ಬೆಂಗಳೂರು (www.vknews.in): ಜಂತರ್ ಮಂತರ್ ಪ್ರತಿಭಟನೆ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯನ್ನು ನಿಂದಿಸಿದವರನ್ನು ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ವಿಡಿಯೊಗೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ತೀವ್ರ ಪ್ರತಿಕ್ರಿಯೆ ನೀಡಿದ್ದು, “ತಾಯಿ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಪ್ರೀತಿಯಲ್ಲ, ಅದು ನಿರ್ದಯ ರಾಜಕೀಯ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ತಮ್ಮ ಹೇಳಿಕೆಯಲ್ಲಿ, “ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನುವ ಹೊಸ ರಾಜಕೀಯ ಗಾದೆಗೆ ಪ್ರಧಾನಿ ಮೋದಿ ಜೀವಂತ ಉದಾಹರಣೆ” ಎಂದು ಟೀಕಿಸಿದ್ದಾರೆ. “ದಶಕಗಳ ಕಾಲ ಮಹಿಳೆಯರ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆಯಾದಾಗ ಮೌನವಾಗಿದ್ದವರು, ಇಂದು ಮಾತೃಗೌರವದ ಬಗ್ಗೆ ಮಾತನಾಡುತ್ತಿರುವುದು ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಟ್ಟಂತಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉದಾಹರಣೆ ನೀಡಿದ ಹರಿಪ್ರಸಾದ್, ತಮ್ಮ ಕುಟುಂಬದ ವಿರುದ್ಧ ನಡೆದ ಹಿಂಸಾತ್ಮಕ ಘಟನೆಗಳ ನಡುವೆಯೂ ಅವರು ಪ್ರತೀಕಾರಕ್ಕಿಂತ ಕ್ಷಮೆ ಮತ್ತು ಮಾನವೀಯತೆಯ ದಾರಿಯನ್ನು ಆರಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ, ರೇಣುಕಾ ಚೌಧರಿ, ಸುನಂದಾ ಪುಷ್ಕರ್ ಸೇರಿದಂತೆ ಮಹಿಳಾ ನಾಯಕರ ವಿರುದ್ಧ ನಡೆದ ಅವಹೇಳನಕಾರಿ ಹೇಳಿಕೆಗಳ ಸಂದರ್ಭದಲ್ಲಿಯೂ ಪ್ರಧಾನಿ ಮೋದಿ ಮೌನವಾಗಿದ್ದರು ಎಂದು ಆರೋಪಿಸಿದ ಅವರು, ಬಿಜೆಪಿ ಬೆಂಬಲಿಗರ ಸಾಮಾಜಿಕ ಜಾಲತಾಣಗಳಲ್ಲಿನ ಭಾಷೆಯನ್ನೂ ಖಂಡಿಸಬೇಕಿತ್ತು ಎಂದು ಹೇಳಿದರು.
2014ರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ಮಹಿಳಾ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳು ಹರಿದಾಡಿದಾಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ವಿದ್ಯಾರ್ಥಿಗಳ ಪ್ರಶ್ನೆಗಳಿಂದ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನು ಭಾವನಾತ್ಮಕವಾಗಿ ಬಳಸಲಾಗುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮಕ್ಕೆ ಹೊಣೆ ಹೊತ್ತು ದೇಶದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದು ಕ್ಷಮೆಯಲ್ಲ; ಅಧಿಕಾರದ ಕ್ರೌರ್ಯವನ್ನು ನಿಲ್ಲಿಸುವುದೇ ನಿಜವಾದ ಕ್ಷಮೆ. ನಿಮ್ಮ ರೀಲ್ಸ್ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ಕ್ಷಮಿಸುವುದಿಲ್ಲ” ಎಂದು ಬಿಕೆ ಹರಿಪ್ರಸಾದ್ ತಮ್ಮ ಹೇಳಿಕೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.