ಜೈಸಲ್ಮೇರ್ (www.vknews.in): ಏಳು ವರ್ಷಗಳ ಪ್ರೇಮದ ಬಳಿಕ ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಭಾರತೀಯ ಸೇನೆಯ ಮೇಜರ್ ಹಮ್ಜಾ ಆರಿಫ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ಮಿಲಿಟರಿ ಠಾಣೆಗೆ ತೆರಳುತ್ತಿದ್ದ ವೇಳೆ, ಮೇಜರ್ ಹಮ್ಜಾ ಆರಿಫ್ ಪ್ರಯಾಣಿಸುತ್ತಿದ್ದ ಟಾಟಾ ಸಫಾರಿ ಕಾರಿನ ಮುಂದೆ ಏಕಾಏಕಿ ಒಂಟೆಯೊಂದು ಬಂದಿದ್ದು, ಡಿಕ್ಕಿಯ ಪರಿಣಾಮ ಕಾರು ಹಲವು ಬಾರಿ ಪಲ್ಟಿಯಾಗಿ ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ. ಅಪಘಾತದಲ್ಲಿ ಒಂಟೆ ಸ್ಥಳದಲ್ಲೇ ಮೃತಪಟ್ಟಿದೆ.
ಗಂಭೀರವಾಗಿ ಗಾಯಗೊಂಡ ಹಮ್ಜಾ ಆರಿಫ್ ಅವರನ್ನು ತಕ್ಷಣ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಲೆಫ್ಟಿನೆಂಟ್ ಅಭಿನವ್ ರಾಥೋಡ್ ಹಾಗೂ ಲೆಫ್ಟಿನೆಂಟ್ ಆಯುಷ್ಮಾನ್ ಗುಸೇನ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಮೂಲದ ಹಮ್ಜಾ ಆರಿಫ್ ಅವರು ಏಳು ವರ್ಷಗಳ ಪ್ರೇಮದ ಬಳಿಕ ಕಳೆದ ತಿಂಗಳಷ್ಟೇ ವಿವಾಹವಾಗಿದ್ದರು. ಈ ವರ್ಷದ ಡಿಸೆಂಬರ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ಆಯೋಜಿಸಲು ಕುಟುಂಬ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
2017ರಲ್ಲಿ ಭಾರತೀಯ ಸೇನೆ ಸೇರಿದ್ದ ಹಮ್ಜಾ ಆರಿಫ್, ಸೇವೆಯಲ್ಲಿ ಮೇಜರ್ ಹುದ್ದೆಗೇರಿದ್ದು, ಜೈಸಲ್ಮೇರ್ ಮಿಲಿಟರಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ಶೋಕ ಮೂಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.