಎಬಲ್ ವರ್ಲ್ಡ್ ಸಂಸ್ಥೆಯ ಹೆಮ್ಮೆಯ ಕ್ಷಣ ಎಂದು ತಿಳಿಸಿದ್ದಾರೆ. ರಯಾನ್ ಅವರ ತಂದೆ ಮೊಹಮ್ಮದ್ ಅಸ್ರತ್ ಮಾದಿನ್ ಎಬಲ್ ವರ್ಲ್ಡ್ನ ಮಂಡಳಿ ಸದಸ್ಯರಾಗಿದ್ದು, ನೋವಾ ಸ್ಕಾಟಿಯಾ ಸರ್ಕಾರದ ಅಂಗವೈಕಲ್ಯ ಕ್ಷೇತ್ರದ ಸಲಹೆಗಾರರಾಗಿದ್ದಾರೆ. ತಾಯಿ ರೀಮಾ ಇಬ್ರಾಹಿಂ ಶಿಕ್ಷಕಿಯಾಗಿದ್ದು, ಸಹೋದರಿ ಹಸ್ವಾ ಫಾತಿಮಾ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.