ಮುಂಬೈ (www.vknews.in): ಜಂತರ್ ಮಂತರ್ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶಕ್ಕೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳನ್ನು ಕ್ಷಮಿಸುವುದಲ್ಲ, ಅವರ ಬಳಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, “ದೆಹಲಿ ನೀಟ್ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಪೆಲೆಟ್ ಗನ್ ಮತ್ತು ಅಶ್ರುವಾಯು ಪ್ರಯೋಗ ನಡೆಸಲಾಗಿದೆ. ಈ ಘಟನೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರಿವೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಬಳಿ ಕ್ಷಮೆ ಕೇಳಬೇಕು” ಎಂದು ಹೇಳಿದರು.
ಪ್ರಧಾನಿ ಮೋದಿ ತಮ್ಮ ವಿಡಿಯೊದಲ್ಲಿ, ಜಂತರ್ ಮಂತರ್ ಪ್ರತಿಭಟನೆ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯನ್ನು ನಿಂದಿಸಲಾಗಿದೆ. ಆದರೂ ಪ್ರತಿಭಟನಾಕಾರರನ್ನು “ದಾರಿತಪ್ಪಿದ ಮಕ್ಕಳು” ಎಂದು ಬಣ್ಣಿಸಿ ಕ್ಷಮಿಸಲು ಬಯಸುವುದಾಗಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ, “ಕ್ಷಮಿಸುವುದಲ್ಲ, ನೀವೇ ಯುವಕರ ಬಳಿ ಕ್ಷಮೆ ಕೇಳುವ ಅವಶ್ಯಕತೆಯಿದೆ. ಮೊದಲು ಅವರನ್ನು ‘ಜಿರಳೆ’ ಎಂದು ಕರೆಯುತ್ತೀರಿ, ನಂತರ ‘ದಾರಿತಪ್ಪಿದವರು’ ಎಂದು ಹೇಳುತ್ತೀರಿ. ಹೀಗಿರುವಾಗ ಯುವಕರು ನಿಮ್ಮನ್ನು ಹೇಗೆ ಕ್ಷಮಿಸುತ್ತಾರೆ?” ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ವೇಳೆ ಕೆಲ ಯುವಕರು ಬಳಸಿದ ಭಾಷೆ ಪ್ರಶ್ನಾರ್ಹವಾಗಿರಬಹುದು. ಆದರೆ ಪ್ರಧಾನಿ ಮೋದಿಯ ಕಟ್ಟಾ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಭಾಷೆ ಮತ್ತು ಟ್ರೋಲಿಂಗ್ ಸಂಸ್ಕೃತಿಯನ್ನೂ ಖಂಡಿಸಬೇಕು ಎಂದು ಉದ್ಧವ್ ಠಾಕ್ರೆ ಹೇಳಿದರು. ಪ್ರಧಾನಿ ಮೋದಿ ಅವರ ವಿಡಿಯೊ ಹೇಳಿಕೆ ಹಾಗೂ ಅದಕ್ಕೆ ವಿರೋಧ ಪಕ್ಷಗಳ ಪ್ರತಿಕ್ರಿಯೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.