ಕೊಚ್ಚಿ (www.vknews.in) : ಭೂತಾನ್ನಿಂದ ಭಾರತಕ್ಕೆ ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ತರಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನಟ ದುಲ್ಕರ್ ಸಲ್ಮಾನ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಪ್ರಕರಣದಲ್ಲಿ ಅವರ ಹೆಸರಿನ ನಾಲ್ಕು ಐಷಾರಾಮಿ ಕಾರುಗಳನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ.
ಕೊಚ್ಚಿಯ ಕಸ್ಟಮ್ಸ್ ಪ್ರಿವೆಂಟಿವ್ ಕಚೇರಿಯಲ್ಲಿ ನಡೆದ ವಿಚಾರಣೆ ವೇಳೆ, ತಾನು ವಾಹನಗಳನ್ನು ಕಾನೂನುಬದ್ಧವಾಗಿ ಖರೀದಿಸಿದ್ದು, ಅವು ಅಕ್ರಮವಾಗಿ ಆಮದು ಮಾಡಲಾಗಿದೆ ಎಂಬ ಮಾಹಿತಿ ತನಗೆ ಇರಲಿಲ್ಲ ಎಂದು ದುಲ್ಕರ್ ಸಲ್ಮಾನ್ ತಿಳಿಸಿದ್ದಾರೆ.
ಕಸ್ಟಮ್ಸ್ ಇಲಾಖೆ ನಡೆಸುತ್ತಿರುವ ‘ಆಪರೇಷನ್ ನುಮ್ಖೋರ್’ ಕಾರ್ಯಾಚರಣೆಯಡಿ ಭೂತಾನ್ನಿಂದ ತೆರಿಗೆ ಪಾವತಿಸದೆ ಭಾರತಕ್ಕೆ ತರಲಾಗಿದ್ದ ಐಷಾರಾಮಿ ವಾಹನಗಳ ಜಾಲದ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದುಲ್ಕರ್ ಬಳಿಯಿದ್ದ ಲ್ಯಾಂಡ್ ರೋವರ್ ಡಿಫೆಂಡರ್, ಟೊಯೊಟಾ ಲ್ಯಾಂಡ್ ಕ್ರೂಸರ್, ನಿಸ್ಸಾನ್ ಪೆಟ್ರೋಲ್ ಸೇರಿದಂತೆ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಅಭಿನಯದ ‘ಲಕ್ಕಿ ಭಾಸ್ಕರ್’ ಚಿತ್ರದಲ್ಲಿ ಬಳಸಿದ್ದ ನಿಸ್ಸಾನ್ ಪೆಟ್ರೋಲ್ ಕಾರು ಕೂಡ ಇದರಲ್ಲಿ ಸೇರಿದೆ.
ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಿರುವ ದುಲ್ಕರ್ ಸಲ್ಮಾನ್, ವಾಹನಗಳನ್ನು ಕಾನೂನುಬದ್ಧವಾಗಿ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಬ್ಯಾಂಕ್ ಗ್ಯಾರಂಟಿ ಆಧಾರದ ಮೇಲೆ ವಾಹನಗಳನ್ನು ಅವರಿಗೆ ಹಸ್ತಾಂತರಿಸಿರುವ ನ್ಯಾಯಾಲಯ, ತನಿಖೆ ಪೂರ್ಣಗೊಳ್ಳುವವರೆಗೆ ಅನುಮತಿಯಿಲ್ಲದೆ ವಾಹನಗಳನ್ನು ರಾಜ್ಯದ ಹೊರಗೆ ಕೊಂಡೊಯ್ಯಬಾರದು ಹಾಗೂ ತನಿಖಾ ತಂಡ ಸೂಚಿಸಿದಾಗ ಹಾಜರುಪಡಿಸಬೇಕು ಎಂದು ಷರತ್ತು ವಿಧಿಸಿದೆ. ಪ್ರಕರಣದ ಕುರಿತು ಕಸ್ಟಮ್ಸ್ ಇಲಾಖೆ ತನಿಖೆ ಮುಂದುವರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.