ನವದೆಹಲಿ (www.vknews.in): ಪಾಕಿಸ್ತಾನದ ನಿರಂತರ ಶತ್ರುತ್ವದ ನಡೆ, ಗಡಿ ದಾಟಿ ಭಯೋತ್ಪಾದನೆಗೆ ನೀಡಿದ ಬೆಂಬಲ ಹಾಗೂ ಸಿಂಧು ಜಲ ಒಪ್ಪಂದದ ಮೂಲಭೂತ ತತ್ವಗಳನ್ನೇ ದುರ್ಬಲಗೊಳಿಸಿದ ವರ್ತನೆಯಿಂದಲೇ ಭಾರತವು ಸಿಂಧು ಜಲ ಒಪ್ಪಂದವನ್ನು (Indus Waters Treaty) ಅಮಾನತಿನಲ್ಲಿಡುವ ನಿರ್ಧಾರ ಕೈಗೊಂಡಿದೆ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸ್ಪಷ್ಟಪಡಿಸಿದ್ದಾರೆ.
ಅಂತರರಾಷ್ಟ್ರೀಯ ನಿಯತಕಾಲಿಕ ನ್ಯೂಸ್ವೀಕ್ನಲ್ಲಿ ಪ್ರಕಟವಾದ ಲೇಖನದಲ್ಲಿ ಮಾತನಾಡಿರುವ ಅವರು, 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧು ಜಲ ಒಪ್ಪಂದವು ಸದ್ಭಾವನೆ ಮತ್ತು ಸ್ನೇಹದ ಮನೋಭಾವದಿಂದ ಸಹಿಯಾಗಿತ್ತು. ಆದರೆ ಕಳೆದ ಹಲವು ದಶಕಗಳಲ್ಲಿ ಪಾಕಿಸ್ತಾನದ ನಡೆ ಆ ವಿಶ್ವಾಸವನ್ನೇ ಸಂಪೂರ್ಣವಾಗಿ ಹಾಳುಮಾಡಿದೆ ಎಂದು ತಿಳಿಸಿದ್ದಾರೆ.
ಭಾರತ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವುದು ಹೊಸ ಪರಿಸ್ಥಿತಿಯನ್ನು ಸೃಷ್ಟಿಸುವುದಲ್ಲ, ಪಾಕಿಸ್ತಾನದ ವರ್ತನೆಯಿಂದ ಈಗಾಗಲೇ ನಾಶವಾಗಿದ್ದ ವಿಶ್ವಾಸವನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎಂದು ಕ್ವಾತ್ರಾ ಅಭಿಪ್ರಾಯಪಟ್ಟಿದ್ದಾರೆ.
2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ, ಭಾರತವು ಏಪ್ರಿಲ್ 23ರಂದು ಸಿಂಧು ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನ ಆರಂಭಿಸಿದ್ದ ಬೆನ್ನಲ್ಲೇ ಕ್ವಾತ್ರಾ ಅವರ ಲೇಖನ ಗಮನ ಸೆಳೆದಿದೆ.
1960ರ ಒಪ್ಪಂದದಡಿ ಭಾರತ ತನ್ನ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬಂದಿದ್ದರೂ, ಪ್ರತಿಯಾಗಿ ಪಾಕಿಸ್ತಾನ 1965, 1971 ಮತ್ತು 1999ರ ಯುದ್ಧಗಳು ಸೇರಿದಂತೆ ಗಡಿ ದಾಟಿ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡಿತು ಎಂದು ಅವರು ಆರೋಪಿಸಿದ್ದಾರೆ.
2001ರ ಸಂಸತ್ ಮೇಲಿನ ದಾಳಿ, 2008ರ ಮುಂಬೈ ಉಗ್ರ ದಾಳಿ, 2016ರ ಪಠಾಣ್ಕೋಟ್ ಹಾಗೂ ಉರಿ ದಾಳಿ, 2019ರ ಪುಲ್ವಾಮಾ ದಾಳಿ ಮತ್ತು 2025ರ ಪಹಲ್ಗಾಮ್ ದಾಳಿಗಳನ್ನು ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ.
ಸಿಂಧು ಜಲ ಒಪ್ಪಂದದಡಿ ಭಾರತಕ್ಕೆ ಇರುವ ಹಕ್ಕುಗಳನ್ನು ಬಳಸಿಕೊಳ್ಳುವಲ್ಲಿ ಪಾಕಿಸ್ತಾನ ನಿರಂತರ ಅಡ್ಡಿಪಡಿಸಿದೆ ಎಂದು ಕ್ವಾತ್ರಾ ಹೇಳಿದ್ದಾರೆ. ಜಲವಿದ್ಯುತ್ ಯೋಜನೆಗಳಿಗೆ ವಿಳಂಬ ಉಂಟುಮಾಡುವುದು, ತಾಂತ್ರಿಕ ಬದಲಾವಣೆಗಳಿಗೆ ಅನುಗುಣವಾಗಿ ಒಪ್ಪಂದವನ್ನು ಪರಿಷ್ಕರಿಸುವ ಭಾರತದ ಪ್ರಸ್ತಾಪಗಳನ್ನು ವಿರೋಧಿಸುವುದು ಹಾಗೂ ಆಧುನಿಕ ಅಗತ್ಯಗಳಿಗೆ ತಕ್ಕಂತೆ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿರುವುದರಿಂದ ಭಾರತದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕ್ವಾತ್ರಾ, “ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗುವುದಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಂದೇ ವೇಳೆ ನಡೆಯುವುದಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ಸಂದೇಶವನ್ನು ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನದಲ್ಲಿ ಎದುರಾಗಿರುವ ನೀರಿನ ಕೊರತೆಗೆ ಭಾರತ ಕಾರಣವಲ್ಲ. ಅಲ್ಲಿನ ಆಡಳಿತದ ವೈಫಲ್ಯವೇ ಪ್ರಮುಖ ಕಾರಣವಾಗಿದ್ದು, ಭಾರತವನ್ನು ದೂಷಿಸುವ ಬದಲು ನೀರಿನ ನಿರ್ವಹಣೆ, ಜಲ ಉತ್ಪಾದಕತೆ ಹಾಗೂ ಸಂಪನ್ಮೂಲಗಳ ಸಮರ್ಪಕ ಬಳಕೆಯತ್ತ ಪಾಕಿಸ್ತಾನ ಗಮನಹರಿಸಬೇಕು ಎಂದು ಕ್ವಾತ್ರಾ ಸಲಹೆ ನೀಡಿದ್ದಾರೆ.
ಭಾರತವನ್ನು ಆರೋಪಿಸುವ ಅಭಿಯಾನ ನಡೆಸುವುದಕ್ಕಿಂತ ತಮ್ಮ ದೇಶದ ನೀರಿನ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದು ಸೂಕ್ತ ಎಂದು ಹೇಳಿರುವ ಅವರು, ಜಾಗತಿಕ ಸಮುದಾಯವೂ ಈ ವಾಸ್ತವವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.