(www.vknews.in) ; ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.)ಯ ರಾಜ್ಯ ಸಂಚಾಲಕರಾದ ಶ್ರೀ ಮೊಯ್ದಿನ್ ಕುಟ್ಟಿಯವರು ಗದಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಶ್ರೀ ಆರ್. ಎಸ್. ಬುರಡಿ ಅವರನ್ನು ಭೇಟಿ ಮಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ, ಬುನಾದಿ ಶಿಕ್ಷಣ, ಬೈಲಿಂಗ್ವಲ್ (ದ್ವಿಭಾಷಾ) ತರಗತಿಗಳ ಅನುಷ್ಠಾನ ಹಾಗೂ ಎಸ್ಡಿಎಂಸಿಗಳ ಪಾತ್ರ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.
ಭೇಟಿಯ ವೇಳೆ ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದು, ಬರಹ ಹಾಗೂ ಗಣಿತದ ಮೂಲಭೂತ ಕೌಶಲ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಶಿಕ್ಷಣ ಕ್ಷೇತ್ರಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮೊಯ್ದಿನ್ ಕುಟ್ಟಿಯವರು ತಿಳಿಸಿದರು. ಪ್ರಾಥಮಿಕ ಹಂತದಲ್ಲಿಯೇ ಕಲಿಕಾ ಹಿನ್ನಡೆಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಇದೇ ಮಕ್ಕಳು ಪ್ರೌಢಶಾಲೆಗೆ ತಲುಪಿದಾಗ ಎಸ್ಎಸ್ಎಲ್ಸಿ ಸೇರಿದಂತೆ ಉನ್ನತ ತರಗತಿಗಳ ಶೈಕ್ಷಣಿಕ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಬುನಾದಿ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಶೇಷ ಕಲಿಕಾ ಕಾರ್ಯಕ್ರಮಗಳು, ನಿರಂತರ ಮೌಲ್ಯಮಾಪನ, ಹಿಂದುಳಿದ ಮಕ್ಕಳಿಗೆ ಪೂರಕ ಬೋಧನೆ ಹಾಗೂ ಶಿಕ್ಷಕರಿಗೆ ಅಗತ್ಯ ಶೈಕ್ಷಣಿಕ ಬೆಂಬಲ ಒದಗಿಸುವ ಕುರಿತು ಇಲಾಖೆಯು ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು 2026–27ನೇ ಶೈಕ್ಷಣಿಕ ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಬೈಲಿಂಗ್ವಲ್ (ದ್ವಿಭಾಷಾ) ತರಗತಿಗಳ ಅನುಷ್ಠಾನ ಕುರಿತು ಚರ್ಚೆ ನಡೆಯಿತು. ಈಗಾಗಲೇ ಆಂಗ್ಲ ಭಾಷಾ ತರಗತಿಗಳನ್ನು ನಡೆಸುತ್ತಿದ್ದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹೊಸ ಬೈಲಿಂಗ್ವಲ್ ವಿಭಾಗಗಳೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಿಂದ ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಅವರು ಗಮನ ಸೆಳೆದರು.
ಈ ಹಿನ್ನೆಲೆಯಲ್ಲಿ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿ, ಯಾವುದೇ ವಿದ್ಯಾರ್ಥಿಯ ಕಲಿಕಾ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಉಪ ನಿರ್ದೇಶಕರಾದ ಶ್ರೀ ಆರ್. ಎಸ್. ಬುರಡಿ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಚರ್ಚೆಯ ವೇಳೆ ಉಪ ನಿರ್ದೇಶಕರು ಎಸ್ಡಿಎಂಸಿಗಳ ಪಾತ್ರದ ಮಹತ್ವವನ್ನು ಒತ್ತಿ ಹೇಳಿ, ಶಿಕ್ಷಕರು ಮತ್ತು ಎಸ್ಡಿಎಂಸಿಗಳು ಪರಸ್ಪರ ಸಹಕಾರ, ಪಾರದರ್ಶಕತೆ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಸರ್ಕಾರದಿಂದ ಶಾಲೆಗಳಿಗೆ ಬಿಡುಗಡೆಯಾಗುವ ವಿವಿಧ ಅನುದಾನಗಳು, ಶಾಲಾ ಅಭಿವೃದ್ಧಿ ಯೋಜನೆಗಳು, ಅಕ್ಷರ ದಾಸೋಹ ಸೇರಿದಂತೆ ಮಕ್ಕಳ ಕಲ್ಯಾಣಕ್ಕಾಗಿ ಒದಗಿಸಲಾಗುವ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗುವಂತೆ ಎಸ್ಡಿಎಂಸಿಗಳು ಜವಾಬ್ದಾರಿಯಿಂದ ಮೇಲ್ವಿಚಾರಣೆ ನಡೆಸಬೇಕು. ಸಾರ್ವಜನಿಕ ಹಣ ಹಾಗೂ ಶಾಲಾ ಸಂಪನ್ಮೂಲಗಳು ಯಾವುದೇ ರೀತಿಯಲ್ಲಿ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಎಸ್ಡಿಎಂಸಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಶಿಕ್ಷಣ ಇಲಾಖೆ, ಶಿಕ್ಷಕರು, ಎಸ್ಡಿಎಂಸಿಗಳು ಹಾಗೂ ಪೋಷಕರು ಒಂದೇ ಗುರಿಯೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ನಿಯೋಗದಲ್ಲಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.)ಯ ಗದಗ ಜಿಲ್ಲಾ ನಿರ್ದೇಶಕರೂ, ಇಟಗಿ ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹೇಮಂತ್ ಗೌಡ ಮಾಲಿ ಪಾಟೀಲ್ , ರೋಣ ತಾಲೂಕು ಅಧ್ಯಕ್ಷರಾದ ಶ್ರೀ ರಾಮನಗೌಡ ಗೌಡರ್,ತಿಮ್ಮಾರೆಡ್ಡಿ ಬಿ ಬಂಡಿವಡ್ಡರ್ ಗಜೇಂದ್ರಗಡ ತಾಲೂಕು ಅಧ್ಯಕ್ಷರು,ಮಹದೇವಪ್ಪ ಸೌಡಿ ಗದಗ ತಾಲೂಕು ಅಧ್ಯಕ್ಷರು, ಇನ್ನಿತರರು ಉಪಸ್ಥಿತರಿದ್ದರು.
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.