ಬೆಂಗಳೂರು (www.vknews.in): ಮದುವೆ ವೇಳೆ ಚಿನ್ನ ನೀಡಿಲ್ಲವೆಂಬ ವಿಚಾರಕ್ಕೆ ಅಳಿಯನೊಬ್ಬ ಅತ್ತೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಮೃತರನ್ನು ಯಾದಗಿರಿ ಮೂಲದ, ಜೆಕೆ ಬಸವಣ್ಣ ನಗರದ ನಿವಾಸಿ ರೋಷನಬಿ (45) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಕ್ಬರ್ ಅಲಿಯನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಜುಲೈ 10ರಂದು ಅಕ್ಬರ್ ಅಲಿ ಅತ್ತೆ ಮನೆಗೆ ಬಂದು, ಮದುವೆ ಸಮಯದಲ್ಲಿ ಚಿನ್ನ ನೀಡಿಲ್ಲ, ಈಗ ಪುತ್ರ ಜನಿಸಿರುವುದರಿಂದ ಚಿನ್ನ ಕೊಡಬೇಕು ಎಂದು ಒತ್ತಾಯಿಸಿದ್ದಾನೆ.
ಈ ವೇಳೆ ರೋಷನಬಿ, “ಈಗ ಸಾಧ್ಯವಿಲ್ಲ, ಮಗನ ಮದುವೆ ಸಂದರ್ಭದಲ್ಲಿ ಕೊಡುತ್ತೇನೆ” ಎಂದು ಹೇಳಿದ್ದು, ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಅಕ್ಬರ್ ಅಲಿ, ಅಲ್ಲಿದ್ದ ಕೊಡಲಿಯಿಂದ ರೋಷನಬಿ ಅವರ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ರೋಷನಬಿ ಅವರನ್ನು ಪುತ್ರಿ ರಂಜಾನ್ ಬೀ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಕೋಮಾಗೆ ಜಾರಿದ್ದು, ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಲಹಂಕ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.