(www.vknews.in) : ನಿದ್ರೆಗೆ ಜಾರಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಠಾಲಂ ದಿಢೀರನೆ ಎದ್ದು ನಿಂತಿದೆ. ಸ್ಪರ್ಧೆಗೆ ಬಿದ್ದಂತೆ ಪುತ್ತೂರಿಗೆ ತಂಡ, ತಂಡವಾಗಿ ಪುತ್ತೂರಿಗೆ ಧಾವಿಸುತ್ತಿದೆ. ಪುತ್ತೂರಿನಲ್ಲಿ “ಹಿಂದು ಯುವತಿ ಯನ್ನು ಮುಸ್ಲಿಂ ಯುವಕರು ಚಾಕು ಹಿಡಿದು ಹಿಂಬಾಲಿಸಿದರು” ಎಂಬ ಆಧಾರ ರಹಿತ ಪ್ರಕರಣವನ್ನು ಜಿಲ್ಲೆಯ ಗಣ ಗಂಭೀರ ಸಮಸ್ಯೆ ಎಂಬಂತೆ ಬಿಂಬಿಸಿ ಉದ್ವಿಗ್ನತೆ, ಹಿಂದು – ಮುಸ್ಲಿಂ ಎಂದು ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದೆ. ಪುತ್ತೂರಿನ ಪರಿವಾರದ ನಾಯಕರು ಸಾಲದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ, ಸಂಸದ ಬೃಜೇಶ್ ಚೌಟ ಅವರೂ ಸಹ ಪುತ್ತೂರಿಗೆ ಧಾವಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಶಾಸಕ, ರಾಜ್ಯದ ಕಾಂಗ್ರೆಸ್ ಸರಕಾರ ಹಿಂದು ವಿರೋಧಿ ಎಂದು ಗುಡುಗಿದ್ದಾರೆ. ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಇರುವ ಸಾವಿರ ಸಮಸ್ಯೆಗಳ ಕುರಿತು ತಲೆ ಕೆಡಿಸಿಕೊಳ್ಳದೆ, ಸರಕಾರಿ ಆಸ್ಪತ್ರೆಗಳ ಖಾಸಗೀಕರಣ, ಮುಖ್ಯಮಂತ್ರಿ ಗಳು ಏಕಪಕ್ಷೀಯವಾಗಿ ಪ್ರವಾಸೋದ್ಯಮ ನೀತಿ ರೂಪಿಸುತ್ತಿರುವುದರ ಕುರಿತು ಕನಿಷ್ಟ ಹೇಳಿಕೆಯನ್ನು ನೀಡದೆ ಕಾಣೆಯಾಗಿದ್ದ ಬಿಜೆಪಿ ಜನಪ್ರತಿನಿಧಿಗಳು ಈಗ ಈ ಕೃತಕ ಪ್ರಕರಣ ಹಿಡಿದು ರಣ ಕಹಳೆ ಮೊಳಗಿಸುತ್ತಿದ್ದಾರೆ.
ಈಗ ಘಟನೆಯ ನೈಜತೆ ಹೊರ ಬಿದ್ದಿದೆ. ಹುಡುಗರು ಚಾಕು ಹಿಡಿದು ಹಿಂಬಾಲಿಸಿದ್ದಾರೆ ಎಂದು ಆರೋಪಿಸಿರುವ ಘಟನೆಯ ಸಿ ಸಿ ಕೆಮೆರಾ ಫುಟೇಜ್ ಗಳು ಆರೋಪದಲ್ಲಿ ಹುರುಳಿಲ್ಲ ಎಂದು ಸಾಬೀತು ಪಡಿಸುತ್ತಿದೆ. ಅದಕ್ಕಿಂತಲೂ ಪ್ರಧಾನವಾಗಿ ಘಟನೆ ನಡೆದ ಸ್ಥಳದ ಸಮೀಪದಲ್ಲಿ ಅಂಗಡಿ ಹೊಂದಿರುವ ಯುವತಿಯ ಸಂಬಂಧಿ ಮುಂದೆ ಬಂದು ಘಟನೆಯ ವಾಸ್ತವತೆ ತೆರೆದಿಟ್ಟಿರುವುದು ಬಿಜೆಪಿಯ ಬಣ್ಣ ಬಯಲಾಗುವುಂತೆ ಮಾಡಿದೆ. ಮುಸ್ಲಿಮ್ ಯುವಕನ ಕೈಯಲ್ಲಿದ್ದ ಚಾಕು ತನ್ನ ಅಂಗಡಿಯಿಂದಲೆ ಜಿಮ್ ಗೆ ಹೋಗುವ ಯುವಕರು ಹೊರಗೆ ಒಯ್ದಿದ್ದು, ಬ್ರೆಡ್ ಕತ್ತರಿಸಿ ಜಾಮ್ ಸವರಲು ಕೊಂಡೊಯ್ದು ವಾಪಾಸ್ ತಂದಿಟ್ಟಿದ್ದಾರೆ, ಯುವಕರು ಸಭ್ಯರು, ಹಿಂಬಾಲಿಸುವ,ಬೆದರಿಸುವ ಘಟನೆ ಆಗಿಲ್ಲ ಎಂದು ಯುವತಿಯ ಸಂಬಂಧಿಯೇ ಮಾಧ್ಯಮಗಳ ಮುಂದೆ ಹೇಳಿರುವುದು ಬಿಜೆಪಿ ಸಾರ್ವಜನಿಕವಾಗಿ ಬೆತ್ತಲಾಗುವಂತೆ ಮಾಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಜಿಲ್ಲೆಯ ದಕ್ಷ, ನ್ಯಾಯಪರ ಎಸ್ ಪಿಯ ಮೇಲೆ “ನಮಗೆ ನಂಬಿಕೆ ಇಲ್ಲ” ಎಂದು ಹೇಳಿರುವುದು, ಕೋಮು ಬಣ್ಣದ ವಿಷಯಗಳಿಂದ ಅಂತರ ಕಾಯ್ದುಕೊಳ್ಳುವ ಸಂಸದ ಚೌಟ ಅವರು ಪುತ್ತೂರಿಗೆ ಅತ್ಯುತ್ಸಾಹದಿಂದ ಧಾವಿಸಿ ಬಂದು ಹೇಳಿಕೆ ಹೊರಡಿಸಿರುವುದು ಬಿಜೆಪಿ ಒಳಗಿನ ವೈರುದ್ಯಗಳನ್ನು ಬಯಲಿಗೆ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಅರುಣ್ ಕುಮಾರ್ ಅವರು ಮತೀಯ ಹಿಂಸೆಗೆ ಪ್ರಚೋದಿಸುತ್ತಿರುವ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಜಿಲ್ಲೆಯ ಜನತೆ ಶಾಂತಿ ಕದಡಲು ಯತ್ನಿಸುತ್ತಿರುವ ಬಿಜೆಪಿ ನಾಯಕತ್ವ ಕ್ಕೆ ಚೀಮಾರಿ ಹಾಕಬೇಕು.
✍️ ಮುನೀರ್ ಕಾಟಿಪಳ್ಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.