ಕೊಟ್ಟಾಯಂ (www.vknews.in): ಕೇರಳದಲ್ಲಿ ನಡೆದ ಅಪರೂಪದ ವಿವಾಹ ಸಮಾರಂಭವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅವಳಿ ಸಹೋದರರು ಅವಳಿ ಅಕ್ಕ-ತಂಗಿಯರನ್ನು ವಿವಾಹವಾಗಿರುವುದು ಮಾತ್ರವಲ್ಲದೆ, ಈ ಮದುವೆಯನ್ನು ನೆರವೇರಿಸಿದ್ದು ಕೂಡ ಅವಳಿ ಪುರೋಹಿತರೇ ಎಂಬುದು ಈ ವಿವಾಹದ ವಿಶೇಷ ಆಕರ್ಷಣೆಯಾಗಿದೆ.
ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿ ಮೆಟ್ರೋಪಾಲಿಟನ್ ಚರ್ಚ್ನಲ್ಲಿ ನಡೆದ ಸಮಾರಂಭದಲ್ಲಿ ಅಖಿಲ್ ಕೆ. ಥಾಮಸ್ ಅವರು ಮ್ಯಾಗಿ ಮೇರಿ ಥಾಮಸ್ ಅವರನ್ನು ವಿವಾಹವಾದರೆ, ಅವರ ಅವಳಿ ಸಹೋದರ ನಿಖಿಲ್ ಕೆ. ಥಾಮಸ್ ಅವರು ಮಾರಿಯಾ ಮೇರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಮತ್ತೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಮದುವೆ ನೆರವೇರಿಸಿದವರು ಅವಳಿ ಪುರೋಹಿತರಾಗಿದ್ದು, ಅವರಿಗೆ ಸಹಾಯಕರಾಗಿ ಸೇವೆ ಸಲ್ಲಿಸಿದ ಬಾಲಕರೂ ಸಹ ಅವಳಿಗಳಾಗಿದ್ದರು. ಇದನ್ನು ಕಂಡು ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಅಚ್ಚರಿ ವ್ಯಕ್ತಪಡಿಸಿದರು.
ಕುತೂಹಲಕಾರಿ ಸಂಗತಿಯೆಂದರೆ, ಮ್ಯಾಗಿ ಮತ್ತು ಮಾರಿಯಾ ಬಾಲ್ಯದಿಂದಲೇ ಅವಳಿ ಸಹೋದರರನ್ನೇ ಮದುವೆಯಾಗಬೇಕೆಂಬ ಕನಸು ಹೊಂದಿದ್ದರು ಎನ್ನಲಾಗಿದೆ. ಮಕ್ಕಳ ಆಸೆಯನ್ನು ಈಡೇರಿಸಲು ಅವರ ಪೋಷಕರು ಕೊಥನಲ್ಲೂರಿನ ಚರ್ಚ್ ಮೂಲಕ ಅವಳಿ ಪುರೋಹಿತರನ್ನು ಸಂಪರ್ಕಿಸಿದ್ದರು.
ಎಲ್ಲವೂ ಯೋಜನೆಯಂತೆ ಯಶಸ್ವಿಯಾಗಿ ನಡೆದಿದ್ದು, ದೇವರ ಕೃಪೆಯಿಂದ ತಮ್ಮ ಬಹುಕಾಲದ ಕನಸು ನನಸಾಗಿದೆ ಎಂದು ನವದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶಿಷ್ಟ ವಿವಾಹದ ಚಿತ್ರಗಳು ಮತ್ತು ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.