(www.vknews. in)ಉಪ್ಪಿನಂಗಡಿಯಲ್ಲಿ ನೇತ್ರಾವತಿ–ಕುಮಾರಧಾರ ನೀರಿನ ಮಟ್ಟ ಏರಿಕೆ: ಸಂಗಮಕ್ಕೆ ಇನ್ನೂ 3 ಅಡಿಗೂ ಕಡಿಮೆ ಅಂತರ – ಪ್ರವಾಹ ರಕ್ಷಣಾ ಪಡೆ ಸಂಪೂರ್ಣ ಸಜ್ಜು
ಉಪ್ಪಿನಂಗಡಿ, ಆಗಸ್ಟ್ 1: ನಿರಂತರ ಮಳೆಯ ಪರಿಣಾಮವಾಗಿ ಉಪ್ಪಿನಂಗಡಿಯ ಪವಿತ್ರ ಸಂಗಮ ಕ್ಷೇತ್ರವಾದ ಸಹಸ್ರಲಿಂಗೇಶ್ವರ ದೇವಸ್ಥಾನದ ತಪ್ಪಲಿನಲ್ಲಿ ಹರಿಯುವ ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪರಿಸ್ಥಿತಿಯನ್ನು ಜಿಲ್ಲಾಡಳಿತ ಹಾಗೂ ಪ್ರವಾಹ ರಕ್ಷಣಾ ತಂಡ ನಿಕಟವಾಗಿ ಗಮನಿಸುತ್ತಿದೆ.
ನಿನ್ನೆ ಸಮುದ್ರಮಟ್ಟದಿಂದ 26 ಅಡಿ ಎತ್ತರದಲ್ಲಿದ್ದ ನೀರಿನ ಮಟ್ಟವು ಇಂದು ಬೆಳಿಗ್ಗೆ 7.30 ಗಂಟೆಗೆ 28.05 ಅಡಿಗೆ ಏರಿಕೆಯಾಗಿದೆ. 31 ಅಡಿ ನೀರಿನ ಮಟ್ಟ ತಲುಪಿದಾಗ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಸಂಭವಿಸುವುದರ ಜೊತೆಗೆ ಉಪ್ಪಿನಂಗಡಿ ಪ್ರದೇಶಕ್ಕೆ ಸಂಬಂಧಿಸಿದ ಅಪಾಯದ ಮಟ್ಟವೂ ತಲುಪುತ್ತದೆ.
ದಾಖಲೆಗಳ ಪ್ರಕಾರ, 2024ರ ಜುಲೈ 30ರಂದು ನೀರಿನ ಮಟ್ಟ ಅಪಾಯದ ಮಟ್ಟವನ್ನು ತಲುಪಿತ್ತು. ಅದರ ನಂತರ ಕಳೆದ ವರ್ಷ ಸಂಗಮ ಸಂಭವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ನೀರಿನ ಮಟ್ಟದ ಏರಿಕೆಯನ್ನು ಸಾರ್ವಜನಿಕರು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಸಹಸ್ರಲಿಂಗೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದಲ್ಲಿ ನದಿಗಳ ಸಂಗಮವನ್ನು ಕಣ್ತುಂಬಿಕೊಳ್ಳಲು ಹಾಗೂ ಪವಿತ್ರ ಕ್ಷಣದ ದರ್ಶನ ಪಡೆಯಲು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾರ್ವಜನಿಕರು ನದಿಯ ತೀರದಲ್ಲಿ ಅನಗತ್ಯವಾಗಿ ಗುಂಪುಗೂಡದೆ, ಮಕ್ಕಳನ್ನು ನೀರಿನ ಸಮೀಪಕ್ಕೆ ಬಿಡದೆ ಹಾಗೂ ಆಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪುತ್ತೂರು ಉಪ ತಹಶೀಲ್ದಾರ್ ಶ್ರೀಮತಿ ಕವಿತಾ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಹ ರಕ್ಷಣಾ ಪಡೆಯ ತಂಡವು ಘಟಕಾಧಿಕಾರಿ ರಾಮಣ್ಣ ಆಚಾರ್ಯ, ದಿನೇಶ್, ಜನಾರ್ದನ ಆಚಾರ್ಯ,ಸಮದ್, ವಸಂತ,ಶಿಭುಜಾನ್, ಸೋಮನಾಥ್ ಅವರ ನೇತೃತ್ವದಲ್ಲಿ ಜೂನ್ ಒಂದರಿಂದಲೇ ನದಿಯ ತೀರದಲ್ಲಿ ರಾತ್ರಿ–ಹಗಲು ಬೀಡುಬಿಟ್ಟು ನಿರಂತರ ನಿಗಾ ವಹಿಸುತ್ತಿದೆ. ಯಾಂತ್ರಿಕ ದೋಣಿ ಹಾಗೂ ಸಲಕರಣೆಯೊಂದಿಗೆ ಅಗತ್ಯವಿದ್ದಲ್ಲಿ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ತಂಡವು ಸಂಪೂರ್ಣ ಸನ್ನದ್ಧವಾಗಿದೆ.
ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಹಾಗೂ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ
ವರದಿ:ಮೊಯ್ದಿನ್ ಕುಟ್ಟಿ ಉಬಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.